Homeಮುಖಪುಟತೆಲಂಗಾಣ ನೂತನ ಸಂಪುಟ: 'ಸೀತಕ್ಕ'ನಿಗೆ ಒಲಿದ ಸಚಿವ ಸ್ಥಾನ, ದಲಿತ ಸಮುದಾಯದ 'ಭಟ್ಟಿ ವಿಕ್ರಮಾರ್ಕ' ಡಿಸಿಎಂ!

ತೆಲಂಗಾಣ ನೂತನ ಸಂಪುಟ: ‘ಸೀತಕ್ಕ’ನಿಗೆ ಒಲಿದ ಸಚಿವ ಸ್ಥಾನ, ದಲಿತ ಸಮುದಾಯದ ‘ಭಟ್ಟಿ ವಿಕ್ರಮಾರ್ಕ’ ಡಿಸಿಎಂ!

- Advertisement -
- Advertisement -

ತೆಲಂಗಾಣದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹನ್ನೆರಡು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಅವಿಭಜಿತ ತೆಲಂಗಾಣದಲ್ಲಿ ‘ಸೀತಕ್ಕ’ ಎಂದೇ ಜನಪ್ರಿಯರಾಗಿರುವ, ಮಾಜಿ ನಕ್ಸಲ್ ದನ್ಸಾರಿ ಅನಸೂಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮಾದಿಗ ಸಮುದಾಯದ ಹಿರಿಯ ಶಾಸಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂಪುಟದ ನೂತನ ಸಚಿವರ ಹಿನ್ನೆಲೆ ಹಾಗೂ ಅವರಿಗೆ ಹಂಚಿಕೆಯಾಗಿರುವ ಖಾತೆಗಳ ಕುರಿತ ಕಿರು ಪರಿಚಯವನ್ನು ಈ ಲೇಖನದ ಮೂಲಕ ಮಾಡಿಕೊಡಲಾಗಿದೆ.

ರೇವಂತ್ ರೆಡ್ಡಿ–ಮುಖ್ಯಮಂತ್ರಿ, ಭಟ್ಟಿ ವಿಕ್ರಮಾರ್ಕ ಮಲ್ಲು-ಉಪ ಮುಖ್ಯಮಂತ್ರಿ, ಕಂದಾಯ. ಉತ್ತಮ್ ಕುಮಾರ್ ರೆಡ್ಡಿ–ವಸತಿ, ಕೋಮಟಿ ರೆಡ್ಡಿ–ನಗರಾಭಿವೃದ್ಧಿ, ಶ್ರೀಧರ್ ಬಾಬು–ಹಣಕಾಸು, ಪೊಂಗುಲೇಟಿ–ನೀರಾವರಿ, ಕೊಂಡ ಸುರೇಖಾ-ಮಹಿಳಾ ಕಲ್ಯಾಣ, ದಾಮೋದರ ರಾಜನರಸಿಂಹ-ವೈದ್ಯಕೀಯ ಮತ್ತು ಆರೋಗ್ಯ, ಜುಪಲ್ಲಿ-ಆಹಾರ ಮತ್ತು ನಾಗರಿಕ ಸರಬರಾಜು, ಸೀತಕ್ಕ-ಗಿರಿಜನ ಕಲ್ಯಾಣ, ತುಮ್ಮಲ-ಮೂಲಭೂತ ಸೌಕರ್ಯ.

ಎ. ರೇವಂತ ರೆಡ್ಡಿ-ಮುಖ್ಯಮಂತ್ರಿ:

ಎಬಿವಿಪಿ ಸಂಘಟನೆ ಮೂಲಕ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟ ರೇವಂತ್ ರೆಡ್ಡಿ, ಅವಿಭಜಿತ ಆಂಧ್ರಪ್ರದೇಶದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು. ರೇವಂತ್ ರೆಡ್ಡಿ 2001 ರಿಂದ ಬಿಆರ್‌ಎಸ್‌ (ಈ ಹಿಂದಿನ ಟಿಆರ್‌ಎಸ್‌) ಪಕ್ಷದ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. 2006ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಪಕ್ಷ ತೊರೆದಿದ್ದರು. ಬಳಿಕ 2007ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ನಂತರ 2009-2014ರ ನಡುವೆ ಎರಡು ಬಾರಿ ಕೊಂಡಗಲ್ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷ (ಟಿಡಿಪಿ) ಶಾಸಕರಾಗಿದ್ದರು. 2017ರಲ್ಲಿ ಕಾಂಗ್ರೆಸ್‌ ಸೇರಿದ ಅವರು, ತೆಲಂಗಾಣ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಭಟ್ಟಿ ವಿಕ್ರಮಾರ್ಕ ಮಲ್ಲು-ಡಿಸಿಎಂ:

ಖಮ್ಮಂ ಜಿಲ್ಲೆಯ ವೈರಾ ಮಂಡಲದ ಸ್ನಾನಲ ಲಕ್ಷ್ಮೀಪುರಂ ಗ್ರಾಮದ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಜಾತಿಯ ಭಟ್ಟಿ ಅವರನ್ನು ಕಾಂಗ್ರೆಸ್ ಡಿಸಿಎಂ ಹುದ್ದೆಗೆ ಪರಿಗಣಿಸಿದ್ದು, ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಮಧಿರಾ ವಿಧಾನಸಭಾ ಕ್ಷೇತ್ರದಿಂದ 2009, 2014, 2018 ಮತ್ತು 2023ರ ಚುನಾವಣೆಗಳಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2007ರಲ್ಲಿ ಖಮ್ಮಂ ಜಿಲ್ಲೆಯಿಂದ ಎಂಎಲ್‌ಸಿಯಾಗಿ ಗೆದ್ದಿದ್ದರು. ಅವರು 2009 ಮತ್ತು 2011 ರ ನಡುವೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಸಚೇತಕರಾಗಿದ್ದರು. ಭಟ್ಟಿ ಅವರು 2011 ರಿಂದ 2014 ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಎನ್. ಉತ್ತಮ್ ಕುಮಾರ್ ರೆಡ್ಡಿ (ಸೂರ್ಯಪೇಟೆ ಜಿಲ್ಲೆ)

ಉತ್ತಮ್ ಕುಮಾರ್ ರೆಡ್ಡಿ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆರು ಬಾರಿ ಶಾಸಕರಾಗಿರುವ ಅವರು, 1999 ರಿಂದ 2009 ರವರೆಗೆ ಕೊಡಾಡ್‌ನಿಂದ. 2010ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕೆ. ರೋಸಯ್ಯ ರಾಜೀನಾಮೆ ನೀಡಿದ ನಂತರ ಹುಜೂರ್‌ ನಗರದಿಂದ ಸ್ಪರ್ಧಿಸಿದ್ದರು. ಎನ್ ಕಿರಣ್ ಕುಮಾರ್ ರೆಡ್ಡಿ ಮುಖ್ಯಮಂತ್ರಿಯಾದಾಗ, ಅವರ ಸಂಪುಟದಲ್ಲಿ ವಸತಿ ಸಚಿವರಾಗಿದ್ದರು. ಅವರು ಫೆಬ್ರವರಿ 2015 ರಿಂದ ಜೂನ್ 2021 ರವರೆಗೆ ಆರು ವರ್ಷಗಳ ಕಾಲ ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಡಿಸೆಂಬರ್ 2018ರ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಹುಜೂರ್ ನಗರದಿಂದ ಗೆದ್ದರು. ಆದರೆ, 2019ರ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಲ್ಗೊಂಡದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಕೇಳಿಕೊಂಡಿತು. ಅಲ್ಲಿ ಗೆದ್ದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಪದ್ಮಾವತಿ ಕೂಡ ಕೊಡ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೋಮಟಿರೆಡ್ಡಿ ವೆಂಕಟ್ ರೆಡ್ಡಿ (ನಲ್ಗೊಂಡ ಜಿಲ್ಲೆ):

ನಲ್ಗೊಂಡದಿಂದ ಐದು ಬಾರಿ ಶಾಸಕರಾಗಿ ಮತ್ತು ಭುವನಗಿರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಅವರು, ದಿವಂಗತ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಸಂಪುಟದಲ್ಲಿ ಐಟಿ ಸಚಿವರಾಗಿದ್ದರು. 2018ರಲ್ಲಿ ಅವರು ನಲ್ಗೊಂಡದಿಂದ ಸ್ಪರ್ಧಿಸಿ ಬಿಆರ್‌ಎಸ್‌ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. ಆದರೆ, 2019ರಲ್ಲಿ ಭುವನಗಿರಿಯಿಂದ ಸಂಸದರಾಗಿ ಆಯ್ಕೆಯಾದರು.

ತೆಲಂಗಾಣ ಸರ್ಕಾರದ ನೂತನ ಸಚಿವ ಸಂಪುಟ

ಪೊನ್ನಂ ಪ್ರಭಾಕರ್ (ಸಿದ್ದಿಪೇಟೆ ಜಿಲ್ಲೆ):

ತಮ್ಮ ಕಾಲೇಜು ದಿನಗಳಿಂದಲೂ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದ ಪ್ರಭಾಕರ್ 2009 ರಲ್ಲಿ ಕರೀಂನಗರದಿಂದ ಸಂಸದರಾಗಿ ಆಯ್ಕೆಯಾದರು. ಟಿಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಅವರು ಈ ಬಾರಿ ಹುಸ್ನಾಬಾದ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ದನ್ಸಾರಿ ಅನಸೂಯಾ (ಮುಲುಗು ಜಿಲ್ಲೆ)

ಜನಪ್ರಿಯವಾಗಿ ಸೀತಕ್ಕ ಎಂದು ಕರೆಯಲ್ಪಡುವ ದನ್ಸಾರಿ ಅನಸೂಯಾ ಅವರು ತಮ್ಮ 14ನೇ ವಯಸ್ಸಿನಲ್ಲಿ ನಕ್ಸಲ್ ಗುಂಪಿಗೆ ಸೇರಿದರು. 1997ರಲ್ಲಿ ನಕ್ಸಲ್ ಗುಂಪು ತೊರೆದು ಮುಖ್ಯವಾಹಿನಿಗೆ ಬಂದ ಅವರು ವಕೀಲರಾದರು. 2009 ರಲ್ಲಿ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯಾಗಿ ಮುಲುಗುನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆದರೆ, 2014ರಲ್ಲಿ ಅವರು ಬಿಆರ್‌ಎಸ್‌ನ ಅಜ್ಮೀರಾ ಚಂದುಲಾಲ್ ವಿರುದ್ಧ ಸೋತರು. ಮೂರು ವರ್ಷಗಳ ನಂತರ ಕಾಂಗ್ರೆಸ್ ಸೇರಿದ ಅವರು 2018ರ ಚುನಾವಣೆಯಲ್ಲಿ ಮತ್ತೆ ಶಾಸಕರಾದರು. ಮೂರನೇ ಬಾರಿಗೆ ಗೆದ್ದಿರುವ ಅವರು ಈಗ ಗಿರಿಜನ ಕಲ್ಯಾಣ ಸಚಿವರಾಗಿದ್ದಾರೆ.

ಸಿ. ದಾಮೋದರ ರಾಜ ನರಸಿಂಹ (ಸಂಗರೆಡ್ಡಿ ಜಿಲ್ಲೆ)

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಾಗಿರುವ ನರಸಿಂಹ ಅವರು 2011ರಿಂದ 2014 ರಲ್ಲಿ ರಾಜ್ಯ ವಿಭಜನೆಯ ತನಕ ಅವಿಭಜಿತ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದರು. ಆಂಧೋಲೆಯಿಂದ ಮೂರು ಬಾರಿ ಶಾಸಕರಾಗಿದ್ದ ಅವರು ಉನ್ನತ ಶಿಕ್ಷಣ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಡಿ. ಶ್ರೀಧರ್ ಬಾಬು (ಪೆದ್ದಪಲ್ಲಿ ಜಿಲ್ಲೆ)

ಮಂಥನಿಯಿಂದ ಐದು ಬಾರಿ ಶಾಸಕರಾಗಿದ್ದ ಶ್ರೀಧರ್ ಬಾಬು ಅವರು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು 1999, 2004, 2009, 2018 ಮತ್ತು 2023 ರಲ್ಲಿ ಮಂಥಣಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ.

ತುಮ್ಮಲ ನಾಗೇಶ್ವರ ರಾವ್ (ಖಮ್ಮಂ ಜಿಲ್ಲೆ)

ಮೂಲತಃ ತೆಲುಗು ದೇಶಂ ಪಕ್ಷದ ನಾಯಕರಾಗಿದ್ದ ನಾಗೇಶ್ವರ ರಾವ್, 1985, 1994 ಮತ್ತು 1999 ರಲ್ಲಿ ಸಾತುಪಲ್ಲಿಯಿಂದ ಗೆದ್ದಿದ್ದರು. 2009 ರಲ್ಲಿ ಖಮ್ಮಂ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾದ ಅವರು, 2014 ರಲ್ಲಿ ಸೋತರು. ನಂತರ ಬಿಆರ್‌ಎಸ್‌ ಸೇರಿದ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ, ಕೆ. ಚಂದ್ರಶೇಖರ ರಾವ್ ಅವರ ಸಂಪುಟದಲ್ಲಿ ರಸ್ತೆ ಮತ್ತು ಕಟ್ಟಡ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಚುನಾವಣೆಗೂ ಮೊದಲು ಬಿಆರ್‌ಎಸ್‌ ತೊರೆದು ಕಾಂಗ್ರೆಸ್ ಸೇರಿದ್ದರು.

ಅವಿಭಜಿತ ಆಂಧ್ರಪ್ರದೇಶದ ಹಿರಿಯ ನಾಯಕರಾಗಿರುವ ಅವರು, ಮೂರು ಜನ ಮುಖ್ಯಮಂತ್ರಿಗಳಾದ ಎನ್ ಟಿ ರಾಮರಾವ್, ಎನ್ ಚಂದ್ರಬಾಬು ನಾಯ್ಡು ಮತ್ತು ಕೆಸಿಆರ್ ಅವರೊಂದಿಗೆ ಕೆಲಸ ಮಾಡಿದ ಖ್ಯಾತಿ ಹೊಂದಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ಹಾಲಿ ಸಚಿವ ಪುವ್ವಾಡ ಅಜಯ್ ಕುಮಾರ್ ಅವರನ್ನು ಖಮ್ಮಂನಲ್ಲಿ ಸೋಲಿಸಿದ್ದಾರೆ.

ಪೊಂಗುಲೇಟಿ ಶ್ರೀನಿವಾಸ ರೆಡ್ಡಿ (ಖಮ್ಮಂ ಜಿಲ್ಲೆ)

2014ರ ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ಅವರು ವೈಎಸ್ಆರ್‌ಸಿಪಿ ಚಿನ್ಹೆಯಿಂದ ಖಮ್ಮಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ಆದರೆ, ನಂತರದ ದಿನಗಳಲ್ಲಿ ಬಿಆರ್‌ಎಸ್‌ ಸೇರಿದರು. ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. ಈ ವರ್ಷದ ಆರಂಭದಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಲಾಗಿತ್ತು. ಜುಲೈನಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದ ಅವರು, ಖಮ್ಮಂ ಜಿಲ್ಲೆಯ ಪಲೈರ್ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದಾರೆ.

ಕೊಂಡ ಸುರೇಖಾ (ವಾರಂಗಲ್ ಜಿಲ್ಲೆ)

ನಾಲ್ಕು ಬಾರಿ ಶಾಸಕಿಯಾಗಿರುವ ಸುರೇಖಾ ಅವರು ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 2009 ರಲ್ಲಿ ಅವರ ಮರಣದ ನಂತರ ಅವರು ರಾಜೀನಾಮೆ ನೀಡಿದರು. ನಂತರ, ಜಗನ್ ಮೋಹನ್ ರೆಡ್ಡಿ ನೇತೃತ್ವದ YSRCP ಸೇರಿದರು. ಆದರೆ, 2013 ರಲ್ಲಿ ರಾಜೀನಾಮೆ ನೀಡಿದರು. 2014 ರ ಚುನಾವಣೆಗೆ ಮುಂಚಿತವಾಗಿ ಸುರೇಖಾ ಬಿಆರ್‌ಎಸ್‌ ಸೇರಿದ್ದರು. ವಾರಂಗಲ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅವರಿಗೆ 2018 ರಲ್ಲಿ ಟಿಕೆಟ್ ನಿರಾಕರಿಸಲಾಯಿತು. ಬಿಆರ್‌ಎಸ್‌ಗೂ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಸೇರಿದರು. ಇದೀಗ ವಾರಂಗಲ್ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಚಿನ್ಹೆಯಡಿ ಗೆದ್ದಿದ್ದಾರೆ.

ಜೂಪಲ್ಲಿ ಕೃಷ್ಣರಾವ್ (ನಾಗರ ಕರ್ನೂಲ್ ಜಿಲ್ಲೆ)

ಕೊಲ್ಲಾಪುರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣರಾವ್, ವೈ ಎಸ್ ರಾಜಶೇಖರ್ ರೆಡ್ಡಿ ಮತ್ತು ಎನ್ ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2011ರಲ್ಲಿ ಕಾಂಗ್ರೆಸ್ ತೊರೆದು ಟಿಆರ್‌ಎಸ್‌ ಸೇರಿದ್ದರು. 1999ರ ನಂತರ 2018 ರಲ್ಲಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ವಿರುದ್ಧ ಸೋತರು. 2023ರ ಚುನಾವಣೆಗೆ ಮುಂಚಿತವಾಗಿ, ಅವರು ಬಿಆರ್‌ಎಸ್‌ ತೊರೆದು ಕಾಂಗ್ರೆಸ್‌ ಸೇರಿದರು, ಆ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...