ಸಂಸತ್‌ನ ಬಜೆಟ್ ಅಧಿವೇಶನದ ಮುನ್ನಾ ದಿನ ಇಂದು (ಜ.30) 11 ರಾಜ್ಯಸಭಾ ಸದಸ್ಯರ ವಿರುದ್ದದ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.
ಈ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಮಾತನಾಡಿ ಅಮಾನತುಗೊಂಡಿರುವ ಎಲ್ಲಾ ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆಯ ಅಧ್ಯಕ್ಷರಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
#WATCH | When asked about the revocation of suspended MPs, Parliamentary Affairs Minister Pralhad Joshi says, "All (suspensions) will be revoked. I have spoken with the (Lok Sabha) Speaker and (Rajya Sabha) Chairman, I have also requested them on behalf of the government…This… pic.twitter.com/F9xWqohPYg
— ANI (@ANI) January 30, 2024
ಡಿಸೆಂಬರ್ 2023ರಲ್ಲಿ, ಅಂದರೆ ಕಳೆದ ತಿಂಗಳು ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟಿಸಿದ್ದಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 146 ಸಂಸದರನ್ನು ಅಮಾನತು ಮಾಡಲಾಗಿತ್ತು.
146 ಸಂಸದರ ಪೈಕಿ 132 ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಮಾತ್ರ ಅಮಾನತುಗೊಳಿಸಲಾಗಿತ್ತು. ಪ್ರಸ್ತುತ ಅವರ ಅಮಾನತು ಆದೇಶ ಮಾನ್ಯತೆಯಲ್ಲಿ ಇಲ್ಲ. ಇನ್ನುಳಿದ 14 ಸಂಸದರನ್ನು (ರಾಜ್ಯಸಭೆಯ 11 ಮತ್ತು ಲೋಕಸಭೆಯ 3) ಹಕ್ಕುಬಾಧ್ಯತಾ ಸಮಿತಿಗಳು ನಿರ್ಧರಿಸುವವರೆಗೆ ಅಮಾನತುಗೊಳಿಸಲಾಗಿತ್ತು.
ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಜನವರಿ 12ರಂದು ಮೂವರು ಲೋಕಸಭೆ ಸಂಸದರ ಅಮಾನತು ಆದೇಶವನ್ನು ರದ್ದುಗೊಳಿಸಿತ್ತು. ಉಳಿದ 11 ರಾಜ್ಯಸಭಾ ಸದಸ್ಯರ ಅಮಾನತನ್ನು ಇಂದು ಹಿಂಪಡೆಯಲಾಗಿದೆ.
ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ:
ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸತ್ತಿನ ಲೈಬ್ರರಿ ಕಟ್ಟಡದಲ್ಲಿ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಇಂದು ಸರ್ವಪಕ್ಷ ಸಭೆ ನಡೆಯಿತು. ಬಜೆಟ್ ಅಧಿವೇಶನವು ನಾಳೆ (ಜ 31, ಬುಧವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಪ್ರಾರಂಭವಾಗಲಿದೆ. ಫೆಬ್ರವರಿ 9 ರಂದು ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2024-25ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಲಿದ್ದಾರೆ. ದೇಶವು ಏಪ್ರಿಲ್-ಮೇನಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸುವ ಸಾಧ್ಯತೆ ಇರುವ ಕಾರಣ ಈ ಬಜೆಟ್ ಅನ್ನು ‘ಮಧ್ಯಂತರ’ ಎಂದು ಪರಿಗಣಿಸಲಾಗಿದೆ. ಇದು ನರೇಂದ್ರ ಮೋದಿ ಸರ್ಕಾರ 2.0ದ ಅಂತಿಮ ಬಜೆಟ್ ಆಗಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿ ಕರ್ನಾಟಕದಿಂದ ರಾಜ್ಯಸಭೆಗೆ? ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್


