Homeಮುಖಪುಟತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

ತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!

- Advertisement -
- Advertisement -

ಭಾರತದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಮೆರುಗನ್ನು ಸಾಧಿಸಿದ್ದ ತಮಿಳುನಾಡು ಚುನಾವಣಾ ಇತಿಹಾಸ ಬಹುಶಃ ಇಂತಹ ನಗೆಪಾಟಲಿನ ಮತ್ತು ನಿಸ್ಸಾಹಾಯಕ ಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕಳೆದ 5 ದಶಕಗಳಿಂದ ವರ್ಗದ ತಮಿಳರ ಪಾಲಿಗೆ ದಂತ ಕತೆಗಳಂತಿದ್ದ ಅಮ್ಮ (ಜಯಲಲಿತ) ಮತ್ತು ಅಯ್ಯ (ಕರುಣಾನಿಧಿ) ಇಬ್ಬರೂ ಇಲ್ಲದೆ ನಡೆಯುತ್ತಿರುವ ಈ ಮೊದಲ ವಿಧಾನಸಭಾ ಚುನಾವಣೆ ದ್ರಾವಿಡ ನಾಡಿನ ರಾಜಕೀಯ ಕಣ್ಣಿಗೆ ರಾಚುವ ಮಟ್ಟಿಗಿನ ನಿಸ್ಸಹಾಯಕ ಸ್ಥಿತಿಗೆ ತಲುಪಿದೆ. ಅದಕ್ಕೆ ಕಾರಣ ಇಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸ್ವಘೋಷಿತ ಚಾಣಕ್ಯ ಅಮಿತ್ ಶಾ ಎಂದರೆ ತಪ್ಪಾಗಲಾರದು.

ಹೌದು..! ತಮಿಳುನಾಡಿನ ಮಟ್ಟಿಗೆ ಹಿಂದಿ ಮತ್ತು ರಾಷ್ಟ್ರೀಯ ಪಕ್ಷಗಳು ಎಂದಿಗೂ ಮಾರು ದೂರವೇ. ಇದಕ್ಕೆ ಕಾರಣ ದ್ರಾವಿಡ ನಾಡಿನಲ್ಲಿ 30ರ ದಶಕದಲ್ಲಿ ಹುಟ್ಟಿ 60ರ ದಶಕದಲ್ಲಿ ರಾಜಕೀಯ ಪಲ್ಲಟಕ್ಕೆ ಕಾರಣವಾದ ದ್ರಾವಿಡ ಚಳುವಳಿ. ಈ ಚಳುವಳಿಯ ಅಧಿನಾಯಕ ಪೆರಿಯಾರ್ ಎಂಬ ಇ.ವಿ. ರಾಮಸ್ವಾಮಿಯವರು. 1967ರಲ್ಲಿ ಈ ಚಳುವಳಿ ಮೊದಲ ಬಾರಿಗೆ ಫಲ ಕೊಟ್ಟಿತ್ತು. ಕಾಂಗ್ರೆಸ್ಸೇತರ ಮೊದಲ ಮುಖ್ಯಮಂತ್ರಿಯಾಗಿ ತಲೈವರ್ ಖ್ಯಾತಿಯ ಸಿ.ಎನ್. ಅಣ್ಣಾದುರೈ ಮುಖ್ಯಮಂತ್ರಿ ಗದ್ದುಗೆಗೆ ಏರಿದರು.

PC : Firstpost

ತದನಂತರದ ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವ ರಾಷ್ಟ್ರೀಯ ಪಕ್ಷಗಳೆನಿಸಿಕೊಂಡವಕ್ಕೆ ಅಧಿಕಾರದ ಗದ್ದುಗೆಯ ಸನಿಹಕ್ಕೆ ಬರುವುದರಲಿ ಕನಿಷ್ಟ 30ಕ್ಕೂ ಹೆಚ್ಚು ಸ್ಥಾನ ಗಳಿಸುವುದಕ್ಕೂ ಆಗಿರಲಿಲ್ಲ. ದಿವಂಗತ ಮಾಜಿ ಸಿಎಂ ಕಾಮರಾಜ್‌ರ ಕಾರಣಕ್ಕೆ ಕಾಂಗ್ರೆಸ್‌ಗೆ ದ್ರಾವಿಡ ನಾಡಿನಲ್ಲಿ ಕೆಲವಾದರೂ ಸ್ಥಾನಗಳಿವೆ. ಆದರೆ ಬಿಜೆಪಿ ಈವರೆಗೆ ಖಾತೆಯನ್ನೂ ತೆರೆಯಲಾಗದ ಹೀನಾಯ ಸ್ಥಿತಿಯಲ್ಲೇ ಇದೆ.

ಆದರೆ, 1996ರಲ್ಲಿ ಕೇಂದ್ರದಲ್ಲಿ ಅಂದಿನ ವಾಜಪೇಯಿ ಸರ್ಕಾರವನ್ನೇ ಉರುಳಿಸಿ ಉಕ್ಕಿನ ಮಹಿಳೆ ಎಂಬ ಉಪನಾಮಕ್ಕೆ ಪಾತ್ರವಾದ ಜಯಲಲಿತಾ ಮರಣದ ನಂತರ ಇದೀಗ ಇಡೀ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿದೆ. ಅಮ್ಮ ಕಟ್ಟಿ ಆಳಿದ ಎಐಎಡಿಎಂಕೆ ಎಂಬ ಪಕ್ಷವನ್ನು ಬಿಜೆಪಿ ಸಂಪೂರ್ಣವಾಗಿ ಆಪೋಷನ ತೆಗೆದುಕೊಂಡಿದೆ. ಆಡಳಿತರೂಢ ಸರ್ಕಾರದ ಲಾಭ ತೆಗೆದುಕೊಂಡು ದ್ರಾವಿಡ ನಾಡಿನಲ್ಲಿ ಕಮಲವನ್ನು ಅರಳಿಸಿಯೇ ತೀರಬೇಕು ಎಂಬ ನಿರ್ಣಯಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಜನ ಬಿಜೆಪಿ ತಂತ್ರಕ್ಕೆ ಮರುಳಾಗುತ್ತಾರ? ಏನು ಹೇಳುತ್ತಿದ್ದಾನೆ ತಮಿಳು ಮತದಾರ? ಎಐಎಡಿಎಂಕೆ ಪಕ್ಷ ಬಿಜೆಪಿ ಬಿ ಟೀಮ್‌ನಂತೆ ವರ್ತಿಸುತ್ತಿರುವುದೇ? ಚಿನ್ನಮ್ಮ ಶಶಿಕಲಾ ದಿಢೀರೆಂದು ಸೈಡ್ಲೈನ್ ಆಗಿದ್ದೇಕೆ?

ಎಡಿಎಂಕೆಯನ್ನು ಅಪೋಶನಗೈದ ಬಿಜೆಪಿ

2016ರ ವರೆಗೆ ತಮಿಳುನಾಡಿನಲ್ಲಿ ಬಿಜೆಪಿ ಪರಿಸ್ಥಿತಿ ಹೇಗಿತ್ತು ಎಂದರೆ ಪಕ್ಷಕ್ಕೆ ಮತ ಯಾಚಿಸುವುದಿರಲಿ, ಇಂತಹ ಪಕ್ಷ ದ್ರಾವಿಡ ನಾಡಿನಲ್ಲಿ ಜೀವಂತ ಇದೆ ಎಂಬ ಊಹೆಯೂ ಎಷ್ಟೋ ಜನರಿಗೆ ಇದ್ದಿರಲಿಕ್ಕಿಲ್ಲ. ಆದರೆ, 2016ರಲ್ಲಿ ಎಲ್ಲವೂ ಬದಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಟ್, ಜಲ್ಲಿಕಟ್ಟು ನಿಷೇಧ ಎಂದು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಎಲ್ಲಾ ಕಾನೂನುಗಳನ್ನು ಜಯಲಲಿತ ವಿರೋಧಿಸಿದ್ದರು. ಆದರೆ, ದುರಾದೃಷ್ಟವಶಾತ್ ಜಯಲಲಿತಾ ಅದೇ ವರ್ಷ ಮೃತಪಟ್ಟರೆ, ಅವರ ಆಪ್ತೆ ಶಶಿಕಲಾ ಅಲಿಯಾಸ್ ಚಿನ್ನಮ್ಮ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.

ಜಯಲಲಿತಾ ಸಾವಿನಲ್ಲಿ ಅನೇಕ ಸಂಶಯಗಳಿವೆ, ಆ ಸಾವಿನ ಸತ್ಯಾಸತ್ಯತೆ ಕುರಿತು ಪ್ರಸ್ತುತ ತನಿಖೆಯೂ ಆಗುತ್ತಿದೆ ಎಂಬುದು ಬೇರೆ ವಿಚಾರ. ಆದರೆ, ಈ ಬೆಳವಣಿಗೆಯ ನಂತರ ಎಡಿಎಂಕೆ ನಾವಿಕನಿಲ್ಲದ ದೋಣಿಯಂತಾದದ್ದು ಮಾತ್ರ ಅಕ್ಷರಶಃ ಸತ್ಯ. ಈ ಸಮಯದಲ್ಲೇ ಬಿಜೆಪಿ ಇದರ ಲಾಭ ಪಡೆಯಲು ಮುಂದಾದದ್ದು ಮತ್ತು ಅಮಿತ್ ಶಾ ಕಣವನ್ನು ಪ್ರವೇಶಿಸಿದ್ದು. ಹಾಗೆ ನೋಡಿದರೆ ಇಡೀ ಎಐಎಡಿಎಂಕೆ ಎಂಬುದು ಭ್ರಷ್ಟಾಚಾರದ ಕೂಪವಾಗಿ ಹೋಗಿತ್ತು. ಎಲ್ಲಾ ಶಾಸಕರ ಹಾಗೂ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ಇದೇ ಸಮಯದಲ್ಲಿ ಚಿನ್ನಮ್ಮ ಶಶಿಕಲಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅನೇಕ ಸಚಿವರ ಪಾಲಿಗೆ ಭಯದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸುಳ್ಳಲ್ಲ.

PC : Firstpost

ಈ ವೇಳೆ ಜಯಲಲಿತಾ ಮತ್ತು ಶಶಿಕಲಾ ಅವರ ರಬ್ಬರ್ ಸ್ಟಾಂಪ್‌ಗಳಾಗಿಯೇ ದೀರ್ಘ ಕಾಲ ತಮ್ಮ ರಾಜಕೀಯ ಏಳಿಗೆ ಕಂಡಿದ್ದ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದ ಓ. ಪನ್ನೀರ್ ಸೆಲ್ವಂ ಇಬ್ಬರನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ. ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಹೆದರಿಯೇ ಬಹುತೇಕ ಎಲ್ಲಾ ಸಚಿವರು ಬಿಜೆಪಿ ಶರಣಾಗಿ ಹೋಗಿದ್ದರು. ಈ ಬ್ಲಾಕ್‌ಮೇಲ್ ತಂತ್ರದಿಂದಾಗಿಯೇ 2016ರಿಂದ ಈಚೆಗೆ ತಮಿಳುನಾಡಿನಲ್ಲಿ ನಡೆದದ್ದೆಲ್ಲ ಬಿಜೆಪಿ ಆಡಳಿತವೇ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ ಎನ್ನುತ್ತಾರೆ ಅಲ್ಲಿನ ರಾಜಕೀಯ ವಿಶ್ಲೇಷಕರು.

ಸ್ವತಃ ಸಚಿವರೊಬ್ಬರು “ಮೋದಿ ನಮ್ಮ ಡ್ಯಾಡಿ” ಎಂದು ಬಹಿರಂಗ ಹೇಳಿಕೆ ನೀಡುತ್ತಾರೆ ಎಂದರೆ ದ್ರಾವಿಡ ನಾಡಿನಲ್ಲಿ ಬಿಜೆಪಿ ಯಾವ ಮಟ್ಟಿಗೆ ಆಡಳಿತರೂಢ ಪಕ್ಷವನ್ನು ಅಪೋಶನ ಮಾಡಿಕೊಂಡಿದೆ ಎಂಬುದನ್ನು ಊಹಿಸಬಹುದು. ಈ ನಡುವೆ ಪ್ರಸ್ತುತ ಚುನಾವಣೆಯಲ್ಲಿ ಎಐಡಿಎಂಕೆ ಮೈತ್ರಿಯಾಗಿರುವ ಬಿಜೆಪಿ ತಮಿಳುನಾಡಿನಲ್ಲಿ ಶೇ.1 ರಷ್ಟು ಕೂಡ ಮತಬ್ಯಾಂಕ್ ಹೊಂದಿರದಿದ್ದರೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚೌಕಾಶಿ ಮಾಡಿದೆ. ಮೊದಲ ಬಾರಿಗೆ ಇಷ್ಟು ದೊಡ್ಡಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಗೆ ಎಐಎಡಿಎಂಕೆ ಎಲ್ಲಾ ಸಹಾಯ ಮಾಡುತ್ತಿದೆ. ದ್ರಾವಿಡ ನಾಡಿನಲ್ಲಿ ತಮ್ಮ ತತ್ವ ಸಿದ್ಧಾಂತಗಳಿಗೆ ವಿರುದ್ಧವಾದ ಕೋಮುವಾದಿ ಪಕ್ಷಕ್ಕೆ ಕೆಂಪುಹಾಸು ಹಾಸಿದೆ ಎಂದರೆ ಎಐಎಡಿಎಂಕೆ ಪಕ್ಷದ ಅಸಹಾಕತೆಯನ್ನೂ ಇಲ್ಲಿ ಗಮನಿಸಬೇಕಿದೆ.

ಚಿನ್ನಮ್ಮ ಸೈಡ್ಲೈನ್

ಒಂದು ಹಂತದಲ್ಲಿ ಚಿನ್ನಮ್ಮ ಶಶಿಕಲಾ ಅವರೇ ತಮಿಳುನಾಡಿನ ಮುಂದಿನ ಸಿಎಂ ಎನ್ನಲಾಗಿತ್ತು. ಶಶಿಕಲಾ ಜೈಲಿನಲ್ಲಿದ್ದರೂ ಸಹ ಅವರ ಸಂಬಂಧಿ ಟಿಟಿವಿ ದಿನಕರನ್ ತಮಿಳುನಾಡಿನಲ್ಲಿ ಎಡಿಎಂಕೆಗೆ ಸೆಡ್ಡು ಹೊಡೆದಿದ್ದರು. ಶಶಿಕಲಾಗಾಗಿಯೇ ’ಅಮ್ಮಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂಬ ಪಕ್ಷವನ್ನು ಕೂಡ ಸ್ಥಾಪಿಸಿದ್ದರು. ಈ ಮೂಲಕ ಜಯಲಲಿತಾ ಅಭಿಮಾನದ ಮತಗಳ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದರು.

PC : Prajavani

ಇದಕ್ಕೆ ಪೂರಕವಾಗಿ ಕಳೆದ ತಿಂಗಳು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಶಶಿಕಲಾ ಅವರನ್ನು ಬೆಂಗಳೂರಿನಿಂದ ಚೆನ್ನೈವರೆಗೆ ದೊಡ್ಡ ಜನ ಬೆಂಬಲದೊಂದಿಗೆ ಸ್ವಾಗತ ಮಾಡಲಾಗಿತ್ತು. ಈ ಜನ ಬೆಂಬಲವನ್ನು ಕಂಡ ರಾಜಕೀಯ ತಜ್ಞರೇ ಸ್ವತಃ ಥಂಡ ಹೊಡೆದಿದ್ದರು. ಅಲ್ಲದೆ, ಭವಿಷ್ಯದಲ್ಲಿ ಶಶಿಕಲಾ ತಮಿನಾಡಿನ ರಾಜಕೀಯದಲ್ಲಿ ನಿರ್ಣಾಯಕವಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಎಡಿಎಂಕೆ ಪಕ್ಷದ ಅನೇಕ ಸಚಿವರು ಸಹ ಶಶಿಕಲಾ ಪರವಾಗಿ ಬಹಿರಂಗವಾಗಿ ಬ್ಯಾಟ್ ಬೀಸಿದ್ದರು.

ಆದರೆ, ಅವರನ್ನೂ ಸಹ ಇದೀಗ ಸೈಡ್ಲೈನ್ ಮಾಡಲಾಗಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಶಿಕಲಾ ದಿಢೀರೆಂದು ರಾಜಕೀಯ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ’ಚಾಣಕ್ಯ’ನ ಅದೇ ಬ್ಲಾಕ್‌ಮೇಲ್ ತಂತ್ರ ಇದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಪಕ್ಷದ ಇತ್ತೀಚಿನ ನಡೆಗಳೂ ಸಹ ಈ ಅನುಮಾನಗಳಿಗೆ ಇಂಬು ನೀಡುವಂತಿರುವುದು ಸುಳ್ಳಲ್ಲ.

ಮತದಾರನ ಒಲವೇನು?

ಅಸಲಿಗೆ ತಮಿಳುನಾಡಿನಲ್ಲಿ ಹಲವು ದಶಕಗಳ ನಂತರ ಸಾಮಾನ್ಯ ಜನ ಮತ್ತು ವಿದ್ಯಾರ್ಥಿ ಸಮೂಹ ಮುಂದೆ ನಿಂತು ನಡೆಸಿದ ಬಹುದೊಡ್ಡ ಹೋರಾಟ ಎಂದರೆ ಅದು ಜಲ್ಲಿಕಟ್ಟು ಹೋರಾಟ. ಇಂದು ತಮಿಳುನಾಡಿನಲ್ಲಿ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ಸಾಧ್ಯವಾಗಿರುವುದಕ್ಕೆ ಈ ಹೋರಾಟಗಾರರ ಶ್ರಮ ನಿರ್ಣಾಯಕ. ಆದರೆ, ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, “ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮುಂದುವರೆಯಲು ನರೇಂದ್ರ ಮೋದಿಯೇ ಕಾರಣ. ತಮಿಳುನಾಡಿನ ಅಭಿವೃದ್ಧಿಗೆ ಮೋದಿಯೇ ಸೂತ್ರಧಾರ” ಎಂದು ಬಹಿರಂಗವಾಗಿ ಹೇಳಿಕೆ ನೀಡಿಬಿಟ್ಟರು. ಈ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ತಮಿಳುನಾಡಿನ ವಾಸ್ತವ ರಾಜಕಾರಣದಲ್ಲಿ ಬಿಜೆಪಿಗೆ ಯಾವುದೇ ಸ್ಥಾನಮಾನ ಇಲ್ಲ. ಇನ್ನೂ ಕಳೆದ 50 ವರ್ಷ ದ್ರಾವಿಡ ನಾಡನ್ನು ಆಳ್ವಿಕೆ ಮಾಡಿರುವ ಪ್ರಬಲ ದ್ರಾವಿಡ ಪಕ್ಷವೊಂದು, ತಮ್ಮ ಜೀವಾಳವಾಗಿದ್ದ ಅಮ್ಮ ಜಯಲಲಿತಾ ಅವರನ್ನೇ ಸೈಡಿಗೆ ಸರಿಸಿ ತಮ್ಮ ಮತಗಳಿಗಾಗಿ ಮೋದಿಯನ್ನು ಹೊಗಳುವಂತಹ ಹೀನಾಯ ಸ್ಥಿತಿಗೆ ತೆರಳಿತೇ? ಎಂಬ ಪ್ರಶ್ನೆಗಳು ಇದೀಗ ತಮಿಳುನಾಡಿನ ಎಲ್ಲೆಡೆ ಹರಿದಾಡುತ್ತಿದೆ.

ಅಸಲಿಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬ್ಯಾನ್ ಆಗಲು ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ ಎಂಬುದು ತಮಿಳರಿಗೆ ತಿಳಿಯದ ವಿಚಾರವೇನಲ್ಲ. ಹೀಗಾಗಿ ಓ. ಪನ್ನೀರ್ ಸೆಲ್ವಂ ಅವರ ಮಾತು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.

ಬಿಜೆಪಿ-ಎಡಿಎಂಕೆ ಎರಡಕ್ಕೂ ಇಲ್ಲ ಚಾರ್ಮ್

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಒಟ್ಟು 20 ಜನರನ್ನು ಬಿಜೆಪಿ ಕಣಕ್ಕಿಳಿಸಿದೆ. ಆದರೆ, ಯಾವೊಬ್ಬ ಸ್ಪರ್ಧಿಗೂ ಜನರನ್ನು ಸೆಳೆಯುವ ಸಾಮರ್ಥ್ಯವಿಲ್ಲ. ಎಡಿಎಂಕೆ 170ಕ್ಕೂ ಅಧಿಕ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ಕಣಕ್ಕಿಳಿಯುತ್ತಿದೆ. ಆದರೆ, ಜಯಲಲಿತಾ ಮರಣದ ನಂತರ ಎಐಎಡಿಎಂಕೆ ಸಂಪೂರ್ಣವಾಗಿ ತನ್ನ ಚಾರ್ಮ್ ಕಳೆದುಕೊಂಡಿದೆ. ಜನರನ್ನು ಸೆಳೆಯಬಲ್ಲ ಒಬ್ಬೇ ಒಬ್ಬ ನಾಯಕನೂ ಆ ಪಕ್ಷದಲ್ಲಿ ಇಲ್ಲ ಎಂಬುದೇ ಸತ್ಯ.

PC : Nakkheeran

ಈ ನಡುವೆ ಬೆಲೆ ಏರಿಕೆ, ನೀಟ್, ಜಲ್ಲಿಕಟ್ಟು ನಿಷೇಧ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿರುವ ಬಿಜೆಪಿ ಜೊತೆಗೆ ಎಡಿಎಂಕೆ ಮೈತ್ರಿ ತಮಿಳರಿಗೆ ಸುತಾರಾಂ ಇಷ್ಟವಿಲ್ಲ. ಈ ಹಿಂದೆ 2019ರ ಲೋಕಸಭಾ ಚುನಾವಣೆಯಲ್ಲೇ ಎಡಿಎಂಕೆ-ಬಿಜೆಪಿ ಮೈತ್ರಿಗೆ ಅಲ್ಲಿನ ಮತದಾರ ಶೂನ್ಯ ಸಂಪಾದನೆ ನೀಡಿ ತಿರಸ್ಕರಿಸಿದ್ದ. ಇನ್ನು ಈಗಂತೂ ತಮಿಳುನಾಡಿನಲ್ಲಿ ಬಿಜೆಪಿ ವಿರೋಧಿ ಅಲೆ ಜೊತೆಗೆ ಎಡಿಎಂಕೆ ಆಡಳಿತ ವಿರೋಧಿ ಅಲೆ ಕೂಡ ಸೇರಿಕೊಂಡಿದ್ದು, ಬಿಜೆಪಿ ದೆಸೆಯಿಂದ ಎಐಎಡಿಎಂಕೆ ಸಹ ತನ್ನ ಕ್ಷೇತ್ರಗಳನ್ನು ಅಧಿಕ ಸಂಖ್ಯೆಯಲ್ಲಿ ಕಳೆದುಕೊಳ್ಳಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಸಿ-ವೋಟರ್ ಸಮೀಕ್ಷೆಯೂ ಇದೇ ಫಲಿತಾಂಶ ನೀಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

’ಮತ್ತೊಂದೆಡೆ ಡಿಎಂಕೆ ಕಳೆದ ಒಂದು ವರ್ಷದಿಂದ ಜನರ ನಡುವೆ ಕೆಲಸ ಮಾಡುತ್ತಿದೆ. ಜನ ಪಂಚಾಯತ್ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿದೆ. ಅಲ್ಲದೆ, ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸುವಲ್ಲಿ ಸಫಲವಾಗಿದೆ. ಹೀಗಾಗಿ ಕರುಣಾನಿಧಿ ಮಗ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಈ ಭಾರಿ ಜಯಭೇರಿ ಭಾರಿಸಲಿದೆ. 10 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ’ ಎಂದೇ ಹೇಳಲಾಗುತ್ತಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳ ಅಸಲಿಯತ್ತು ಚುನಾವಣಾ ಫಲಿತಾಂಶದ ನಂತರವೇ ತಿಳಿಯಲಿದೆ.


ಇದನ್ನೂ ಓದಿ: 18 ಪಕ್ಷಾಂತರಿಗಳಿಗೆ ಟಿಕೆಟ್, ತಮಿಳುನಾಡು BJP ಪರಿಸ್ಥಿತಿ ಇಲ್ಲಿಗೆ ಬಂತು: ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...