ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಆಕೆಯ ಸಹೋದರ ಶೋಯಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಇದೇ ಪ್ರಕರಣದಲ್ಲಿ ಬಂಧನದಲ್ಲಿದ್ದ ಸುಶಾಂತ್ ನೌಕರರರಾದ ದೀಪೇಶ್ ಸಾವಂತ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರಿಗೂ ನ್ಯಾಯಾಲಯ ಜಾಮೀನು ನೀಡಿದೆ. ಆದರೆ ರಿಯಾ ಸಹೋದರ ಶೋಯಿಕ್ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ರಿಯಾ ಚಕ್ರವರ್ತಿಯನ್ನು ಸೆಪ್ಟೆಂಬರ್ 8 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. ಶೋಯಿಕ್ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಸೆಪ್ಟೆಂಬರ್ 4 ರಂದು ಏಜೆನ್ಸಿ ವಶಕ್ಕೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರನ್ನು ಹಣಿಯಲು 80 ಸಾವಿರ ಫೇಕ್ ಅಕೌಂಟ್‌ಗಳ ಸೃಷ್ಠಿ : BJP ಕೈವಾಡದ ಆರೋಪ
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿಗೆ 28 ದಿನಗಳ ಬಳಿಕ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿ.ಕೋಟ್ವಾಲ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. 1ಲಕ್ಷ ಮೌಲ್ಯದ ಬಾಂಡ್ ನೀಡುವಂತೆ ಸೂಚಿಸಿರುವ ಕೋರ್ಟ್, ಬಾಂಬೆ ಬಿಟ್ಟು ಹೊರ ಹೋಗದಂತೆ ತಿಳಿಸಿದೆ. ಹಾಗೆಯೇ ಪಾಸ್ ಪೋರ್ಟ್ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದೆ.
ರಿಯಾ ಚಕ್ರವರ್ತಿಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ ಆದೇಶದಿಂದ ನಾವು ಸಂತೋಷಗೊಂಡಿದ್ದೇವೆ. ಸತ್ಯ ಮತ್ತು ನ್ಯಾಯವು ಮೇಲುಗೈ ಸಾಧಿಸಿದೆ ಎಂದು ರಿಯಾ ಪರ ವಕೀಲ ಸತೀಶ್ ಮನೇಶಿಂದೆ ಹೇಳಿದರು.
‘ರಿಯಾ ಬಂಧನ ಕಾನೂನಿನ ವ್ಯಾಪ್ತಿಯನ್ನು ಮೀರಿತ್ತು. ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಎನ್‌ಸಿಬಿ ಸಂಸ್ಥೆಗಳು ರಿಯಾ ವಿರುದ್ಧ ನಡೆಸುತ್ತಿರುವ ಅನಗತ್ಯ ವಿಚಾರಣೆ ಕೊನೆಗೊಳ್ಳಬೇಕು. ನಾವು ಸತ್ಯಕ್ಕೆ ಬದ್ಧರಾಗಿರುತ್ತೇವೆ’ ಎಂದು ವಕೀಲ ಮನೇಶಿಂದೆ ತಿಳಿಸಿದ್ದಾರೆ.
ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದಲ್ಲಿರುವ ಅವರ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಕ್ಟೋಬರ್ 3 ರಂದು, ಅವರ ಶವಪರೀಕ್ಷೆಯ ವರದಿಗಳನ್ನು ಪರಿಶೀಲಿಸುವ ಉಸ್ತುವಾರಿ ವಹಿಸಿದ್ದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಪ್ಯಾನಲ್, ನಟನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ತಳ್ಳಿ ಹಾಕಿದ್ದು, ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತೀರ್ಪು ನೀಡಿತ್ತು.
ಈ ಪ್ರಕರಣವನ್ನು ಈಗಾಗಲೇ ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಸೇರಿದಂತೆ ಹಲವಾರು ನಟ ನಟಿಯರನ್ನು ತನಿಖೆಗೆ ಒಳಪಡಿಸಲಾಗಿದೆ.


