Homeಮುಖಪುಟತಮಿಳುನಾಡಿನ ಹೊಸ ಸರ್ಕಾರದ ಆರಂಭಿಕ ಹೆಜ್ಜೆಗಳು ಮೂಡಿಸಿರುವ ಭರವಸೆಗಳು..

ತಮಿಳುನಾಡಿನ ಹೊಸ ಸರ್ಕಾರದ ಆರಂಭಿಕ ಹೆಜ್ಜೆಗಳು ಮೂಡಿಸಿರುವ ಭರವಸೆಗಳು..

- Advertisement -

2021 ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಪಂಚರಾಜ್ಯ ಚುನಾವಣೆಗಳ ತೂಕ ಒಂದಾದರೆ, ತಮಿಳುನಾಡಿನ ಚುನಾವಣೆಯೇ ಒಂದು ತೂಕ ಎಂಬಂತೆ ಬಿಂಬಿಸಲಾಗಿತ್ತು. ಅಮ್ಮ ಖ್ಯಾತಿಯ ಜಯಲಲಿತಾ ಮತ್ತು ಕಲೈಜ್ಞರ್ ಖ್ಯಾತಿಯ ಕರುಣಾನಿಧಿ ಇಬ್ಬರೂ ಇಲ್ಲದೆ ತಮಿಳುನಾಡಿನಲ್ಲಿ ನಡೆದ ಮೊದಲ ಚುನಾವಣೆ ಇದಾಗಿದ್ದು, 50 ವರ್ಷಗಳ ನಂತರ ಮೊದಲ ಭಾರಿಗೆ ದ್ರಾವಿಡ ನಾಡಿನಲ್ಲಿ ನಾಯಕನಿಲ್ಲದ ನಿರ್ವಾತ ಸ್ಥಿತಿಯನ್ನು ಕಂಡಿತ್ತು. ಜಯಲಲಿತಾ ಅಕಾಲಿಕ ಸಾವು ಹಾಗೂ ಆಡಳಿತರೂಢ ಎಡಿಎಂಕೆ ಪಕ್ಷದ ಗೊತ್ತು ಗುರಿ ಇಲ್ಲದ ಅನೇಕ ಯಡವಟ್ಟುಗಳ ಕಾರಣದಿಂದಾಗಿ 10 ವರ್ಷಗಳ ಬಳಿಕ ಕೊನೆಗೂ ಡಿಎಂಕೆ ಅಧಿಕಾರಕ್ಕೆ ಏರಿದೆ.

ಹಾಗೆ ನೋಡಿದರೆ ಚುನಾವಣೆಗೆ ಮುನ್ನವೇ ಎಲ್ಲಾ ಸಮೀಕ್ಷಾ ವರದಿಗಳೂ ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಏರುವುದು ಹಾಗೂ ಕರುಣಾನಿಧಿ ಮಗ ಸ್ಟಾಲಿನ್ ಸಿಎಂ ಆಗುವುದು ಖಚಿತ ಎಂದು ಷರ ಬರೆದಿದ್ದವು. ಅದರಂತೆ ಕೊನೆಗೂ ಎಡಿಎಂಕೆ ಸ್ವಂತ ಬಲದಲ್ಲಿ ಸರ್ಕಾರ ನಿರ್ಮಿಸಿದೆ. ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 34 ಜನರ ಕ್ಯಾಬಿನೆಟ್ ಸಹ ರಚಿಸಲಾಗಿದ್ದು, ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಮುಖ 6 ಅಂಶಗಳಿಗೆ ಮೊದಲ ಸಹಿ ಹಾಕಲಾಗಿದೆ.

ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತಿದ್ದಂತೆ ಎಂಕೆ ಸ್ಟಾಲಿನ್ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಹಾಗೂ ದ್ವೇಷ ರಾಜಕಾರಣಕ್ಕೆ ಹೆಸರಾದ ತಮಿಳುನಾಡಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ವಿರೋಧ ಪಕ್ಷಗಳನ್ನೂ ಗೌರವಿಸಿದ ಅವರ ನಡೆ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡೆ ರಾಷ್ಟ್ರ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಹಾಗಾದರೆ ಏನದು ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆ?

ಸ್ಟಾಲಿನ್ ಸಹಿ ಹಾಕಿದ 6 ಯೋಜನೆಗಳು

1. ಇಡೀ ದೇಶದಾದ್ಯಂತ ಇಂದು ಕೊರೊನಾ ಸೋಂಕು ಮಿತಿಮೀರಿದೆ. ತಮಿಳುನಾಡಿನಲ್ಲೂ ಇದರ ಆರ್ಭಟ ಕಡಿಮೆ ಏನಲ್ಲ. ಹೀಗಾಗಿ ಹೊಸ ಸರ್ಕಾರ ರಚಿಸಿದ ತಕ್ಷಣ ಸಿಎಂ ಸ್ಟಾಲಿನ್ ಕ್ಯಾಬಿನೆಟ್ ಸಭೆಯಲ್ಲಿ ಕೊರೊನಾ ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚಿಸಿ ತಮಿಳುನಾಡಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಅಲ್ಲದೆ, ಜನರಿಗೆ ಪರಿಹಾರದ ಜೊತೆಗೆ ಮನೆ ಮನೆ ಆಹಾರದ ರೇಷನ್ ಕಿಟ್ ತಲುಪಿಸುವ ನಿರ್ಧಾರ ಮನೆ ಮಾತಾಗಿತ್ತು.

2. ಕೊರೊನಾ ರೋಗಿಗಳಿಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಹಾಗೂ ಉಚಿತ ಚಿಕಿತ್ಸೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಆಯಾ ಜಿಲ್ಲೆಗಳಲ್ಲಿಗೆ ಮುಕ್ಕಾಂ ಹೂಡಿ ಜಿಲ್ಲೆಗಳ ಎಲ್ಲಾ ಆಸ್ಪತ್ರೆಗಳು ಹಾಗು ಅಲ್ಲಿಗೆ ಬರುವ ರೋಗಿಗಳ ತಕ್ಷಣದ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಬೇಕು.

3. ಅನೇಕ ಬಿಕ್ಕಟ್ಟುಗಳ ಮಧ್ಯೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಈ ಆಮ್ಲಜನಕವನ್ನು ಸರಿಯಾಗಿ ಬಳಸಲಾಗಿದೆಯೆ ಮತ್ತು ಯಾವುದೇ ಸಂದರ್ಭದಲ್ಲೂ ಆಮ್ಲಜನಕ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.

4. ಚೆನ್ನೈನಲ್ಲಿ ಮಾತ್ರವಲ್ಲ, ಕೊಯಮತ್ತೂರು, ಸೇಲಂ, ತಿರುಚ್ಚಿ, ಮಧುರೈ ಮತ್ತು ತಿರುನೆಲ್ವೇಲಿ ಸೇರಿದಂತೆ ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಕೋವಿಡ್ ಔಷಧಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಕೂಡಲೇ ತಡೆಯಬೇಕು. ತಪ್ಪಿತಸ್ತರನ್ನು ಬಂಧಿಸಬೇಕು.

PC : Hindustan Times

5. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರೂ ಲಸಿಕೆ ಪಡೆಯುವಂತಾಗಬೇಕು ಹಾಗೂ ಈ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಬಗ್ಗೆ ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು.

6. ರಾಜ್ಯ ನಗರ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.

ಸ್ಟಾಲಿನ್ ಮುಖ್ಯಮಂತ್ರಿಯಾಗಿ ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಈ ಎಲ್ಲಾ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗಿದೆ. ಸಿಎಂ ಆಜ್ಞೆಯಂತೆ ಎಲ್ಲಾ ಸಚಿವರು ಕೊರೊನಾ ನಿಯಂತ್ರಿಸುವ ಮತ್ತು ಜನರಿಗೆ ಉಚಿತ ಚಿಕಿತ್ಸೆ ನೀಡುವ ಸಲುವಾಗಿ ತಮ್ಮ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಕೊರೊನಾ ಕಾಲದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಮೂಡಿವೆ.

ಇನ್ನೂ ಲಾಕ್‌ಡೌನ್ ಸಂದರ್ಭದಲ್ಲಿ ಬಡ ಜನರಿಗೆ ಸಮಸ್ಯೆ ಆಗಬಾರದು ಎಂದು 5 ಸಾವಿರ ರೂ ಪರಿಹಾರ ಧನ ಘೋಷಣೆ ಮಾಡಿರುವುದು ಮತ್ತು ಆಹಾರ ಸಾಮಗ್ರಿಗಳನ್ನು ನೀಡಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣದ ನಿರ್ಧಾರವನ್ನು ಇಡೀ ದ್ರಾವಿಡ ಸಮಾಜ ಸ್ವಾಗತಿಸಿದೆ. ಈ ಯೋಜನೆ ಬಡ ಮತ್ತು ಕೂಲಿ ಕಾರ್ಮಿಕ ಮಹಿಳೆಯರಿಗೆ ವರದಾನವಾಗಲಿದೆ ಎಂದು ಬಣ್ಣಿಸಲಾಗಿದೆ.

ದ್ವೇಷ ರಾಜಕಾರಣಕ್ಕೆ ಪೂರ್ಣ ವಿರಾಮ

ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ದ್ವೇಷ ರಾಜಕಾರಣವನ್ನು ರಾಷ್ಟ್ರಕ್ಕೆ ಪರಿಚಯಿಸಿದ ಖ್ಯಾತಿ ತಮಿಳುನಾಡಿಗೆ ಇದೆ. ಪೆರಿಯಾರ್ ಕಾಲದ ದ್ರಾವಿಡ ಚಳುವಳಿಗಳ ಕಾರಣಕ್ಕಾಗಿ ವೈಚಾರಿಕ ನಾಡು ಎಂಬ ಖ್ಯಾತಿಯನ್ನು ತಮಿಳುನಾಡು ಗಳಿಸಿದ್ದರೂ ಸಹ ದ್ವೇಷ ರಾಜಕಾರಣಕ್ಕೆ ಮೊದಲ ಬೀಜ ಭಿತ್ತಿದ ಕುಖ್ಯಾತಿಯೂ ತಮಿಳುನಾಡಿಗೆ ಇದೆ ಎಂಬುದು ಉಲ್ಲೇಖಾರ್ಹ.

ಡಿಎಂಕೆ ಮತ್ತು ಎಡಿಎಂಕೆ ಎರಡೂ ಪಕ್ಷಗಳೂ ಪೆರಿಯಾರ್ ಸಿದ್ದಾಂತದ ಅಡಿಯಲ್ಲಿ ರೂಪುಗೊಂಡಿದ್ದರೂ ಸಹ ಕರುಣಾನಿಧಿ ಮತ್ತು ಜಯಲಲಿತಾ ಅವರಿಗೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿ ಅಲ್ಲಿತ್ತು. ಕರುಣಾನಿಧಿ ಸಿಎಂ ಆದರೆ ಜಯಲಲಿತಾ ಅವರನ್ನು ಬಂಧಿಸುವುದು, ಜಯಲಲಿತಾ ಸಿಎಂ ಆದರೆ ಕರುಣಾನಿಧಿಯನ್ನು ಬಂಧಿಸುವುದು ಸಾಮಾನ್ಯ ಘಟನೆಯಾಗಿತ್ತು. ಇನ್ನು ಕಾರ್ಯಕರ್ತರ ನಡುವಿನ ಅನೇಕ ಜಗಳಗಳು ಕೊಲೆಯಲ್ಲಿ ಅಂತ್ಯವಾದ ಘಟನೆಗಳೂ ಇವೆ.

ಆದರೆ, ಈ ಚುನಾವಣೆ ಫಲಿತಾಂಶದ ನಂತರ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸ್ಟಾಲಿನ್ ಈ ದ್ವೇಷ ರಾಜಕಾರಣಕ್ಕೆ ಪೂರ್ಣ ವಿರಾಮ ಹಾಕಲು ಮುಂದಾಗಿದ್ದಾರೆ. ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಹೊಸ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ವಿರೋಧ ಪಕ್ಷಗಳಿಗೆ ಆಹ್ವಾನವೇ ಇರುವುದಿಲ್ಲ. ಆದರೆ, ಈ ಬಾರಿ ಸ್ಟಾಲಿನ್ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಮಾಜಿ ಡಿಸಿಎಂ ಓ ಪನ್ನೀರ್ ಸೆಲ್ವಂ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರನ್ನು ತಮ್ಮ ಸಮಾರಂಭಕ್ಕೆ ಖುದ್ದು ಆಹ್ವಾನಿಸಿದ್ದರು. ಅಲ್ಲದೆ, ಸಮಾರಂಭದ ಬಳಿಕ ಅವರ ಪಕ್ಕದಲ್ಲಿ ಕುಳಿತು ಸಮಾಲೋಚನೆ ನಡೆಸಿದ್ದ ದೃಶ್ಯ ಅನೇಕರಲ್ಲಿ ಅಚ್ಚರಿಗೆ ಕಾರಣವಾಗಿತ್ತು.

ಈ ವೇಳೆ ಮಾಧ್ಯಮಗಳ ಎದುರು ಸ್ಪಷ್ಟವಾಗಿ ಒಂದು ಮಾಹಿತಿಯನ್ನೂ ರವಾನಿಸಿದ್ದ ಸ್ಟಾಲಿನ್, ಡಿಎಂಕೆ ಪಕ್ಷ ಬೇರೆ, ಸರ್ಕಾರವೇ ಬೇರೆ. ಇಂದು ಅಧಿಕಾರ ಸ್ವೀಕರಿಸಿರುವ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಲಿರುವ ಸರ್ಕಾರವೇ ಹೊರತು, ಡಿಎಂಕೆ ಪಕ್ಷಕ್ಕೆ ಸೀಮಿತವಾದ ಸರ್ಕಾರವಲ್ಲ ಎಂದು ಹೇಳುವ ಮೂಲಕ ತಮಿಳುನಾಡಿನಲ್ಲಿ ಹೊಸ ಇತಿಹಾಸ ನಿರ್ಮಿಸುವ ಹಾಗೂ ಉತ್ತಮ ಆಡಳಿತ ನೀಡುವ ಭರವಸೆಯನ್ನು ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಅನುಭವಿ ಹಾಗೂ ಸಾಮರ್ಥ್ಯಶಾಲಿಗಳಿಗೆ ಸಚಿವ ಸ್ಥಾನ ನೀಡಿದ್ದಾರೆ. ಹಣಕಾಸು ಇಲಾಖೆಯನ್ನು ಮುಖ್ಯಮಂತ್ರಿಗಳೇ ತಮ್ಮ ಬಳಿ ಇಟ್ಟುಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಸ್ಟಾಲಿನ್ ಮಧುರೈ ಕ್ಷೇತ್ರದ ಯುವ ಶಾಸಕ ಪಳನಿವೇಲ್ ತ್ಯಾಗರಾಜನ್ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಹಣಕಾಸು ಇಲಾಖೆಯನ್ನು ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯನ್ನು ಟೀಕಿಸುತ್ತಾ, ಸುಸ್ಥಿರ ಆರ್ಥಿಕತೆಯ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದ ಪಳನಿವೇಲ್ ತ್ಯಾಗರಾಜನ್ ಅವರಿಗೆ ಅನಿರೀಕ್ಷಿತವಾಗಿಯೇ ಹಣಕಾಸು ಇಲಾಖೆ ಸಿಕ್ಕಿದ್ದು, ಜನರಿಗೂ ಸಹ ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೆ, ಸ್ಟಾಲಿನ್ ಅವರ ಈ ನಡೆಯೂ ಸಹ ಕುತೂಹಲ ಮೂಡಿಸಿದೆ.

ಸಿಎಂ ಸ್ಥಾನಕ್ಕೆ ಏರಿದ ತಕ್ಷಣ ಇಂತಹ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದು, ಜನರ ಹಾಗೂ ಮಾಧ್ಯಮಗಳು ಗಮನ ತನ್ನಡೆ ಸೆಯುವಂತೆ ನೋಡಿಕೊಳ್ಳುವುದು ತಮಿಳುನಾಡಿನ ರಾಜಕಾರಣದಲ್ಲಿ ಹೊಸ ವಿಚಾರವೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಇಂತಹ ನಿದರ್ಶನಗಳು ಕಣ್ಣ ಮುಂದಿವೆ. ಎಂ.ಕೆ. ಸ್ಟಾಲಿನ್ ಸಹ ಅದನ್ನೇ ಮಾಡುತ್ತಿದ್ದಾರೆ. ಆದರೆ, ಈ ಜನಹಿತ ಆಡಳಿತ ಹೀಗೆ ಮುಂದುವರೆಯುತ್ತದೆಯೇ? ಹೊಸ ಸಿಎಂ ಸ್ಟಾಲಿನ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನೀಡುತ್ತಾರೆಯೇ? ನಾಯಕ ನಿರ್ವಾತ ಸ್ಥಿತಿ ಅನುಭವಿಸುತ್ತಿರುವ ತಮಿಳುನಾಡಿಗೆ ಭವಿಷ್ಯವಾಗಿ ರೂಪುಗೊಳ್ಳುತ್ತಾರೆಯೇ? ಎಂಬುದು ಇದೀಗ ಎಲ್ಲರ ಮುಂದಿರುವ ಪ್ರಶ್ನೆ.


ಇದನ್ನೂ ಓದಿ: ತಮಿಳುನಾಡು: ಸ್ಟಾಲಿನ್ ಸಂಪುಟದಲ್ಲಿ ಪುರುಷರದೇ ದರ್ಬಾರು – ಮಹಿಳೆಯರಿಗೆ ಕನಿಷ್ಠ ಪ್ರಾತಿನಿಧ್ಯ!

ಬಿ ಎ ತೇಜಸ್ವಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares