ತಮಿಳುನಾಡಿನ ಕಡಲೂರಿನಲ್ಲಿ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನೇ ಜಾತಿ ಆಧಾರದ ಮೇಲೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಪಂಚಾಯಿತಿಯ ಇನ್ನಿತರ ಸದಸ್ಯರಿಗೆ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ.
ಕಡಲೂರಿನ ತೆರ್ಕುತಿಟ್ಟೈ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆಳವರ್ಗಕ್ಕೆ ಸೇರಿದ ಹಿನ್ನಲೆಯಲ್ಲಿ ಸದಸ್ಯರು ಅವರೊಟ್ಟಿಗೆ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ’ಪಂಚಾಯಿತಿ ಮಂಡಳಿಯ ಎಲ್ಲಾ ಸಭೆಗಳಲ್ಲಿಯೂ ಉಪಾಧ್ಯಕ್ಷರು, ಪರಿಶಿಷ್ಠ ಜಾತಿಗೆ ಸೇರಿದ ನನ್ನನ್ನು ನೆಲದ ಮೇಲೆಯೇ ಕುಳಿತುಕೊಳ್ಳುವಂತೆ ಮಾಡಿದ್ದಾರೆ’ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಎಸ್.ರಾಜೇಶ್ವರಿ ಆರೋಪಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯಿತಿ ಉಪಾಧ್ಯಕ್ಷರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡು: ಕೃಷ್ಣಗಿರಿಯಲ್ಲಿ 29 ದಲಿತ ಕುಟುಂಬಗಳಿಗೆ ಬಹಿಷ್ಕಾರ!
ಪಂಚಾಯತ್ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ. ಪಂಚಾಯಿತಿಯಲ್ಲಿ ನಡೆಯುತ್ತಿರುವ ಈ ಘಟನೆಯನ್ನು ನಮ್ಮ ಗಮನಕ್ಕೆ ತರುವಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಫಲರಾಗಿದ್ದಾರೆ. ಈ ಹಿನ್ನಲೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಕಡಲೂರು ಜಿಲ್ಲಾಧಿಕಾರಿ ಚಂದ್ರಶೇಖರ್ ಶಖಾಮುರಿ ತಿಳಿಸಿದ್ದಾರೆ. ಈ ಕುರಿತು ತನಿಖೆಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಗ್ರಾಮಪಂಚಾಯಿತಿ ಅಧ್ಯಕ್ಷೆ ಎಸ್.ರಾಜೇಶ್ವರಿ ’ನನ್ನ ಜಾತಿ ಆಧಾರದಿಂದ ಉಪಾಧ್ಯಕ್ಷರು ನನಗೆ ಸಭೆಯ ಅಧ್ಯಕ್ಷತೆ ವಹಿಸಲು ಬಿಡುವುದಿಲ್ಲ. ಯಾವುದೇ ಸಮಾರಂಭದಲ್ಲಿ ಧ್ವಜಾರೋಹಣಕ್ಕೂ ಅವಕಾಶ ನೀಡುವುದಿಲ್ಲ. ನನ್ನ ಬದಲಾಗಿ ಅವರ ತಂದೆಗೆ ಈ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ರಾಜೇಶ್ವರಿ ಅಧ್ಯಕ್ಷೆ ಹುದ್ದೆಗೆ ಆಯ್ಕೆಯಾಗಿದ್ದರು. ತೆರ್ಕುತಿಟ್ಟೈ ಗ್ರಾಮವು ಸುಮಾರು 500 ಕುಟುಂಬಗಳನ್ನು ಒಳಗೊಂಡಿದೆ. ಅಲ್ಲಿ ಹೆಚ್ಚಾಗಿ ವನ್ನಿಯರು ಹಾಗೂ ಎಸ್‌ಸಿ ಸಮುದಾಯದ 100 ಕುಟುಂಬಗಳಿವೆ. ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಸಮುದಾಯಕ್ಕೆ ಮೀಸಲಿರಿಸಲಾಗಿತ್ತು.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಅತುಪಕ್ಕಂ ಪಂಚಾಯತ್ ಅಧ್ಯಕ್ಷ ಅರ್ಮಿಥಾಮ್ ಕೂಡ ಇದೇ ರೀತಿಯ ಅವಮಾನ ಎದುರಿಸಬೇಕಾಗಿತ್ತು. ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಲು ಉಪಾಧ್ಯಕ್ಷರು ಅನುಮತಿ ನೀಡಲಿಲ್ಲ ಎಂದು ಅವರು ಆರೋಪಿಸಿದ್ದರು.


