ಮಣಿಪುರ

ಆಪರೇಷನ್ ಕಮಲದ ಮೂಲಕ ಮಣಿಪುರದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಹಲವು ಕಾರಣಗಳಿಗಾಗಿ ಅಧಿಕಾರ ಕಳೆದುಕೊಳ್ಳುವತ್ತ ಸಾಗಿದೆ. ಮಣಿಪುರ ರಾಜ್ಯಸಭಾ ಚುನಾವಣೆ ಗೆಲ್ಲಲು ಹೊರಟಿದ್ದ ಅದಕ್ಕೆ ಈಗ ಸರ್ಕಾರವನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ.

ಮಣಿಪುರದ ಬಿಜೆಪಿ ನೇತೃತ್ವದ ಬಿರೆನ್ ಸಿಂಗ್ ಸರ್ಕಾರದಿಂದ ಕನಿಷ್ಠ ಒಂಬತ್ತು ಶಾಸಕರು ಬೆಂಬಲ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದರಿಂದ ಬಿಜೆಪಿ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಕಳೆದುಕೊಳ್ಳಲಿದೆ ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದು ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ದೊಡ್ಡ ತೊಂದರೆಯಾಗಲಿದೆ.

ಬೆಂಬಲ ಹಿಂತೆಗೆದುಕೊಳ್ಳಲು ನಿರ್ಧರಿಸಿದ ಒಂಬತ್ತು ಶಾಸಕರಲ್ಲಿ ಕಾನ್ರಾಡ್ ಸಾಂಗ್ಮಾ ನೇತೃತ್ವದ ರಾಷ್ಟ್ರೀಯ ಪೀಪಲ್ಸ್ ಪಾರ್ಟಿ ಅಥವಾ ಎನ್‌ಪಿಪಿಯಿಂದ ನಾಲ್ವರು ಸೇರಿದ್ದಾರೆ. ಅವರಲ್ಲಿ ಉಪಮುಖ್ಯಮಂತ್ರಿ ವೈ ಜಾಯ್‌ಕುಮಾರ್ ಸಿಂಗ್, ಕ್ಯಾಬಿನೆಟ್ ಮಂತ್ರಿಗಳಾದ ಎನ್ ಕಾಯಿಸಿ, ಎಲ್ ಜಯಂತ ಕುಮಾರ್ ಸಿಂಗ್ ಮತ್ತು ಲೆಟ್‌ಪಾವೊ ಹಾಕಿಪ್ ಅವರು ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.

ಮೂವರು ಬಿಜೆಪಿ ಶಾಸಕರು, ಒಬ್ಬ ತೃಣಮೂಲ ಕಾಂಗ್ರೆಸ್ ಶಾಸಕ ಟಿ.ರಬಿಂದ್ರೊ ಸಿಂಗ್ ಮತ್ತು ಸ್ವತಂತ್ರ ಶಾಸಕ ಶಹಾಬುದ್ದೀನ್ ಕೂಡ ಬಿಜೆಪಿಗೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2017 ರಲ್ಲಿ ಬಿಜೆಪಿಗೆ ಪಕ್ಷಾಂತರವಾದ ಏಳು ಕಾಂಗ್ರೆಸ್ ಶಾಸಕರು ವಿಧಾನಸಭೆ ಪ್ರವೇಶಿಸಬಾರದೆಂದು ಮಣಿಪುರ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಹಠಾತ್ ಅಸ್ಥಿರತೆ ಉಂಟಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಕಾಂಗ್ರೆಸ್ ಶಾಸಕ ಥ.ಶ್ಯಾಮ್‌ಕುಮಾರ್ ಸಿಂಗ್ ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾದಾಗ ಅವರನ್ನು ಅನರ್ಹಗೊಳಿಸಲಾಯಿತು. ಇತರ ಏಳು ಕಾಂಗ್ರೆಸ್ ಶಾಸಕರ ಅನರ್ಹತೆ ಅರ್ಜಿಯು ಸ್ಪೀಕರ್ ಖೇಮ್‌ಚಂದ್ ಸಿಂಗ್ ಅವರ ನ್ಯಾಯಮಂಡಳಿಯಲ್ಲಿದೆ.

2017 ರ ವಿಧಾನಸಭಾ ಚುನಾವಣೆಯಲ್ಲಿ, 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 28 ಸ್ಥಾನಗಳೊಂದಿಗೆ ಕಾಂಗ್ರೆಸ್ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿಗೆ 21 ಸ್ಥಾನಗಳು ದೊರೆತಿವೆ. ಆದರೆ ನಾಲ್ಕು ಎನ್‌ಪಿಪಿ, ನಾಲ್ಕು ಎನ್‌ಪಿಎಫ್, ಒಂದು ಎಲ್‌ಜೆಪಿ, ಒಂದು ಟಿಎಂಸಿ, ಒಬ್ಬ ಸ್ವತಂತ್ರ ಸದಸ್ಯ ಮತ್ತು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯ ಬೆಂಬಲ ಪಡೆಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಯಿತು. ಬಿರೆನ್ ಸಿಂಗ್ ಸರ್ಕಾರ ರಚನೆಯ ನಂತರ ಇತರ ಏಳು ಕಾಂಗ್ರೆಸ್ ಶಾಸಕರು ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದರು.

ಶ್ಯಾಮ್‌ಕುಮಾರ್ ಸಿಂಗ್ ಮತ್ತು ಇತರ ಏಳು ಕಾಂಗ್ರೆಸ್ ಶಾಸಕರು ವಿಧಾನಸಭೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದ ನಂತರ ವಿಧಾನಸಭೆಯ ಬಲಾಬಲ 52 ಕ್ಕೆ ಕುಸಿದಿದೆ.

ಬಿಜೆಪಿಗೆ ಸದ್ಯಕ್ಕೆ 23 ಸದಸ್ಯರ ಬಲವನ್ನು ಹೊಂದಿದೆ. ಅದರಲ್ಲಿ 18 ಬಿಜೆಪಿ ಶಾಸಕರು, ನಾಲ್ಕು ಎನ್‌ಪಿಎಫ್ ಮತ್ತು ಒಬ್ಬ 1 ಎಲ್‌ಜೆಪಿ ಸದಸ್ಯ ಸೇರಿದ್ದಾರೆ.

ಕಾಂಗ್ರೆಸ್ ತನ್ನದೇ ಆದ 20 ಶಾಸಕರನ್ನು ಹೊಂದಿದೆ. ಒಬ್ಬ ಸದಸ್ಯನನ್ನು ಅನರ್ಹಗೊಳಿಸಲಾಗಿದೆ ಮತ್ತು ಏಳು ಪಕ್ಷಾಂತರಿಗಳನ್ನು ನಿರ್ಬಂಧಿಸಲಾಗಿದೆ. ಬಿರೆನ್ ಸಿಂಗ್ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಂಡ ಒಂಬತ್ತು ಶಾಸಕರ ಬೆಂಬಲ ಸಿಕ್ಕರೆ, ಕಾಂಗ್ರೆಸ್ 29 ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಪಾಲಿಗೆ ಮುಳುವಾಗಲಿದೆ.


ಇದನ್ನೂ ಓದಿ: ಆಪರೇಷನ್ ಕಮಲಕ್ಕೆ ಮುಖಭಂಗ: ಮಣಿಪುರದ ಏಳು ಶಾಸಕರನ್ನು ವಿಧಾನ ಸಭೆ ಪ್ರವೇಶಿಸದಂತೆ ಹೈಕೋರ್ಟ್ ತೀರ್ಪು

LEAVE A REPLY

Please enter your comment!
Please enter your name here