Homeಮುಖಪುಟರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

- Advertisement -
- Advertisement -

80-90ರ ನಡುವಣ ದಶಕ ಕರ್ನಾಟಕದ ರೈತ ಚಳವಳಿಗಳಿಗೆ ಬಹು ಮುಖ್ಯ ವರುಷ. ಹಾಗೆಯೇ ದೇಶದ, ರಾಜ್ಯದ ರಾಜಕೀಯಕ್ಕೂ ಮುಖ್ಯವಾದ ವರುಷ. ರೈತರ ಸಿಟ್ಟಿನ ಅಲೆಯ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರದಲ್ಲೂ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರ ಮಾಡಿದ ದಶಕ. ಇಂದಿರಾಗಾಂಧಿ ಆಂಧ್ರದ ತೆಲುಗುದೇಶಂ ಸರ್ಕಾರವನ್ನು ವಜಾಗೊಳಿಸಿ ಇಡೀ ದೇಶದಲ್ಲಿ ಪ್ರತಿರೋಧದ ಅಲೆ ಎಬ್ಬಿಸಿದ ವರ್ಷಗಳು. ಅದರ ಫಲವಾಗಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷಗಳು ಸೇರಿ ಶೃಂಗ ಸಭೆ ನಡೆಸಿ ರಾಜ್ಯಗಳ ಸ್ವಾಯತ್ತತೆ, ಸಂವಿಧಾನಾತ್ಮಕ, ಆಡಳಿತಾತ್ಮಕ, ಆರ್ಥಿಕ ಅಧಿಕಾರದ ಪ್ರಶ್ನೆಗಳನ್ನು ಎತ್ತಿದ ವರ್ಷಗಳವು.

ಇಂದಿರಾ ಗಾಂಧಿಯವರ ಯೋಜಿತ ಕೊಲೆ ದೇಶವನ್ನೇ ಬೆಚ್ಚಿ ಬೀಳಿಸಿದ ನಂತರದ ಕಾಂಗ್ರೆಸ್‌ಗೆ ದೊಡ್ಡ ಬಹುಮತ ನೀಡಿದ ದಶಕ. ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದು ಬಹಳ ಜನಪ್ರಿಯನಾಗಿ ಅಷ್ಟೇ ವೇಗದಲ್ಲಿ ಜನಪ್ರಿಯತೆ ಕಳೆದುಕೊಂಡ ದಶಕ. ರಾಷ್ಟ್ರೀಯ ರಂಗದ ಹೆಸರಿನಲ್ಲಿ ಒಕ್ಕೂಟ ಮಟ್ಟದಲ್ಲಿ ಎರಡನೇ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದ ದಶಕ. ಮಂಡಲ್ ವರದಿ ಜಾರಿಗೆ ಬಂದ ದಶಕ.

ಇಂದಿರಾಗಾಂಧಿ

91ರ ನಂತರದ ಜಾಗತೀಕರಣಕ್ಕೆ, ಬಾಬ್ರಿ ಮಸೀದಿ ನಾಶಕ್ಕೆ ಅಡಿಪಾಯ ಬಿದ್ದ ದಶಕವೂ ಕೂಡ. ಇವೆಲ್ಲವೂ ರೈತರ ಬದುಕು ಚಳವಳಿಗಳ ಮೇಲೆ ಪರಿಣಾಮ ಬೀರಿದ ಸಂಗತಿಗಳು.

ರೈತ ವಿರೋಧಿ ಆರ್ಥಿಕ ನೀತಿಗಳು

80 ದಶಕದ ಆರಂಭದಲ್ಲಿಯೇ, ಅಂದರೆ 1981ರಲ್ಲಿ ಕೇಂದ್ರ ಸರ್ಕಾರ ಮೊತ್ತ ಮೊದಲು ಐಎಂಎಫ್ ಸಾಲ ಪಡೆಯಿತು. ಇಲ್ಲಿಯವರೆಗೆ ವಿಶ್ವ ಬ್ಯಾಂಕ್‌ನಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸಾಲ ಪಡೆಯಲಾಗಿತ್ತು. ಐಎಂಎಫ್ ಸಾಲವೆಂದರೆ ಸರ್ಕಾರದ ನಿರ್ವಹಣೆಗೆ ಕೇಂದ್ರ ಬಜೆಟ್‌ನಲ್ಲಿ ಹಣವಿಲ್ಲದೆ ಪಡೆಯುವ ಸಾಲ. ಈ ಸಾಲಕ್ಕೆ structural adjustment loan ಎಂದು ಕರೆಯುತ್ತಾರೆ. ಈ ಸಾಲ ಕೊಡುವಾಗಲೇ ಐಎಂಎಫ್ ಸರ್ಕಾರದ ಹಣಕಾಸಿನ ನಿರ್ವಹಣೆ ಹೇಗೆ ಮಾಡಬೇಕೆಂಬ ಬಗ್ಗೆ, ಸಾಲವನ್ನು ತೀರುವಳಿ ಮಾಡಬೇಕಾದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಬಗೆ ಹೇಗೆ ಎಂಬ ಷರತ್ತುಗಳನ್ನು ಹಾಕುತ್ತದೆ. ಅಂತಹ ಷರತ್ತುಗಳಿಗೆ ಒಪ್ಪಿದರೆ ಮಾತ್ರ ನೀಡುವ ಸಾಲ ಇದು. ದೇಶದ ಸಾರ್ವಭೌಮತೆಯನ್ನು ಅಂಶಅಂಶವಾಗಿ ಬಿಟ್ಟು ಸಾಲ ನೀಡಿದವರಿಗೆ ಶರಣಾಗುವ ಸಾಲವದು. ದೇಶದ ಅಭಿವೃದ್ಧಿ, ಜನರ ಕಲ್ಯಾಣ ಇಲ್ಲಿ ಜನರಿಂದ ಆಯ್ಕೆಯಾದ ಸರ್ಕಾರದ ಕೈತಪ್ಪಿ ವಿದೇಶಿ ಶಕ್ತಿಗಳ ಕೈಗೆ ಸೇರಿದ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ.

ಬಹು ಗಟ್ಟಿ ಹೆಣ್ಣು ಎಂದು ಹೆಸರು ಪಡೆದ ಇಂದಿರಾಗಾಂಧಿಯವರೇ ತಾವು 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಕೂಡಲೇ ದೇಶವನ್ನು ದುರ್ಬಲಗೊಳಿಸಿದ ಪ್ರಸಂಗ ಎದುರಾಯಿತು. ಈ ಸಮಯದಲ್ಲಿ ಮತ್ತೊಂದು ಮಾತು ನೆನಪಿಸಿಕೊಳ್ಳುವುದು ಅಗತ್ಯ. ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದಾಗ ಒಳಗಿಂದೊಳಗೇ ಅದಕ್ಕೆ ಆರ್ಥಿಕ ಆಸರೆ ನೀಡಿದ್ದು ವಿಶ್ವ ಬ್ಯಾಂಕ್, ಯುರೋಪು ಮತ್ತು ಅಮೇರಿಕ ದೇಶಗಳ ಅಭಿವೃದ್ಧಿ ನಿಧಿಗಳು. ಈಗ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಇಷ್ಟೇ ಸಾಲದಾಯಿತು.

ಇಂತಹ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಮುಖ್ಯ ಕಾರಣ: ದೇಶದೊಳಗಿನ ಬೃಹತ್ ಕಂಪನಿಗಳು ಮತ್ತು ಅತಿ ಶ್ರೀಮಂತರ ಮೇಲೆ ತೆರಿಗೆ ಹಾಕಿ ದೇಶದ ಅಭಿವೃದ್ಧಿಗೆ ಅವಶ್ಯವಾದ ಹಣ ಸಂಪನ್ಮೂಲಗಳನ್ನು ರೂಢಿಸಿಕೊಳ್ಳಲು ನಿರಾಕರಣೆ. ಅದಕ್ಕೆ ಬದಲಾಗಿ ಈ ಕಂಪನಿಗಳು ಮತ್ತು ಅತಿ ಶ್ರೀಮಂತರಿಗೆ ನೀಡುವ ತೆರಿಗೆ ವಿನಾಯತಿ. ಅದರಿಂದ ಬಜೆಟ್ ಕುಗ್ಗಿ ಹೋಗುವ ಪರಿಸ್ಥಿತಿ. ಇಂತಹ ನೀತಿಗಳೇ ಸ್ವಾತಂತ್ರ್ಯ ಬಂದಂದಿನಿಂದ ಇಲ್ಲಿಯವರೆಗೆ ಎಲ್ಲ ಕೇಂದ್ರ ಸರ್ಕಾರಗಳೂ ಅನುಸರಿಸುತ್ತಾ ಬಂದಿರುವುದು. ಈ ಎರಡು ವರ್ಷಗಳ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಜನತೆಯನ್ನು ಸಂಕಟದಿಂದ ಪಾರು ಮಾಡಲು ಕಂಪನಿಗಳ ಹಾಗೂ ಅತಿ ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಲು ನಿರಾಕರಿಸಿ ಕೋಟ್ಯಾಂತರ ಜನರ ಸಾವು, ಸಂಕಟಗಳಿಗೆ ಮೋದಿ ಸರ್ಕಾರ ಕಾರಣವಾಯಿತು.

ರಾಜೀವ್ ಗಾಂಧಿ

ಈ ರೀತಿ ಐಎಂಫ್‌ನಿಂದ ಪಡೆದ ಸಾಲ, ನಂತರ ಅನುಸರಿಸಿದ ಆರ್ಥಿಕ ಉದಾರಿಕರಣ ನೀತಿಗಳು ಮತ್ತೆ ದೇಶವನ್ನು ದಿವಾಳಿಯ ಅಂಚಿಗೆ ಕೊಂಡೊಯ್ದಿತು. ಚಂದ್ರಶೇಖರ್‌ರವರ ತಾತ್ಕಾಲಿಕ ಸರ್ಕಾರದ ಕಾಲದಲ್ಲಿ ರಿಸರ್ವ್ ಬ್ಯಾಂಕಿನ ಆಪತ್‌ಧನವಾದ ಟನ್‌ಗಟ್ಟಲೇ ಬಂಗಾರ ಅಡವಿಟ್ಟು ಸಾಲ ತರಬೇಕಾದ ಅಪಾಯಕಾರಿ ಪರಿಸ್ಥಿತಿಗೆ ದೇಶವನ್ನು ದೂಡಲಾಯಿತು. ಆ ನಂತರದ ಪಿ.ವಿ.ನರಸಿಂಹರಾವ್- ಮನಮೋಹನ ಸಿಂಗ್‌ರ ಜೋಡಿ ಮತ್ತೆ ಐಎಂಎಫ್ ಸಾಲ ಪಡೆದು ದೇಶವನ್ನು ಮತ್ತಷ್ಟು ಸಾಲಗಾರನನ್ನಾಗಿ ಮಾಡಿತು. ಸಾಲ ಕೊಟ್ಟವರ ಷರತ್ತುಗಳಿಗೆ ಶರಣಾಗಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ದೇಶದೆಲ್ಲಿ ಜನರ ಮೇಲೆ ಹೇರಲಾಯಿತು.

ಹೀಗೆ 1981ರಲ್ಲಿ ಪಡೆದ ದೇಶದ ಆರ್ಥಿಕ ರಚನೆಯ ಹೊಂದಾಣಿಕೆಯ ಸಾಲ ಸರಪಳಿ ಕ್ರಿಯೆಯಾಗಿ, ಇಂದು ರೈತರು ವರ್ಷಕ್ಕೂ ಮಿಗಿಲಾದ ಮತ್ತು ಏಳುನೂರು ರೈತರನ್ನು ಬಲಿಕೊಟ್ಟ ಸಂಘರ್ಷ ಮಾಡಬೇಕಾಯಿತು. ಆದ್ದರಿಂದ ಈಗಿನ ರೈತ ನಾಶಕ ಕಾನೂನಿನ ಬೇರುಗಳು, ಬೆಂಬಲ ಬೆಲೆ ವಂಚನೆ ನೀತಿ ಅಲ್ಲಿಯವರೆಗೆ ಚಾಚಿಕೊಳ್ಳುತ್ತವೆ.

1981 ಸಾಲ ವಿಧಿಸಿದ ಷರತ್ತುಗಳೇನು? ಅದನ್ನು ಯಾವ ರೀತಿ ಜಾರಿಗೆ ತರಲಾಯಿತು?

ಇತರ ಷರತ್ತುಗಳ ಜೊತೆಯಲ್ಲಿ ರೈತಾಪಿ ಜನರಿಗೆ ಬಾಧಕವಾಗುವ ಷರತ್ತುಗಳು ಹೀಗಿದ್ದವು: ರಸಗೊಬ್ಬರದ ಮೇಲಿನ ಸಹಾಯಧನ (ಸಬ್ಸಿಡಿ) ಮತ್ತು ಪಡಿತರ ವ್ಯವಸ್ಥೆಗೆ ನೀಡುವ ಸಹಾಯಧನಗಳಲ್ಲಿ ತೀವ್ರ ಕಡಿತ. ವಿದ್ಯುತ್ ದರಗಳ ಏರಿಕೆ, ರೈಲ್ವೆ, ಬಸ್ ದರಗಳ ಏರಿಕೆ, ಫುಡ್ ಫಾರ್ ವರ್ಕ್ (ದುಡಿಮೆಗಾಗಿ ಧಾನ್ಯ/ ಎನ್.ಆರ್.ಇ.ಪಿ) ಎಂಬ ರಾಷ್ಟ್ರೀಯ ಉದ್ಯೋಗ ಯೋಜನೆಯ ಕಡಿತ, ಜನಸಾಮಾನ್ಯರ ಮೇಲೆ ತೆರಿಗೆ ಏರಿಕೆ ಇತ್ಯಾದಿ.

ಇದರ ಫಲವಾಗಿ ರಸಗೊಬ್ಬರಗಳ ಬೆಲೆಯನ್ನು, ಪಡಿತರ ಧಾನ್ಯಗಳ ಬೆಲೆ ಮೊದಲಾದವನ್ನು ಏರಿಸಲಾಯಿತು. ಇದರಿಂದಾಗಿ ಕೃಷಿ ವೆಚ್ಚ ವಿಪರೀತ ಏರಿತು. ಅದೇ ಸಮಯದಲ್ಲಿ ಕೃಷಿ ಬೆಂಬಲ ಬೆಲೆಗಳನ್ನು ಸರ್ವತ್ರ ಬೆಲೆ ಏರಿಕೆಯ ಪ್ರಮಾಣದಲ್ಲಿ ಏರಿಸದಿದ್ದುದು ರೈತರನ್ನು ದೊಡ್ಡ ಸಂಕಷ್ಟಕ್ಕೆ ದೂಡಿತು. ನೀರಾವರಿ ಯೋಜನೆಗಳು, ಗ್ರಾಮೀಣ ರಸ್ತೆ, ಗ್ರಾಮೀಣ ಶಾಲೆ, ಆಸ್ಪತ್ರೆಗಳ ನಿರ್ಮಾಣಗಳಿಗೆ ಹೂಡುವ ಬಂಡವಾಳದಲ್ಲಿ ಖೋತಾ ಆಯಿತು. ಹಸಿರು ಕ್ರಾಂತಿ ದೇಶದ ಕೆಲವೇ ಭಾಗಗಳಿಗೆ ಸೀಮಿತವಾಯಿತು. ಶೇ.80ರಷ್ಟು ಪ್ರದೇಶ ಕ್ಷಾಮ ಡಾಮರಗಳಿಗೆ ತುತ್ತಾಗುವುದು ಇಂದೂ ಮುಂದುವರೆಯಲು ಕಾರಣವಾಯಿತು. ಭೂ ಸುಧಾರಣೆಯ ಮಾತು, ದಲಿತರಿಗೆ ಭೂ ಹಂಚಿಕೆ ಮರೆತೇ ಹೋಯಿತು.

ಕೃಷಿ ಕೂಲಿಕಾರರಿಗೆ ಕೆಲಸದ ಯೋಜನೆಗಳ ಕಡಿತ, ನೀರಾವರಿ ಯೋಜನೆಗಳ ಕಡಿತದಿಂದಾಗಿ ನಿರುದ್ಯೋಗ ಹೆಚ್ಚಾಯಿತು. ನಗರಗಳಿಗೆ ವಲಸೆ, ಸ್ಲಂಗಳಲ್ಲಿ ಜೀವನ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕುಗಳು ಎದುರಾದವು.

80ರ ದಶಕದಲ್ಲಿ ಎದ್ದ ರೈತ ಹೋರಾಟದ ಅಲೆಯ ಪರಿಣಾಮವಾಗಿ ಪಡೆದ ಕೆಲವು ಪರಿಹಾರಗಳು ಈ ಷರತ್ತುಗಳ ಕಾರಣದಿಂದ ನೀರಿನಲ್ಲಿ ಹೋಮವಾದವು. ರಾಜ್ಯ ಸರ್ಕಾರಗಳು ರೈತರಿಗೆ ನೀಡಬಹುದಾದ ಪರಿಹಾರಗಳ ವಿಷಯದಲ್ಲಿ ಅವುಗಳ ಕೈಕಟ್ಟಿ ಹಾಕಿದವು. ಇವುಗಳ ಜೊತೆಗೆ ವಿದೇಶಗಳಿಂದ ಅಹಾರ ಧಾನ್ಯಗಳನ್ನು ಗಣನೀಯವಾಗಿ ಆಮದು ಮಾಡಿಕೊಳ್ಳಲಾಯಿತು. ಇದೂ ಕೂಡಾ ಕೃಷಿ ಫಸಲುಗಳ ಬೆಲೆಗೆ ಹೊಡೆತ ನೀಡಿತು.

ರಾಜೀವ್ ಗಾಂಧಿಯವರು ದೇಶವನ್ನು 21ನೆಯ ಶತಮಾನಕ್ಕೆ ಹಾರಿಸುವ ಮಹತ್ವಾಕಾಂಕ್ಷೆಯ ಯೋಜನೆ ಐಎಂಎಫ್ ಷರತ್ತುಗಳ ಜೊತೆಗೂಡಿತು. ನಗರ, ಹಳ್ಳಿಗಳ ಶ್ರೀಮಂತರು, ಮೇಲ್ಮಧ್ಯಮ ವರ್ಗಗಳ ಆಸೆಯನ್ನು ಪೂರೈಸಲು ವಿದೇಶಗಳಿಂದ ಟಿವಿ, ಕಲರ್ ಟಿವಿ, ಹೊಸ ತಂತ್ರಜ್ಞಾನದ ಕಾರುಗಳು, ಇನ್ನಿತರ ತಂತ್ರಜ್ಞಾನದ ವಸ್ತುಗಳ ಭಾಗಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಂಡರು. ಇದರಿಂದಾಗಿ ವಿದೇಶಿ ವಿನಿಮಯದ ಕೊರತೆ ಉಂಟಾಯಿತು. ಈ ಎಲ್ಲ ಸೇರಿ 91ರ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತೀಕರಣದ ಒತ್ತಡಕ್ಕೆ ರೈತರೂ ಸೇರಿದಂತೆ ಜನತೆ ಇಂದೂ ಬಲಿಯಗುತ್ತಿದೆ.

ಇವುಗಳ ಪರಿಣಾಮವಾಗಿ ಸ್ವತಂತ್ರ ಭಾರತದಲ್ಲಿ ಎಂದೂ ಇಲ್ಲದ, ಇಂದಿರಾಗಾಂಧಿ ಸಾವಿನ ಅನುಕಂಪದಿಂದ ಶೇ. 80ರಷ್ಟು ಲೋಕಸಭಾ ಬಹುಮತ ಇದ್ದರೂ ರಾಜೀವ್ ಗಾಂಧೀ ಸರ್ಕಾರದ ಮೇಲೆ ಜನರಲ್ಲಿ ಅತೃಪ್ತಿ ಹೆಚ್ಚಾಯಿತು. ಬೋಫೋರ್ಸ್ ಹಗರಣ ಈ ಅತೃಪ್ತಿ ಭುಗಿಲೇಳುವುದಕ್ಕೆ ನೆಪವಾಯಿತು. ಈ ಸಂದರ್ಭದಲ್ಲಿ ವಿಪಿ ಸಿಂಗ್ ಮೊದಲಾದ ಕೆಲವರು ಸಚಿವ ಸಂಪುಟದಿಂದ ಹೊರಬಂದರು. ರಾಷ್ಟ್ರೀಯ ರಂಗ ಎಂಬ ಹೊಸ ಪಕ್ಷ ರಚನೆಯಾಯಿತು. 1989ರ ಚುನಾವಣೆಯಲ್ಲಿ ಈ ರಂಗಕ್ಕೆ ಒಂದು ಕಡೆ ಎಡ ಪಕ್ಷಗಳು, ಮತ್ತೊಂದು ಕಡೆ ಬಿಜೆಪಿ ಬೆಂಬಲ ನೀಡಿ ಸರ್ಕಾರ ರಚಿಸಲು ಸಾಧ್ಯವಾಯಿತು.

ರಾಮ ಜನ್ಮಭೂಮಿ ಚಳವಳಿ

ಜನರಲ್ಲಿ ಸಿಟ್ಟು ಬಲಿಯುತ್ತಿದ್ದ ಈ ಸಮಯಕ್ಕೆ ಕಾಯುತ್ತಿದ್ದ ಆರೆಸ್ಸೆಸ್, ವಿಎಚ್‌ಪಿ ಮತ್ತಿತರ ಸಂಘ ಪರಿವಾರವನ್ನು ಬಳಸಿ ಜನರಲ್ಲಿ ಕೋಮು ದ್ವೇಷವನ್ನು ಎಬ್ಬಿಸಲು ಬಾಬ್ರಿ ಮಸೀದಿಯನ್ನು ದೊಡ್ಡ ವಿವಾದವಾಗಿ ಬೆಳೆಸಿತು. ರಾಮ ಜ್ಯೋತಿ ಯಾತ್ರೆ, ಇಟ್ಟಿಗೆ ಪೂಜೆ, ನಿಧಿ ಸಂಗ್ರಹ ಮೊದಲಾದ ಹಲ ಹಲವು ಕ್ರಮಗಳ ಮೂಲಕ ಜನರಲ್ಲಿ ದ್ವೇಷವನ್ನು ಬಡಿದೆಬ್ಬಿಸಿತು. ಕೊನೆಗೆ ರಥಯಾತ್ರೆಯ ಮೂಲಕ ಸ್ಫೋಟಗೊಂಡಿತು.

ಈ ಎಲ್ಲ ಕೋಮುದ್ವೇಷಿ ಕಾರ್ಯಕ್ರಮಗಳ ಪರಿಣಾಮ ಉತ್ತರದ ರಾಜ್ಯಗಳ ರೈತಾಪಿ ಜನರು ಕೋಮುವಾದಕ್ಕೆ ಬಲಿಯಾದರು. ಕರ್ನಾಟಕದಲ್ಲಿಯೂ ಬಿಜೆಪಿ ಹಳ್ಳಿಗಾಡುಗಳಿಗೆ ಹಬ್ಬಿತು. ಹಲವು ಜಿಲ್ಲೆಗಳು ಕೋಮುವಾದದ ನೆಲೆಗಳಾಗಿ ರೂಪುಗೊಂಡವು. 1984ರಲ್ಲಿ ಲೋಕಸಭೆಯಲ್ಲಿ ಕೇವಲ 2 ಸ್ಥಾನ ಪಡೆದಿದ್ದ ಬಿಜೆಪಿ 1989ರಲ್ಲಿ 85 ಕ್ಕೆ ಏರಿತು. 1991ಕ್ಕೆ 120 ಸ್ಥಾನಗಳಿಗೇರಿತು. ಕರ್ನಾಟಕದಲ್ಲಿ ಕೂಡಾ 1985ರಲ್ಲಿ ಕೇವಲ 2 ವಿಧಾನ ಸಭಾ ಸ್ಥಾನಗಳನ್ನು ಪಡೆದಿದ್ದರೆ, 1989ರಲ್ಲಿ 4 ಸ್ಥಾನಗಳನ್ನು ಮಾತ್ರ ಪಡೆದಿತ್ತು. ಆದರೆ 1991ರ ಲೋಕಸಭಾ ಚುನಾವಣೆಯ ವೇಳೆಗೆ ಶೇ.28ರಷ್ಟು ಮತ ಗಳಿಸಿತು. ವೇಗವಾಗಿ ಬೆಳೆಯಲಾರಂಭಿಸಿತು.

1990ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ರಥಯಾತ್ರೆಯನ್ನು ಬಿಹಾರದಲ್ಲಿ ಲಾಲೂ ಪ್ರಸಾದ್ ಸರ್ಕಾರ ತಡೆಯಲಾಗಿ ಬಿಜೆಪಿ ಪಕ್ಷ ತಾನು ಕೇಂದ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿತು. ವಿಪಿ ಸಿಂಗ್ ಸರ್ಕಾರ ಬಿದ್ದುಹೋಯಿತು.

ರೈತ ಚಳವಳಿಗಳನ್ನು ಹಸಿರು ಕ್ರಾಂತಿ, ಅದರ ಮುಂದಿನ ಬೆಳವಣಿಗೆ ಮತ್ತು 80-90ರ ದಶಕದ ಈ ರಾಜಕೀಯ ಬೆಳವಣಿಗೆಯೊಡನೆ ಅಧ್ಯಯನ, ವಿಶ್ಲೇಷಣೆ ಮಾಡಿದಾಗ ಮಾತ್ರ ಅವುಗಳ ಬೆಳವಣಿಗೆ ಮತ್ತು ಚಳವಳಿಗಳನ್ನು
ಅರ್ಥೈಸಿಕೊಳ್ಳಲು ಸಾಧ್ಯವಾಗುವುದು.

ಬಜೆಟ್ 2022 ಮತ್ತು ಕೃಷಿ

ರೈತರ ಒಂದು ವರ್ಷಕ್ಕೂ ಹೆಚ್ಚು ಕಾಲದ ಸಂಘರ್ಷ ಮೋದಿ ಸರ್ಕಾರ ಮಂಡಿಯೂರಿ ರೈತ ನಾಶಕ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಕ್ಕೆ ಬಿಜೆಪಿ ಸರ್ಕಾರದ 2022ರ ಬಜೆಟ್ ಸೇಡು ತೀರಿಸಿಕೊಂಡಂತಿದೆ.

ಒಟ್ಟಾರೆಯಾಗಿ ಕೃಷಿಗೆ ಒಂದು ಲಕ್ಷ ಕೋಟಿಗೂ ಹೆಚ್ಚು ಖೋತಾ ಮಾಡಲಾಗಿದೆ. ಹಿಂದಿನ ಬಜೆಟ್‌ನ ಪರಿಷ್ಕೃತ ಅಂದಾಜಿನಂತೆ 4,74,750.47 ಕೋಟಿ ರೂ ವೆಚ್ಚ ಮಾಡಲಾಗಿದ್ದರೆ ಈ ವರ್ಷದ ಬಜೆಟ್‌ನಲ್ಲಿ 3,70,303 ಕೋಟಿ ರೂ ಮಾತ್ರ ನೀಡಲಾಗಿದೆ.

ರೈತರ ಮುಖ್ಯ ಒತ್ತಾಯವಾದ ಬೆಂಬಲ ಬೆಲೆಗೆ ಆಧಾರವಾದ ಗೋಧಿ, ಭತ್ತ ಸಂಗ್ರಹಕ್ಕೆ 2.34 ಕೋಟಿ ರೂ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಕೊಚ್ಚಿಕೊಳ್ಳುವ ಮೂಲಕ ಜನರಲ್ಲಿ ಭ್ರಮೆ ಹುಟ್ಟಿಸಲು ಹಾಗೂ ತಪ್ಪು ದಾರಿಗೆಳೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ನಿಜ ಸಂಗತಿ ಎಂದರೆ ಈ ಮೊತ್ತ ಹಿಂದಿನ ಬಜೆಟ್‌ನಲ್ಲಿ 2.48 ಕೋಟಿಯಷ್ಟಿತ್ತು. ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲೂ 34 ಲಕ್ಷ ರೈತರನ್ನು ಕಡಿತ ಮಾಡಲಾಗಿದೆ. ಹೀಗೆ ಬಜೆಟ್ ಕಡಿತ ಮಾಡಿದ್ದನ್ನೇ ಬಹು ದೊಡ್ಡ ಸಾಧನೆ ಎಂದು ಕೊಚ್ಚಿಕೊಳ್ಳುವ ಹೀನ ತಂತ್ರಕ್ಕೆ ಬಿಜೆಪಿ ಕೈ ಹಾಕಿದೆ. ಆಹಾರ ನಿಗಮಕ್ಕೆ ಆಹಾರ ಧಾನ್ಯಗಳನ್ನು ಕೊಳ್ಳುವುದಕ್ಕೆ ನೀಡುವ ಹಣದಲ್ಲಿ ಕೂಡಾ ಶೇ.28ರಷ್ಟು ಕಡಿತ ಮಾಡಲಾಗಿದ್ದರೆ ರಸಗೊಬ್ಬರ ಸಬ್ಸಿಡಿಗೆ ಶೇ.25ರಷ್ಟು ಕಡಿತ ಮಾಡಲಾಗಿದೆ. ಫಸಲ್ ಬಿಮಾ ಯೋಜನೆ, ಪಿಎಂ ಕಿಸಾನ್ ಎಂಬ 6,000 ರೂ ನೀಡುವ ಯೋಜನೆಯಲ್ಲಿಯೂ ಕಡಿತ ಮಾಡಲಾಗಿದೆ. ಇನ್ನೂ ವಿವಿಧ ಯೋಜನೆಗಳಿಗೂ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೂ ಹಣ ಕಡಿತ ಮಾಡಲಾಗಿದೆ.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೋವಿಡ್ ಸಮಯದಲ್ಲಿ ಕೃಷಿ ಕೂಲಿಕಾರರ ಹಾಗೂ ಬಡ ರೈತರ ಜೀವನಕ್ಕೆ ಒಂದಿಷ್ಟು ಸಹಾಯ ಮಾಡಿತ್ತು. ಅದಕ್ಕೆ ಕೂಡಾ ಹಿಂದಿನ ವರ್ಷಕ್ಕಿಂತ ಹಣ ಕಡಿತ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಕಾನೂನಿನಂತೆ ಕೃಷಿ ಕೂಲಿಕಾರರಿಗೆ ಒಂದು ವರ್ಷಕ್ಕೆ ನೂರು ದಿನ ಕೆಲಸ ನೀಡಲು 2.64 ಲಕ್ಷ ಕೋಟಿ ರೂ ಹಣ ಬೇಕು. ಆದರೆ ಈಗ ನೀಡಲಾಗಿರುವುದು ಕೇವಲ 73,000 ಕೋಟಿ ರೂ. ಇದರಲ್ಲಿ ಕೂಲಿಕಾರರು ಮಾಡಿದ ಹಿಂದಿನ ವರ್ಷದ ಬಾಕಿ ತೀರಿಸಲು 20,000 ಕೋಟಿ ಹಣ ಬೇಕು. ಕೊನೆಗೆ ಈ ವರ್ಷದ ಕೆಲಸಕ್ಕೆ ಉಳಿಯುವುದೇ ಕೇವಲ 53,000 ಕೋಟಿ.

ಹೀಗಿದೆ ರೈತಪರ, ಕೂಲಿಕಾರರ ಬಜೆಟ್‌ನ ಪರಿ!

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ ೮೦ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...