Homeಚಳವಳಿದುಷ್ಕೃತ್ಯಗಳ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುತ್ತಿರುವುದು ಖಂಡನಾರ್ಹ: PFI

ದುಷ್ಕೃತ್ಯಗಳ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುತ್ತಿರುವುದು ಖಂಡನಾರ್ಹ: PFI

- Advertisement -
- Advertisement -

ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರೀತಿಯ ದುಷ್ಕೃತ್ಯಗಳ ಹೆಸರಿನಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸುತ್ತಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಶುಕ್ರವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಎ ಕೆ ಅಶ್ರಫ್, “ಜಿಲ್ಲೆಯಲ್ಲಿ ಸರಣಿ ದುಷ್ಕೃತ್ಯಗಳು ನಡೆದಾಗಲೆಲ್ಲಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಸಂಘಪರಿವಾರವು ಮುಸ್ಲಿಮರನ್ನು ಗುರಿಪಡಿಸಿಕೊಂಡು ಅಪಪ್ರಚಾರಗಳನ್ನು ನಡೆಸುತ್ತಾ ಬಂದಿದೆ. ಜೊತೆಗೆ ಸಂಘಪರಿವಾರದ ನಾಯಕರು ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಾ ಶಾಂತಿ ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಡೆಯುವ ಪೊಲೀಸರ ಕೋಮು ಪೂರ್ವಾಗ್ರಹಪೀಡಿತ ತನಿಖೆಗಳು ಕಳವಳಕಾರಿಯಾಗಿವೆ. ಇದೀಗ ಮಂಗಳೂರಿನ ನಂದಿಗುಡ್ಡೆಯಲ್ಲಿ ಕೊರಗಜ್ಜ ದೈವಸ್ಥಾನ ಕಟ್ಟೆಯನ್ನು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ದೇವದಾಸ್ ದೇಸಾಯಿ ಎಂಬಾತನನ್ನು ಬಂಧಿಸಿದ್ದಾರೆ. ತಾನು 18 ಕಡೆ ಇಂತಹ ದುಷ್ಕೃತ್ಯಗಳನ್ನು ಎಸಗಿದ್ದೆ ಎಂಬ ವಿಚಾರವನ್ನು ಆರೋಪಿ ಒಪ್ಪಿಕೊಂಡಿರುವುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಜೊತೆಗೆ ಕೃತ್ಯ ನಡೆಸಿರುವುದರ ಬಗ್ಗೆ ಆರೋಪಿಯ ಹೇಳಿಕೆಯೂ ಪ್ರಸಾರವಾಗಿದೆ. ಆದರೆ ಅದಕ್ಕೂ ಮೊದಲು ಮುಸ್ಲಿಂ ಯುವಕರನ್ನು ಆರೋಪಿಗಳೆಂದು ಬಿಂಬಿಸಿ ಚಿತ್ರಹಿಂಸೆ ನೀಡಲಾಗಿದ್ದು ಸರಿಯೇ” ಎಂದು ಪ್ರಶ್ನಿಸಿದ್ದಾರೆ.

ಈ ಮೊದಲು ಮಂಗಳೂರು ನಗರದ ಸುತ್ತಮುತ್ತಲಿನ ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಅಪಚಾರ ಎಸಗಿದ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿ ಪೊಲೀಸರು ಜೋಕಟ್ಟೆ ಪರಿಸರದ ರಹೀಂ ಮತ್ತು ತೌಫೀಕ್ ಎಂಬ ಇಬ್ಬರು ಯುವಕರನ್ನು ಮಾಧ್ಯಮದವರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಕಮಿಷನರ್ ಎನ್.ಶಶಿ ಕುಮಾರ್ ಸ್ವತಃ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಮಾಧ್ಯಮಗಳಲ್ಲೂ ಪೊಲೀಸ್ ಕಮಿಷನರ್ ಅವರ ಹೇಳಿಕೆಗಳು ಪ್ರಕಟವಾಗಿದ್ದವು. ಇವರಿಬ್ಬರ ಬಂಧನದ ಬಳಿಕ ಒಟ್ಟು ಮುಸ್ಲಿಮ್ ಸಮುದಾಯವನ್ನು ಸಂಶಯದ ದೃಷ್ಟಿಯಿಂದ ನೋಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ನೀಡಲಾದ ಹೇಳಿಕೆಗಳನ್ನು ಆಧರಿಸಿ ಸಂಘಪರಿವಾರದ ಶಕ್ತಿಗಳು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಅಭಿಯಾನವನ್ನು ಹಮ್ಮಿಕೊಂಡವು. ಜೋಕಟ್ಟೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ ಮುಸ್ಲಿಮ್ ಯುವಕ ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದ್ದರಿಂದಲೇ ರಕ್ತ ವಾಂತಿ ಮಾಡಿ ಸತ್ತಿದ್ದಾನೆಂದು ಹೇಳಿ ಭಾವನಾತ್ಮಕವಾಗಿ ಪ್ರಚೋದಿಸುವ ಹುನ್ನಾರವೂ ನಡೆಯಿತು. ಇದು ಸೌಹಾರ್ದದಿಂದ ಬದುಕುತ್ತಿದ್ದ ಹಿಂದು-ಮುಸ್ಲಿಮರ ನಡುವೆ ಮತ್ತಷ್ಟು ಅಪನಂಬಿಕೆ ಸೃಷ್ಟಿಸಲು ಕಾರಣವಾಯಿತು. ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದ ಹೆಸರಿನಲ್ಲಿ ಸಂಘಪರಿವಾರ ಮುಸ್ಲಿಮರ ತೇಜೋವಧೆ ನಡೆಸುತ್ತಿದ್ದರೆ, ಜಿಲ್ಲೆಯ ಪೊಲೀಸ್ ಇಲಾಖೆಯೂ ತನಿಖೆಗೆ ಮುನ್ನವೇ ಮುಸ್ಲಿಮರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿತು ಎಂದು ದೂರಿದ್ದಾರೆ.

ಸತತ 4 ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕವೂ ಪೊಲೀಸರಿಗೆ, ರಹೀಂ ಮತ್ತು ತೌಫೀಕ್ ಎಂಬ ಇಬ್ಬರು ಯುವಕರ ವಿರುದ್ಧವೂ ಯಾವುದೇ ಸಾಕ್ಷ್ಯಾಧಾರ ದೊರಕಲಿಲ್ಲ. ನಂತರದಲ್ಲಿ ಈ ಘಟನೆಗಳ ಸಂಬಂಧ ಯಾವುದೇ ಪ್ರಕರಣ ದಾಖಲಿಸದೇ ಅವರಿಬ್ಬರನ್ನೂ ಬಿಡುಗಡೆಗೊಳಿಸಲಾಗಿತ್ತು. ಬಂಧನದ ವೇಳೆ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ ಅಮಾಯಕರ ಬಿಡುಗಡೆಯ ವೇಳೆ ಮೌನವಹಿಸಿದ್ದರು. ಇದು ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತದೆ ಎಂದು ಎ ಕೆ ಅಶ್ರಫ್ ಪ್ರಶ್ನಿಸಿದ್ದಾರೆ.

ಕೆಲ ಸಮಯಗಳ ಹಿಂದೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕರ್ಕೇರ ಮೂಲ ದೈವಸ್ಥಾನದಲ್ಲಿ ಮೂರ್ತಿಗಳನ್ನು ಭಗ್ನಗೊಳಿಸಿದ ಘಟನೆ ನಡೆದಿತ್ತು. ಈ ವೇಳೆ ಸಂಘಪರಿವಾರವು ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಕೋಮುಪ್ರಚೋದನಕಾರಿ ಹೇಳಿಕೆಗಳ ಮೂಲಕ ಶಾಂತಿ ಕದಡುವ ಪ್ರಯತ್ನ ನಡೆಸಿತ್ತು. ಆದರೆ ಆ ಘಟನೆಯಲ್ಲಿ ಆರೋಪಿ ರೋಹಿತಾಶ್ವ ಎಂಬಾತನ ಬಂಧನದೊಂದಿಗೆ ಸಂಘಪರಿವಾರದ ಗಲಭೆ ನಡೆಸುವ ಷಡ್ಯಂತ್ರ ವಿಫಲವಾಗಿತ್ತು. ಮಂಜನಾಡಿ ವಿಷ್ಣುಮೂರ್ತಿ ಜನಾರ್ದನ ದೈವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕಳವು ಮತ್ತು ಇತರ ಬೈಕುಗಳು ಕಳವಾದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಬಂಧಿಸಿದ್ದು, ಈತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಉಳ್ಳಾಲ ಪ್ರಖಂಡದ ಸಂಚಾಲಕನಾಗಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದ ಹೆಸರಿನಲ್ಲಿ ಬಜರಂಗ ದಳವು ಕದ್ರಿಯಿಂದ ಕುತ್ತಾರ್ ವರೆಗೆ ಪಾದಯಾತ್ರೆ ನಡೆಸಿ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಹುಟ್ಟು ಹಾಕಲು ಶ್ರಮಿಸಿತ್ತು. ಈ ಹಿಂದೆ ಕೊಣಾಜೆಯ ಕಾರ್ತಿಕ್ ರಾಜ್ ಕೊಲೆ ನಡೆದಾಗಲೂ ಪೊಲೀಸರು ಅಮಾಯಕ ಮುಸ್ಲಿಮ್ ಯುವಕರನ್ನು ಠಾಣೆಯಲ್ಲಿಟ್ಟು ನಿರಂತರವಾಗಿ ಚಿತ್ರಹಿಂಸೆ ನೀಡಿದ್ದರು. ಜವಾಬ್ದಾರಿಯುತ ಸಂಸದರು ಅಂದು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಗೆ ಬೆಂಕಿ ಹಚ್ಚುವ ಅವಿವೇಕದ ಹೇಳಿಕೆಯನ್ನೂ ನೀಡಿದ್ದರು. ಕೆಲ ಸಮಯಗಳ ಬಳಿಕ ಹತ್ಯೆಯಲ್ಲಿ ಕಾರ್ತಿಕ್ ರಾಜ್ ಸಹೋದರಿ ಮತ್ತು ಪ್ರಿಯಕರನ ಪಾತ್ರವಿರುವುದು ಬಹಿರಂಗವಾಗಿತ್ತು ಎಂದು ದ.ಕ ಜಿಲ್ಲಾಧ್ಯಕ್ಷರಾದ ಏಜಾಜ್ ಅಹ್ಮದ್ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಪರಿವಾರದ ನಿರಂತರ ಅಪಪ್ರಚಾರದೊಂದಿಗೆ ಜಿಲ್ಲಾ ಪೊಲೀಸರ ಕೋಮು ಪೂರ್ವಾಗ್ರಹಪೀಡಿತ ತನಿಖೆಗಳೂ ಆತಂಕ ಹುಟ್ಟಿಸುತ್ತಿವೆ. ತನಿಖೆಯಲ್ಲಿ ನೈಜ ಆರೋಪಿಗಳು ಪತ್ತೆಯಾದಾಗ ಪೊಲೀಸರು ಘಟನೆಯನ್ನು ಕೇವಲವಾಗಿ ಪ್ರಸ್ತುತಪಡಿಸುತ್ತಿರುವುದು ಕಂಡು ಬರುತ್ತಿದೆ. ಪೊಲೀಸ್ ಇಲಾಖೆಯ ಇಂತಹ ವರ್ತನೆಗಳು ಯಾವುದೇ ಕಾರಣಕ್ಕೂ ಸಹಿಸುವಂಥದ್ದಲ್ಲ. ಈ ಸರಣಿ ದುಷ್ಕೃತ್ಯಗಳ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಸಂಘಪರಿವಾರದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸ್ ಇಲಾಖೆ ಮುಸ್ಲಿಮ್ ಯುವಕರನ್ನು ಸಾರ್ವಜನಿಕವಾಗಿ ಅಪರಾಧಿಗಳನ್ನಾಗಿ ಬಿಂಬಿಸಿದ್ದು ಯಾರನ್ನು ತೃಪ್ತಿಪಡಿಸಲು ಎಂಬುದು ಬಹಿರಂಗವಾಗಬೇಕು. ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸಿ ಜನರಿಗೆ ತಪ್ಪು ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಅಮಾಯಕ ಯುವಕರು ಮತ್ತು ಒಟ್ಟು ಮುಸ್ಲಿಮ್ ಸಮುದಾಯದ ಮೇಲಾದ ಮಾನಹಾನಿಗೆ ಕ್ಷಮೆ ಯಾಚಿಸಬೇಕು. ಪೊಲೀಸ್ ಇಲಾಖೆ ಪಕ್ಷಪಾತವಾಗಿ ಮತ್ತು ಪೂರ್ವಾಗ್ರಹಪೀಡಿತವಾಗಿ ಕಾರ್ಯನಿರ್ವಹಿಸದೇ, ಸಂವಿಧಾನದ ಸಮಾನ ನ್ಯಾಯದ ಆಶಯಕ್ಕೆ ಬದ್ಧರಾಗಿ ಕರ್ತವ್ಯ ನಿಷ್ಠೆ ತೋರಬೇಕೆಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಮಂಗಳೂರು: ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗೆ ಕಾಂಡೋಮ್‌ ಹಾಕಿದ್ದ ವ್ಯಕ್ತಿಯ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...