Homeಮುಖಪುಟಪೆಟ್ರೋಲ್ ಕಂಪನಿ ಮುಖಸ್ಥ ಹವಾಮಾನ ಶೃಂಗಸಭೆ ಉಸ್ತುವಾರಿ: ಗೊಂದಲಗಳ ನಡುವೆ COP28

ಪೆಟ್ರೋಲ್ ಕಂಪನಿ ಮುಖಸ್ಥ ಹವಾಮಾನ ಶೃಂಗಸಭೆ ಉಸ್ತುವಾರಿ: ಗೊಂದಲಗಳ ನಡುವೆ COP28

- Advertisement -
- Advertisement -

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ನಗರದಲ್ಲಿ 28ನೇ ವಿಶ್ವ ಹವಾಮಾನ ಶೃಂಗಸಭೆ (COP28) ನಡೆಯುತ್ತಿದೆ. ನವೆಂಬರ್ 30ರಂದು ಪ್ರಾರಂಭಗೊಂಡ ಈ ಸಭೆ ಡಿಸೆಂಬರ್ 12ರವರೆಗೆ ಮುಂದುವರಿಯಲಿದೆ.

ವಿಶ್ವ ಸಂಸ್ಥೆಯ ಈ ಹವಾಮಾನ ಶೃಂಗಸಭೆ (COP)ಪ್ರತಿ ವರ್ಷವೂ ನಡೆಯುತ್ತದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ಸಂಪೂರ್ಣ ಸದಸ್ಯತ್ವದೊಂದಿಗೆ ಹವಾಮಾನ ಬದಲಾವಣೆಯ ಕುರಿತು ನಡೆಯುವ ವಿಶ್ವದ ಏಕೈಕ ಬಹುಪಕ್ಷೀಯ ನಿರ್ಧಾರ ವೇದಿಕೆ ಇದಾಗಿದೆ.

ಸರಳವಾಗಿ ಹೇಳುವುದಾದರೆ ಹವಾಮಾನ ಶೃಂಗಸಭೆ ಎಂಬುವುದು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಮಾವೇಶವಾಗಿದೆ. ಉದಾಹರಣೆಗೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದು, ದುರ್ಬಲ ಸಮುದಾಯಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುವುದು ಮತ್ತು 2050ರ ಹೊತ್ತಿಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವುದು.

ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ಕ್ಲೈಮೇಟ್ ಚೇಂಜ್ (UNFCCC)ಯ ಸದಸ್ಯ ರಾಷ್ಟ್ರಗಳು ಸೇರಿದಂತೆ 70,000 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬಾರಿಯ ಹವಾಮಾನ ಶೃಂಗಸಭೆ (COP28)ಗೆ ಹಾಜರಾಗುವ ನಿರೀಕ್ಷೆಯಿದೆ. ಉದ್ಯಮಿಗಳು, ಯುವಜನರು, ಹವಾಮಾನ ವಿಜ್ಞಾನಿಗಳು, ಸ್ಥಳೀಯ ಜನರು, ಪತ್ರಕರ್ತರು ಮತ್ತು ಇತರ ಹಲವಾರು ಕ್ಷೇತ್ರಗಳ ತಜ್ಞರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ವಿವಾದಕ್ಕೆ ಕಾರಣವಾದ ದುಬೈ ಶೃಂಗಸಭೆ :

ದುಬೈನಲ್ಲಿ ನಡೆಯುತ್ತಿರುವ ಈ ಬಾರಿಯ ಹವಾಮಾನ ಶೃಂಗಸಭೆ ಆರಂಭಕ್ಕೂ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು ಎಂದು ಬಿಬಿಸಿ ವರದಿ ಹೇಳಿದೆ. ಏಕೆಂದರೆ, ಯುಎಇ ವಿಶ್ವದ ಅಗ್ರ 10 ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸುಲ್ತಾನ್ ಅಲ್-ಜಾಬರ್, ಅವರನ್ನು ಹವಾಮಾನ ಶೃಂಗಸಭೆಯ ಉಸ್ತುವಾರಿಯಾಗಿ ನೇಮಿಸಿದೆ.

ತೈಲ- ಅನಿಲ ಮತ್ತು ಕಲ್ಲಿದ್ದಲು ಇವುಗಳು ಹವಾಮಾನ ಬದಲಾವಣೆಗೆ ಮುಖ್ಯ ಕಾರಣಗಳಾಗಿವೆ. ಇವುಗಳನ್ನು ಸುಟ್ಟಾಗ ಇಂಗಾಲದ ಡೈಆಕ್ಸೈಡ್‌ನಂತಹ ತಾಪಮಾನ ಹೆಚ್ಚಿಸುವ ಹಸಿರುಮನೆ ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಸುಲ್ತಾನ್ ಅಲ್-ಜಾಬರ್ ತೈಲ ಕಂಪನಿಯ ಮುಖ್ಯಸ್ಥರಾಗಿ ಅದನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. ಅಂತಹ ವ್ಯಕ್ತಿಯನ್ನು ಹವಾಮಾನ ಶೃಂಗಸಭೆಯ ಉಸ್ತುವಾರಿಯಾಗಿ ನೇಮಿಸಿದ್ದು ಕೆಲ ರಾಷ್ಟ್ರಗಳ ವಿರೋಧಕ್ಕೆ ಕಾರಣವಾಗಿದೆ.

ಇದಲ್ಲದೆ, ಶೃಂಗಸಭೆಯಲ್ಲಿ ಮಾತನಾಡಿದ್ದ ಸುಲ್ತಾನ್ ಅಲ್-ಜಾಬರ್, ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಸಾಂಪ್ರದಾಯಿಕ ಇಂಧನ ಬಳಕೆ ತಡೆಗಟ್ಟಬೇಕು ಎನ್ನಲು ಯಾವುದೇ ವಿಜ್ಞಾನದ ಉಲ್ಲೇಖಗಳಿಲ್ಲ ಎಂದಿದ್ದರು. ಇದಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

ಡಿಸೆಂಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ‘ಟ್ರಾನ್ಸ್‌ಫಾರ್ಮಿಂಗ್ ಕ್ಲೈಮೆಟ್ ಫೈನಾನ್ಸ್’ ಕುರಿತ ಅಧಿವೇಶನದಲ್ಲಿ ಮಾತನಾಡಿದ ಮೋದಿ, ವಿಶ್ವದ ಅಭಿವೃದ್ದಿ ಹೊಂದಿದ ರಾಷ್ಟ್ರಗಳು 2050ಕ್ಕಿಂತ ಮೊದಲು ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಬಡ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆ ತಡೆಗಟ್ಟುವ ಗುರಿಗಳನ್ನು ಸಾಧಿಸಲು ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಹೇಳಿದ್ದಾರೆ.

ಹವಾಮಾನ ಶೃಂಗಸಭೆಯಲ್ಲಿ ನಡೆಯುವ ಚರ್ಚೆಗಳೇನು?

ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದ ಪ್ರಮುಖ ಅಂಶಗಳ ಕುರಿತು ಕಳೆದ ಕೆಲವು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಈ ಬಾರಿಯ ಶೃಂಗಸಭೆಯಲ್ಲಿ ಒಪ್ಪಂದವನ್ನು ಕಾರ್ಯಗತಗೊಳಿಸುವ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಯಲಿದೆ. ಹವಾಮಾನ ಬದಲಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ನಾವಿದ್ದೇವೆ ಎಂದು ವಿಶ್ವಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

ಹವಾಮಾನ ಬದಲಾವಣೆಯ ವಿಶ್ವಸಂಸ್ಥೆಯ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್‌ನ ಇತ್ತೀಚಿನ ಸಮೀಕ್ಷೆಯು 2019ಕ್ಕೆ ಹೋಲಿಸಿದರೆ 2030 ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 43% ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದೆ. ಈ ಶತಮಾನದ ಅಂತ್ಯದ ವೇಳೆಗೆ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದು ಮತ್ತು ಆಗಾಗ ಉಂಟಾಗುವ ತೀವ್ರ ಬರ, ಶಾಖದ ಅಲೆಗಳು ಮತ್ತು ಮಳೆ ಸೇರಿದಂತೆ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ತಪ್ಪಿಸುವ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ.

ಶೃಂಗಸಭೆಯಲ್ಲಿ ನಡೆಯುವ ಸಭೆಗಳು ಯಾವುವು?

ಹವಾಮಾನ ಶೃಂಗಸಭೆ ಪ್ಯಾರಿಸ್ ಒಪ್ಪಂದ ಮತ್ತು ಕ್ಯೋಟೋ ಶಿಷ್ಟಾಚಾರದ ನಿರ್ಧಾರ ತೆಗೆದುಕೊಳ್ಳುವ ಮೂರು ಸಂಸ್ಥೆಗಳ ವಾರ್ಷಿಕ ಸಭೆಗಳನ್ನು ಒಳಗೊಂಡಿದೆ. ಈ ಸಭೆಗಳಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹವಾಮಾನ ಸಂಬಂಧಿತ ಕಾರ್ಯಸೂಚಿಯ ವಿಷಯಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇದಲ್ಲದೆ ಯುಎನ್‌ಎಫ್‌ಸಿಸಿಸಿ ಅಂಗ ಸಂಸ್ಥೆಗಳ ವಾರ್ಷಿಕ ಸಭೆಗಳೂ ನಡೆಯಲಿವೆ.

ಇದನ್ನೂ ಓದಿ : ಕೇಶವಾನಂದ ಭಾರತಿ ತೀರ್ಪು 10 ಭಾಷೆಗಳಲ್ಲಿ ಲಭ್ಯ: ಸಿಜೆಐ ಡಿವೈ ಚಂದ್ರಚೂಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...