Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

ಮನುಕುಲಕ್ಕೆ ವೇದ್ಯ, ಬದುಕಿಗೆ ನೈವೇದ್ಯ ಠಾಗೋರ್‍ ಅವರ ಗೀತಾಂಜಲಿ

- Advertisement -
- Advertisement -

ಸಂಕಟದಲಿ ಸಂರಕ್ಷಿಸು ಎಂಬ ಪ್ರಾರ್ಥನೆ ಇಲ್ಲ
ಸಂಕಟದಲಿ ಭಯವಿರದಿರೆ ಸಾಕು, ಹೆಚ್ಚಿನದೇನೂ ಬೇಕಿಲ್ಲ

ಜನರ ಭಯ ಮತ್ತು ಆಸೆಗಳೆಂಬ ಮೂಲ ಪ್ರವೃತ್ತಿಯೇ ಪುರೋಹಿತಶಾಹಿಯ ಬಂಡವಾಳ. ದೈವಿಕ ಪ್ರತಿಮೆಯನ್ನು ಮುಂದಿಟ್ಟುಕೊಂಡು ಭಕ್ತ ಮತ್ತು ಭಗವಂತರಿಬ್ಬರೂ ಸಂಧಿಸದ ಹಾಗೆ ನೋಡಿಕೊಳ್ಳುವ ಪುರೋಹಿತವರ್ಗವನ್ನು ದಾಟಿ ತಮ್ಮ ಅಂತರಂಗದಲ್ಲಿಯೇ ಭಗವಂತನೆಂಬ ಪೂರ್ಣಾಸ್ತಿತ್ವದ ಚೈತನ್ಯವನ್ನು ಬಿಂಬ ಪ್ರತಿಬಿಂಬದಂತೆ ನೋಡುವ ಭಕ್ತಿಯೇ ರವೀಂದ್ರನಾಥ ಠಾಗೋರರ ಗೀತಾಂಜಲಿ.

ಇದರಲ್ಲಿನ 103 ಕವನಗಳಲ್ಲಿ ಪ್ರಧಾನವಾಗಿ ಕಾಣುವುದು ಭಾವುಕತೆಯೇ. ಸಾಮಾನ್ಯವಾಗಿ ಕಾವ್ಯವೆಂದ ಕೂಡಲೇ ರೂಪಕಗಳು ಮುನ್ನೆಲೆಗೆ ಬರುವುದಾದರೂ ಗೀತಾಂಜಲಿಯಲ್ಲಿ ಅವು ಸರಳಗೊಳ್ಳುವವು. ಪ್ರಕೃತಿಯ ರೂಪಕಗಳನ್ನೇ ಬಳಸಿದರೂ ಅವು ಕಠಿಣವಾಗಿ ಸಾಂಕೇತಿಕವಾಗಿರುವ ಬದಲು ನೇರವಾಗಿ ಎದೆಗೆ ತಟ್ಟುವವು. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರುವ ಡಬ್ಲ್ಯು ಬಿ ಯೀಟ್ಸ್ “ಠಾಗೂರರು ಭಾರತೀಯ ಸಂಸ್ಕೃತಿಯಂತೆ ಅಂತರಾತ್ಮವನ್ನು ಶೋಧಿಸಿಕೊಳ್ಳುವುದರಲ್ಲಿ ತೃಪ್ತಿಪಡುತ್ತಾರೆ. ಅಂತರಂಗದ ಅಧಿನಾಯಕನ ಪ್ರೇರಣೆಗೆ ತಮ್ಮನ್ನು ಸಮರ್ಪಿಸಿಕೊಂಡುಬಿಡುತ್ತಾರೆ. ಸರಳ, ಸುಂದರ ಮತ್ತು ಮುಗ್ಧತೆ ಇದರಲ್ಲಿದೆ” ಎನ್ನುತ್ತಾರೆ. ಠಾಗೋರರು ಬಾಲ್ಯದಿಂದಲೂ ಕಾವ್ಯಕ್ಕೊಲಿದು ಪ್ರಕೃತಿಯಲ್ಲಿ ಭಾವುಕತೆಯಿಂದ ತನ್ಮಯರಾಗುತ್ತಿದ್ದವರು. ಸಾಂಪ್ರದಾಯಿಕವಾಗಿ ಮನೆಯಲ್ಲಿ ಧಾರ್ಮಿಕತೆಯು ಜೀವಂತವಾಗಿದ್ದರೂ ತಂದೆ ಮತ್ತು ಅಣ್ಣ ಹಾಗೂ ಇತರರಿಗಿದ್ದ ಇಂಗ್ಲೀಷ್ ಸಾಹಿತ್ಯ ಮತ್ತು ವಿಶ್ವ ಸಾಹಿತ್ಯದ ಸಂಗವಿತ್ತು. ಅದರಿಂದಾಗಿ ಅವರ ಧಾರ್ಮಿಕತೆಯು ಸಾಂಪ್ರದಾಯಿಕವಾಗಿ ಸಂಕುಚಿತವಾಗಿರದೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಯತ್ನಿಸುತ್ತಿತ್ತು. ಅಷ್ಟೇ ಅಲ್ಲದೇ ನಾಮ, ರೂಪಗಳನ್ನು ಮೀರಿದ ಮತ್ತು ಪುರೋಹಿತಶಾಹಿಯ ಕಂದಾಚಾರಗಳನ್ನು ಧಿಕ್ಕರಿಸಿದ್ದ ಬ್ರಹ್ಮಸಮಾಜದ ಪ್ರಭಾವವೂ ಅವರಿಗಿತ್ತು.

ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣವನ್ನೇ ವಿರೋಧಿಸಿ ಕೋಣೆಗಳ ಗೋಡೆಗಳ ನಡುವೆ ಶಿಕ್ಷೆ ಮತ್ತು ಶಿಕ್ಷಣ ಎಂಬ ಕಟ್ಟುಪಾಡಿನ ಕಲಿಕೆಯನ್ನು ಬಯಲಿಗೆ, ಮರ ಬಳ್ಳಿಗಳ ಕೆಳಗೆ, ಗಿಡ ಹೂಗಳ ನಡುವೆ, ಮಣ್ಣು ಹುಲ್ಲು ಕಲ್ಲುಗಳ ಮೇಲೆ ತಂದವರು. ಕಂಠಪಾಠದ ಕಠಿಣ ಶಿಕ್ಷಣದ ಶೃಂಖಲೆಗಳಿಂದ ಮಕ್ಕಳನ್ನು ಬಿಡಿಸಿ, ಹಾಡು, ಕತೆ, ಕುಣಿತ, ಚಿತ್ರ ಬಿಡಿಸುವುದಕ್ಕೆ ಅನುವು ಮಾಡಿದವರು. ಅದೇ ಮುಕ್ತ ಮನೋಭಾವ ಮತ್ತು ವೈಶಾಲ್ಯದ ಧೋರಣೆ ಅವರು ಪಡೆದ ಧಾರ್ಮಿಕ ತಿಳುವಳಿಕೆಗೂ ಅನ್ವಯವಾಗುತ್ತದೆ. ತಮ್ಮ ಧಾರ್ಮಿಕತೆಯನ್ನು ಮುಕ್ತ ಆಧ್ಯಾತ್ಮಿಕತೆಯನ್ನಾಗಿ ಪ್ರಕಟಿಸಿದ ಠಾಗೋರ್ ಸಂಪ್ರದಾಯವಾಗಿ ಮೂರ್ತಿಪೂಜಕನಾಗಿ ವರ್ತಿಸದೇ ಹಾಡುಗಳಿಂದ ನಮಿಸಿದ್ದೇ ಈ ಗೀತಾಂಜಲಿ.

ಮೂರ್ತಿಭಂಜನವು ಭಾರತೀಯ ಧಾರ್ಮಿಕತೆಗೇನೂ ಹೊಸತಲ್ಲ. ಉಪನಿಷತ್ತುಗಳಲ್ಲಿಯೇ ಸಾಂಪ್ರದಾಯಕ ಭಕ್ತಿ ಮತ್ತು ನಿವೇದನೆಯನ್ನು ನಿರಾಕರಿಸಿಯಾಗಿತ್ತು. ದೈವತ್ವವನ್ನು ತನ್ನಲ್ಲೇ ಕಾಣುವ ಅಥವಾ ತನ್ನನ್ನು ದೈವತ್ವದಲ್ಲಿ ಕಾಣುವ ಅದ್ವೈತ ತತ್ವವು ಗಟ್ಟಿಗೊಳ್ಳತೊಡಗಿತ್ತು.

ತಾನು ಎಂಬುದು ವ್ಯಕ್ತಿಗತವಾದ ಅಸ್ತಿತ್ವ ಮತ್ತು ‘ಅದು’ ಎನ್ನುವುದು ಮಹಾ ಅಸ್ತಿತ್ವವೆಂಬ ಪರಿಕಲ್ಪನೆಯಲ್ಲಿ ತನ್ನನ್ನೂ ಮತ್ತು ‘ಅದನ್ನೂ’ ಸಂಧಿಸುವ ‘ಸೋಹಂ’ ಎನ್ನುವ ಭಾವಪ್ರಯೋಗಗಳು ನಡೆದಿದ್ದವು. ಆದರೆ ಗೀತಾಂಜಲಿಯಲ್ಲಿ ಠಾಗೂರರು ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ನಾನೇ ಅದು, ಅದೇ ನಾನು ಎಂಬ ಭಾವದಲ್ಲಿ ತೋಡಿಕೊಳ್ಳಲಾಗದು. ಮಾನುಷವಾದ ದುಃಖ, ಸಂಕಟ, ನೋವುಗಳನ್ನು ನಿವೇದಿಸಿಕೊಳ್ಳಲಾಗದು. ಅಹಂಬ್ರಹ್ಮಾಸ್ಮಿ ಎಂದು ನಾನೇ ಭಗವಂತನಾಗಿ ನನಗೆ ದುಃಖವಾಗುವುದಿಲ್ಲ, ನೋವಾಗುವುದಿಲ್ಲ ಎಂದು ಆತ್ಮವಂಚನೆ ಮಾಡಿಕೊಳ್ಳಲಾಗದು. ಗೊಂದಲಗಳಾಗುತ್ತವೆ, ತಳಮಳಗಳಾಗುತ್ತವೆ, ಭಯವಾಗುತ್ತದೆ, ಬಯಕೆಯುಂಟಾಗುತ್ತದೆ, ದಿಕ್ಕೆಡುವಂತಾಗುತ್ತದೆ; ಈ ಬಗೆಯ ಹಲವು ಮಾನುಷ ಭಾವಗಳು ಹುಟ್ಟಿದ್ದನ್ನು ಒಪ್ಪದೇ ಇದ್ದರೆ ಹೇಗೆ? ತಾನೊಬ್ಬ ಮೂರ್ಖನೆಂದು ಅರಿವಾಗದಿದ್ದರೆ ಹೇಗೆ? ಅದಕ್ಕೆ ತಮ್ಮ ಅಂತರಂಗದಲ್ಲಿನ ಮಹಾಚೈತನ್ಯಕ್ಕೆ ಅಥವಾ ಮಹಾಅಸ್ತಿತ್ವದ ಬಲಕ್ಕೆ ಅಧಿನಾಯಕನೆಂದು ಕರೆದು, ತಮ್ಮ ಮಾನುಷ ಸಹಜ ಮನೋಭಾವವನ್ನು ವಿನಯಗೊಳಿಸಿಕೊಂಡು ತಮ್ಮ ದೈನೇಸಿಯನ್ನು, ದೌರ್ಬಲ್ಯಗಳನ್ನು, ಆಶಯಗಳನ್ನು ಪ್ರದರ್ಶಿಸಿಕೊಳ್ಳುತ್ತಾ ನಿವೇದಿಸಿಕೊಳ್ಳುತ್ತಾರೆ. ಯಾವ ಪೌರಾಣಿಕ ದೇವರ ಪ್ರತಿಮೆಗಳು ಇಲ್ಲಿಲ್ಲ. ಆದರೆ ಗೀತಾಂಜಲಿ ಸಂಪೂರ್ಣ ಆಸ್ತಿಕ ಭಾವ ಮಂಜರಿಯೇ. ಹಾಗಾಗಿ ವಿಶ್ವದ ಯಾವುದೇ ದೇಶ ಮತ್ತು ಕಾಲದವರು ಗೀತಾಂಜಲಿಯಲ್ಲಿ ವಿಶ್ವಸ್ಥವಾಗಿರುವ ದೈವೀ ಪ್ರತಿಮೆಯಲ್ಲಿ ತಮ್ಮ ದೇವರನ್ನು ಕಂಡುಕೊಳ್ಳಬಹುದು. ಯೆಹೂದಿಗಳಾಗಲಿ, ಮುಸಲ್ಮಾನರು, ಕ್ರೈಸ್ತರು, ಹಿಂದೂಗಳೂ; ದೇವರನ್ನು ಒಪ್ಪುವ ಯಾವುದೇ ಧರ್ಮೀಯರು ತಮ್ಮ ತಮ್ಮ ದೇವರನ್ನು ಅಲ್ಲಿ ಕಾಣಬಹುದು. ಗೀತಾಂಜಲಿ ದೇವರ ಸ್ತುತಿಯಲ್ಲ. ಭಕ್ತನ ನಿವೇದನೆ. ಭಕ್ತನು ಮನುಷ್ಯನಾಗಿರುವ ಕಾರಣದಿಂದ, ಮಾನುಷಾನುಭವಗಳು ದೇಶ ಕಾಲ ಮೀರಿ ಸಹಜ ಮತ್ತು ಸಾಮಾನ್ಯವಾಗಿರುವುದರಿಂದ ಗೀತಾಂಜಲಿಯ ಹಾಡಿನ ನಮಸ್ಕಾರಗಳು ಯಾರ ಭಕ್ತಿಯಾಗಿಯೂ ಪ್ರಕಟಗೊಳ್ಳಬಹುದು.

ನಾಸ್ತಿಕನೊಬ್ಬನಿಗೆ ಒಬ್ಬ ವ್ಯಕ್ತಿಯ ಮನಸ್ಸು ತನ್ನದೇ ಮನಸ್ಸನ್ನು ಮುಖಾಮುಖಿಯಾದಂತೆ ತೋರಬಹುದು. ವ್ಯಕ್ತಿಯೊಬ್ಬನ ಸೀಮಿತ ಮನೋಬಲವು ಅವನದೇ ಆದಂತಹ ಮಹಾಮನೋಬಲಕ್ಕೆ ನಿವೇದಿಸಿಕೊಳ್ಳುವಂತೆಯೂ ತೋರಬಹುದು.

ಒಟ್ಟಾರೆ ಗೀತಾಂಜಲಿಯು ಹಾಡುವುದೇನು? ಆತ್ಮಾವಲೋಕನದ, ಸರಳ ಬಾಳ್ವೆಯ, ದೌರ್ಬಲ್ಯವನ್ನು ಒಪ್ಪುವ, ವಿನಯವಂತಿಕೆಯನ್ನು ಅಪ್ಪುವ, ಹೃದಯವನ್ನು ಅರಳಿಸಿಕೊಳ್ಳುವ, ಮನವನ್ನು ವಿಸ್ತಾರಗೊಳಿಸಿಕೊಳ್ಳುವ, ಪ್ರೇಮ, ಶಾಂತಿ, ಮಮತೆಯ ಹನಿಗಳನ್ನು ಸೇವಿಸುವ ಮತ್ತು ಹಂಚುವ ಆಶಯವನ್ನು. ಅಷ್ಟಾದರೆ ವ್ಯಕ್ತಿಯು ಆಸ್ತಿಕನಾದರೇನು, ನಾಸ್ತಿಕನಾದರೇನು? ಭಕ್ತಿಯಾದರೇನು, ಪ್ರೀತಿಯಾದರೇನು? ಬರಗೆಟ್ಟಿರುವ ಮನುಷ್ಯನ ಬದುಕಿಗೆ ಪ್ರೇಮ, ಶಾಂತಿ, ನೆಮ್ಮದಿ ಮತ್ತು ಮಮತೆಯ ಅನುಭವವಾದರೆ ಸಾಲದೇ!

ಅಧಮರಲ್ಲಿ ಅಧಮರಾದವರ ಅಡಿಯಲ್ಲಿ ಕಳೆದು

ಕಂಗೆಟ್ಟವರ ಕಟ್ಟ ಕಡೆಯಲ್ಲಿ ನಿನ್ನಡಿಯು ತೋರುವುದು.

ಬಡವರಲ್ಲಿ ಬಡವರಾದವರ ಬುಡದಲ್ಲಿ

ದೀನರಲಿ ದೀನರಾದವರ ದಡದಲ್ಲಿ ನಿನ್ನಡಿಯು ರಾಜಿಪುದು.

ಗೀತಾಂಜಲಿಯಲ್ಲಿ ನೀನು ಎನ್ನುವ ಕರೆಯು ದೇವನಿಗಾದರೂ, ದೇವರೆಂಬುವ ಪರಿಕಲ್ಪನೆಯು ತನ್ನ ವಿವಿಧ ಪಾತ್ರಗಳನ್ನು ಧರಿಸುವುದು.

ಚೈತನ್ಯ, ಅನಂತತೆ, ಪ್ರೀತಿ, ಜೀವನ, ಪ್ರಕೃತಿ; ಇತ್ಯಾದಿಗಳೇ ಆ ಪಾತ್ರಗಳು.

ಓ ನನ್ನ ಜೀವನದ ಜೀವನವೇ, ಈ ದೇಹವನು ಸತತ ಪಾವನವಾಗಿರಿಸಿಕೊಳ್ಳುವೆ,

ನಗರಿವಿದೆ ನಿನ್ನ ಜೀವಂತಿಕೆಯ ಸ್ಪರ್ಶ ನನ್ನೆಲ್ಲಾ ಅಂಗಾಂಗಗಳ ಮೇಲಿದೆ.

1912 ರಲ್ಲಿ ಗೀತಾಂಜಲಿಯ ಇಂಗ್ಲೀಷ್ ಆವೃತ್ತಿ ಪ್ರಕಟವಾಯಿತು. 1913ರಲ್ಲಿ ಅದಕ್ಕೆ ನೊಬೆಲ್ ಪಾರಿತೋಷಕವೂ ದೊರೆಯಿತು. ಆದರೆ, ಭಾರತವೂ ಒಳಗೊಂಡಂತೆ ಅನೇಕ ಐರೋಪ್ಯದೇಶಗಳಲ್ಲಿ ಈ ಗೀತ ಸಂಗ್ರಹದಲ್ಲಿರುವ ಅನೇಕಾನೇಕ ಗೀತೆಗಳು ಎಷ್ಟೆಷ್ಟೋ ಜನರ ಅಂತರಂಗದ ನಿವೇದನೆಯನ್ನು ಧ್ವನಿಸುವ ಕವನಗಳಾದವು. ರೋಗದಿಂದ ನರಳುತ್ತಿದ್ದವರು, ಮಾನಸಿಕವಾಗಿ ಬಳಲಿದ್ದವರು, ಜೀವನದಲ್ಲಿ ಚೈತನ್ಯಹೀನರಾದವರು ತಮ್ಮ ದಿಂಬಿನಡಿಯಲ್ಲಿರಿಸಿಕೊಂಡು ಓದಿಕೊಳ್ಳುತ್ತಿದ್ದ ಸಂಗತಿಗಳಿವೆ. ಅಲ್ಲಿ ಗೀತಾಂಜಲಿ ಮನುಕುಲಕ್ಕೆ ವೇದ್ಯವಾಯಿತು. ಬದುಕಿಗೆ ನೈವೇದ್ಯವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...