Homeಕರ್ನಾಟಕಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

- Advertisement -
- Advertisement -

ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಂತರ್ಜಾಲ ತಾಣದಲ್ಲಿ ಹಾಕಿ, ಹರಾಜು ಪ್ರಕ್ರಿಯೆ ನಡೆಸಿದ, ಅಸಹ್ಯದ ಪರಮಾವಧಿ ಎನ್ನಬಹುದಾದ ವಿಕೃತಿ ಸುಲ್ಲಿ ಡೀಲ್ಸ್-ಬುಲ್ಲಿ ಭಾಯ್ ರೂಪದಲ್ಲಿ ಇತ್ತೀಚೆಗೆ ಅನಾವರಣಗೊಂಡಿತು. ‘ಸರ್ವ ಜನಾಂಗದ ಶಾಂತಿ’ಯ ತೋಟವಾಗಬೇಕೆಂಬ ಕನಸಿನಿಂದ ವಿಮುಖವಾಗಿ ಈ ಸಮಾಜ ಎಷ್ಟು ದೂರ ಕ್ರಮಿಸಿದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ ಇದು ನಮ್ಮ ಮುಂದಿದೆ. ಮುಸ್ಲಿಂ ಸಮುದಾಯವನ್ನು ಅನ್ಯವಾಗಿಸುವ ಪ್ರಕ್ರಿಯೆ ನಿನ್ನೆಮೊನ್ನೆಯದಲ್ಲದೇ ಹೋದರೂ, ಅದನ್ನು ತಿದ್ದಿಕೊಂಡು ಉತ್ತಮ ಸಮಾಜ ಕಟ್ಟಬೇಕೆನ್ನುವ ನಮ್ಮ ನಾಡು ಕಟ್ಟಿದ ಮುಂದಾಳುಗಳ ವಿವೇಕವನ್ನು ಮಣ್ಣುಪಾಲು ಮಾಡುವ ಘಟನೆಗಳು ಒಂದರ ಹಿಂದೆ ಒಂದರಂತೆ ಘಟಿಸುತ್ತಿವೆ. ಇಂತಹ ವಿಷವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಲಾಗುತ್ತಿದ್ದು, ಕರ್ನಾಟಕದ ಕರಾವಳಿ ಭಾಗದ ಶಾಲಾ-ಕಾಲೇಜುಗಳಲ್ಲಿ ಅದು ಸದ್ಯಕ್ಕೆ ಹಿಜಾಬ್ ವಿರೋಧಿ ರೂಪವನ್ನು ಕೆಲವು ದಿನಗಳಿಂದ ಪಡೆದುಕೊಂಡಿದೆ. ರಾಜ್ಯಾದ್ಯಂತ ಹರಡಲು ಪ್ರಯತ್ನಿಸಲಾಗುತ್ತಿದೆ. ಕಳೆದ ಕೆಲವು ವಾರಗಳಿಂದ ಶಾಲಾ-ಕಾಲೇಜುಗಳ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರ ಧಿರಿಸಿಗೆ (ಸಮವಸ್ತ್ರದ ಮೇಲೆ ಅದೇ ಬಣ್ಣದಲ್ಲಿ ಧರಿಸುವ ಹಿಜಾಬ್) ಸಂಬಂಧಿಸಿದಂತೆ, ಕೋಮು ವಿಷಮತೆಯನ್ನು ಹರಡುವ, ಬಹುಸಂಖ್ಯಾತವಾದದ ದಬ್ಬಾಳಿಕೆಯನ್ನು ನಡೆಸುವ ವಿದ್ಯಮಾನಗಳ ವಿಡಿಯೋಗಳು-ವರದಿಗಳನ್ನು ಕಂಡಾಗ, ಮನುಷ್ಯ ಕಂಡುಕೊಳ್ಳಬೇಕಿದ್ದ ಮಾನವೀಯ ಸೌಹಾರ್ದತೆಗೆ ಚಪ್ಪಡಿ ಕಲ್ಲು ಎಳೆದಂತೆ ಭಾಸವಾಗುತ್ತಿದೆ. ಈ ವಿಷಮತೆ ಈಗ ರಾಜ್ಯದ ಇತರ ಭಾಗಗಳಿಗೆ ಹಬ್ಬುತ್ತಿರುವುದು ದುರಂತವಲ್ಲದೆ ಮತ್ತೇನು?

ಭಾರತದಲ್ಲಿ ಹಿಂದೂಗಳೆಂದು ಕರೆದುಕೊಳ್ಳುವ ಅಸಂಖ್ಯಾತ ಜಾತಿಗಳ ವ್ಯವಸ್ಥೆ ಏಕರೂಪವಾದುದ್ದೇನಲ್ಲ. ಮನುಧರ್ಮಶಾಸ್ತ್ರ ಪ್ರಣೀತ ವರ್ಣಾಶ್ರಮ ವ್ಯವಸ್ಥೆಯಲ್ಲಿ ಸವಲತ್ತು ಇದ್ದದ್ದು ಕೆಲವೇ ಕೆಲವು ಜಾತಿಗಳಿಗೆ. ಬಾಬಾಸಾಹೇಬರು ಇಂತಹ ಜಾತಿವ್ಯವಸ್ಥೆಯನ್ನು ನೆಲಸಮ ಮಾಡಲು, ಜಾತಿಗಳನ್ನು ನಾಶಮಾಡಲು ಕರೆಕೊಟ್ಟು, ಎಲ್ಲರಿಗೂ ಘನತೆಯಿಂದ ಬದುಕುವಂತೆ ಅನುವಾಗಲು ಸಂವಿಧಾನವನ್ನು ರಚಿಸಿದರು. ಆದರೆ, ಸಂವಿಧಾನಬದ್ಧವಾಗಿ ಜಾತಿ ವ್ಯವಸ್ಥೆಯ ಶ್ರೇಣೀಕರಣ ಮತ್ತು ತಾರತಮ್ಯವನ್ನು ಕೊನೆಗೊಳಿಸುವ ಬದಲು, ಸಾವಿರಾರು ವರ್ಷಗಳಿಂದ ಜಾತಿ ತಾರತಮ್ಯವನ್ನು ಪೋಷಿಸಿಕೊಂಡು ಬಂದಿದ್ದ, ಅತಿ ಹೆಚ್ಚು ಪ್ರಿವಿಲೆಜ್ ಹೊಂದಿದ್ದ ಬ್ರಾಹ್ಮಣ್ಯ ವ್ಯವಸ್ಥೆ ಹಿಂದುತ್ವ ಎಂಬ ತಲೆ ಸವರುವ ಯೋಜನೆಯನ್ನು ಮುಂದಿಟ್ಟಿತ್ತು. ಅದು, ‘ಹಿಂದೂ ತಾನು ಒಂದು’ ಎಂಬ ಬಾಯಿಮಾತಿನ ಘೋಷಣೆಯನ್ನು ಪ್ರಚುರಪಡಿಸಿತು. ಆದರೆ ಆಚರಣೆಯಲ್ಲಿ ಶೋಷಣೆಯ ವ್ಯವಸ್ಥೆಯನ್ನೇ ಕಾಪಿಟ್ಟುಕೊಳ್ಳುವ ಷಡ್ಯಂತ್ರವಾಗಿತ್ತು ಅದು. ಈ ಕುತಂತ್ರಕ್ಕೆ ಹೆಚ್ಚು ಬಲಿ ಬಿದ್ದವರು ಶೂದ್ರರು ಮತ್ತು ಇತರೆ ಹಿಂದುಳಿದ ವರ್ಗ. ಈ ಯೋಜನೆಯ ಭಾಗವಾಗಿ ಮೇಲ್ಪದರದ ಹಿಂದೂ ಒಗ್ಗಟ್ಟನ್ನು ತೋರ್ಪಡಿಸಲು, ಮುಸ್ಲಿಂ ದ್ವೇಷವನ್ನು ನೂರ್ಮಡಿಸಿ ತುಂಬಲಾಯಿತು. ಮುಸ್ಲಿಮರನ್ನು ಶತ್ರುಗಳಂತೆ ಬಿಂಬಿಸಲಾಯಿತು. ಇದಕ್ಕಾಗಿ ಇತಿಹಾಸವನ್ನು ತಿರುಚಲಾಯಿತು. ಹಲವು ಸುಳ್ಳು ಕಂತೆ ಪುರಾಣಗಳ ಮೂಲಕ ಮುಸ್ಲಿಂ ದ್ವೇಷ ಒಂದು ವರ್ಗದಲ್ಲಿ ಅವಿಭಾಜ್ಯ ಅಂಗವಾಗುವಂತೆ ನೋಡಿಕೊಳ್ಳಲಾಯಿತು.

ಈ ಹಿಂದುತ್ವ ಒಂದು ಮಟ್ಟಕ್ಕೆ ರಾಜಕೀಯ ಯಶಸ್ಸನ್ನು ಪಡೆದ ಮೇಲೆ, ಹಲವು ವರ್ಷಗಳ ಕಾಲ ರಾಜಕೀಯ ಅಧಿಕಾರ ಪಡೆದು ಆಳಿದ ಮೇಲೆ, ಅನಿವಾರ್ಯವಾಗಿ ಸಣ್ಣಪುಟ್ಟ ತೋರಿಕೆಯ ಅಧಿಕಾರವನ್ನು ಹಿಂದುಳಿದ ವರ್ಗದ ಕೆಲವರಿಗೆ ವಹಿಸಿಕೊಡಬೇಕಾಗಿಬಂತು. ಹಿಂದುತ್ವವನ್ನು ತಂತ್ರಗಾರಿಕೆಯಾಗಿ ಮೊದಲಿಗೆ ಪ್ರಚುರಪಡಿಸಿದ್ದರೂ, ನಂತರ ಅದು ಬ್ರಾಹ್ಮಣ್ಯದ ಮೂಲತತ್ವಗಳಿಗೆ ಅಪಥ್ಯವಾಗುತ್ತಾ ಬಂದಿತು. ಅದು ಹಿಂದುತ್ವದಲ್ಲಿ ಬಿರುಕು ಬಿಡಲೂ ಕಾರಣವಾಯಿತು. ಇದು ಇತ್ತೀಚಿನ ಬುಲ್ಲಿ ಭಾಯ್ ಪ್ರಕರಣದಲ್ಲಿ ದೊಡ್ಡದಾಗಿ ಗೋಚರಿಸಿತು. ಈ ಹಿಂದುತ್ವದಲ್ಲಿ ಈಗ ಎರಡು ದೊಡ್ಡ ಬಣಗಳು ಕಾದಾಡಿಕೊಳ್ಳುತ್ತಿರುವುದನ್ನು ಇತ್ತೀಚೆಗೆ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ‘ಟ್ರ್ಯಾಡ್ಸ್’ (ತೀವ್ರ ಸಂಪ್ರದಾಯವಾದಿಗಳು, ಶ್ರೇಣೀಕರಣದ ಸಮರ್ಥಕರು) ವರ್ಸಸ್ ‘ರಾಯ್ತಾಸ್’ (ಹಿಂದುತ್ವ ಪಾಲಿಟಿಕ್ಸ್ ಅಡಿಯಲ್ಲಿ ಎಲ್ಲರೂ ಸಮಾನ ಹಿಂದೂಗಳು ಎಂಬ ಧೋರಣೆಯವರು, ಅನ್ಯ ಮತದವರನ್ನು ಮಾತ್ರ ಶತ್ರುಗಳಂತೆ ಕಾಣುವವರು) ಎಂಬ ಬಣಗಳ ನಡುವಿನ ಕದನ ಸಾಮಾಜಿಕ ಮಾಧ್ಯಮಗಳಲ್ಲಿ ತಾರಕಕ್ಕೇರಿದೆ. ಹಿಂದುತ್ವದ ಪೋಸ್ಟರ್ ವ್ಯಕ್ತಿಗಳಾದ ವಿವೇಕ್ ಅಗ್ನಿಹೋತ್ರಿ, ಜಗ್ಗಿ ವಾಸುದೇವ ಇಂತಹವರನ್ನೂ ಕೂಡ ಅತಿ ಕೆಟ್ಟಮಾತುಗಳಿಂದ ಈ ಟ್ರ್ಯಾಡ್‌ಗಳು ನಿಂದಿಸುತ್ತಾರೆ. ಈ ಸಾಫ್ಟ್ ಹಿಂದುತ್ವದವರು ಮನುಪ್ರಣೀತ ಶ್ರೇಣಿ ವ್ಯವಸ್ಥೆಗೆ ಮುಂದಾಗದೆ, ಕೇವಲ ರಾಜಕೀಯ ಹಿಂದುತ್ವ ಮಾಡುತ್ತಾರೆ ಎಂಬುದು ಟ್ರ್ಯಾಡ್‌ಗಳ ಅಸಹನೆ! ಇದೇನು ಹೊಸದಾಗಿ ಉದ್ಭವವಾಗಿರುವ ಒಡಕೇನಲ್ಲ. ಹಳೆಯ ಆರ್ಡರ್‌ನಲ್ಲಿ ಸವಲತ್ತುಗಳ ತುತ್ತತುದಿಯಲ್ಲಿದ್ದ ಸಮುದಾಯ, ಹಿಂದುತ್ವದ ಹೆಸರಿನಲ್ಲಿ ನಾಮಕಾವಸ್ಥೆಗೂ ಅದನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹಿಂದುತ್ವಕ್ಕೆ ಸೇರುವ ಹಿಂದುಳಿದ ಸಮುದಾಯದವರು ಕಾಲಾಳುಗಳಂತೆ ಇರುವುದಷ್ಟೇ ಈ ಟ್ರ್ಯಾಡ್ ಸಮುದಾಯಕ್ಕೆ ಬೇಕಿರುವುದು. ಬಾಯಿಮಾತಿಗಾದರೂ, ತಂತ್ರಗಾರಿಕೆಗಾದರೂ ಸಮಾನತೆಯನ್ನು ಪಠಿಸುವುದು ಈಗ ಅವರಿಗೆ ಘನಘೋರ ತಪ್ಪಿನಂತೆ ಕಾಣುತ್ತದೆ. ರಾಜಕೀಯ ಲಾಭಕ್ಕೋಸ್ಕರವಾದರೂ ಅಂಬೇಡ್ಕರ್ ಅವರನ್ನು ಇನ್ವೋಕ್ ಮಾಡುವ ಜಾಣತನ ಕೂಡ ಅವರಿಗೆ ದ್ರೋಹದಂತೆ ಕಾಣುತ್ತದೆ. ಈ ಟ್ರ್ಯಾಡ್‌ಗಳು ಇರುವುದು ಬೆರಳೆಣಿಕೆಯಷ್ಟು ಜನ ಮಾತ್ರ ಎಂದು ಹಿಂದುತ್ವದ ಕೆಲವರು ತಳ್ಳಿಹಾಕಲು ಪ್ರಯತ್ನ ಪಡುತ್ತಿದ್ದರೂ, ಹಿಂದಿನ ವ್ಯವಸ್ಥೆಯಲ್ಲಿ ಅದೇ ಬೆರಳೆಣಿಕೆಯಷ್ಟು ಜನರಲ್ಲವೇ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದುದು! ಇಂತಹ ಸಂಗತಿಗಳಿಂದ ಹಿಂದುತ್ವದ ಕಪಟತೆ ಒಂದು ಮಟ್ಟಕ್ಕೆ ಜನಕ್ಕೆ ಗೊತ್ತಾಗುತ್ತಿರುವುದು  ಸುಳ್ಳಲ್ಲ.

ಈ ಹಿನ್ನೆಲೆಯಲ್ಲಿ ನೋಡಿದಾಗ ಹಿಂದುತ್ವದ ಹೆಸರಿನಲ್ಲಿ ಕೋಮು ಧ್ರುವೀಕರಣ ತೀವ್ರವಾಗಿರುವ ಕರಾವಳಿಯಂತಹ ಪ್ರದೇಶಗಳಲ್ಲಿ ಈ ಸಮಸ್ಯೆಯ ಆಳ ಅಗಲ ಇನ್ನೂ ಸ್ಪಷ್ಟವಾಗುತ್ತದೆ. ಕೃತಕವಾದ ಶತ್ರುವನ್ನು ಸೃಷ್ಟಿಸದೆ ಈ ಮೇಲ್ಪದರದ ಒಗ್ಗಟ್ಟು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಸಂತ ನಾರಾಯಣಗುರು ಅವರನ್ನು ಪ್ರತಿಮೆಯಿದ್ದ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪೆರೇಡ್‌ಗೆ ಒಕ್ಕೂಟ ಸರ್ಕಾರ ಆಯ್ಕೆ ಮಾಡದ ಬಗ್ಗೆ ಒಂದು ಮಟ್ಟದ ವಿರೋಧ ಕರಾವಳಿಯಲ್ಲಿ ಎದ್ದಿತ್ತು. ಕರಾವಳಿಯ ಒಂದು ದೊಡ್ಡ ಜನಸಮುದಾಯ ನಾರಾಯಣಗುರು ಅವರ ಹಿಂಬಾಲಕರು. ಇದನ್ನು ಒಂದು ಸಣ್ಣ ಉದಾಹರಣೆಯಾಗಿ ನೋಡುವುದಾದರೆ, ಇಂತಹ ಪ್ರಶ್ನೆಗಳು ದೊಡ್ಡದಾಗಿ ಎದ್ದು ಜನ ಜಾಗೃತರಾಗುವುದನ್ನು ಹಿಂದುತ್ವ ಪ್ರಾಜೆಕ್ಟ್ ಹೇಗಾದರೂ ತಡೆಯಲು ಹವಣಿಸುತ್ತದೆ. ಅದಕ್ಕಾಗಿಯೇ ಹಿಜಾಬ್ ವಿರೋಧಿಸುವಂತಹ ಘಟನೆಗಳನ್ನು ಉತ್ತೇಜಿಸಿ, ಅವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ, ತಾನು ಇನ್ವೆಂಟ್ ಮಾಡಿರುವ ಶತ್ರು ಎಂದಿಗೂ ಕಾಣೆಯಾಗದಂತೆ ಕಾಪಾಡುತ್ತದೆ. ನಂಜನ್ನು ರಿಇನ್‌‍ಫೋರ್ಸ್ ಮಾಡಲು ಸದಾ ಸನ್ನದ್ಧವಾಗಿರುತ್ತದೆ.

ಧಾರ್ಮಿಕ-ಜಾತಿ ಐಡೆಂಟಿಟಿಗಳನ್ನು ತ್ಯಜಿಸಿ ಶಾಲಾ ಕಾಲೇಜಿಗೆ ಬರಬಾರದೇ?

ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದು ಪ್ರತಿಭಟನೆಗೆ ಮತ್ತು ಹೈಕೋರ್ಟ್ ಮೆಟ್ಟಿಲೇರಲು ಕಾರಣವಾಗಿತ್ತು. ಇದು ಮಂಗಳೂರು, ಕುಂದಾಪುರದ ಕೆಲವು ಕಾಲೇಜುಗಳಿಗೂ ಹಬ್ಬಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿ ಗೇಟು ಮುಚ್ಚಲಾಗಿತ್ತು. ಅಲ್ಲದೆ ಒಂದಷ್ಟು ವಿದ್ಯಾರ್ಥಿಗಳ ಗುಂಪು ಕೇಸರಿ ಶಾಲು ಧರಿಸಿ, ಹಿಜಾಬ್‌ಗೆ ಅವಕಾಶ ಮಾಡಿಕೊಟ್ಟರೆ ತಮಗೆ ಹಿಂದುತ್ವದ ಶಾಲನ್ನು ಧರಿಸಿ ಬರಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೇ ಕಾಯುತ್ತಿದ್ದಂತೆ ಇದ್ದ ಕರ್ನಾಟಕ ಸರ್ಕಾರ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾನತೆ, ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವ’ ಬಟ್ಟೆಗಳನ್ನು ನಿಷೇಧಿಸಿದ ವಿವೇಚನಾರಹಿತ ಮತ್ತು ಆರ್ಬಿಟರಿಯಾದ ಆದೇಶವೊಂದನ್ನು ಹೊರಡಿಸಿತು. ಈ ಆದೇಶ ಸಂವಿಧಾನನ 25ನೇ ವಿಧಿ “ಆತ್ಮಸಾಕ್ಷಿ ಮತ್ತು ವೃತ್ತಿಯ ಆಯ್ಕೆ ಹಾಗೂ ಧರ್ಮದ ಅನುಸರಣೆ ಹಾಗೂ ಪ್ರಸರಣೆಯ ಸ್ವಾತಂತ್ರ್ಯಕ್ಕೆ” ಧಕ್ಕೆಮಾಡುತ್ತದೆ ಎಂದು ಹಲವು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಇದಕ್ಕೆ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳೂ ನಿದರ್ಶನವಾಗಿವೆ. ಅಲ್ಲದೆ ಸದ್ಯ ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಕಾನೂನು ಹೋರಾಟ ಒಂದು ಕಡೆಯಾದರೆ, ಮುಸ್ಲಿಂ ವಿದ್ಯಾರ್ಥಿನಿಯರ ಹಠ, ಹಲವು ವಿದ್ಯಾರ್ಥಿಗಳನ್ನು ಹಿಂದುತ್ವದ ತೆಕ್ಕೆಗೆ ಹೋಗಲು ಅವಕಾಶ ನೀಡುತ್ತಿದೆ, ಇದರಿಂದ ಕೋಮು ಧ್ರುವೀಕರಣ ವಿಪರೀತವಾಗತ್ತಿದೆ ಎಂಬೆಲ್ಲಾ ಆರೋಪಗಳನ್ನು ಮಾಡಲಾಗುತ್ತಿದೆ. ಈ ಹಿಂದುತ್ವ ಯೋಜನೆ ತೀವ್ರಗೊಂಡಾಗಿನಿಂದಲೂ, ಮುಸ್ಲಿಮರನ್ನು ಅನ್ಯರನ್ನಾಗಿಸಿ, ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಕೆಲಸ ಮುಂಚೂಣಿಯಲ್ಲಿರುವಾಗ, ಅವರು ತಮ್ಮ ಐಡೆಂಟಿಟಿಯನ್ನು ಅಸರ್ಟ್ ಮಾಡದೆ ಬೇರೆ ವಿಧಿಯೇನಿದೆ? ಬಹುಸಂಖ್ಯಾತರು ತಮ್ಮ ನಡೆನುಡಿಗಳಲ್ಲಿ ಸುಧಾರಣೆ ತಂದುಕೊಳ್ಳದೆ, ತಮಗೆ ಬೇಕಾದಂತೆ ಉಳಿದವರು ನಡೆದುಕೊಳ್ಳಬೇಕು ಎಂದು ಆಗ್ರಹಿಸುವುದು ನ್ಯಾಯವನ್ನು ಅಣಕಿಸಿದಂತಲ್ಲವೇ? ಇಂತಹುದಕ್ಕೆ ಸಮ್ಮತಿಸುತ್ತಾ ಹೋದರೆ, ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಯೋಜನೆಗೆ ಸ್ವತಃ ಅವರೇ ಇಂಬು ಕೊಟ್ಟಂತಲ್ಲವೇ? ಇಲ್ಲಿ ತಿದ್ದಿಕೊಳ್ಳಬೇಕಿರುವುದು ಕೇಸರಿ ಶಾಲು ಧರಿಸಿಯೇ ತೀರುತ್ತೇವೆ ಎಂದು ಎದ್ದಿರುವ ಯುವ ಸಮೂಹ ಮತ್ತು ಅವರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಸಂಘ ಪರಿವಾರದ ರಾಜಕೀಯ. ಬುದ್ಧಿವಾದವೂ ಅವರಿಗೇ ಹೇಳಬೇಕಿದೆ.

ಸಾರ್ವಜನಿಕ ಪ್ರದೇಶದಲ್ಲಿ ಆದಷ್ಟು ಜಾತ್ಯತೀತವಾದ ನಡವಳಿಕೆಯನ್ನು ಪ್ರದರ್ಶಿಸುವ ಆದರ್ಶವೇನೋ ಸರಿಯಾದದ್ದೇ. ಆದರೆ ವ್ಯಕ್ತಿಯೊಬ್ಬನ ಹೆಸರಿನಲ್ಲಿ, ಆತನ ಸಾಮಾನ್ಯ ಉಡುಗೆತೊಡುಗೆ ಧಿರಿಸಿನಲ್ಲಿ, ಆಡುವ ಮಾತಿನಲ್ಲಿ, ತೋರ್ಪಡಿಕೆಯಲ್ಲಿ ಮತ-ಜಾತಿಗಳನ್ನು ಸದಾ ಪ್ರದರ್ಶಿಸುವ ದೇಶವಿದು. ಅಂಥಹುದರಲ್ಲಿ ಒಂದು ಮತಕ್ಕೆ ಮಾತ್ರ ಈ ಆದರ್ಶವನ್ನು ಹೇರುವುದರಲ್ಲಿ ಯಾವುದೇ ಹುರುಳಿಲ್ಲ. ಒಂದು ಕಾಲದಲ್ಲಿ ಜಾತಿ ಸೂಚಕ ಹೆಸರುಗಳನ್ನು ಕೈಬಿಡಲು ಪ್ರಜ್ಞಾವಂತರು ನೀಡಿದ್ದ ಕರೆಗೆ ಓಗೊಟ್ಟು ಎಷ್ಟೋ ಜನ ಸ್ಪಂದಿಸಿದ್ದರು. ಸಂಕುಚಿತ ಮತ-ಜಾತಿಗಳ ಸಂಕೋಲೆಗಳನ್ನು ಮೀರಿದ ಅನ್ಯ ಜಾತಿ-ಮತ ಮದುವೆ, ತಮ್ಮ ಆಹಾರ ಪದ್ಧತಿಯನ್ನು ಮೀರಿ ಹೊಸದನ್ನು ಅನ್ವೇಷಿಸುವ ತವಕ ಇವೆಲ್ಲವೂ ಸಾಧ್ಯವಾಗಿತ್ತು. ಆದರೆ ಇದು ಸಾಧ್ಯವಾಗುವಂತಹ ವಾತಾವರಣ ಅವರಿಗಿತ್ತು. ಅವರೇ ಪ್ರಿವಿಲೆಜ್ ಸಮುದಾಯಗಳಿಗೆ ಸೇರಿದ್ದವರಾದ್ದರಿಂದ, ಅವರೇ ಬಹುತೇಕ ಶೋಷಕ ಜಾತಿ-ಮತಗಳಿಗೆ ಸೇರಿದ್ದವರಾದ್ದರಿಂದ ಈ ಬದಲಾವಣೆ ಅಗತ್ಯವಾಗಿತ್ತು ಮತ್ತು ಸಾಧ್ಯವಾಗಿತ್ತು. ಅದು ಕೂಡ ಮಣ್ಣುಮುಕ್ಕಿತೇನೋ ಎಂಬಂತೆ ‘ಟ್ರ್ಯಾಡ್’ಗಳ ಆಟಾಟೋಪಗಳನ್ನು ನಾವಿಂದು ನೋಡಬಹುದು. ಮೇಲ್‌ಜಾತಿಗಳ ಹುಸಿ ಪ್ರತಿಷ್ಠೆಗಳು ಮರುಕಳಿಸುವಂತಹ ರಾಜಕೀಯವನ್ನು ಇಂದು ಕಾಣಬಹುದಾಗಿದೆ.

ಸದ್ಯ ಎದ್ದಿರುವ ಹಿಜಾಬ್ ವಿವಾದದ ಜೊತೆಗೆ ಎಷ್ಟೋ ಜನ ಗಂಡಾಳ್ವಿಕೆಯನ್ನು ಸಮೀಕರಿಸಿ ಈ ಹೊತ್ತಿನಲ್ಲಿ ಮಾತನಾಡುತ್ತಿದ್ದಾರೆ. ಗಂಡಾಳ್ವಿಕೆಯ ಸಮಸ್ಯೆ ಮತಧರ್ಮಗಳನ್ನು ಮೀರಿದ್ದು, ಅಂದರೆ ಎಲ್ಲ ಮತ ಜಾತಿಗಳಲ್ಲಿಯೂ ಈ ಸಮಸ್ಯೆ ಹಲವು ರೀತಿಗಳಲ್ಲಿ ಹಾಸುಹೊಕ್ಕಿದೆ. ಇದನ್ನು ಪ್ರಶ್ನಿಸುವಂತೆ, ಸರಿಪಡಿಸಲು ಆಗ್ರಹಿಸುವಂತೆ, ಜಾಗೃತರಾಗುವಂತೆ ಮಹಿಳೆಯರನ್ನು, ವಿದ್ಯಾರ್ಥಿನಿಯರನ್ನು ಉತ್ತೇಜಿಸುವುದು ಸರಿಯಾದದ್ದೇ. ಆದರೆ ಮತಧರ್ಮಾಧಾರಿತವಾಗಿ ಒಂದು ಸಮುದಾಯವನ್ನು ಕಾರ್ನರ್ ಮಾಡಿ, ಆ ಸಮುದಾಯದ ಮಹಿಳೆಯರ ಸಬಲೀಕರಣದ ಮಾತನಾಡುವುದರಲ್ಲಿ ಹುನ್ನಾರ ಅಡಗಿದೆ. ಈ ಪ್ರಕರಣದಲ್ಲಿಯೂ ಮುಸ್ಲಿಂ ಸಮುದಾಯದ ವಿರುದ್ಧದ ದ್ವೇಷದಿಂದ ಉದ್ಭವವಾದ ಸಮಸ್ಯೆಗೆ ಮೊದಲು ಉತ್ತರ ಕಂಡುಕೊಳ್ಳದೆ, ಪೇಟ್ರಿಯಾರ್ಕಿಯ ಪ್ರಶ್ನೆಯನ್ನು ಎಳೆದುತರುವುದು ಖಂಡಿತವಾಗಿಯೂ ಸರಿಯಾದ ದಾರಿಯಾಗುವುದಿಲ್ಲ.

ಬಹುಜನಾಂಗೀಯ ಸಮಾಜದಲ್ಲಿ ಹಲವು ವಿವಾದಗಳು ಏಳುತ್ತಿರುತ್ತವೆ. ಆದರೆ ಅವನ್ನು ಬಗೆಹರಿಸಿಕೊಳ್ಳುವ ರೀತಿ ಕೋಮು ರಾಜಕೀಯ ವಿಷಮತೆಯನ್ನು ಉತ್ತೇಜಿಸುವುದರಿಂದಲ್ಲ. ಬಿಜೆಪಿ ಸಂಸದ ಪ್ರತಾಪ ಸಿಂಹ, ಬಸವರಾಜ್ ಯತ್ನಾಳ್ ಮುಂತಾದ ಮುಖಂಡರ ‘ಪಾಕಿಸ್ತಾನಕ್ಕೆ ಹೋಗಲಿ’ ಎಂಬಂತಹ ಮತಿಹೀನ ಮತ್ತು ಕ್ರೌರ್ಯದ-ಹಿಂಸೆಯ ಮಾತುಗಳನ್ನು ನಾಗರಿಕ ಸಮುದಾಯ ತಿರಸ್ಕರಿಸಬೇಕಿದೆ. ಅಂತಹ ರಾಜಕೀಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ. ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಂವಿಧಾನವಿದೆ. ಸಂವಿಧಾನದ ಮೂಲ ಆಶಯಗಳಗೆ ಧಕ್ಕೆಯಾಗದಂತೆ ವಿವಾದಗಳ ಪೂರ್ವಾಪರಗಳನ್ನು ಚರ್ಚಿಸಿ ಎಲ್ಲ ಸಮುದಾಯಗಳ ಒಳಿತಿಗೆ, ಅದರಲ್ಲೂ ಬಹುಸಂಖ್ಯಾತ ಸಮುದಾಯದ ದಬ್ಬಾಳಿಕೆಯಿಂದ ಅಂಚಿನಲ್ಲಿರುವ ಸಮುದಾಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೋರ್ಟುಗಳು ಕೆಲಸ ಮಾಡಬೇಕಿದೆ. ಅಂತಹ ಒತ್ತಡವನ್ನು ಕಾಪಿಟ್ಟುಕೊಳ್ಳುವುದು ನಾಗರಿಕ ಸಮಾಜದ ವಿವೇಕವಾಗಿರಬೇಕಿದೆ.

– ಗುರುಪ್ರಸಾದ್ ಡಿ ಎನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Just Think!
    PUC ವಿದ್ಯಾರ್ಥಿಗಳಿಗೆ
    ಈಗ 17 ವರ್ಷ, 2023 ಚುನಾವಣೆ ಸಮಯಕ್ಕೆ 18 ವರ್ಷ. ಅರ್ಥ ಆಗಿರಬೇಕಲ್ವಾ! ಏನ್ ಐಡಿಯನ್ರೋ ನಿಮ್ದು
    😁🤪🙏

  2. ಬರೀ ಒಂದು ಕೋಮಿನ ಸಂತುಷ್ಟಿಗೊಳಿಸುವದು.ನ್ಯಾಯವಲ್ಲ ನ್ಯಾಯಾಧೀಶರಂತೆ ವಿಶ್ಲೇಷಣೆ ಮಾಡಿ ನಿಮ್ಮ conclusion ಕೊಡಬೇಕು. ಜಗತ್ತಿನ ಪ್ರಸಿದ್ದ ಲೇಖಕರ/ದಾರ್ಶನಿಕರ ಬರಹ, ಪುಸ್ತಕಗಳನ್ನು ಓದಬೇಕು. ಪ್ರಸಿದ್ದ ಕವಿ,ಲೇಖಕ ಜಾನ ಮಿಲ್ಟನ ಹೇಳಿದ ಮಾತು ಒಬ್ಬ ಮನುಷ್ಯ ಮೂರು ನೂರು ಪುಸ್ತಕಗಳನ್ನು ಓದಿದಾಗ ಅವನಿಗೆ ಒಂದು ತಾಸು ಮಾತನಾಡುವ ಶಕ್ತಿ ಬರುತ್ತದೆ. ಇದು ಗಮನದಲ್ಲಿರಲಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...