ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೊಂದಿಗೆ ಸಂಯೋಜಿತವಾಗಿರುವ ತಮಿಳುನಾಡಿನ ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್ (ಎಸ್‌ಐಡಬ್ಲ್ಯುಯು) ಮತ್ತು ಸ್ಯಾಮ್‌ಸಂಗ್ ಇಂಡಿಯಾ ಆಡಳಿತ ಮಂಡಳಿಯ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಎಸ್‌ಐಡಬ್ಲ್ಯುಯು ತನ್ನ ಪ್ರತಿಭಟನೆಯನ್ನು ಕಂಪನಿಯ ಆವರಣದಿಂದ ಹೊರಗಡೆಗೆ ವಿಸ್ತರಿಸಲು ನಿರ್ಧರಿಸಿದೆ.
ಫೆಬ್ರವರಿ 21 ಶುಕ್ರವಾರ ಕಾಂಚೀಪುರಂ ಜಿಲ್ಲೆಯ ನಾಲ್ಕು ರಾಜ್ಯ ಕೈಗಾರಿಕಾ ಉತ್ತೇಜನ ನಿಗಮದ (SIPCOT)ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಸಿಐಟಿಯು ಸಿದ್ದತೆ ಮಾಡಿಕೊಂಡಿದೆ.
ಅಲ್ಲದೆ, ಶುಕ್ರವಾರ ಸ್ಯಾಮ್‌ಸಂಗ್‌ನ ಶ್ರೀಪೆರಂಬುದೂರ್ ಕಾರ್ಖಾನೆಯ ಗೇಟ್‌ಗಳನ್ನು ಮುಚ್ಚುವುದಾಗಿ ಸಿಐಟಿಯು ಘೋಷಿಸಿದೆ. ಗುತ್ತಿಗೆ ಕಾರ್ಮಿಕರನ್ನು ‘ಅಕ್ರಮ ಕಾರ್ಮಿಕರು’ ಎಂದು ಕರೆದಿರುವ ಸಿಐಟಿಯು, ಅವರು ಕಾರ್ಖಾನೆ ಆವರಣಕ್ಕೆ ಪ್ರವೇಶಿಸುವುದನ್ನು ತಡೆಯುತ್ತೇವೆ ಎಂದಿದೆ.
ಮಾರ್ಚ್ 7ರಂದು ಕಾಂಚೀಪುರಂ ಜಿಲ್ಲೆಯ ಎಲ್ಲಾ ಕೈಗಾರಿಕೆಗಳಲ್ಲಿ ಒಂದು ದಿನದ ಮುಷ್ಕರ ನಡೆಸುವುದಾಗಿ ಸಿಐಟಿಯು ಘೋಷಣೆ ಮಾಡಿದೆ.
ಸಿಐಟಿಯು ಕಾಂಚೀಪುರಂ ಜಿಲ್ಲಾ ಕಾರ್ಯದರ್ಶಿ ಮತ್ತು ಎಸ್‌ಐಡಬ್ಲ್ಯುಯು ಅಧ್ಯಕ್ಷ ಇ. ಮುತ್ತುಕುಮಾರ್ ಮಾತನಾಡಿ, “ಸ್ಯಾಮ್‌ಸಂಗ್ ಕಂಪನಿ ಮೂವರು ಎಸ್‌ಐಡಬ್ಲ್ಯುಯು ಪದಾಧಿಕಾರಿಗಳ ಅಮಾನತು ರದ್ದುಗೊಳಿಸಿದರೆ ಮುಷ್ಕರ ಕೊನೆಗೊಳಿಸಲು ನಮ್ಮ ಒಕ್ಕೂಟ ಸಿದ್ಧವಿದೆ ಎಂದು ಹೇಳಿದ್ದಾರೆ. ಕಂಪನಿ ನಮ್ಮ ಬೇಡಿಕೆಯನ್ನು ಪರಿಹರಿಸುವ ಬದಲು, ಒಕ್ಕೂಟಕ್ಕೆ ಸಂಬಂಧಿಸಿದ ಇನ್ನೂ 18 ಕಾರ್ಮಿಕರನ್ನು ಅಮಾನತುಗೊಳಿಸಲು ಯೋಜಿಸುತ್ತಿದೆ ಎಂದು ಮುತ್ತುಕುಮಾರ್ ಆರೋಪಿಸಿದ್ದಾರೆ.
ಫೆಬ್ರವರಿ 19ರಂದು ತಮಿಳುನಾಡು ಕಾರ್ಮಿಕ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಎಸ್‌ಐಡಬ್ಲ್ಯುಯು ಮತ್ತು ಸ್ಯಾಮ್‌ಸಂಗ್ ಆಡಳಿತ ಮಂಡಳಿಯ ನಡುವೆ ನಡೆದ ಮತ್ತೊಂದು ಸುತ್ತಿನ ರಾಜಿ ಮಾತುಕತೆ ವಿಫಲವಾಗಿದೆ.
ಫೆಬ್ರವರಿ 5ರಂದು ಪ್ರತಿಭಟನೆ ಪ್ರಾರಂಭಿಸಿರುವ 500 ಕ್ಕೂ ಹೆಚ್ಚು ಸ್ಯಾಮ್‌ಸಂಗ್ ಕಾರ್ಮಿಕರು, ಮೂವರು ಎಸ್‌ಐಡಬ್ಲ್ಯುಯು ಸದಸ್ಯರ ಅಮಾನತನ್ನು ಖಂಡಿಸಿದ್ದಾರೆ. 38 ದಿನಗಳ ಮುಷ್ಕರ ಮತ್ತು 212 ದಿನಗಳ ಕಾನೂನು ಹೋರಾಟದ ನಂತರ ತಮಿಳುನಾಡು ರಾಜ್ಯ ಕಾರ್ಮಿಕ ಕಲ್ಯಾಣ ಇಲಾಖೆಯು ಎಸ್‌ಐಡಬ್ಲ್ಯುಯು ಅನ್ನು ಜನವರಿ 27ರಂದು ಅಧಿಕೃತವಾಗಿ ನೋಂದಾಯಿಸಿಕೊಂಡಿದೆ.
ಕಾರ್ಮಿಕರ ಪ್ರತಿಭಟನೆ ಮುಂದುರಿದಿರುವ ನಡುವೆ ಹೇಳಿಕೆ ನೀಡಿರುವ ಸ್ಯಾಮ್‌ಸಂಗ್ ಇಂಡಿಯಾ ವಕ್ತಾರರು “ನಮ್ಮ ಕಾರ್ಮಿಕರೊಂದಿಗೆ ನೇರವಾಗಿ ಮಾತನಾಡುವ ಮೂಲಕ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧವಾಗಿದ್ದೇವೆ. ಕೈಗಾರಿಕಾ ಶಾಂತಿ ಮತ್ತು ಕೆಲಸದ ಸ್ಥಳದ ಸುರಕ್ಷತೆಗೆ ಧಕ್ಕೆ ತರುವ ಕೆಲವು ಕಾರ್ಮಿಕರ ಕಾನೂನುಬಾಹಿರ ಚಟುವಟಿಕೆಗಳನ್ನು ನಾವು ಕ್ಷಮಿಸುವುದಿಲ್ಲ. ಎಲ್ಲಾ ಉದ್ಯೋಗಿಗಳು ಕಂಪನಿಯ ನೀತಿಗಳಿಗೆ ಬದ್ಧರಾಗಿರಬೇಕು ಮತ್ತು ಈ ನೀತಿಗಳನ್ನು ಉಲ್ಲಂಘಿಸುವವರು ಸರಿಯಾದ ಕಾನೂನುಬದ್ಧ ಪ್ರಕ್ರಿಯೆಯ ನಂತರ ಶಿಸ್ತು ಕ್ರಮಕ್ಕೆ ಒಳಪಡುತ್ತಾರೆ. ಎಲ್ಲಾ ಕಾರ್ಮಿಕರಿಗೆ ಸುರಕ್ಷಿತ ಮತ್ತು ಸ್ಥಿರವಾದ ಕೆಲಸದ ಸ್ಥಳವನ್ನು ಒದಗಿಸಿಕೊಡುವುದು ನಮ್ಮ ಆದ್ಯತೆಯಾಗಿದೆ” ಎಂದಿದ್ದಾರೆ.
ಕಾಂಚೀಪುರಂ ಜಿಲ್ಲೆಯ ಸ್ಯಾಮ್‌ಸಂಗ್‌ನ ಶ್ರೀಪೆರಂಬುದೂರು ಘಟಕ ಸುಮಾರು 1,800 ಕಾರ್ಮಿಕರನ್ನು ನೇಮಿಸಿಕೊಂಡಿದೆ. ಇಲ್ಲಿ ಟೆಲಿವಿಷನ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಹವಾನಿಯಂತ್ರಣಗಳು ಮತ್ತು ಕಂಪ್ರೆಸರ್‌ಗಳನ್ನು ತಯಾರಿಸಲಾಗುತ್ತದೆ. ಈ ಘಟಕವು 2022-23ರಲ್ಲಿ ಸ್ಯಾಮ್‌ಸಂಗ್‌ನ 12 ಬಿಲಿಯನ್ ಡಾಲರ್ ಭಾರತದ ಮಾರಾಟದಲ್ಲಿ ಐದನೇ ಒಂದು ಭಾಗವನ್ನು ಹೊಂದಿದೆ.
ಫೆಬ್ರವರಿ 21ರಂದು ನಡೆಯಲಿರುವ ಪ್ರತಿಭಟನೆ ಎಲ್ಲರ ಗಮನ ಸೆಳೆದಿದ್ದು, ಇದು ಜಿಲ್ಲೆಯಾದ್ಯಂತ ಕೈಗಾರಿಕಾ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಬಹುದು.
ಅಸ್ಸಾಂ| 44 ದಿನಗಳ ನಂತರ ಗಣಿಯಿಂದ 5 ಕಾರ್ಮಿಕರ ಶವ ಹೊರತೆಗೆದ ಭದ್ರತಾ ಸಿಬ್ಬಂದಿ


