ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಮತ್ತು ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್ ಅವರನ್ನು ಬಹಿರಂಗವಾಗಿ ಟೀಕಿಸಿದ ನಂತರ ಪಕ್ಷದ ಶಿಸ್ತು ಉಲ್ಲಂಘಿಸಿದ ಇಬ್ಬರು ಪಕ್ಷದ ನಾಯಕರನ್ನು ತಮ್ಮ ಜವಾಬ್ದಾರಿಯಿಂದ ತೆಗೆದುಹಾಕಿದೆ.
ತಮಿಳುನಾಡು ಬಿಜೆಪಿಯ ಬೌದ್ಧಿಕ ವಿಭಾಗದ ಭಾಗವಾಗಿದ್ದ ಕಲ್ಯಾಣ್ ರಾಮನ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಬಿಡುಗಡೆ ಮಾಡಲಾಗಿದೆ ಮತ್ತು ಒಂದು ವರ್ಷದ ಅವಧಿಗೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಅದೇ ರೀತಿ ರಾಜ್ಯದ ಬಿಜೆಪಿಯ ಒಬಿಸಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದ ತಿರುಚ್ಚಿ ಸೂರ್ಯ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಬಿಜೆಪಿ ಪ್ರಕಾರ, ಇಬ್ಬರು ನಾಯಕರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ, ಆ ಮೂಲಕ ಪಕ್ಷಕ್ಕೆ ಕಳಂಕ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ, ಕಲ್ಯಾಣ್ ರಾಮನ್ ಅವರು ಕೆ ಅಣ್ಣಾಮಲೈ ಮತ್ತು ಅವರ “ವಾರ್ ರೂಮ್” ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ಅವರು ಅಣ್ಣಾಮಲೈ ಅವರ ಕಾರ್ಯವೈಖರಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಶೈಲಿಯನ್ನು ಬಹಿರಂಗವಾಗಿ ಪ್ರಶ್ನಿಸಿದರು.
ಶಿಸ್ತು ಕ್ರಮವನ್ನು ಘೋಷಿಸುವ ಹೇಳಿಕೆಯಲ್ಲಿ ಬಿಜೆಪಿಯು ಕಲ್ಯಾಣ್ ರಾಮನ್ ಅವರು ಸರಿಯಾದ ಪುರಾವೆಗಳಿಲ್ಲದೆ ರಾಜ್ಯ ನಾಯಕತ್ವ ಮತ್ತು ಪಕ್ಷದ ಕಾರ್ಯಕರ್ತರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಿರುಚ್ಚಿ ಸೂರ್ಯ ಅವರು ತಮ್ಮ ಇತ್ತೀಚಿನ ಕೆಲವು ಸಂದರ್ಶನಗಳಲ್ಲಿ ಬಿಜೆಪಿಯ ಹಿರಿಯ ನಾಯಕಿ ತಮಿಳಿಸೈ ಸೌಂದರರಾಜನ್ ಅವರನ್ನು ಟೀಕಿಸಿದ್ದರು. ಅಮಾನತುಗೊಂಡಿರುವ ಈ ಇಬ್ಬರು ನಾಯಕರೊಂದಿಗೆ ಬೆರೆಯದಂತೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಬಿಜೆಪಿಯ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಅಣ್ಣಾಮಲೈ, ಕೆಲವು ಪಕ್ಷದ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ತಮ್ಮದೇ ಆದ ನಾಯಕರನ್ನು ಟೀಕಿಸುತ್ತಿರುವುದನ್ನು ಗಮನಿಸಿದ್ದೇನೆ ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ; ನೀಟ್ ವಿವಾದ: ಪೇಪರ್ ಸೋರಿಕೆ ಕುರಿತು ಬಿಹಾರ ಪೊಲೀಸರಿಂದ ವರದಿ ಕೇಳಿದ ಕೇಂದ್ರ ಸರ್ಕಾರ?


