Homeಕರ್ನಾಟಕಸಲಿಂಗ ವಿವಾಹ ಮಾನ್ಯತೆಗಾಗಿ ಸುಪ್ರೀಂಕೋರ್ಟ್‌ಗೆ ಪತ್ರ; ಕೇಂದ್ರದ ನಿಲುವಿಗೆ ವಿರೋಧ

ಸಲಿಂಗ ವಿವಾಹ ಮಾನ್ಯತೆಗಾಗಿ ಸುಪ್ರೀಂಕೋರ್ಟ್‌ಗೆ ಪತ್ರ; ಕೇಂದ್ರದ ನಿಲುವಿಗೆ ವಿರೋಧ

- Advertisement -
- Advertisement -

“ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, ಕೇಂದ್ರವು ತನ್ನ ನಿಲುವು ಬದಲಿಸಿಕೊಳ್ಳಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಒತ್ತಾಯಿಸಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಎಷ್ಟು ಮಂದಿ ಸಂಸದರು ಲಿಂಗ, ಲಿಂಗತ್ವ ಸಂಬಂಧಿತ ವಿಚಾರಗಳನ್ನು ಮಾತನಾಡುವಷ್ಟು ಎಜುಕೇಟ್ ಆಗಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ನಾಲ್ವರು ಸಲಿಂಗ ದಂಪತಿಗಳು ತಮ್ಮ ವಿವಾಹದ ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.

ಇತಿಹಾಸದುದ್ದಕ್ಕೂ ಭಿನ್ನಲಿಂಗೀಯ ವಿವಾಹಗಳು ನಡೆದುಬಂದಿವೆ. ಅದು ಪ್ರಭುತ್ವದ ಅಸ್ತಿತ್ವ ಮುಂದುವರಿಕೆಗೆ ಅಡಿಪಾಯವಾಗಿದೆ. ಹಾಗಾಗಿ ಭಿನ್ನಲಿಂಗೀಯ ವಿವಾಹಕ್ಕೆ ನಾವು ಆಸಕ್ತಿ ಹೊಂದಿದ್ದೇವೆಯೇ ಹೊರತು ಸಲಿಂಗ ವಿವಾಹಕ್ಕಲ್ಲ ಎಂದು ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.

ವಿವಾಹದ ಹಕ್ಕಿಗಾಗಿ ಒತ್ತಾಯಿಸಿ ಪತ್ರ

ಸಮಾನ ವಿವಾಹ ಹಕ್ಕಿಗಾಗಿ ಒತ್ತಾಯಿಸಿ ಸೆಕ್ಸ್ ವರ್ಕರ್ಸ್ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಒಕ್ಕೂಟ (ಸಿಎಸ್‌ಎಂಆರ್) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಪತ್ರವನ್ನು ಬಿಡುಗಡೆ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಪತ್ರವನ್ನು ಬರೆಯಲಾಗಿದೆ.

ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ಜೀವ ಸಂಸ್ಥೆಯ ಉಮಾ ಉಮೇಶ್‌, ನಮ್ಮ ಪ್ರೈಡ್‌ನ ಅಯಾನ್ ಸೈಯದ್, ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರರಾದ ಕ್ರಿಸ್ಟಿ ರಾಜ್, ರಿಯಾನಾ, ರಕ್ಷಿತಾ ಮತ್ತು ಪಿಯುಸಿಎಲ್ ಕರ್ನಾಟಕ ಅಧ್ಯಕ್ಷ ಅರವಿಂದ್ ನಾರಾಯಣ್ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

“ಸಮಾನತೆಯ ಹಕ್ಕು, ಘನತೆಯ ಹಕ್ಕು ಮತ್ತು ಅಭಿವ್ಯಕ್ತಿಯ ಹಕ್ಕುಗಳು ಸಂವಿಧಾನದಲ್ಲಿ ಅಡಕವಾಗಿವೆ. ಎಲ್‌ಜಿಬಿಟಿಕ್ಯೂ ಸಮುದಾಯದವರು ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವುದನ್ನು ಈ ಹಕ್ಕುಗಳನ್ನು ಅನುಮೋದಿಸುತ್ತವೆ” ಎಂದು ತಿಳಿಸಲಾಗಿದೆ.

ಸಲಿಂಗ ವಿವಾಹವನ್ನು ವಿರೋಧಿಸಿರುವ ಕೇಂದ್ರದ ಅಫಿಡವಿಟ್‌ನಲ್ಲಿನ ಹಲವಾರು ನ್ಯೂನತೆಗಳನ್ನು ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. “ತನ್ನ LGBTQI ನಾಗರಿಕರಿಗೆ ನೀಡಬೇಕಾದ ಸಮಾನತೆಯ ಹಕ್ಕನ್ನು ಭದ್ರಪಡಿಸುವ ತನ್ನ ಸಾಂವಿಧಾನಿಕ ಬದ್ಧತೆಯನ್ನು ಒಕ್ಕೂಟ ಸರ್ಕಾರ ತೋರುತ್ತಿಲ್ಲ. ತಾರತಮ್ಯದ ವಿವಾಹ ಕಾನೂನುಗಳನ್ನು ಶಾಶ್ವತಗೊಳಿಸಲು ಮುಂದಾಗಿದೆ” ಎಂದು ಆರೋಪಿಸಲಾಗಿದೆ.

“ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಮದುವೆಯಾಗುವ ಎಲ್ಲಾ ವ್ಯಕ್ತಿಗಳ ಹಕ್ಕನ್ನು ಗುರುತಿಸುವ ಈ ಬೇಡಿಕೆಯು ನ್ಯಾಯಯುತವಾಗಿದೆ ಎಂದು ನಾವು ಭಾವಿಸುತ್ತೇವೆ. ಭಾರತೀಯ ಸಂವಿಧಾನದ ಆಶಯವೂ ಇದಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.

ಎಲ್ಲಾ ವ್ಯಕ್ತಿಗಳು ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ. ಈ  ಬೇಡಿಕೆಯು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದಂತೆ ಭಾರತೀಯ ಸಂವಿಧಾನಿಕ ತತ್ವಗಳನ್ನು ಒಳಗೊಂಡಿದೆ ಎಂದಿರುವ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು ಮಹತ್ವದ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ.

ದುರದೃಷ್ಟವಶಾತ್ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಒಕ್ಕೂಟವು ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಂವಿಧಾನಿಕ ಹಕ್ಕುಗಳು ಇಲ್ಲವಾಗಿವೆ. ಭಾರತ ಒಕ್ಕೂಟವು ತನ್ನ LGBTQI ನಾಗರಿಕರಿಗೆ ಸಮಾನತೆಯ ಹಕ್ಕನ್ನು ಭದ್ರಪಡಿಸುವ ತನ್ನ ಸಾಂವಿಧಾನಿಕ ಬದ್ಧತೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...