ನಿವೃತ್ತ ಗ್ರಾಮ ಸಹಾಯಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ದಲಿತ ಮುಖಂಡರಾದ ತುರುವೇಕೆರೆಯ ಕೆಂಪಯ್ಯ ಅವರ ಸಂಶಯಾಸ್ಪದ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಇದೊಂದು ಸಹಜ ಸಾವು ಎಂದು ದಾಖಲಿಸಿರುವ ತುರುವೇಕೆರೆ ಪೊಲೀಸರು ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದರು. ಸಾರ್ವಜನಿಕ ಒತ್ತಡ ಹೆಚ್ಚಿದಂತೆ ಐಪಿಸಿ 302ರ ಸೇರಿ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣ ಪೊಲೀಸ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪಿಯುಸಿಎಲ್ ನೇತೃತ್ವದ ಸತ್ಯಶೋಧನ ಸಮಿತಿ ಆರೋಪಿಸಿದೆ.
ಬೆಂಗಳೂರಿನ ಶಿವಮಣಿ, ಬಸವರಾಧ್ಯ, ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್, ಸ್ಲಂ ಜನಾಂದೋಲನದ ಸಂಚಾಲಕ ಎ.ನರಸಿಂಹಮೂರ್ತಿ, ಕಾರ್ಮಿಕ ಮುಖಂಡ ಎನ್.ಕೆ.ಸುಬ್ರಮಣ್ಯ, ಸ್ಥಳೀಯ ದಲಿತ ಮುಖಂಡ ಕುಂದುರು ತಿಮ್ಮಯ್ಯ ಅವರಿದ್ದ ಸತ್ಯಶೋಧನಾ ಸಮಿತಿ ಜೂನ್ 17ರಂದು ಗಿರಿಯನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ವ್ಯಕ್ತಿ ಕುಟುಂಬದವರಿಂದ ಮಾಹಿತಿ ಕಲೆಹಾಕಿತು. ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಿತು.
ಕೆಂಪಯ್ಯ ನಿವೃತ್ತರಾದ ಮೇಲೆ ಸಾರ್ವಜನಿಕ ಸ್ವತ್ತು ಉಳಿಸುವ ಕೈಂಕರ್ಯ ಕೈಗೊಂಡಿದ್ದರು. ಒಳ್ಳೆಯವರಾದ ಅವರ ಸಾವು ಸಂಶಯಾಸ್ಪದವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು ಎಂದು ಶೋಧನಾ ಸಮಿತಿ ತಿಳಿಸಿದೆ.
ತುಮಕೂರು ಜಿಲ್ಲೆಯ ತುರುವೇಕೆರೆಯ ಗಿರಿಯ್ಯನಹಳ್ಳಿಯ ಕೆಂಪಯ್ಯ(58) ಮಾಸ್ತಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮ ಸೇವಕರಾಗಿ ಕೆಲಸ ನಿರ್ವಹಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ಸಾಮಾನ್ಯರಿಗೆ ನೆರವು ನೀಡುತ್ತಿದ್ದರು. ಸಾರ್ವಜನಿಕ ಆಸ್ತಿಗಳನ್ನು ಉಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಗ್ರಾಮದ ಗೋಮಾಳದಲ್ಲಿ ಮಣ್ಣುಕ್ವಾರಿ ಕೆಲಸ ಮಾಡುತ್ತಿದ್ದವರ ಬಗ್ಗೆ ತಹಶೀಲ್ದಾರ್ ಅವರಿಗೆ ದೂರು ಸಹ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತುರುವೇಕೆರೆ ತಹಶೀಲ್ದಾರ್ ಗ್ರಾಮ ಲೆಕ್ಕಾಧಿಕಾರಿ ಮೂಲಕ ಮಣ್ಣುಗಣಿಗಾರಿಕೆ ನಡೆಸುತ್ತಿದ್ದ ಮಹೇಶ್, ದರ್ಶನ್ ಮೊದಲಾದವರಿಗೆ ಎಚ್ಚರಿಕೆ ನೀಡಿದ್ದರು. ಇದಾದ ಕೆಲವು ದಿನಗಳಲ್ಲಿ ಅಂದರೆ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯಂದೇ ಕೆಂಪಯ್ಯ ಗ್ರಾಮಕ್ಕೆ ಸಮೀಪದ ತೋಟದಲ್ಲಿರುವ ತೊಟ್ಟಿಯ ಬಳಿ ಶಂಕಾಸ್ಪದವಾಗಿ ಮೃತಪಟ್ಟಿದ್ದರು. ಪೊಲೀಸರು ಇದು ಸಹಜ ಸಾವು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಯುಡಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದರು.

ಕೆಂಪಯ್ಯ ಪುತ್ರಿ ಘಟನೆ ಸಂಬಂಧ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಡಿಐಜಿ ಕಮಲ್ ಪಂಥ್ ಅವರಿಗೆ ಪತ್ರ ಬರೆದು ನಮ್ಮ ತಂದೆಯದು ಅಸಹಜ ಸಾವಲ್ಲ. ಈ ಸಾವಿನ ಬಗ್ಗೆ ಶಂಕೆಯಿದೆ. ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದಲಿತ ಸಂಘಟನೆಗಳಿಂದಲೂ ಒತ್ತಡ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ.

ಸಣ್ಣದೊಂದು ತೊಟ್ಟಿಯ ಬಳಿ ಕೆಂಪಯ್ಯ ಮೃತಪಟ್ಟಿದ್ದಾರೆ. ಚಿಕ್ಕ ಮಗು ಬಿದ್ದರೂ ಸಾಯಲು ಸಾಧ್ಯವಿಲ್ಲ ಅಂಥ ತೊಟ್ಟಿ ಅದು. ಕೆಂಪಯ್ಯನವರ ಹಿಂದಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬೆನ್ನು ಮೇಲೆ ತರಚಿದ ಗಾಯಗಳಾಗಿವೆ. ಪ್ರಾಥಮಿಕ ತನಿಖೆಯನ್ನು ನಡೆಸಿಲ್ಲ. ಕುಟುಂಬದವರ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೇಳಿಕೆ ಪಡೆಯಲು ಅವಕಾಶ ಕೊಟ್ಟಿಲ್ಲ. ಇಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ. ಕೆಂಪಯ್ಯ ಕುಟುಂಬದಲ್ಲಿ ಪತ್ನಿ, ಮೂವರು ಹೆಣ್ಣು ಮಕ್ಕಳು ಮತ್ತು ಒರ್ವ ಪುತ್ರ ಇದ್ದು ಮಣ್ಣುಗಣಿಗಾರಿಕೆ ನಡೆಸುತ್ತಿದ್ದವರು ಜೀವಬೆದರಿಕೆ ಹಾಕಿದ್ದಾರೆ. ಹಾಗಾಗಿ ಆ ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಇಡೀ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಸತ್ಯಶೋಧನ ತಂಡದ ಸದಸ್ಯರು ಆಗ್ರಹಿಸಿದ್ದಾರೆ.
ಘಟನೆ ಸಂಭವಿಸಿ ಮೂರು ತಿಂಗಳು ಕಳೆದಿದ್ದರೂ ಫೋರೆನ್ಸಿಕ್ ವರದಿ ಬಂದಿಲ್ಲ. ಅರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚು ಕಾರ್ಯಕ್ಕೂ ಕೈಹಾಕಿಲ್ಲ. ಕುಟುಂಬ ಭಯದಲ್ಲಿದೆ. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಜಿಲ್ಲಾಡಳಿತ ಮೌನವಹಿಸಿದೆ ಎಂದು ಸತ್ಯಶೋಧನ ತಂಡ ಆರೋಪಿಸಿದೆ.
ಇದನ್ನೂ ಓದಿ: ತುಮಕೂರಿನ ಮಧುಗಿರಿಯಲ್ಲಿ ಘಟನೆ :ಕೊಳವೆ ಬಾವಿ ತೋಡಿಸಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕಾಲು ಮುರಿದ ಗ್ರಾ.ಪಂ ಅಧ್ಯಕ್ಷ.


