ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪಿನನ್ವಯ ಇದ್ದ ನಿರ್ಬಂಧವನ್ನು ರಾಜ್ಯ ಹೈಕೋರ್ಟ್ ತೆರವು ಮಾಡಿದೆ.
ತೇಜಸ್ವಿ ಅವರು ಅಭ್ಯರ್ಥಿ ಎಂದು ಘೋಷಣೆಯಾದ ತಕ್ಷಣ ಕೆಲವರು ಅವರನ್ನು ಟ್ವಿಟ್ಟರ್‍ನಲ್ಲಿ ಅಭಿನಂದಿಸಿದ್ದರು. ಆಗ ಮಹಿಳಾ ಉದ್ಯಮಿಯೊಬ್ಬರು ಅವರಿಗೆ, ಈ ವ್ಯಕ್ತಿಯ ಚಾರಿತ್ರ್ಯ ಸರಿ ಇಲ್ಲ, ಧರ್ಮದ ಕುರಿತು ಮಾತನಾಡುವವರೆಲ್ಲರೂ ಒಳ್ಳೆಯವರೇನೂ ಆಗಿರುವುದಿಲ್ಲ. ಬೇಕಾದರೆ ನಿಮಗೆ ಸಾಕ್ಷಿ ಒದಗಿಸುತ್ತೇನೆ ಎಂದು ಟ್ವಿಟ್ಟರ್‍ನಲ್ಲೇ ಹೇಳಿದ್ದರು. ಆ ನಂತರ ತನಗೇ ಆತನಿಂದ ಆದ ಮೋಸದ ಬಗ್ಗೆ ಟ್ವೀಟ್ ಮಾಡಿದ್ದರು.
ಇದು ವೈರಲ್ ಆಗಿತ್ತು. ಅಷ್ಟೇ ಅಲ್ಲದೇ, ಬಿಜೆಪಿಯ ವಲಯಗಳಿಂದಲೇ ತೇಜಸ್ವಿಯ ಇನ್ನೂ ಹಲವು ಹಗರಣಗಳ ಕುರಿತ ವಿವರಗಳು ಮತ್ತು ಸ್ಕ್ರೀನ್‍ಷಾಟ್‍ಗಳು, ವಿಡಿಯೋಗಳು ಮಾಧ್ಯಮ ಸಂಸ್ಥೆಗಳಿಗೆ ತಲುಪಿದ್ದವು. ಆದರೆ ಅಷ್ಟರಲ್ಲಿ ತೇಜಸ್ವಿಯವರು ನಗರದ ಸಿವಿಲ್ ಕೋರ್ಟಿನಲ್ಲಿ ತಮ್ಮ ವಿರುದ್ಧ ಈ ಪ್ರಕರಣ ಅಥವಾ ಯಾವುದೇ ಮಾನಹಾನಿ ಸುದ್ದಿ ಪ್ರಕಟಿಸಬಾರದೆಂದು ನಿರ್ಬಂಧ ಆದೇಶ ತಂದಿದ್ದರು.
ಈ ನಿರ್ಬಂಧ ಆದೇಶ ಸಹಾ ಟೀಕೆಗೊಳಗಾಗಿತ್ತು. ಇಂಡಿಯನ್ ಎಕ್ಸ್‍ಪ್ರೆಸ್ ಮತ್ತು ನಂತರ ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿಗಳು ಅದರ ಬಗ್ಗೆ ಸಂಪಾದಕೀಯಗಳನ್ನೂ ಬರೆದಿದ್ದವು.
ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯ ತ್ರಿಲೋಚನ ಶಾಸ್ತ್ರಿಯವರು ಹಾಕಿದ ಮೊಕದ್ದಮೆಯ ಕುರಿತು ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಏನು ಹೇಳಲಾಗಿದೆ?
ಅರ್ಜಿದಾರರ ವಾದದ ಅಂಶಗಳು ಸರಿಯಾಗಿವೆ
ಮತದಾರರು ಸ್ಪರ್ಧಿಸಿರುವ ಅಭ್ಯರ್ಥಿ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಹಕ್ಕುಳ್ಳವರಾಗಿದ್ದಾರೆ.
ಸಂವಿಧಾನದ 19(1)ಎ ಕಲಂ ನಮಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಕೊಟ್ಟಿದೆ.
ಮಾನಹಾನಿ ಸುದ್ದಿ ಪ್ರಕಟವಾದ ನಂತರವೇ ಅದು ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯ.
ಆ ರೀತಿ ಮಾನಹಾನಿ ಆಗಿದೆ ಎಂದು, ಅಂತಹ ಕ್ರಿಯೆ ನಡೆದ ನಂತರ ಸಂಬಂಧಪಟ್ಟವರಿಗೆ ಅನಿಸಿದರೆ ಅವರು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬಹುದು.
ಈ ಹಂತದಲ್ಲಿ ಪ್ರತಿವಾದಿಗೆ ಮಾನಹಾನಿ ಸುದ್ದಿ ಪ್ರಕಟವಾಗಿದೆ ಎಂದರೆ ಅದನ್ನು ಚುನಾವಣಾ ಆಯೋಗದ ಮುಂದೆ ತೆಗೆದುಕೊಂಡು ಹೋಗಿ ಪರಿಹಾರ ಪಡೆಯಬಹುದು.
ಈ ತೀರ್ಪಿನ ಮುಖಾಂತರ ತೇಜಸ್ವಿಯವರ ಕುರಿತ ಇತರ ವರದಿಗಳನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಬಹುದಾಗಿದೆ. ಸ್ವತಃ ವಕೀಲರಾಗಿರುವ ತೇಜಸ್ವಿ ವಾಟ್ಸಾಪ್, ಗೂಗಲ್, ಫೇಸ್‍ಬುಕ್ ಮತ್ತು ಯಾಹೂ ಸಂಸ್ಥೆಗಳ ಮೇಲೂ ಇಂತಹ ಮೊಕದ್ದಮೆಯನ್ನು ಹೂಡಿ ಗೇಲಿಗೊಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಂತೂ ಇದು ಬಹಳ ತಮಾಷೆಯ ಸಂಗತಿಯಾಗಿತ್ತು.
ಅಂತಿಮವಾಗಿ ತ್ರಿಲೋಚನಾ ಶಾಸ್ತ್ರಿಯವರು ಹೂಡಿದ ಮೊಕದ್ದಮೆಯ ಕಾರಣದಿಂದ ಸದರಿ ಆದೇಶವು ರದ್ದಾಗಿದೆ. ಈಗ ತೇಜಸ್ವಿಯವರ ಮುಂದಿನ ನಡೆಯೇನು ಎಂದು ಕಾದು ನೋಡಬೇಕಿದೆ.


