Homeಅಂಕಣಗಳುಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

ಬಹುಜನ ಭಾರತ; ಮೋದಿ ಭಾರತಕ್ಕೆ ರಾಹುಲ್ ಹಿಡಿದ ಕನ್ನಡಿ

- Advertisement -
- Advertisement -

ಕಡು ಕೋಮುವಾದಿ ರಾಜಕಾರಣದ ವಿಜೃಂಭಣೆಯ ನಡುವೆ ಪ್ರತಿಪಕ್ಷಗಳು ನಿಸ್ತೇಜವಾಗಿ ಅಡ್ಡ ಮಲಗಿರುವ ದಿನಗಳಿವು. ನಿರಾಶೆ ನಿಸ್ತತ್ವಗಳ ಈ ಕಾಲಮಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊನ್ನೆ ಲೋಕಸಭೆಯಲ್ಲಿ ಮಾಡಿದ ವಿರಳ ಹೊಳಪಿನ ಭಾಷಣ ಜನಮನದ ಗಮನ ಸೆಳೆದಿದೆ.

ರಾಹುಲ್ ಅವರ ತೀವ್ರ ತೇಜೋವಧೆ ಮಾಡಿ, ಪಪ್ಪು ಎಂಬ ಸುಳ್ಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವ ಗೊಬೆಲ್ಸ್ ಪ್ರಚಾರ ತಂತ್ರ ಬಹುತೇಕ ಫಲ ನೀಡಿದೆ. ಈ ತೇಜೋವಧೆ ತಮ್ಮನ್ನು ತಾಕಿಯೇ ಇಲ್ಲವೆಂಬ ಮಾನಸಿಕ ಗಟ್ಟಿತನ ತೋರಿ ನೆಲಕಚ್ಚಿ ನಿಂತಿರುವ ಕಾಂಗ್ರೆಸ್ ತಲೆಯಾಳು ಸುಲಭವಾಗಿ ಸೋಲೊಪ್ಪುತ್ತಿಲ್ಲ.

ಮೊನ್ನೆ ಲೋಕಸಭೆ ಮತ್ತು ದೇಶ ರಾಹುಲ್ ಗಾಂಧಿ ಅವರಲ್ಲಿ ತುಳುಕಿದ್ದ ಹೊಸ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಟೆಲಿಪ್ರಾಂಪ್ಟರ್ ನೆರವಿಲ್ಲದೆ ಅವರ ಸಹಜಸ್ವಾಭಾವಿಕ ಲೀಲಾಜಾಲ ಮಾತುಗಾರಿಕೆ ಬಿಜೆಪಿಯನ್ನೂ ದಂಗು ಬಡಿಸಿರುವುದುಂಟು.

ಒಂದೊಮ್ಮೆ ಹದಿನೆಂಟು ತಿಂಗಳುಗಳ ಕಾಲ ನಾಗರಿಕ ಹಕ್ಕುಗಳನ್ನು ತುಳಿದಿಟ್ಟ ಪಕ್ಷವೊಂದರ ನಾಯಕನಾಗಿ ರಾಹುಲ್ ಗಾಂಧಿ ಈ ಮಾತುಗಳ ಆಡತೊಡಗಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ.

ಇಂದಿರಾಗಾಂಧಿ ಅವರ ಘೋಷಿತ ತುರ್ತುಪರಿಸ್ಥಿತಿ ಹದಿನೆಂಟು ತಿಂಗಳ ಅವಧಿಗೆ ಸೀಮಿತವಾಗಿತ್ತು. ಆದರೆ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನೆಲೆಸಿ ಏಳು ವರ್ಷಗಳೇ ಉರುಳಿವೆ. ಜನತಂತ್ರದ ಆರೋಗ್ಯ ತುರ್ತುಪರಿಸ್ಥಿತಿಗಿಂತ ಸಾವಿರ ಪಾಲು ಹದಗೆಟ್ಟಿದೆ. ಬಲಿಷ್ಠ ರಾಜ್ಯಗಳು- ಬಲಿಷ್ಠ ಕೇಂದ್ರ ಎಂಬ ತತ್ವವನ್ನು ಬಿಜೆಪಿ ಆರಂಭದಲ್ಲಿ ಸಾರಿತ್ತು. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಾತುಗಳನ್ನೂ ಆಡಿದ್ದರು ಮೋದಿ. ಆದರೆ ತತ್ವಗಳನ್ನು ಗಾಳಿಗೆ ತೂರಿ ಬಹಳ ಕಾಲವಾಗಿದೆ.

ಬಿಜೆಪಿ ಆಡಳಿತದಡಿ ದೇಶ ಹಿಡಿದಿರುವ ದುರ್ಗತಿಯ ಪಕ್ಷಿನೋಟವನ್ನು ರಾಹುಲ್ ಹೀಗೆ ಸಮರ್ಥವಾಗಿಯೇ ಬಿಡಿಸಿಟ್ಟರು.

ಭಾರತವೊಂದು ರಾಜ್ಯಗಳ ಒಕ್ಕೂಟ. ಇದೊಂದು ಅನುಸಂಧಾನ, ಸಂವಾದ, ಪಾಲುದಾರಿಕೆಯೇ ವಿನಾ ಅರಸೊತ್ತಿಗೆಯಲ್ಲ ಎಂಬುದನ್ನು ನೆನಪಿಡಿ. ಕೇಂದ್ರೀಕೃತ ನೋಟವು ಅರಸನ ನೋಟ. ಈ ಅರಸೊತ್ತಿಗೆಯ, ಪಾಳೇಗಾರಿಕೆಯ ನೋಟವನ್ನು ಕಾಂಗ್ರೆಸ್ 1947ರಲ್ಲೇ ಕಿತ್ತೆಸೆಯಿತು. ಅರಸೊತ್ತಿಗೆಯ, ಚಕ್ರವರ್ತಿಯ, ಶಹನಶಹಾ, ಗಂಡರ ಗಂಡನ, ಒಡೆಯರ ಒಡೆಯನ ಧೋರಣೆ ಇದೀಗ ಮತ್ತೆ ತಲೆಯೆತ್ತಿದೆ. ನಿರ್ದಿಷ್ಟ ವಿಚಾರ ಮತ್ತು ನಿರ್ದಿಷ್ಟ ಸಂಘಟನೆಯೊಂದು ಈ ದೇಶದ ಸಾಂಸ್ಥಿಕ ಸಂರಚನೆಯನ್ನು ಸೆರೆಹಿಡಿದು ಕೆಡವಿಕೊಂಡಿದೆ. ಮತ್ತು ಅದು ದೇಶದ ರಾಜ್ಯಗಳ ದನಿಗಳ ಮೇಲೆ ಆಕ್ರಮಣ ನಡೆಸಿ ಅಡಗಿಸಲು ತೊಡಗಿದೆ. ಈ ದನಿಗಳು ಪ್ರತಿಭಟಿಸಿ ಪ್ರತಿಕ್ರಿಯಿಸುವುದು ಖಚಿತ ಎಂಬುದು ನನ್ನ ಆತಂಕ. ತಮಿಳುನಾಡಿನಂತಹ ವಿಚಾರಕ್ಕೆ, ಅಸ್ಮಿತೆಗೆ, ಪಂಜಾಬಿನ ರೈತರ ದನಿಗೆ ನಿಮ್ಮ ಚೌಕಟ್ಟಿನಲ್ಲಿ ಜಾಗವೇ ಇಲ್ಲ. ರೈತರು ಕೊರೊನಾ ಕಾಲದಲ್ಲಿ ಬಯಲಿನಲ್ಲಿ ಕುಳಿತು ಸತ್ತರೂ ಅರಸನಿಗೆ ದರಕಾರಿಲ್ಲ. ರಾಜ ಹೇಳಿದ್ದೇ ಕಡೆಯ ಮಾತು. ಆತನದು ಮಾತ್ರವೇ ಗಟ್ಟಿ ದನಿ.

ತುಳಿದು ಆಳುವ ಬಣ್ಣದ ಕನಸುಗಳನ್ನು ಕಾಣಬೇಡಿ. ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಇಂತಹ ಪ್ರಯತ್ನಗಳು ಎಂದೂ ಸಫಲವಾಗಿಲ್ಲ. ದೇಶವನ್ನು ಆಳಿದ ಅಶೋಕ, ಮೌರ್ಯ, ಗುಪ್ತ ವಂಶಗಳ ಅರಸರು ತುಳಿದದ್ದು ಕೂಡ ಸಂವಾದ- ಸಂಭಾಷಣೆ, ಅನುಸಂಧಾನಗಳ ದಾರಿಯನ್ನು ಎಂಬುದ ಮರೆಯದಿರಿ. ಬಡಿಗೆ ಹಿಡಿದು ಆಳಲು ಬರುವುದಿಲ್ಲ. ಅಂತಹ ಪ್ರಯತ್ನಗಳು ನಡೆದಾಗಲೆಲ್ಲ ರಾಜ್ಯಶಕ್ತಿಯ ದೊಣ್ಣೆಯನ್ನು ಮುರಿದು ಬಿಸುಡಿದೆ ಜನಶಕ್ತಿ.

ಈ ದುಸ್ಸಾಹಸ ಕೈಬಿಡಿ. ಬಿಡದಿದ್ದರೆ ಸಮಸ್ಯೆ ಹುಟ್ಟಿಹಾಕುತ್ತೀರಿ. ಈಶಾನ್ಯ, ತಮಿಳುನಾಡು, ಜಮ್ಮು-ಕಾಶ್ಮೀರದಲ್ಲಿ ಈಗಾಗಲೆ ಸಮಸ್ಯೆಗಳು ತಲೆದೋರತೊಡಗಿವೆ. ನಿಮ್ಮ ಕಣ್ಣುಗಳು ಅವುಗಳನ್ನು ಕಾಣದಾಗಿವೆ. ಅಶೋಕ ಸಾಮ್ರಾಟ ಎಲ್ಲರನ್ನೂ ಗೌರವಿಸಿದ. ನೀವು ಅಗೌರವಿಸತೊಡಗಿದ್ದೀರಿ.

ಭಿನ್ನ ಭಾಷೆ, ಇತಿಹಾಸ, ಸಂಸ್ಕೃತಿಗಳ ಅದುಮಿಡಲು ಹೊರಟಿದ್ದೀರಿ. ತಮಿಳು ಭಾಷೆ, ತಮಿಳು ಸಂಸ್ಕೃತಿ, ತಮಿಳು ಅಸ್ಮಿತೆಯು ಭಾರತದ ಸಂಸ್ಕೃತಿ, ಭಾರತದ ಅಸ್ಮಿತೆಯೂ ಹೌದು. ರಾಜ್ಯಗಳ ಅಸ್ಮಿತೆಯೇ ಭಾರತದ ಅಸ್ಮಿತೆ. ಭಿನ್ನ ಭಾಷೆ ಸಂಸ್ಕೃತಿ ಅಸ್ಮಿತೆಗಳ ಸುಂದರ ಹೂಗುಚ್ಛ ನಮ್ಮ ದೇಶ. ವಿಶ್ವದ ಯಾವ ಶಕ್ತಿಗೂ ಸವಾಲೆಸೆಯಬಲ್ಲದು. ನಿಮ್ಮ ಇಡೀ ಜೀವಮಾನದಲ್ಲಿ ತಮಿಳುನಾಡಿನ ಜನರನ್ನು ಆಳಲಾರರಿ ನೀವು.

ನನ್ನ ಮುತ್ತಾತ ಸ್ವಾತಂತ್ರ್ಯ ಹೋರಾಟದಲ್ಲಿ 15 ವರ್ಷಗಳ ಕಾಲ ಜೈಲಲ್ಲಿದ್ದರು. ಅಜ್ಜಿಯ ಮೈಯನ್ನು 32 ಗುಂಡುಗಳು ಸೀಳಿದವು, ತಂದೆಯ ದೇಹ ಛಿದ್ರಛಿದ್ರವಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ ಮನೆತನ ನನ್ನದು. ಆರೆಸ್ಸೆಸ್ ಮತ್ತು ಬಿಜೆಪಿ ನಮ್ಮ ದೇಶದ ತಳಪಾಯದ ಜೊತೆ ಆಟವಾಡುತ್ತಿದೆ, ಅದನ್ನು ದುರ್ಬಲಗೊಳಿಸುತ್ತಿದೆ. ದೇಶ ದುರ್ಬಲವಾಗಿದೆ. ಸಂವಾದ ಸತ್ತಿದೆ. ಸಂಸ್ಥೆಗಳು ಸತ್ವ ಕಳೆದುಕೊಂಡಿವೆ. ನೆರೆಯ ದೇಶಗಳು ನಮ್ಮನ್ನು ಮುತ್ತತೊಡಗಿವೆ. ಚೀನಾ-ಪಾಕಿಸ್ತಾನವನ್ನು ಇನ್ನಷ್ಟು ಒಟ್ಟುಗೂಡಿಸುವ ಅವಿವೇಕದ ವಿದೇಶನೀತಿಯನ್ನು ಅನುಸರಿಸಲಾಗಿದೆ.

ಎರಡು ಭಾರತಗಳನ್ನು ಹುಟ್ಟುಹಾಕಿದ್ದೀರಿ. ಅನಂತ ಅಧಿಕಾರ ಅಸೀಮಿತ ಸಂಪತ್ತು ಹೊಂದಿರುವ ಭಾರತ. ಮತ್ತೊಂದು ಬಡವರ ಭಾರತ. ಎರಡರ ನಡುವಣ ಕಂದಕ ಹೆಚ್ಚುತ್ತಲೇ ಇದೆ. ಬಡವರ ಭಾರತದಲ್ಲಿ ಉದ್ಯೋಗಗಳಿಲ್ಲ. ಭಾರತದಲ್ಲಿ ಐವತ್ತು ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಇಂದು ಭಾರತದಲ್ಲಿ ನೆಲೆಸಿದೆ. 2021ರ ಒಂದೇ ವರ್ಷದಲ್ಲಿ ಮೂರು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಕ್ಕಾಗಿ ಹಾಹಾಕಾರ ನೆಲೆಸಿದೆ. ರಾಷ್ಟ್ರಪತಿ ಭಾಷಣದಲ್ಲಿ ಈ ಕುರಿತ ಚಕಾರವೂ ಇಲ್ಲ.

ಲಕ್ಷಾಂತರ ಕೋಟಿ ರುಪಾಯಿಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಅಸಂಘಟಿತ ವಲಯಗಳಿಂದ ಕಿತ್ತುಕೊಂಡು ಶತಕೋಟ್ಯಾಧಿಪತಿ ಉದ್ಯಮಿಗಳಿಗೆ ನೀಡಲಾಗಿದೆ. ಕನಿಷ್ಠ ಪಕ್ಷ ಸಂಘಟಿತ ವಲಯಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿದ್ದರೆ ಎರಡು ಭಾರತಗಳು ಆಗುತ್ತಿರಲಿಲ್ಲ.

ಶೇ.84ರಷ್ಟು ಭಾರತೀಯರ ಆದಾಯ ಕುಸಿದಿದ್ದು, ಬಡತನಕ್ಕೆ ಕುಸಿಯುತ್ತಿದ್ದಾರೆ. 27 ಕೋಟಿ ಜನರನ್ನು ನಾವು ಬಡತನದಿಂದ ಮೇಲೆತ್ತಿದ್ದೆವು. ನೀವು 23 ಕೋಟಿ ಜನರನ್ನು ಬಡತನಕ್ಕೆ ಇಳಿಸಿದ್ದೀರಿ. ಗರೀಬ ಹಿಂದುಸ್ತಾನ ಇದೆಲ್ಲವನ್ನೂ ನೋಡುತ್ತಿದೆ. ಅದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ದೇಶದ ಶೇ.55ರಷ್ಟು ಜನರು ಹೊಂದಿರುವುದಕ್ಕಿಂತ ಹೆಚ್ಚಿನ ಸಂಪತ್ತು ಕೇವಲ 100 ಮಂದಿ ಧನಿಕರ ಸಂದೂಕಗಳಲ್ಲಿದೆ.

ರಾಹುಲ್ ಆಡಿರುವ ಈ ಮಾತುಗಳು ಸಕಾಲಿಕ ಮತ್ತು ಸ್ವಾಗತಾರ್ಹವೆಂದು ಜನತಂತ್ರವಾದಿಗಳು ಪ್ರತಿಕ್ರಿಯಿಸಿದ್ದಾರೆ. ಸಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡಿರುವ ಮತ್ತು ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಮುರಿದು ಕೆಡವಿ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿರುವ ಕುರಿತು ರಾಹುಲ್ ಮಾಡಿರುವ ಆಪಾದನೆಗಳು ಸತ್ಯದೂರವಲ್ಲ.

ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಜ್ಯಗಳು ಹೆಚ್ಚು ಸ್ವಾಯತ್ತತೆ ಕೇಳಿದರೆ ಅದು ಅವುಗಳ ಹಕ್ಕು. ಸಹಕಾರಿ ಒಕ್ಕೂಟ ವ್ಯವಸ್ಥೆಯು ಘನವಾಗಿ ಕೆಲಸ ಮಾಡಿದ್ದು, ಈ ಮಾತಿಗೆ ರಾಜ್ಯ ಸರ್ಕಾರಗಳು ಮತ್ತು ಒಕ್ಕೂಟ ಸರ್ಕಾರ ಒಟ್ಟಾಗಿ ಕೋವಿಡ್ ಸಂಕಟವನ್ನು ಎದುರಿಸಿದ ಉದಾಹರಣೆ ನೀಡುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಲಸಿಕೆಗಳನ್ನು ಮತ್ತು ಟೆಸ್ಟ್ ಕಿಟ್‌ಗಳನ್ನು ತಾವೇ ತರಿಸಿಕೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸಲಾಗಿತ್ತು. ಈ ಧೋರಣೆ ಉಂಟು ಮಾಡಿದ ನಷ್ಟವನ್ನು, ಹೆಚ್ಚಿಸಿದ ಸಂಕಟವನ್ನು ಮರೆಯುವಂತಿಲ್ಲ.

ಬ್ರಿಟಿಷ್ ವಸಾಹತುವಾದಿಗಳು ಭಾರತವು ಒಂದು ಒಕ್ಕೂಟ ರಚನೆಯೆಂದು ಒಪ್ಪಿಕೊಂಡಿದ್ದರು. ಒಂದು ಮೂಲೆಯಲ್ಲಿ ಕುಳಿತು ಕೈಯಲ್ಲಿ ಬಡಿಗೆ ಹಿಡಿದು, ತಾನು ಹೇಳಿದ್ದೇ ವೇದವಾಕ್ಯವೆಂದು ಈ ದೇಶವನ್ನು ಆಳುವುದು ಸಾಧ್ಯವಿಲ್ಲ. ಸಮಸ್ಯೆಯೆಂದರೆ ಕೇಂದ್ರದಲ್ಲಿ ಅಧಿಕಾರ ಹಿಡಿದವರು ಈ ಪರಿಕಲ್ಪನೆಯನ್ನು ಮರೆತೇಬಿಡುತ್ತಾರೆ ಎಂಬುವು ಖುದ್ದು ಮೋದಿಯವರೇ ಆಡಿದ್ದ ಮಾತುಗಳು. ಆಗ ಅವರು ಪ್ರಧಾನಿಯಾಗಿರಲಿಲ್ಲ, ಬದಲಿಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ತಾವೇ ಆಡಿದ್ದ ಇನ್ನೂ ಎಷ್ಟೋ ವಿಚಾರಗಳನ್ನು ಪ್ರಧಾನಮಂತ್ರಿಯಾಗಿ ಅವರು ವಿರೋಧಿಸಿದ್ದಾರೆ. ರಾಜ್ಯಗಳ ಸ್ವಾಯತ್ತತೆಯನ್ನು ತುಳಿದುಹಾಕಿದ್ದಾರೆ. ಈ ಮಾತಿನ ಸಮರ್ಥನೆಗೆ ನೂರಾರು ನಿದರ್ಶನಗಳನ್ನು ಪಟ್ಟಿ ಮಾಡಬಹುದು.

ರಾಜ್ಯಗಳ ಹಕ್ಕುಗಳು ಮತ್ತು ಸ್ವಾಯತ್ತತೆ ಕುರಿತು ರಾಹುಲ್ ಇನ್ನಷ್ಟು ನೇರ ಮತ್ತು ಖಚಿತ ನಿಲುವು ತಳೆಯಬೇಕಿದೆ. ಅದು ಇನ್ನಷ್ಟು ಮಾಗಿ ಹರಳುಗಟ್ಟಬೇಕಿದೆ. ಆಚರಣೆಗೆ ಇಳಿಯಬೇಕಿದೆ.


ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Why are you gloryfying congress only you are ony around the Sonia Gandhi& her family what they did to this country.even they are not Indian origin. But you people are adhoring them is it journalism in your view

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...