ಕೊರೊನಾ ಸಾಂಕ್ರಾಮಿಕ ರೋಗದಿಂದ ವಿಧಿಸಲಾಗಿರುವ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು, ಮುಂದಿನ ತಿಂಗಳು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಆಯೋಜಿಸಬಹುದು ಎಂದು ತಮಿಳುನಾಡು ಸರ್ಕಾರ ಬುಧವಾರ ತಿಳಿಸಿದೆ.
ಕ್ರೀಡೆ ವೀಕ್ಷಣೆಗೆ 300 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ. ಕ್ರೀಡೆಯ ಮತ್ತೊಂದು ವೈವಿಧ್ಯಮಯ ‘ಎರುದು ವಿಡುಮ್ ನಿಗಳ್ಚಿ’ (ಹೋರಿ ಹಿಡಿಯುವ ಸ್ಪರ್ಧೆ)ಯಲ್ಲಿ 150 ಮಂದಿ ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ.
ಜಲ್ಲಿಕಟ್ಟು ನಡೆಯುವ ಸ್ಥಳಗಳಿಗೆ ಪ್ರವೇಶಿಸುವ ಮೊದಲು ಕ್ರೀಡಾ ವೀಕ್ಷಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಗುತ್ತದೆ. ಎಲ್ಲರೂ ದೈಹಿಕ ಅಂತರ ಪಾಲಿಸುವುದು ಖಡ್ಡಾಯ. ಖಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಭಾರತದಿಂದ ಆಸ್ಕರ್‌ಗೆ ನಾಮ ನಿರ್ದೇಶನಗೊಂಡ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’
ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಕೊರೊನಾ ನೆಗೆಟೆವ್ ವರದಿ ಇರುವ ಪ್ರಮಾಣಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಅಧಿಕೃತ ಪ್ರಯೋಗಾಲಯಗಳಿಂದ ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕು. ತಮಿಳುನಾಡಿನಲ್ಲಿ ಒಟ್ಟು 235 ಕೊರೊನಾ ಪ್ರಯೋಗಾಲಯಗಳಿವೆ.
ಜನವರಿ 2021 ರಲ್ಲಿ ಕ್ರೀಡೆಗಾಗಿ ಪ್ರತ್ಯೇಕವಾದ ವಿವರವಾದ Standard Operating Procedure (SOP’s) ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ ಮತ್ತು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಜಲ್ಲಿಕಟ್ಟು ವಿರುದ್ಧ ಅರ್ಜಿ ಸಲ್ಲಿಸಿದ್ದ ಕಾರಣ ಸುಪ್ರೀಂಕೋರ್ಟ್ 2014 ರಲ್ಲಿ ‘ಜಲ್ಲಿಕಟ್ಟು’ ಮೇಲೆ ನಿಷೇಧ ಹೇರಿತ್ತು.
ಆದರೆ ರಾಜ್ಯ ಸರ್ಕಾರವು ಈ ಹಬ್ಬ ತಮಿಳುನಾಡಿನ ಸಂಸ್ಕೃತಿ ಮತ್ತು ಗುರುತು ಎಂದು ವಾದಿಸಿತ್ತು. ಚೆನ್ನೈನಲ್ಲಿ ಭಾರಿ ಪ್ರತಿಭಟನೆ ಕೂಡ ನಡೆಯಿತು. ನಂತರ ತಿದ್ದುಪಡಿಯೊಂದಿಗೆ 2017 ರ ಜನವರಿಯಲ್ಲಿ ನಿಷೇಧವನ್ನು ತೆಗೆದುಹಾಕಲಾಯಿತು.
ಇದನ್ನೂ ಓದಿ: ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ: ರೈತ ಮುಖಂಡರ ಪತ್ರ


