HomeUncategorizedಎಷ್ಟೇ ಕಷ್ಟ ಎದುರಾದರೂ ಅಧಿಕಾರಕ್ಕೆ ಸತ್ಯ ಹೇಳಲು ಹಿಂಜರಿಯದವರು - ಡಾ.ರಾಜೇಂದ್ರ ಚೆನ್ನಿ

ಎಷ್ಟೇ ಕಷ್ಟ ಎದುರಾದರೂ ಅಧಿಕಾರಕ್ಕೆ ಸತ್ಯ ಹೇಳಲು ಹಿಂಜರಿಯದವರು – ಡಾ.ರಾಜೇಂದ್ರ ಚೆನ್ನಿ

‌‌Face book ಎನ್ನುವುದು ‌‌Fake book ಎಂದು ಸಾಬೀತಾಗಿದೆ. ಅಂದರೆ ಅಗಾಧವಾದ ತಂತ್ರಜ್ಞಾನದ ಶಕ್ತಿ ಹಾಗೂ ಅಷ್ಟೇ ಅಗಾಧವಾದ ಬಳಕೆದಾರ ಸಂಖ್ಯಾಬಲವನ್ನುಳ್ಳ ಸಾಮಾಜಿಕ ಮಾಧ್ಯಮಗಳ ಒಡೆಯರು ನಾಗರಿಕರಿಗೆ ಸುಳ್ಳನ್ನೇ ಬಡಿಸುತ್ತಾ ಪ್ರಭುತ್ವದ ಅಡಿಯಾಳಾಗಿವೆ.

- Advertisement -
- Advertisement -

ಒಂದು ಸಿನಿಕತನದ ಆದರೆ ಸತ್ಯವಾಗಿರುವ ಮಾತಿದೆ. ‘ಇನ್ನೆಲ್ಲರಿಗಿಂತ ಪ್ರಭುತ್ವಗಳು ಪುಸ್ತಕಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತವೆ’ ಎಂಬ ಮಾತು. ವಿಶೇಷವಾಗಿ “ಸರ್ವಾಧಿಕಾರಿ ಪ್ರಭುತ್ವಗಳು”. ಚರಿತ್ರೆಯಲ್ಲಿ ಸಾಹಿತ್ಯಿಕ ಹಾಗೂ ಇತರ ಬರಹಗಳ ಮೇಲೆ ತೀವ್ರವಾದ ಆಕ್ರಮಣವು ಬಂದಿದ್ದು ಅಧಿಕಾರದ ಪ್ರಮುಖ ಕೇಂದ್ರಗಳಾದ ಧರ್ಮ ಹಾಗೂ ರಾಜಕೀಯದಿಂದ. ರೋಮನ್ ಕ್ಯಾಥೋಲಿಕ್ ಚರ್ಚ್‌ನ ವ್ಯಾಟಿಕನ್‌ನಿಂದ ಧರ್ಮ ವಿರೋಧಿ ಕೃತಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತಿತ್ತು ಹಾಗೂ ಇದಕ್ಕೆ anathema ಎಂದು ಕರೆಯಲಾಗುತ್ತಿತ್ತು. ಸರಳವಾಗಿ ಹೇಳುವುದಾದರೆ ಇದು Censorshipನ ಪ್ರಬಲವಾದ ಅಸ್ತ್ರವಾಗಿತ್ತು. ಆದರೆ ಕರ್ಮಠ ಸಂಪ್ರದಾಯವಾದಿಯಾಗಿದ್ದು ವೈಚಾರಿಕತೆಯನ್ನು ವಿರೋಧಿಸುತ್ತಲೆ ಬಂದಿದ್ದ ಚರ್ಚ್ನ ಕಣ್ಣಿಗೆ ಎಲ್ಲಾ ಸೃಜನಶೀಲ ಚಿಂತನೆ, ವೈಚಾರಿಕ ಸ್ವಾತಂತ್ಯ್ರ ಗಳ ಚಿಂತನೆಯಿಂದ ಕೂಡಿದ್ದ ಕೃತಿಗಳು ದುಷ್ಟಕೃತಿಗಳಾಗಿಯೇ ಕಂಡವು. ಹೀಗಾಗಿ ಮುಂದಿನ ಕಾಲದಲ್ಲಿ ಜಗತ್ತಿನ ಶ್ರೇಷ್ಠ ಕೃತಿಗಳ ಪಟ್ಟಿ ಯಾವುದು ಎಂದರೆ ಚರ್ಚ್ನಿಂದ ಬಹಿಷ್ಕೃತವಾದ ಕೃತಿಗಳ ಪಟ್ಟಿಯೇ ಎಂದು ಬಲ್ಲವರು ಹೇಳತೊಡಗಿದರು! 15-16ನೇ ಶತಮಾನಗಳ ಮೊದಲು ಚರ್ಚು ಎಲ್ಲಾ ರಾಜಕೀಯ ರಾಜ್ಯ ಪ್ರಭುತ್ವಗಳನ್ನು ಮೀರಿದ ಅಧಿಕಾರವನ್ನು ಹೊಂದಿತ್ತು. ಹೀಗಾಗಿ ಸಂಪ್ರದಾಯದಿಂದ ಭಿನ್ನವಾಗಿ ಚಿಂತಿಸುವವರನ್ನು ಪಾಷಂಡಿಗಳೆಂದು (heretics) ಕರೆದು ಅವರಿಗೆ ಉಗ್ರವಾದ, ಬಹುಪಾಲು ಸಾವಿನ, ಶಿಕ್ಷೆಯನ್ನು ನೀಡಲಾಗುತ್ತಿತ್ತು.

ಇದಕ್ಕೆ ಮುಖ್ಯ ಕಾರಣವೆಂದರೆ ಮಧ್ಯಯುಗದ ಆರಂಭ ಕಾಲದಿಂದಲೇ ಚರ್ಚು ಅತ್ಯಂತ ಭ್ರಷ್ಟವಾಗಿತ್ತು. ರೈತರು ಬೆಳೆದ ಬೆಳೆಯ, ಸಾಕಿದ ಪ್ರಾಣಿಗಳ 1/10 ರಷ್ಟು ಪಾಲನ್ನು ಚರ್ಚಿಗೆ ಕೊಡಬೇಕಾಗುತ್ತಿತ್ತು. ಇದರ ವಿರುದ್ಧ ರೈತರು, ಬಡವರು ಬಂಡೇಳುತ್ತಿದ್ದರು. ಇವರ ಬೆಂಬಲಕ್ಕೆ ಬಂದವರು ಸ್ವತಂತ್ರ ಚಿಂತನೆಯ ತಾತ್ವಿಕರು ಹಾಗೂ ಬರಹಗಾರರಾಗಿದ್ದರು. ಅವರ ಮೇಲೆ, ಅವರ ಬರಹಗಳ ಮೇಲೆ ಉಗ್ರವಾದ ಆಕ್ರಮಣವನ್ನು ಚರ್ಚು ಮಾಡುತ್ತಿತ್ತು. ಅಲ್ಲದೆ ಸಾಕ್ಷರತೆ ಮತ್ತು ಶಿಕ್ಷಣದ ಮೇಲೆ ತನ್ನ ಪ್ರಬಲ ಹಿಡಿತವನ್ನು ಇಟ್ಟುಕೊಂಡಿದ್ದು, ಜನರ ಭಾಷೆಯಲ್ಲಿ ಬೈಬಲ್ ಅನುವಾದ ಮಾಡಿದ ಪ್ರತಿಯೊಬ್ಬರಿಗೆ ದೇಶಭ್ರಷ್ಟತೆ, ಸೆರೆಮನೆವಾಸ ಮತ್ತು ಬಹುಪಾಲು ಸಾವಿನ ಶಿಕ್ಷೆಯೇ ಗತಿ ಆಯಿತು. ಯೂರೋಪಿನ ಚರಿತ್ರೆಯು ಬದಲಾಗುತ್ತ ಧರ್ಮದ ಅಧಿಕಾರವನ್ನು ಲೌಕಿಕ ಪ್ರಭುತ್ವಗಳು ಹಂಚಿಕೊಳ್ಳತೊಡಗಿದವು. ವಿಶೇಷವೆಂದರೆ ರಾಜಸತ್ತೆಗಳು ಮುಗಿದು ಶತಮಾನಗಳೇ ಆಗಿದ್ದರೂ ಸಾಂಸ್ಥಿಕ ಧರ್ಮವು ಈಗಲೂ ವೈಚಾರಿಕವಾದ, ಪ್ರತಿರೋಧದ ಗುಣವುಳ್ಳ ಕೃತಿಗಳನ್ನು ಬಲಿ ಹಾಕುತ್ತಲೇ ಇದೆ.

ಚರಿತ್ರೆಯ ಸತ್ಯವೆಂದರೆ ಜೀವಂತಿಕೆ ಇರುವ ಕೃತಿಗಳು ಅಧಿಕಾರದ ಮೂಲವನ್ನೆ ಪ್ರಶ್ನಿಸುತ್ತವೆ. ಸಂಪ್ರದಾಯದ ಹೆಸರಿನಲ್ಲಿ ಸಂಪೂರ್ಣ ವಿಧೇಯತೆಯನ್ನು, ಬೌದ್ಧಿಕ ಹಾಗೂ ಮಾನಸಿಕ ಗುಲಾಮಗಿರಿಯನ್ನೇ ನಿರೀಕ್ಷಿಸುವ ಅಧಿಕಾರದ ಸಂಸ್ಥೆಗಳಿಗೆ ಪ್ರಶ್ನಿಸುವುದು, ವಿಮರ್ಶಿಸುವುದು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು – ಇವೆಲ್ಲವು ಅಭದ್ರತೆಯನ್ನು ಹುಟ್ಟಿಸುತ್ತವೆ. ತನ್ನ ವಿನಾಶದ ಭೀತಿಯನ್ನು ಹುಟ್ಟಿಸುತ್ತವೆ.

ಅಧಿಕಾರ ಕೇಂದ್ರಗಳು ಬಯಸುವುದು ನಿಶ್ಚಲವಾದ, ಜಡವಾದ, ಶಾಶ್ವತವಾದ ಸ್ಥಾವರ ಸ್ಥಿತಿಯನ್ನು. ಒಂದು ಇಟ್ಟಿಗೆ ಸಡಿಲವಾದರೆ ಇಡೀ ಇಮಾರತು ಬೀಳುತ್ತದೆಯೆನ್ನುವ ಭಯವಿದು. ಇದಕ್ಕೆ ವಿರುದ್ಧವಾಗಿ ಬರಹವೆಂದರೇ ಜೀವಂತಿಕೆ, ಚಲನೆ, ವಿರೋಧಾಭಾಸಗಳ ಬಗ್ಗೆ ಸಹನೆ, ಬಹುಮುಖಿಯಾದ ವಿಚಾರಗಳು ಹಾಗೂ ನಡೆಗಳ ಬಗ್ಗೆ ಇರುವ ಗಾಢವಾದ ನಂಬಿಕೆ. ಇಲ್ಲದಿದ್ದರೆ ಕ್ರಿಸ್ತಪೂರ್ವ 5ನೇ ಶತಮಾನದ ಒಂದು ಸಣ್ಣ ನಗರ ರಾಜ್ಯದಲ್ಲಿ ಬೀದಿಯಲ್ಲಿ ಜನರ ಜೊತೆಗೆ ಹರಟೆ ಹೊಡೆಯುತ್ತಿದ್ದ ಸಾಕ್ರೇಟಿಸ್‌ನನ್ನು ವಿಷ ನೀಡಿ ಕೊಲ್ಲುವ ಅವಶ್ಯಕತೆ ಇರಲಿಲ್ಲ.

ಅಂದಿನ ಪ್ರಭುತ್ವವು ಸರಿಯಾಗಿ ಗುರುತಿಸಿದಂತೆ ಅವನು ವಿಶೇಷವಾಗಿ ಯುವಕರಿಗೆ ಒಂದು ಭಯಾನಕ ಅಸ್ತ್ರವನ್ನು ಕೊಟ್ಟಿದ್ದ. ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಬೇಡಿ ಎನ್ನುವ ಅಸ್ತ್ರ. ಈಗಲೂ 2020ರಲ್ಲಿ ಕಾಶ್ಮೀರದ ಬಗ್ಗೆ, CAA ಬಗ್ಗೆ, ಕಾನೂನು ತಿದ್ದುಪಡಿಗಳ ಬಗ್ಗೆ ಎಲ್ಲಿ ಈ ಅಸ್ತ್ರವು ಬಳಕೆಯಾಗುತ್ತದೆಯೆನ್ನುವ ಆತಂಕವು ಪ್ರಭುತ್ವಕ್ಕಿದೆ. ಹೀಗಾಗಿ ಕೊರೊನಾ ಪಿಡುಗು ದೇವರೇ ಕೊಟ್ಟ ವರವೆಂದುಕೊಂಡು ಬರಹಗಾರರನ್ನು, ಕ್ರಿಯಾಶೀಲರನ್ನು, ವಿದ್ವಾಂಸರನ್ನು, ವಿದ್ಯಾರ್ಥಿಗಳನ್ನು ವಿನಾಕಾರಣ ಜೈಲಿಗೆ ಹಾಕಿ ಹಿಂಸೆಕೊಡುತ್ತಿದೆ. ಅಧಿಕಾರವು ಬಳಸುವ ಅಸ್ತ್ರವೆಂದರೆ ಎಲ್ಲಾ ಪ್ರತಿರೋಧವನ್ನು ಅಪರಾಧ ಹಾಗೂ ದ್ರೋಹವೆಂದು ಬಿಂಬಿಸುವುದು. ಅಷ್ಟೇ ಮುಖ್ಯಅಸ್ತ್ರವೆಂದರೆ ತನ್ನ ಶಿಕ್ಷಾಕ್ರಮಗಳನ್ನು Spectacleಗಳನ್ನಾಗಿ ಮಾಡುವುದು.

ನೀವು ಗಮನಿಸಿರಬಹುದು; ರಾತ್ರೋರಾತ್ರಿ ಮನೆಗಳ ಮೇಲೆ ದಾಳಿ; ಅಲ್ಲಿ ಸಿಕ್ಕಿದೆಯೆನ್ನುವ ಕ್ರಿಮಿನಲ್ ದಾಖಲೆಗಳ ಪ್ರದರ್ಶನ. ಕೆಲವೇ ಗಂಟೆಗಳಲ್ಲಿ ಉಗ್ರವಾದಿಗಳ ಜೊತೆಗಿನ ಸಂಪರ್ಕದ ಮಾಹಿತಿ. ಈ Spectacleಗೆ ಕಾರಣವೆಂದರೆ ಪ್ರಭುತ್ವದ ಪರವಾಗಿ ಪ್ರಜೆಗಳಿಗೆ ಸಂದೇಶವನ್ನು ರವಾನೆ ಮಾಡುವುದು. ಹಿಂದಿನ ಕಾಲದಲ್ಲಿ ಧರ್ಮದ ವಿರುದ್ಧ, ಪ್ರಭುವಿನ ವಿರುದ್ಧ ಎನ್ನುವ ಆರೋಪ ಈಗ ದೇಶದ ವಿರುದ್ಧ ಎಂದಾಗಿದೆ. ಇದು ಬಿಟ್ಟರೆ ವರ್ತಮಾನವು ಇತಿಹಾಸವೇ ಮರುಕಳಿಸಿದಂತಿದೆ.

ರಶಿಯಾದ ಮಹಾನ್ ಬರಹಗಾರ ದಸ್ತಯೋವಸ್ಕಿ ಒಂದು ಸಣ್ಣ ಪ್ರಗತಿಪರ ಗುಂಪಿಗೆ ಸೇರಿದ್ದರಿಂದ ಅವನನ್ನು ಬಂಧಿಸಿ ಸಾವಿನ ಶಿಕ್ಷೆಯನ್ನು ಘೋಷಿಸಿ, ವದಾಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿ, ಕೊನೆಯ ಕ್ಷಣದಲ್ಲಿ ಸಾವಿನ ಶಿಕ್ಷೆ ಮನ್ನಾ ಮಾಡಿದ ಆದೇಶವನ್ನು ಓದಲಾಯಿತು. ಈ ಭೀಕರವಾದ Spectacle ಪ್ರಭುತ್ವಕ್ಕೆ ಏಕೆ ಬೇಕಿತ್ತು ಎಂದು ಕೇಳಿದರೆ ಕೋವಿಡ್ ಸೋಂಕು ತಗುಲಿರುವ 82 ವಯಸ್ಸಿನ ವರವರರಾವ್ ಅವರನ್ನು, ನೆಲದ ಮೇಲೆ ತೆವಳಲೂ ಆಗದ ಸಾಯಿಬಾಬಾ ಅವರನ್ನು ಬೇಲ್ ಕೊಡದಂತೆ ಇಡುವುದರ ಕಾರಣ ಗೊತ್ತಾಗುತ್ತದೆ. ಕೀನ್ಯಾದ ಬರಹಗಾರ ನುಗೂಗಿ ವಾ ಥಿಯಾಂಗ್ ಓ ತನ್ನ ಬುಡಕಟ್ಟಿನ ಗಿಕಿಯು ಭಾಷೆಯಲ್ಲಿ ನಾಟಕವನ್ನು ಬರೆದರೆ ಅವನ ಜನರದೇ ಪ್ರಭುತ್ವಕ್ಕೆ ಶತ್ರುವಾಗಿ ಕಾಣುತ್ತಾನೆ. ಪರಿಣಾಮ ಜೈಲುವಾಸ, ದೇಶ ಭ್ರಷ್ಟತೆ, ಎರಡು ದಶಕಗಳ ನಂತರ ಬಿಡುಗಡೆಯಾಗಿ ಬಂದರೆ ಹೆಂಡತಿಯ ಮೇಲೆ ಅತ್ಯಾಚಾರವಾಗಿತ್ತು. ಚಿಲಿ ದೇಶದ ಜನ ಬೆಂಬಲಿತ ಅಯೆಂಡೆಯನ್ನು ಕೊಲೆಮಾಡಿ ಅಧಿಕಾರಕ್ಕೆ ಬಂದ ಪಿನೋಶೆಯ ಸರ್ವಾಧಿಕಾರಿ ಪ್ರಭುತ್ವದಿಂದ ಪ್ರಾಣ ಉಳಿಸಿಕೊಳ್ಳಲು ಅಯೆಂಡೆಯ ಸಂಬಂಧಿಕಳಾದ ಶ್ರೇಷ್ಠ ಕಾದಂಬರಿಕಾರ್ತಿ ಇಸಾಬೆಲ್ ಅಯೆಂಡೇ ದೇಶಭ್ರಷ್ಟಳಾಗಬೇಕಾಯಿತು. ಚೀನಾದ ಸರ್ವಾಧಿಕಾರಿ ಪ್ರಭುತ್ವವು ಹೇಗೆ ಬದಲಾಗಬೇಕು ಎಂದು ಒಂದು ಪ್ರಣಾಳಿಕೆಯನ್ನು ಬರೆದಿದ್ದ Xiaobo ನಿಗೆ ಸೆರೆಮನೆವಾಸ; ಅಲ್ಲಿಯೇ ಸಾವು. ಈಜಿಪ್ಟ್, ಸಿರಿಯಾ, ಇಸ್ರೇಲ್, ಟರ್ಕಿ ಹೀಗೆ ಎಲ್ಲಾ ದೇಶಗಳಲ್ಲಿ ಬರಹಗಾರರು ಜೈಲಿನಲ್ಲಿದ್ದಾರೆ. ಕೆಲವರು ನಾಪತ್ತೆಯಾಗಿದ್ದಾರೆ. ಇವರೆಲ್ಲರ ಅಪರಾಧವೆಂದರೆ ಅವರು ಬರೆದದ್ದು ಪ್ರಭುತ್ವಕ್ಕೆ ಒಪ್ಪಿಗೆಯಾಗಲಿಲ್ಲ. ಅವರಿಗೆ ಕೊಡಲಾಗುತ್ತಿರುವ ಚಿತ್ರಹಿಂಸೆ ಭಾಷೆಯ ಅಳವಿಗೆ ಬರುವಂಥದಲ್ಲ.

ಗೂಗಿ ವಾ ಥಿಯಾಂಗ್

ಒಂದು ರೀತಿಯಲ್ಲಿ ಇದು ತೀರಾ ಅಸಂಗತ. ಇಂದಿನ ಜಗತ್ತಿನಲ್ಲಿಯೇ ಅತಿಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವ ಭಾರತ ದೇಶದ ಪ್ರಭುತ್ವವು 82 ವರ್ಷದ ಅನಾರೋಗ್ಯ, ವೃದ್ಧಾಪ್ಯದಿಂದ ಬಳಲುವ ಕವಿಯೊಬ್ಬನ ನಡುಗುವ ಕೈಯಲ್ಲಿನ ಲೇಖನಿಗೆ ಹೆದರಿ ಇಡೀ ನ್ಯಾಯಾಂಗವನ್ನೇ ದಾರಿತಪ್ಪಿಸಿ ಪ್ರಬಲವಾದ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ! ಬಡತನದಿಂದ ಹಣ್ಣಾದ ಶಾಹೀನ್ ಬಾಗ್‌ನ ಅನಕ್ಷರಸ್ಥ ಮುದುಕಿಯರಿಗೆ ಪ್ರಭುತ್ವ ಏಕೆ ಹೆದರುತ್ತದೆ! ಈ ಅಭದ್ರತೆ ಹಾಗೂ ಭೀತಿಯಿಂದಾಗಿಯೇ ಅದು ಹೆಚ್ಚು ಕ್ರೂರವಾದ, ಅಮಾನುಷವಾದ ಕ್ರಮಗಳನ್ನು ಬಳಸತೊಡಗುತ್ತದೆ.

ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ನನಗೆ ಯಾವಾಗಲೂ ನೆನಪಾಗುವುದು ಚಿನುವಾ ‘Anthills of Savanna’ ಕಾದಂಬರಿಯಲ್ಲಿ ಸರ್ವಾಧಿಕಾರಿ ಸ್ಯಾಮ್‌ನ ವಿರುದ್ಧ ಬರೆದು ಮಾತನಾಡತೊಡಗುವ ಕವಿಯ ಬಗ್ಗೆ ಬುಡಕಟ್ಟಿನ ಹಿರಿಯನೊಬ್ಬನು ಹೇಳುವ ಮಾತು. “ಇವನನ್ನು ರಕ್ಷಿಸಬೇಕು, ಇವನು ಕವಿ, ಕತೆಗಾರ, ಅವನು ಸತ್ಯವನ್ನು ಹೇಳುತ್ತಾನೆ”. ಈ ಕಾರಣಕ್ಕಾಗಿಯೇ ಸ್ಯಾಮ್‌ನ ಪ್ರಭುತ್ವವು ಅವನನ್ನು ಕೊಲ್ಲುತ್ತದೆ.

ಎರಡು ಬಹುದೊಡ್ಡ ಆತಂಕಗಳು, ಬರಹಗಾರರ ವಿರುದ್ಧ, ವೈಚಾರಿಕತೆ ವಿರುದ್ಧ ಅತ್ಯಂತ ಉಗ್ರ ಹಾಗೂ ದಮನಕಾರಿ ನೀತಿಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿವೆ. ಒಂದು ಕಾಲಕ್ಕೆ ವಸಾಹತುಗಳಾಗಿದ್ದು ಈಗ ಸ್ವತಂತ್ರವಾಗಿರುವ ರಾಷ್ಟ್ರಗಳೇ, ಪ್ರಬಲ ಜನಪರವಾದ ಹೋರಾಟಗಳ ಮೂಲಕ ಸ್ವಾತಂತ್ರ, ಪ್ರಜಾಪ್ರಭುತ್ವಗಳನ್ನು ಪಡೆದ ಈ ರಾಷ್ಟ್ರಗಳೇ ಮಿಲಿಟರಿ ಸರ್ವಾಧಿಕಾರ, ಫ್ಯಾಸಿಸ್ಟ್ ಪ್ರಭುತ್ವ, ಜನವಿರೋಧಿ ಹಿಂಸಾಪ್ರಭುತ್ವಗಳನ್ನು ಆಯ್ದುಕೊಂಡಿವೆ. ಎರಡನೆಯದು, ಪ್ರಭುಗಳಿಗಿಂತ ಪ್ರಜೆಗಳೇ ಮನುಷ್ಯ ಸ್ವಾತಂತ್ಯ್ರಗಳ ವಿರೋಧಿಗಳಾಗುತ್ತಿರುವುದು. ಆದ್ದರಿಂದ ಈವರೆಗೆ ಬರಹಕ್ಕಿದ್ದ ಪ್ರತಿರೋಧದ ಶಕ್ತಿ ಇನ್ನು ಮೇಲೆ ಇರಲಾರದೆ? ಬರಹದ ಸತ್ವ, ಸಂಕೀರ್ಣತೆಗಳ ಬದಲು ಮಾಧ್ಯಮಗಳ ಭಾಷಾ ಕೋಲಾಹಲವೇ, ಶಬ್ದಮಾಲಿನ್ಯವೇ ಪ್ರಿಯವಾಗಿಬಿಡಬಹುದೆ? ಉತ್ತರವು ಸರಳವಾಗಿಲ್ಲ.

ಇತ್ತೀಚೆಗೆ ಪ್ರಶಾಂತ್ ಭೂಷಣ್ ಅವರ ಮೇಲೆ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಲಯ ನಿಂದನೆಯ ಪ್ರಕರಣವನ್ನು ಎತ್ತಿಕೊಂಡು ಅವರ ಅಪರಾಧವು ಸಾಬೀತಾಗಿದೆಯೆಂದು ಹೇಳಿದೆ. ಇನ್ನು ಉಳಿದಿರುವುದು ಶಿಕ್ಷೆಯ ಪ್ರಮಾಣದ ಬಗ್ಗೆ ನಿರ್ಣಯ ಮಾತ್ರ. ಈ ಸಂದರ್ಭದಲ್ಲಿ ಭಾರತದ ಹಲವಾರು ವಿದ್ವಾಂಸರು, ನಿವೃತ್ತ ನ್ಯಾಯಾಧೀಶರು ಬರೆದ ಲೇಖನಗಳು ನಮ್ಮ ಸಂಧಿಗ್ಧಗಳ ಈ ಕಾಲದ ಅತ್ಯುತ್ತಮ ಬರಹಗಳು. ಅಂಥ ಒಂದು ಲೇಖನದಲ್ಲಿ ನೋಮ್ ಚಾಯ್‌ಸ್ಕಿಯ ಒಂದು ಮಾತಿನ ಉಲ್ಲೇಖವಿದೆ. ಇದುವರೆಗೆ ಬರಹ ಹಾಗೂ ಪ್ರಭುತ್ವದ ಬಗ್ಗೆ ಅತ್ಯಂತ ಪ್ರಸಿದ್ಧವಾದ ಹೇಳಿಕೆಯೆಂದರೆ “Telling truth to power” ಅಂದರೆ ಅಧಿಕಾರಕ್ಕೆ ಸತ್ಯವನ್ನೇ ಹೇಳುವುದು. ಇದು ಸಾಹಿತ್ಯದ ಶಕ್ತಿಯೆಂದು ಹೇಳಲಾಗಿತ್ತು. ಆದರೆ ಚಾಯ್‌ಸ್ಕಿಯವರ ವಾದವೆಂದರೆ ಇಂದಿನ ಸ್ಥಿತಿಯಲ್ಲಿ ಅಧಿಕಾರಕ್ಕೆ ಸತ್ಯವನ್ನು ಹೇಳಿ ಪ್ರಯೋಜನವಿಲ್ಲ, ಏಕೆಂದರೆ ಅಧಿಕಾರಕ್ಕೆ ಸತ್ಯವು ಗೊತ್ತಿದೆ. ಗೊತ್ತಿರುವುದರಿಂದಲೇ ಸತ್ಯ ಹೇಳುವವರನ್ನು ಅದು ಮುಗಿಸಿಹಾಕುತ್ತಿದೆ ಮತ್ತು “ಪರ್ಯಾಯ ಸತ್ಯಗಳನ್ನು” ಅಂದರೆ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಈ ಲೇಖನವನ್ನು ಬರೆಯುತ್ತಿರುವಾಗ  ‌‌Face book ಎನ್ನುವುದು ‌‌Fake book ಎಂದು ಸಾಬೀತಾಗಿದೆ. ಅಂದರೆ ಅಗಾಧವಾದ ತಂತ್ರಜ್ಞಾನದ ಶಕ್ತಿ ಹಾಗೂ ಅಷ್ಟೇ ಅಗಾಧವಾದ ಬಳಕೆದಾರ ಸಂಖ್ಯಾಬಲವನ್ನುಳ್ಳ ಸಾಮಾಜಿಕ ಮಾಧ್ಯಮಗಳ ಒಡೆಯರು ನಾಗರಿಕರಿಗೆ ಸುಳ್ಳನ್ನೇ ಬಡಿಸುತ್ತಾ ಪ್ರಭುತ್ವದ ಅಡಿಯಾಳಾಗಿವೆ. ಪ್ರಶ್ನೆಯೆಂದರೆ ಸಾಕ್ಷರತೆ, ಮುದ್ರಣ ತಂತ್ರಜ್ಞಾನ ಇವು ಯಾವುದೂ ಇಲ್ಲದ ಪ್ರಾಚೀನ ಕಾಲದಲ್ಲಿ ಪ್ರಭುತ್ವಗಳು, ಧಾರ್ಮಿಕ ಸಂಸ್ಥೆಗಳು ಬರಹವನ್ನು ಗಂಭೀರವಾಗಿ ಪರಿಗಣಿಸಿದವು. ಏಕೆಂದರೆ ಬರಹಕ್ಕೆ ಅಂಥ ಅಧಿಕೃತತೆಯಿತ್ತು. ಈಗ ಎಲ್ಲರೂ ಓದುವುದಲ್ಲ; ಎಲ್ಲರೂ ಬರೆಯುತ್ತಾರೆ – ‌‌Face book ನಲ್ಲಿ. ನನ್ನ ಅಂದಾಜಿನಲ್ಲಿ ಮನುಷ್ಯ ಚರಿತ್ರೆಯಲ್ಲಿ ಈ ಪ್ರಮಾಣದ ಬರಹವು ಎಂದೂ ಇರಲಿಲ್ಲ. ಈ “ಬರಹ”ದ ತಿಂತಿಣಿಯಲ್ಲಿ ಸಾಹಿತ್ಯಕ್ಕೆ ಕಾಲಿಡಲು ಜಾಗವೆಲ್ಲಿದೆ? ಈವರೆಗೆ ಬರಹಕ್ಕೆ ಜವಾಬ್ದಾರಿ (accountability) ಇರುತ್ತಿತ್ತು. ಈಗಿನ ಪರಿಸ್ಥಿತಿ ಅಸಂಗತವಾಗಿದೆ. ನೀವು ಪ್ರಭುತ್ವದ ಪರವಾಗಿ ಏನನ್ನೇ ಬರೆದರೂ ಜವಾಬ್ದಾರರಲ್ಲ. ಉದಾಹರಣೆಗೆ ದಲಿತ ಕವಿಯತ್ರಿ ಮೀನಾ ಕಂದಸ್ವಾಮಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಗೋಮಾಂಸವೂ ಸೇರಿದ ‌‌food festival ಆಚರಿಸುವುದರ ಪರವಾಗಿ ಬರೆದಿದ್ದರಿಂದ ಅವಳನ್ನು ಟೆಲಿವಿಷನ್‌ನ ಎದುರಿಗೇ ಮಾನಭಂಗ ಮಾಡಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆಯಲಾಯಿತು. ಅದ್ಭುತ ಕವಿಯಾದ ಅವರನ್ನು ‘ಹಡಬಿಟ್ಟಿ ಸೂಳೆ’ಯೆಂದು ಕರೆಯಲಾಯಿತು. ಏನೂ ಆಗಲಿಲ್ಲ. ಆದರೆ ನಿನ್ನೆ ಅಯೋಧ್ಯೆಯ ಸಮಾರಂಭದ ಬಗ್ಗೆ ಟೀಕೆ ಮಾಡಿದ ಸ್ವರಾ ಭಾಸ್ಕರ್ ಅವರ ಮೇಲೆ ದೇಶದ್ರೋಹದ ಆಪಾದನೆ ಮಾಡಲಾಗಿದೆ. ಈ ವಾರದಲ್ಲಿ ಅತ್ಯಂತ ತುರ್ತಾಗಿ ನಮ್ಮ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣವನ್ನು ಎತ್ತಿಕೊಳ್ಳುತ್ತದೆ. ಆ ಮೊದಲು ಅವರನ್ನು UAPA ಅಡಿಯಲ್ಲಿ ಬಂಧಿಸಲೂಬಹುದು.

ಮೀನಾ ಕಂದಸ್ವಾಮಿ

 

ನಮ್ಮೆದುರಿಗಿನ ಪ್ರಶ್ನೆಯೆಂದರೆ ಮೀನಾ ಕಂದಸ್ವಾಮಿ ಒಬ್ಬ ಕವಿ, ಕಾದಂಬರಿಕಾರ್ತಿ. ಹೊಟ್ಟೆಗೆ ಒದೆಯುವಂತೆ ಬರೆಯಬಲ್ಲ ಈಕೆ ಸೂಕ್ಷ್ಮಪ್ರಜ್ಞೆಯ ಬರಹಗಾರ್ತಿ ಕೂಡ. ಆದರೆ ಬ್ರಾಹ್ಮಣ್ಯ ಮತ್ತು ಅಸ್ಪೃಶ್ಯತೆಯನ್ನು ಉಗ್ರವಾಗಿ ಖಂಡಿಸುವ ಇವರು ಇಂಗ್ಲಿಷ್‌ನಲ್ಲಿ ಬರೆಯುವ, ಆಧುನಿಕ ಪ್ರಜ್ಞೆಯ ದಲಿತ ಬರಹಗಾರ್ತಿ. ಇಂಗ್ಲಿಷ್, ಆಧುನಿಕತೆ, ವಿದೇಶಗಳಲ್ಲಿ ಮೆಚ್ಚುಗೆ ಇವುಗಳನ್ನೂ ಪಡೆದ ದಲಿತ ಮಹಿಳೆ ಇರುವುದು ಅಸಾಧ್ಯವೆಂದು ನಂಬಿರುವ ನಮ್ಮ ಮಧ್ಯಮ ವರ್ಗಕ್ಕೆ ಅವರು ಸೂಳೆ, ಲೈಂಗಿಕ ಮನೋರೋಗಿ ಇತ್ಯಾದಿಯಾಗಿ ಕಂಡಿರುವುದು ಸಹಜವೇ. ಈ ವರ್ಗಕ್ಕೆ ಇರುವ ಒಂದೇ ಪರಿಹಾರವೆಂದರೆ ‘ಅವಳ ಮಾನಭಂಗ ಮಾಡಿ; ಅಥವಾ ಕೊಲ್ಲಿರಿ’. ಇದರ ಅರ್ಥವೆಂದರೆ ಹಿಂದೆ ಧಾರ್ಮಿಕ ಸಂಸ್ಥೆಗಳು ಅಥವಾ ರಾಜಪ್ರಭುತ್ವಗಳು ಮಾಡುತ್ತಿದ್ದುದನ್ನು ಇಂದು ನಮ್ಮ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುತ್ತಿದ್ದಾರೆ. ಒಂದು ಗಮನಾರ್ಹ ವ್ಯತ್ಯಾಸವೆಂದರೆ ಇಂಥ ಸಂದೇಶಗಳನ್ನು Face book ಮೂಲಕ ರವಾನಿಸುತ್ತಿರುವವರು ಪ್ರಭುತ್ವದಿಂದ ನಿಗದಿತ ಸಂಭಾವನೆಯನ್ನು ಪಡೆಯುತ್ತಿರುವ ವ್ಯಕ್ತಿಗಳು ಹಾಗೂ ಗುಂಪುಗಳು, ಇವುಗಳ ಮಧ್ಯ ಸಾಹಿತ್ಯದ ಬರಹವು ಹೋರಾಡಬೇಕಿದೆ.

  • ಪ್ರೊ. ರಾಜೇಂದ್ರ ಚೆನ್ನಿ

  • ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು.

ಇದನ್ನೂ ಓದಿ: ಪರಿಸರ ಚಳವಳಿ, ಸಿಎಎ ವಿರೋಧಿ ಹೋರಾಟಗಳ ಗಟ್ಟಿ ದನಿ ಅಖಿಲ್ ಗೊಗೋಯ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...