ಚೆನ್ನೈ ಮೂಲದ ಲೇಖಕಿ ಮತ್ತು ದಲಿತ ಹೋರಾಟಗಾರ್ತಿ ಶಾಲಿನ್ ಮರಿಯಾ ಲಾರೆನ್ಸ್ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗುತ್ತಿರುವ ಕಿರುಕುಳವನ್ನು ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ ಇಂಡಿಯಾ (ಎನ್‌ಡಬ್ಲ್ಯುಎಂಐ) ಸಂಸ್ಥೆ ಖಂಡಿಸಿದೆ.
“ಡಿಎಂಕೆ ಮತ್ತು ಬಿಜೆಪಿ ಎರಡನ್ನೂ ಬೆಂಬಲಿಸುವ ಹ್ಯಾಂಡಲ್‌ಗಳಿಂದ ಈ ಕಿರುಕುಳ ನೀಡಲಾಗುತ್ತಿದೆ” ಎಂದು ಎನ್‌ಡಬ್ಲ್ಯುಎಂಐ ಹೇಳಿದೆ.
ಜಾತಿ-ಸಂಬಂಧಿತ ದೌರ್ಜನ್ಯಗಳ ಬಗ್ಗೆ ಟ್ವಿಟರ್ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಶಾಲಿನ್ ಅವರು 2018ರಿಂದಲೂ ಮಾಡುತ್ತಿದ್ದಾರೆ. ಆಡಳಿತರೂಢ ಡಿಎಂಕೆ ಮತ್ತು ಬಲಪಂಥೀಯ ಗುಂಪುಗಳೆರಡೂ ಶಾಲಿನ್ ಅವರ ಮೇಲೆ ದಾಳಿ ನಡೆಸುತ್ತಿವೆ.
“ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳುವ ಬದಲು, ಅಂಕಿ-ಅಂಶಗಳನ್ನು ಅವಲೋಕಿಸುವ ಬದಲು ಸಂಘಟಿತ ದಾಳಿಗಳನ್ನು ಕೈಗೊಂಡಿದ್ದಾರೆ. ಜಾತಿವಾದಿ ನಿಂದನೆಗಳನ್ನು ಮಾಡುತ್ತಿದ್ದಾರೆ. ಬಾಡಿ ಶೇಮಿಂಗ್ ನಡೆಯುತ್ತಿದೆ, ಶಾಲಿನ್ ಅವರ ಧರ್ಮದ ಆಧಾರದ ಮೇಲೆ ನಿಂದನೆಗಳನ್ನು ಮಾಡಿ ಕೆಟ್ಟ ಭಾಷೆಯನ್ನು ಬಳಸಲಾಗುತ್ತಿದೆ. ಈ ಗುಂಪುಗಳು ಶಾಲಿನ್ ಅವರ ಕುಟುಂಬ ಸದಸ್ಯರನ್ನೂ ಟಾರ್ಗೆಟ್ ಮಾಡಿವೆ” ಎಂದು ಎನ್‌ಡಬ್ಲ್ಯುಎಂಐ ವಿವರಿಸಿದೆ.
“ಭಾರತದ ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರ ಹಕ್ಕುಗಳು ಮತ್ತು ಸಮಾನತೆಯ ಕುರಿತು ಮಾತನಾಡುತ್ತವೆ. ಪ್ರತಿಯೊಂದು ರಾಜಕೀಯ ಪಕ್ಷವೂ ಲಿಂಗ ಆಧಾರಿತ ಹಿಂಸೆ ಮತ್ತು ಜಾತಿ ಆಧಾರಿತ ಹಿಂಸೆಯನ್ನು ಅಮೂರ್ತವಾಗಿ ಖಂಡಿಸುತ್ತವೆಯಷ್ಟೇ. ಆದರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮಹಿಳೆಯರ ಮೇಲೆ, ಅದರಲ್ಲೂ ಶೋಷಿತ ಸಮುದಾಯದ ಹೆಣ್ಣಿನ ಮೇಲೆ ಲಿಂಗ, ಜಾತಿ ಆಧಾರಿತ ದಾಳಿಯನ್ನು ನಡೆಸುವ ರಾಜಕೀಯ ಪಕ್ಷಗಳ ಅನುಯಾಯಿಗಳಿಗೆ ಯಾವುದೇ ಕಡಿವಾಣ ಬೀಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದೆ.
ತಮಿಳುನಾಡಿನ ಪ್ರಮುಖ ದಲಿತ ಹೋರಾಟಗಾರ್ತಿಯಾಗಿರುವ ಶಾಲಿನ್ ಅವರು ತಮಿಳುನಾಡಿನಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅವರು, ಇತ್ತೀಚೆಗೆ ಚೆನ್ನೈಗೆ ಭೇಟಿ ನೀಡಿದ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದರು.
“ನನ್ನ ಹೋರಾಟದ ಕಾರಣಕ್ಕೆ ನನ್ನ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಆದರೆ ಹಿಂದೆಂದೂ ನಡೆಯದಷ್ಟು ಸಂಘಟಿತ ದಾಳಿ ಇತ್ತೀಚೆಗೆ ಆಗಿದೆ” ಎಂದು ಶಾಲಿನ್ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
“ಬಿಜೆಪಿ-ಆರ್‌ಎಸ್‌ಎಸ್ ಸೈಬರ್ ಗುಂಪುಗಳಂತೆ ಡಿಎಂಕೆ ಕೂಡ ಸೈಬರ್ ಗುಂಪುಗಳನ್ನು ಹೊಂದಿದೆ. ವಾಟ್ಸ್‌ಅಪ್ ಗ್ರೂಪ್ ಮಾಡಿಕೊಂಡು, ಒಂದೇ ರೀತಿಯ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳನ್ನು ಟ್ವೀಟ್ ಮಾಡಿ ದಾಳಿ ಮಾಡಲಾಗುತ್ತದೆ. ವ್ಯಕ್ತಿಯೊಬ್ಬರ ಮೇಲೆ ಟಾರ್ಗೆಟ್ ಮಾಡಲು ಗ್ರೂಪ್‌ಗಳಲ್ಲಿ ಚರ್ಚಿಸುತ್ತಾರೆ” ಎಂದಿದ್ದಾರೆ.
ದಲಿತ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ತೊಟ್ಟಿಯಲ್ಲಿ ಮಾನವ ಮಲ ಪತ್ತೆಯಾದ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಬೇಕು, ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಹೋರಾಟಗಾರರಲ್ಲಿ ಶಾಲಿನ್ ಕೂಡ ಒಬ್ಬರಾಗಿದ್ದಾರೆ. ದಲಿತರ ಭೂ ಸಮಸ್ಯೆಗಳು, ತಮಿಳುನಾಡಿನ ಹಳ್ಳಿಗಳಲ್ಲಿ ಚುನಾಯಿತ ದಲಿತ ಪ್ರತಿನಿಧಿಗಳ ಎದುರಿಸುವ ತಾರತಮ್ಯಗಳು ಸೇರಿದಂತೆ ಮೊದಲ ವಿಷಯಗಳ ಕುರಿತು ಶಾಲಿನ್ ದನಿ ಎತ್ತುತ್ತಾ ಬಂದಿದ್ದಾರೆ.


