Homeಮುಖಪುಟಯುಪಿ ಚುನಾವಣೆ ಮೊದಲ ಹಂತ: ಇಂದು 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ

ಯುಪಿ ಚುನಾವಣೆ ಮೊದಲ ಹಂತ: ಇಂದು 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ

2017ರಲ್ಲಿ ಬಿಜೆಪಿ ಈ 58 ಸ್ಥಾನಗಳಲ್ಲಿ 53 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು. ಈ ಬಾರಿ ರೈತರು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದಾರೆ.

- Advertisement -
- Advertisement -

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಗುರುವಾರ (ಫೆ.10) ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಮತದಾನದಲ್ಲಿ, ಚುನಾವಣಾ ಆಯೋಗದ ಪ್ರಕಾರ ಬೆಳಗ್ಗೆ 9:30 ರ ವರೆಗೆ ಶೇ.7.95 ರಷ್ಟು ಮತದಾನವಾಗಿದೆ.

ಮೊದಲ ಹಂತದ ಚುನಾವಣೆಯು ಜಾಟ್ ಪ್ರಾಬಲ್ಯದ ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ. ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಘಾಜಿಯಾಬಾದ್, ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಬುಲಂದ್‌ಶಹರ್, ಅಲಿಗಢ, ಆಗ್ರಾ ಮತ್ತು ಮಥುರಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಬೆಳಗ್ಗೆ 9:30 ರ ವರೆಗೆ ಮಥುರಾ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 8.23 ​​ರಷ್ಟು, ಆಗ್ರಾದಲ್ಲಿ ಶೇಕಡಾ 7.64 ರಷ್ಟು ಮತ್ತು ಬಾಗ್ಪತ್ ಕ್ಷೇತ್ರದಲ್ಲಿ ಶೇಕಡಾ 8.93 ರಷ್ಟು ಮತದಾನವಾಗಿದೆ. ಅಲಿಗಢ ಕ್ಷೇತ್ರದಲ್ಲಿ ಶೇ.8.39ರಷ್ಟು ಮತದಾನವಾಗಿದ್ದರೆ, ಗೌತಮ್ ಬುದ್ಧ ನಗರದಲ್ಲಿ ಶೇ.8.07ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಯುಪಿ ಚುನಾವಣೆ: ಬದಲಾವಣೆ ಎದುರು ನೋಡುತ್ತಿರುವ ‘ದಲಿತ ರಾಜಧಾನಿ’ ಆಗ್ರಾ

ಇಂದು ಚುನಾವಣೆ ನಡೆಯುತ್ತಿರುವ 58 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದು, 2.28 ಕೋಟಿಗೂ ಹೆಚ್ಚು ಮತದಾರರು ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. 25,849 ಮತಗಟ್ಟೆಗಳು ಮತ್ತು 10,766 ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ರಾಜ್ಯದ ಗಡಿಯನ್ನು ಪೊಲೀಸರು ಸೀಲ್ ಮಾಡಿದ್ದು, ಚುನಾವಣೆ ನಡೆಯುತ್ತಿರುವ 58 ಕ್ಷೇತ್ರಗಳಲ್ಲಿ ಶಾಂತಿ ಕಾಪಾಡಲು ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.

ಅಭ್ಯರ್ಥಿಗಳಲ್ಲಿ ರಾಜ್ಯ ಸಚಿವರಾದ ಶ್ರೀಕಾಂತ್ ಶರ್ಮಾ, ಸಂದೀಪ್ ಸಿಂಗ್, ಸುರೇಶ್ ರಾಣಾ, ಕಪಿಲ್ ದೇವ್ ಅಗರ್ವಾಲ್, ಅತುಲ್ ಗರ್ಗ್ ಮತ್ತು ಚೌಧರಿ ಲಕ್ಷ್ಮಿ ನಾರಾಯಣ್ ಸೇರಿದ್ದಾರೆ. ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟದ ಪ್ರಮುಖ ಅಭ್ಯರ್ಥಿಗಳೆಂದರೆ ಕೈರಾನಾದಿಂದ ನಹಿದ್ ಹಸನ್ ಮತ್ತು ಮುಜಾಫರ್‌ನಗರದಿಂದ ಸೌರಭ್ ಸ್ವರೂಪ್.

ಇದನ್ನೂ ಓದಿ: ಯುಪಿ ಚುನಾವಣೆ: ಯಾವ ಪಕ್ಷಕ್ಕೂ ಇಲ್ಲ ರೈತರ ಮತ, ನೋಟಾದತ್ತ ಎಲ್ಲರ ಚಿತ್ತ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ನೋಯ್ಡಾದಿಂದ ಮತ್ತು ಉತ್ತರಾಖಂಡದ ಮಾಜಿ ಗವರ್ನರ್ ಬೇಬಿ ರಾಣಿ ಮೌರ್ಯ ಆಗ್ರಾ ಗ್ರಾಮಾಂತರದಿಂದ ಸ್ಪರ್ಧಿಸುತ್ತಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶ ಜಾಟ್ ಪ್ರಾಬಲ್ಯದ ಕ್ಷೇತ್ರವಾಗಿದೆ. ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಪ್ರಮುಖ ಕೇಂದ್ರ ಕೂಡ ಇದಾಗಿತ್ತು. ಕಾನೂನುಗಳನ್ನು ಈಗ ರದ್ದುಗೊಳಿಸಲಾಗಿದೆ. ಆದರೆ, ಬಿಜೆಪಿಗೆ ಮತ ಹಾಕದಂತೆ ರೈತ ನಾಯಕರು ಜನರನ್ನು ಒತ್ತಾಯಿಸಿದ್ದಾರೆ.

ಈ ಭಾಗದ ಕಬ್ಬು ಬೆಳೆಗಾರರು ತಮ್ಮ ಬಾಕಿ ಪಾವತಿ ವಿಳಂಬ ಮತ್ತು ವಿದ್ಯುತ್ ಬಿಲ್‌ಗಳ ಹೆಚ್ಚಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2017ರ ಚುನಾವಣೆಯಲ್ಲಿ ಬಿಜೆಪಿ ಈ 58 ಸ್ಥಾನಗಳಲ್ಲಿ 53 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿತ್ತು.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.


ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡದಂತೆ ಯುಪಿ ರೈತರಿಗೆ ಎಸ್‌ಕೆಎಂ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...