Homeಮುಖಪುಟಸ್ವರಾಜ್ ಎಂಬ ನಿಜವಾದ ಅಭಿವೃದ್ಧಿ : ಸುಮನಸ್ ಕೌಲಗಿ

ಸ್ವರಾಜ್ ಎಂಬ ನಿಜವಾದ ಅಭಿವೃದ್ಧಿ : ಸುಮನಸ್ ಕೌಲಗಿ

ಸ್ವರಾಜ್‌ ಅಭಿವೃದ್ದಿಯಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಶೋಷಿಸದೆ, ಪ್ರೀತಿಯಿಂದ ಬದುಕುವುದರೊಟ್ಟಿಗೆ, ಬೇರೊಬ್ಬನು ತನ್ನನ್ನು ಶೋಷಿಸದಂತೆ ತಡೆಯುವುದೂ ಕೂಡ ಅಹಿಂಸೆಯ ಭಾಗವಾಗಿದೆ..

- Advertisement -
- Advertisement -

ಕಾಡಂಚಿನ ಒಂದು ಹಳ್ಳಿಯ ಮಧ್ಯವಯಸ್ಕ ವ್ಯಕ್ತಿಯನ್ನು ಅಂದು ಮಾತನಾಡಿಸುತ್ತಿದ್ದೆ. ಮಾತು ತಿರುತಿರುಗಿ ಅತನ ಹಳ್ಳಿಯ ಬಗ್ಗೆ ಬಂತು. ಮಾತಿನ ಮಧ್ಯೆ ಆತ ತನ್ನ ಹಳ್ಳಿ ಹಾಗೆಯೇ ಕುಗ್ರಾಮವಾಗಿಯೇ ಉಳಿದಿದ್ದು ತನ್ನ ಹಳ್ಳಿಯು ಇನ್ನೂ ‘ಡೆವಲಪ್’ ಆಗಿಲ್ಲ ಎಂದು ಕೊರಗತೊಡಗಿದ. ಕೆಲವು ದಿನಗಳ ಹಿಂದೆ ಸಾಫ್ಟ್ವೇರ್ ಗೆಳೆಯನೊಬ್ಬ ಬೆಂಗಳೂರಿನ ಬಗ್ಗೆ ಇದೇ ಮಾತನ್ನು ಹೇಳಿದ್ದು ನೆನಪಿಗೆ ಬಂತು. ಈ ‘ಡೆವಲಪ್’ ಅಥವಾ ಅಭಿವೃದ್ಧಿ ಎಂಬ ಪದ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚು ಚಾಲ್ತಿಗೆ ಬಂದ ಶಬ್ದ. ಹಳ್ಳಿಯಿಂದ ದಿಲ್ಲಿಯವರೆಗೂ ಇದು ಜನರ ಶಬ್ದಭಂಡಾರಕ್ಕೆ ಸೇರಿಹೋಗಿದೆ. ಸಾಮಾನ್ಯರ ಕಲ್ಪನೆಯಲ್ಲಿ ಒಳ್ಳೆಯ ಜೀವನದ ಕನಸೊಂದನ್ನು ನನಸಾಗಿಸುವ ವಿಧಾನವೇ ‘ಡೆವಲಪ್’ ಆಗುವುದಾಗಿದೆ. ಈ ಅಭಿವೃದ್ಧಿ ಎಂಬ ಕಲ್ಪನೆಯು ಒಬ್ಬ ವ್ಯಕ್ತಿಗೆ, ಸಮುದಾಯಕ್ಕೆ ಹಾಗು ದೇಶಕ್ಕೆ ದಿಕ್ಕನ್ನು ತೋರಿಸುವ ದಿಕ್ಸೂಚಿಯಂತೆ ಕೆಲಸಮಾಡತೊಡಗಿದೆ.

ಅಮೂರ್ತವಾಗಿರುವ ಈ ಅಭಿವೃದ್ಧಿ ಕಲ್ಪನೆ ಸಮಾಜದ ಎಲ್ಲಾ ಸ್ಥರದವರಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯದಾಗಿದೆ. ಈ ಕಲ್ಪನೆ ನೂರಕ್ಕೆ ನೂರು ಭೌತಿಕ ಅಭಿವೃದ್ಧಿಯನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿದೆ. ಈ ಕಲ್ಪನೆಯಲ್ಲಿ ಹೆಚ್ಚಿನ ಭೌತಿಕ ವಸ್ತು ಸಂಗ್ರಹಣೆಯು ವ್ಯಕ್ತಿಯ, ಸಮುದಾಯದ ಅಥವಾ ದೇಶದ ಅಭಿವೃದ್ಧಿಯ ಸಂಕೇತವಾಗಿದೆ. ಜೀವನದಲ್ಲಿ ನೆಮ್ಮದಿ ಹಾಗು ಶಾಂತಿಯನ್ನು ಪಡೆವುದು ಈ ‘ಡೆವಲಪ್’ ಆಗುವುದರ ಹಿಂದಿನ ಬಯಕೆ ಎಂಬುದು ಯಾರೇ ಜನಸಾಮಾನ್ಯರೊಟ್ಟಿಗೆ ಮಾತನಾಡಿದರೆ ತಿಳಿಯುತ್ತದೆ. ಆದರೆ ನಾವು ನಂಬಿರುವ ಈ ವಸ್ತುಕೇಂದ್ರಿತ ಅಭಿವೃದ್ಧಿ, ಎಷ್ಟರ ಮಟ್ಟಿಗೆ ಈ ಬಯಕೆಯನ್ನು ಈಡೇರಿಸಿದೆ ಎಂದು ಪರೀಕ್ಷಿಸಿಕೊಳ್ಳುವುದು ಇಂದಿಗೆ ಅತ್ಯಗತ್ಯ. ಈ ಪರಾಮರ್ಶೆಯಿಂದ ಒಂದು ನಾಗರೀಕತೆಯಾಗಿ ನಾವು ಸರಿಯಾದ ದಿಕ್ಕಿನೆಡೆಗೆ ಹೆಜ್ಜೆ ಇಡುತ್ತಿದ್ದೇವೆಯೆ ಅಥವಾ ಇಲ್ಲವೆ ಎಂಬುದು ತಿಳಿಯಬೇಕಿದೆ.

ಒಂದೆಡೆ, ವಸ್ತು ಕೇಂದ್ರಿತ ಅಭಿವೃದ್ಧಿಯಿಂದ ಪರಿಸರದ ಮೇಲೆ ಮಿತಿಮೀರಿದ ಒತ್ತಡ ಉಂಟಾಗಿ ನಾವು ಬದುಕಲೇ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತಿಚೆಗಷ್ಟೆ, ಮೆಲ್‌ಬರ್ನ್‌ನ ‘ಬ್ರೇಕ್‌ಥ್ರೂ ನ್ಯಾಶನಲ್ ಸೆಂಟರ್ ಫಾರ್ ಕ್ಲೈಮೇಟ್ ರಿಸ್ಟೊರೇಶನ್’ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ನಾವು ಅನುಸರಿಸುತ್ತಿರುವ ಅಭಿವೃದ್ಧಿ ಮಾದರಿಯು 2050ನೇ ಇಸವಿಯ ವೇಳೆಗೆ ಮನುಷ್ಯನ ಮೂಲಭೂತ ಅಗತ್ಯಗಳಾದ ಒಳ್ಳೆಯ ಗಾಳಿ, ನೀರು, ಮಣ್ಣು ಸಿಗದಂತೆ ಮಾಡಿ ಮಾನವ ಕುಲವೇ ವಿನಾಶದ ಅಂಚಿಗೆ ತಲುಪುತ್ತದೆ ಎನ್ನುತ್ತದೆ. ಇಂಗ್ಲೆಂಡಿನ ಆಕ್ಸಫಾಮ್ ಸಂಸ್ಥೆಯ ವರದಿಯ ಪ್ರಕಾರ ಈ ಅಭಿವೃದ್ಧಿಯ ಮಾದರಿಯಿಂದಾಗಿ ಬಡವ ಬಲ್ಲಿದರ ನಡುವಿನ ಅಂತರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಭಾರತ ದೇಶದ ಶೇ.77ರಷ್ಟು ಸಂಪತ್ತು ಕೇವಲ ಶೇ.10ರಷ್ಟು ಜನರ ಬಳಿ ಸೇರಿದೆ. ವರ್ಷದಿಂದ ವರ್ಷಕ್ಕೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ. ಇದಷ್ಟೇ ಅಲ್ಲದೆ ಜನರಿಗೆ ತಮ್ಮ ಜೀವನದ ಮೇಲಿನ ಹಿಡಿತ ಕಡಿಮೆಯಾಗಿ, ನೆಮ್ಮದಿ ಹಾಗು ಸಂತೋಷ ಕುಸಿಯುತ್ತಿದೆ. ಹಾಗಾಗಿ ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಆರ್ಥಿಕ ಸಮಾನತೆಯನ್ನು ಹೆಚ್ಚಿಸಿ, ಜನರಿಗೆ ತಮ್ಮ ಬದುಕಿನ ಮೇಲೆ ಹೆಚ್ಚಿನ ಹಿಡಿತವನ್ನು ನೀಡಬಲ್ಲ ಅಭಿವೃದ್ಧಿಯ ಕಲ್ಪನೆಯನ್ನು ನೀಡಬೇಕಿದೆ. ಇಂತಹ ಒಂದು ಅಭಿವೃದ್ಧಿ ಕಲ್ಪನೆಯು ಮಹಾತ್ಮಗಾಂಧಿ ಹಾಗು ಅವರ ಒಡನಾಡಿ ಜೆ.ಸಿ ಕುಮಾರಪ್ಪನವರ ಚಿಂತನೆಯಲ್ಲಿ ಅಡಗಿದೆ. ಅದು ಸ್ವರಾಜ್ ಅಭಿವೃದ್ಧಿ ಕಲ್ಪನೆಯಾಗಿದೆ.

ಜೆ.ಸಿ ಕುಮಾರಪ್ಪ

ಸ್ವರಾಜ್ ಎಂದರೆ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ತನ್ನ ಜೀವನದ ಮೇಲೆ ಹಿಡಿತವನ್ನು ತಾನೇ ಹೊಂದಿರುವುದು ಎಂಬುದಾಗಿದೆ. ಸ್ವರಾಜ್ ಅಭಿವೃದ್ಧಿ ಕಲ್ಪನೆಯು ನ್ಯಾಚುರಲ್ ಆರ್ಡರ್ ಎಂಬ ಸಮಷ್ಟಿ ದೃಷ್ಟಿಯ ಮೇಲೆ ನಿಂತಿದೆ. ಈ ಸಮಷ್ಟಿ ನೋಟವು ಪರಿಸರದಲ್ಲಿ ಮಾನವನ ಸ್ಥಾನವನ್ನು ಗುರುತಿಸಿ, ಸತ್ಯ ಮತ್ತು ಅಹಿಂಸೆ ಎಂಬ ಮೂಲ ತತ್ವಗಳನ್ನು ಆಧಾರವಾಗಿ ಹೊಂದಿದೆ. ಸತ್ಯವೆಂದರೆ ಮನುಷ್ಯನನ್ನೂ ಒಳಗೊಂಡಂತೆ ವಿಶ್ವದಲ್ಲಿರುವ ಎಲ್ಲಾ ಜೀವ ಹಾಗು ನಿರ್ಜೀವ ವಸ್ತುಗಳ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂಬ ದೃಷ್ಟಿಕೋನ. ಒಬ್ಬ ವ್ಯಕ್ತಿಯ ಒಳಿತು ವಿಶ್ವದ ಒಳಿತಿನಲ್ಲಿದೆ ಎಂಬುದು ಈ ದೃಷ್ಟಿಕೋನದ ನೈತಿಕ ನಿಲುವು. ಹಾಗಾಗಿ ಸತ್ಯದ ಅರಿವಿನಲ್ಲಿ ಬದುಕಲು, ಅಹಿಂಸಾತ್ಮಕ ಜೀವನ ಅನಿವಾರ್ಯವಾಗುತ್ತದೆ. ಇಲ್ಲಿ ಕೇವಲ ಒಬ್ಬ ವ್ಯಕ್ತಿ ಮತ್ತೊಬ್ಬನನ್ನು ಶೋಷಿಸದೆ, ಪ್ರೀತಿಯಿಂದ ಬದುಕುವುದರೊಟ್ಟಿಗೆ, ಬೇರೊಬ್ಬನು ತನ್ನನ್ನು ಶೋಷಿಸದಂತೆ ತಡೆಯುವುದೂ ಕೂಡ ಅಹಿಂಸೆಯ ಭಾಗವಾಗಿದೆ. ಈ ರೀತಿಯ ಅಹಿಂಸಾತ್ಮಕ ಬದುಕನ್ನು ನಡೆಸಲು ಎಲ್ಲ ಮನುಷ್ಯರಿಗೂ ತಮ್ಮ ಮೂಲಭೂತ ಭೌತಿಕ ಅಗತ್ಯತೆಗಳಾದ ಆಹಾರ, ಬಟ್ಟೆ ಮತ್ತು ವಸತಿಯ ಪೂರೈಕೆಯಾಗುವುದು ಅತ್ಯಗತ್ಯ. ಈ ಮೂಲಭೂತ ಅಗತ್ಯಗಳಿಂದ ವಂಚಿತನಾದವನಿಗೆ, ತನ್ನ ದೈಹಿಕ ಬದುಕು ಮುಖ್ಯವಾಗಿ, ಸಮಾಜದ ಒಳಿತು ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಸ್ವರಾಜ್ ಕಲ್ಪನೆಯಲ್ಲಿ ಅಭಿವೃದ್ಧಿಯು ಮೂಲಭೂತ ಭೌತಿಕ ಅಗತ್ಯತೆಗಳನ್ನು ಪೂರೈಸಿದ ನಂತರ ನೈತಿಕತೆಯ ಕಡೆಗೆ ಮುಖಮಾಡುತ್ತದೆ. ಇದು ಒಬ್ಬ ವ್ಯಕ್ತಿ ತನ್ನ ಅಹಂಅನ್ನು ಕಳೆದುಕೊಂಡು ವಿಶ್ವದೊಟ್ಟಿಗೆ ಒಂದಾಗಿ ಬದುಕಲು ಪ್ರೇರೇಪಿಸುತ್ತದೆ. ಇದರ ಫಲವೇ ವ್ಯಕ್ತಿಜೀವನದಲ್ಲಿ ಹಾಗೂ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಗೊಳ್ಳುವಂತೆ ಮಾಡುತ್ತದೆ.

ಸ್ವರಾಜ್ ಅಭಿವೃದ್ಧಿಯು ಮೂಲಭೂತ ಭೌತಿಕ ಅಗತ್ಯತೆಗಳನ್ನು ಎಲ್ಲರು ಪೂರೈಸಿಕೊಳ್ಳುವಂತೆ ಮಾಡಲು ರಾಜಕೀಯ ವಿಕೇಂದ್ರಿಕರಣ ಹಾಗು ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ರಾಜಕೀಯ ವಿಕೇಂದ್ರಿಕರಣವು ಎರಡು ಮುಖವನ್ನು ಹೊಂದಿದೆ. ಒಂದು, ಅಹಿಂಸಾತ್ಮಕ ಪ್ರಜಾಪ್ರಭುತ್ವ, ಮತ್ತೊಂದು ಸತ್ಯಾಗ್ರಹದ ಮೂಲಕ ಶೋಷಣೆಯ ವಿರುದ್ಧ ಅಹಿಂಸಾತ್ಮಕ ಹೋರಾಟ. ಅಹಿಂಸಾತ್ಮಕ ಪ್ರಜಾಪ್ರಭುತ್ವವು ಹೆಚ್ಚಿನ ರಾಜಕೀಯ ಅಧಿಕಾರವನ್ನು ಸಮುದಾಯಕ್ಕೆ ನೀಡಿ, ನಿರ್ಧಾರಗಳನ್ನು ಆದಷ್ಟು ಒಮ್ಮತದ ಮೇಲೆ ಮಾಡುವಂತೆ ಪ್ರೋತ್ಸಾಹಿಸುತ್ತದೆ. ಈ ವ್ಯವಸ್ಥೆಯು ಸಮುದಾಯದ ಭಾಗವಾಗಿರುವ ವ್ಯಕ್ತಿಗೆ ತನ್ನ ಜೀವನದ ಮೇಲೆ ಹೆಚ್ಚಿನ ಹಿಡಿತವನ್ನು ನೀಡಿ ರಾಜಕೀಯ ಶೋಷಣೆಯನ್ನು ಕಡಿಮೆಗೊಳಿಸುತ್ತದೆ. ಈ ರೀತಿಯ ಪ್ರಜಾಪ್ರಭುತ್ವವು, ಬೆಂಗಳೂರಿನಲ್ಲೋ ಅಥವ ದೆಹಲಿಯಲ್ಲೋ ಕುಳಿತು ಯಾವುದೋ ಒಂದು ಹಳ್ಳಿಗೆ ಅಲ್ಲಿಯ ಜನರನ್ನು ಗಮನಕ್ಕೇ ತೆಗೆದುಕೊಳ್ಳದೇ ಏನು ಬೇಕು ಏನು ಬೇಡ ಎಂದು ನಿರ್ಧರಿಸುವ ಇಂದಿನ ರಾಜಕೀಯ ವ್ಯವಸ್ಥೆಗೆ ತದ್ವಿರುದ್ಧವಾಗಿದೆ. ಮನುಷ್ಯನಿಗೆ, ಪರಹಿತದ ಜೊತೆಗೆ ಸ್ವಹಿತಾಸಕ್ತಿಯ ಮುಖವೂ ಇರುವುದರಿಂದ ಅಹಿಂಸಾತ್ಮಕ ಪ್ರಜಾಪ್ರಭುತ್ವದಲ್ಲಿಯೂ ಶೋಷಣೆಯ ಸಾಧ್ಯತೆಗಳಿರುತ್ತದೆ. ಹಾಗಾಗಿ ಸತ್ಯಾಗ್ರಹ ಅಥವಾ ಪ್ರೀತಿಯ ಮೂಲಕ ಶೋಷಿತರು ಶೋಷಣೆ ಮಾಡುವರ ಮನಸ್ಸನ್ನು ಗೆದ್ದು ಶೋಷಣೆಯಿಂದ ಹೊರಬರುವುದು ಸ್ವರಾಜ್ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.

ರಾಜಕೀಯ ವಿಕೇಂದ್ರಿಕರಣಕ್ಕೆ, ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯು ಅತ್ಯಗತ್ಯ. ಈ ವ್ಯವಸ್ಥೆಯು ಉತ್ಪತ್ತಿ ಹಾಗು ಕೊಳ್ಳುವಿಕೆಯು ಕೇವಲ ಭೌತಿಕ ವ್ಯವಹಾರವಲ್ಲದೆ, ನೈತಿಕ ವ್ಯವಹಾರ ಕೂಡ ಆಗಿದೆ ಎಂಬುದನ್ನು ಗುರುತಿಸುತ್ತದೆ. ಉದಾಹರಣೆಗೆ ಮಕ್ಕಳನ್ನು ಶೋಷಿಸಿ ತಯಾರಾದ ಒಂದು ವಸ್ತುವನ್ನು ಕೊಂಡ ವ್ಯಕ್ತಿಯೊಬ್ಬ ಪರೋಕ್ಷವಾಗಿ ಆ ಮಕ್ಕಳ ಶೋಷಣೆಗೆ ಕಾರಣನಾಗಿರುತ್ತಾನೆ. ಆದ್ದರಿಂದ ಒಬ್ಬ ವ್ಯಕ್ತಿಯು ಅಹಿಂಸಾತ್ಮಕ ಬದುಕನ್ನು ನಡೆಸಬೇಕಾದರೆ, ತಾನು ಕೊಂಡಿರುವ ವಸ್ತು ಹೇಗೆ ತಯಾರಾಗಿದೆ, ಅದರ ತಯಾರಿಕೆಯ ಹಿಂದಿನ ಕತೆಯೇನು ಎಂಬುದನ್ನು ಖುದ್ದು ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಉತ್ಪಾದಕ ಮತ್ತು ಗ್ರಾಹಕರ ನಡುವಿನ ಅಂತರ ಕಡಿಮೆ ಇರುವಂತೆ ಸ್ವಾವಲಂಬಿ ಆರ್ಥಿಕ ವ್ಯವಸ್ಥೆಯು ಪ್ರೇರೇಪಿಸುತ್ತದೆ. ಈ ಅರ್ಥ ವ್ಯವಸ್ಥೆಯು ಮಾನವ ಶ್ರಮ ಆಧಾರಿತ ಉದ್ಯೋಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಏಕೆಂದರೆ ಮಾನವ ಶ್ರಮವನ್ನು ಒಂದು ಶಕ್ತಿಯ ರೂಪವಾಗಿ ನೋಡಿದರೆ, ಅದರಷ್ಟು ಪರಿಸರ ಸ್ನೇಹಿಯಾದ ಶಕ್ತಿಯ ಮೂಲ ಮತ್ತೊಂದಿಲ್ಲ. ಹಣದ ಬಂಡವಾಳ ಕೇವಲ ಕೆಲವರ ಬಳಿ ಮಾತ್ರ ಇದೆ. ಶ್ರಮಕ್ಕೆ ಬೇಕಾದ ಶಕ್ತಿ ಎಲ್ಲರ ಬಳಿಯಲ್ಲೂ ಇದೆ. ಹಾಗಾಗಿ ಶ್ರಮಾಧಾರಿತ ವ್ಯವಸ್ಥೆ ಹೆಚ್ಚಿನ ಜನ ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯ ಮಾಡಿಕೊಡುತ್ತದೆ. ಉದಾಹರಣೆಗೆ ಶ್ರಮಾಧಾರಿತ ಕೈಮಗ್ಗಕ್ಕೆ ಬೇಕಾದ ಬಂಡವಾಳವು ಕೇವಲ ಇಪ್ಪತ್ತು ಸಾವಿರ ರೂಪಾಯಿಗಳಾದರೆ, ಬಂಡವಾಳ ಆಧಾರಿತ ವಿದ್ಯುತ್ ಮಗ್ಗಕ್ಕೆ ಎರಡು ಲಕ್ಷ ರುಪಾಯಿಗಳಷ್ಟು ಬೇಕಾಗುತ್ತದೆ. ಕೈಮಗ್ಗದ ಸ್ಥಾಪನೆಗೆ ಬಂಡವಾಳ ಕಡಿಮೆ ಇರುವುದರಿಂದ ಹೆಚ್ಚಿನ ಜನ ಸ್ವಂತ ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಉತ್ಪಾದನೆಯ ಹಂತದಲ್ಲಿಯೇ ಸಂಪತ್ತು ಹಂಚಿಕೆಯಾಗಿ ಸಮಾಜದಲ್ಲಿ ಹೆಚ್ಚಿನ ಸಮಾನತೆ ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಸ್ವರಾಜ್ ಅಭಿವೃದ್ಧಿಯತ್ತ ಹೊರಳುವುದು, ಮಾನವಕುಲದ ಉಳಿವಿಗೆ ಅನಿವಾರ್ಯವಾಗಿದೆ ಎಂಬುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಈ ಅನಿವಾರ್ಯತೆಯೇ 150 ವರ್ಷಗಳ ನಂತರವೂ ಗಾಂಧಿಯ ಪ್ರಸ್ತುತತೆಯನ್ನು ನಮಗೆ ತಿಳಿಸುತ್ತದೆ.

  • ಸುಮನಸ್ ಕೌಲಗಿ

ಮೇಲುಕೋಟೆಯವರಾದ ಸುಮನಸ್, ಗಾಂಧಿ ವಿಚಾರಧಾರೆಯನ್ನು ಸ್ವತಃ ಮೈಗೂಡಿಸಿಕೊಂಡಿರುವುದಲ್ಲದೆ ಅದರ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಸ್ವರಾಜ್ ಅಭಿವೃದ್ಧಿ ಚಿಂತನೆ’ಯ ಬಗ್ಗೆ ಇಂಗ್ಲೆಡಿನ ಯೂನಿವರ್ಸಿಟಿ ಆಫ್ ಸಸೆಕ್ಸ್‌ನಲ್ಲಿ ಪಿಎಚ್‌ಡಿ ಪ್ರಬಂಧ ಮಂಡಿಸಿದ್ದಾರೆ.


ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...