ಹಸಿವು, ಬಡತನ, ನಿರುದ್ಯೋಗ, ರೈತ ಮತ್ತು ಕಾರ್ಮಿಕರ ಅತಂತ್ರ ಸ್ಥಿತಿ, ಬೆಲೆ ಏರಿಕೆ, ನೆಲೆ ಇಲ್ಲದೆ ಪರದಾಡುತ್ತಿರುವ ಆದಿವಾಸಿಗಳು- ಹೀಗೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಜನಸಾಮಾನ್ಯರನ್ನು ಬಾಧಿಸುತ್ತಿವೆ. ಇವೆಲ್ಲವನ್ನೂ ಬದಿಗೊತ್ತಿ ತಿನ್ನುವ ಆಹಾರದ ಮೇಲೆ ವಿವಾದ ಸೃಷ್ಟಿಸಲಾಗಿದೆ. ಬದುಕಿನೊಂದಿಗೆ ಬೆರೆತ ಆಹಾರ ತಟ್ಟೆಯಿಂದೆದ್ದು ಕುಣಿಯತೊಡಗಿದೆ. ನಮ್ಮ ದೇವರುಗಳು ಮತ್ತು ಆಹಾರ ಪದ್ಧತಿಯ ಚರಿತ್ರೆಯನ್ನು ನೆನಪಿಸಿ, ವಿಭಜಕ ಮನಸ್ಥಿತಿಗಳಿಗೆ ಉತ್ತರಿಸಬೇಕಾಗಿದೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಾಂಸಾಹಾರ ಸೇವಿಸಿ ದೇವಾಲಯಕ್ಕೆ ಹೋಗಿಬಿಟ್ಟಿದ್ದಾರೆಂದು ವಿವಾದ ಸೃಷ್ಟಿಸಲಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಇದೇ ರೀತಿಯ ಚರ್ಚೆಯನ್ನು ನಡೆಸಿ, ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸವಾಗಿತ್ತು. ಆ ಪ್ರವೃತ್ತಿ ಈಗಲೂ ಮುಂದುವರಿದಿರುವುದು ಆಘಾತಕಾರಿ ಸಂಗತಿ.

’ಬಿಜೆಪಿ’ ಆರೋಪಿಸಿದ್ದನ್ನು ಉಲ್ಲೇಖಿಸಿ, ’ನೀವು ಮಾಂಸಾಹಾರ ತಿಂದಿದ್ದು ನಿಜವೋ, ಸುಳ್ಳೋ?’ ಎಂದು ಮಾಧ್ಯಮ ಪ್ರತಿನಿಧಿಯೊಬ್ಬ ಅತಿರೇಕವಾಗಿ ಪ್ರಶ್ನಿಸಿದಾಗ, “ನೀನ್ಯಾವನಯ್ಯಾ ಕೇಳೋಕೆ?” ಎಂದು ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದು ಸಂಚಲನವನ್ನು ಮೂಡಿಸಿದೆ. ಇನ್ನೊಬ್ಬರ ಆಹಾರದ ಹಕ್ಕನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಜನಾಕ್ರೋಶ ಸ್ಫೋಟಿಸಿದೆ.
ದೇವರು, ಆಹಾರ, ಮಡಿ, ಮೈಲಿಗೆ ಸುತ್ತ ನಡೆಯುತ್ತಿರುವ ರಾಜಕಾರಣವು ಮಾಂಸಾಹಾರದ ಕುರಿತು ಕೀಳರಿಮೆಯನ್ನು ಬೆಳೆಸಲೆಂದೇ ಆಗುತ್ತಿರುವಂತಿದೆ. ಆದರೆ ಅಷ್ಟೇ ಪ್ರಬಲವಾಗಿ ಇಂತಹ ಬೆಳವಣಿಗೆಗಳನ್ನು ಜನರೇ ಹಿಮ್ಮೆಟ್ಟಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇದೆಲ್ಲದರ ಜೊತೆ ದೇವರುಗಳು ಮತ್ತು ಆಹಾರ ಸಂಸ್ಕೃತಿಯ ನಡುವಿನ ಚಾರಿತ್ರಿಕ ಮಹತ್ವವನ್ನು ಅರಿತುಕೊಂಡಾಗ, ನೆಲದ ನಿಜದ ನೆಲೆಗಳನ್ನು ಅರಿತಾಗ ಮಾತ್ರ ಈ ರೀತಿಯ ಸಾಂಸ್ಕೃತಿಕ ಹೇರಿಕೆ ರಾಜಕಾರಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು.
ಜಾನಪದೀಯ ಸಂಶೋಧನೆಗಳು ಹೇಳುವಂತೆ ವಿವಿಧ ತೆರನಾಗಿ ದೇವರುಗಳನ್ನು ವರ್ಗೀಕರಿಸಿ ನೋಡಲಾಗಿದೆ. ಗ್ರಾಮದೇವತೆಗಳ ಬಗ್ಗೆ ಸಂಶೋಧನಾ ಪ್ರಬಂಧ ಬರೆದ ಕವಿ ಸಿದ್ದಲಿಂಗಯ್ಯನವರು ಗ್ರಾಮ ದೇವತೆಗಳ ವೈವಿಧ್ಯತೆಯನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ಗುಣಸ್ವಭಾವದ ಆಧಾರದಲ್ಲಿ ಸೌಮ್ಯ ದೇವತೆಗಳು, ಉಗ್ರ ದೇವತೆಗಳು, ಆಹಾರದ ಆಧಾರದಲ್ಲಿ ಮಾಂಸಾಹಾರಿ, ಸಸ್ಯಾಹಾರಿ ದೇವತೆಗಳು, ಜನಾಂಗದ ಆಧಾರದಲ್ಲಿ ಕೆಳವರ್ಗ, ಮೇಲುವರ್ಗದ ದೇವತೆಗಳು, ಕಾಲದ ಆಧಾರದಲ್ಲಿ ಪ್ರಾಚೀನ, ಆಧುನಿಕ ದೇವತೆಗಳು, ಬಣ್ಣದ ಆಧಾರದಲ್ಲಿ ಕಪ್ಪು, ಕೆಂಪು ದೇವತೆಗಳು, ಲಿಂಗದ ಆಧಾರದಲ್ಲಿ ಗಂಡು ಮತ್ತು ಹೆಣ್ಣು ದೇವತೆಗಳು ಎಂದು ವರ್ಗೀಕರಣ ಮಾಡಿ ಸಿದ್ದಲಿಂಗಯ್ಯನವರು ಚರ್ಚಿಸಿದ್ದಾರೆ.
ಬಹುಸಂಸ್ಕೃತಿಗಳ ಭಾರತವು ದೇವರುಗಳ ವಿಚಾರದಲ್ಲೂ ವೈವಿಧ್ಯಮಯವಾಗಿಯೇ ಇದೆ. “ಪ್ರಪಂಚವನ್ನೇ ಸೃಷ್ಟಿ ಮಾಡಿದ್ದೇವೆ ಎಂದು ಹೇಳುವ ದೇವತೆಗಳ ಹೆಸರು ಪಕ್ಕದ ಊರಿಗೆ ಹೋದರೆ ಅಪರಿಚಿತ ಹೆಸರಾಗಿರುವ ಸಾಧ್ಯತೆಯೇ ಇದೆ” ಎನ್ನುತ್ತಾರೆ ಸಿದ್ದಲಿಂಗಯ್ಯ. ಇಷ್ಟು ವಿಶಾಲವಾದ ’ದೇವಲೋಕ’ದಲ್ಲಿ ಮಾಂಸಾಹಾರದ ಬಗ್ಗೆ ಸಂಕುಚಿತತೆ ಬೆಳೆಸುತ್ತಿರುವವರು ಯಾರು? ಇವರ ಉದ್ದೇಶಗಳೇನು? ಇಂತಹ ವಾದಗಳಿಗೆ ಅರ್ಥವಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ದೇವರು ಮತ್ತು ಆಹಾರದ ಕುರಿತು ಬಂಜಗೆರೆ ಜಯಪ್ರಕಾಶ್ ಹೇಳುವುದೇನು?
’ಆಹಾರ ಮತ್ತು ದೇವರು’ ಕುರಿತು ವಿಸ್ತೃತವಾಗಿ ’ನ್ಯಾಯಪಥ’ಕ್ಕೆ ವಿವರಿಸಿದ ಚಿಂತಕ ಬಂಜಗೆರೆ ಜಯಪ್ರಕಾಶ್, “ಮನುಷ್ಯನ ಆದಿಮ ಕಾಲದಲ್ಲಿ ಬೆಳೆದು ಬಂದ ಪಿತೃಪೂಜೆಯ ಮೂಲಕ ಆಹಾರ ನೈವೇದ್ಯ ಪದ್ಧತಿ ಬೆಳೆದುಬಂದಿದೆ” ಎಂದರು.
“ತೀರಿಕೊಂಡ ಹಿರಿಯರನ್ನು ಒಂದು ಕ್ರಮದಲ್ಲಿ ಹೂತು, ಕಲ್ಲು ಬಂಡೆಯನ್ನೆಲ್ಲ ಇಡುವ ಪದ್ಧತಿಯನ್ನು ಮನುಷ್ಯ ರೂಢಿಸಿಕೊಂಡ ಮೇಲೆ ಪಿತೃಪೂಜೆ ಬೆಳೆಯಿತು. ಇದೇ ಪೂಜಾ ಪದ್ಧತಿಯ ಉಗಮ ಎನ್ನಬಹುದು. ಹಿರೀಕರ ಪೂಜೆಯನ್ನು ರಾಜ್ಯದ ಜನತೆ ಬೇರೆಬೇರೆ ಸಮಯಗಳಲ್ಲಿ ಮಾಡುವುದನ್ನು ಗಮನಿಸಬಹುದು. ಕೆಲವರು ಆಯುಧಪೂಜೆಯಲ್ಲಿ, ಇನ್ನು ಕೆಲವರು ಯುಗಾದಿ, ದೀಪಾವಳಿ, ಸಕ್ರಾಂತಿ, ಮಹಾಲಯ ಅಮಾವಾಸ್ಯೆ- ಹೀಗೆ ಬೇರೆಬೇರೆ ದಿನಗಳಲ್ಲಿ ಹಿರೀಕರಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಪೂರ್ವಜರಿಗೆ ಇಷ್ಟವಾಗುತ್ತಿದ್ದ ಆಹಾರ ಹಾಗೂ ವಸ್ತುಗಳನ್ನು ಎಡೆಗೆ ಇಡುತ್ತಾರೆ. ಹೆಂಡ, ಬೀಡಿ, ಸಿಗರೇಟು, ಹೊಗೆಸೊಪ್ಪು- ಹೀಗೆ ಅವರಿಗೆ ಪ್ರಿಯವಾದದ್ದನ್ನೆಲ್ಲ ನೈವೇದ್ಯಕ್ಕೆ ಇಟ್ಟು ಆಮೇಲೆ ಊಟ ಮಾಡುತ್ತಾರೆ. ಹೀಗೆ ಹಿರಿಯರ ಪೂಜೆಯ ಮೂಲಕ ಪೂರ್ವಿಕ ಕುಲಕಥನಗಳ ಹೀರೋಗಳನ್ನು ಸೃಷ್ಟಿ ಮಾಡಿಕೊಂಡು ಅವರನ್ನೇ ದೈವವಾಗಿ ಕಾಣಲು ಶುರು ಮಾಡಿದರು. ಆ ದೇವರಿಗೆ ಅವರಿಷ್ಟದ ಆಹಾರವನ್ನು ನೈವೇದ್ಯವಾಗಿ ಇಡಲಾರಂಭಿಸಿದರು. ಆದಿಮ ದೇವರುಗಳಿಗೆ ದೇವಾಲಯಗಳು ಇರಲಿಲ್ಲ. ಬಯಲಲ್ಲಿ ಚಿಕ್ಕದಾದ ಗುಡಿಗಳು ಇರುತ್ತಿತ್ತು. ದೇವರು ಕಲ್ಲು ರೂಪದಲ್ಲಿ ಇರುತ್ತಿತ್ತು…”

“ಮನುಷ್ಯನು ಬಳಸುವ ಆಹಾರವೇ ದೇವರಿಗೆ ನೈವೇದ್ಯವೂ ಆಯಿತು. ಅದನ್ನು ಪ್ರಸಾದ ಎಂದೂ ಕರೆಯಲಾಯಿತು. -ಅನ್ನವೇ ಪ್ರಸಾದ ಆಗುವುದಾದರೆ ಮತ್ತು ಪ್ರಸಾದವೇ ಅನ್ನವಾಗುವುದಾದರೆ- ಅವೆರಡೂ ಬೇರೆಬೇರೆ ಅಲ್ಲವಾದ ಕಾರಣ ಮೊದಲು ಇದು ಪ್ರಸಾದವಾಗಿರಲಿಲ್ಲ ಎನ್ನಲು ಸಾಧ್ಯವೇ? ಹೀಗಾಗಿ ಅನ್ನವನ್ನೇ ಪ್ರಸಾದ ಎಂದುಬಿಡಿ- ಎನ್ನುತ್ತಾರೆ ಬಸವಣ್ಣ. ದೇವಸ್ಥಾನಕ್ಕೆ ತಿಂದು ಹೋಗಬಹುದೇ, ತಿನ್ನದೇ ಹೋಗಬೇಕೆ, ದೇವಾಲಯದಲ್ಲಿ ಯಾವ ಆಹಾರವನ್ನು ಬಡಿಸಬೇಕು ಮತ್ತು ಬಡಿಸಬಾರದು ಎಂಬುದು ನಂತರದ ಕಾಲಘಟ್ಟದಲ್ಲಿ ಬೆಳವಣಿಗೆಯಾಯಿತು. ಬ್ರಾಹ್ಮಣಶಾಹಿ ವ್ಯವಸ್ಥೆ ದಕ್ಷಿಣ ಭಾರತದ ಮೇಲೆ, ಇಲ್ಲಿನ ಪೂಜಾರಿ ಹಾಗೂ ಗುಡಿಗಳ ಮೇಲೆ ಪ್ರಭಾವ ಬೀರಲು ಶುರುಮಾಡಿತು…”
“ಇಷ್ಟೆಲ್ಲವಾದರೂ ಬಹುಸಂಖ್ಯಾತ ಗ್ರಾಮ ದೇವತೆಗಳು, ಮಾರಮ್ಮ, ಊರಮ್ಮಗಳು ಮಾಂಸಾಹಾರದ ಎಡೆಯನ್ನೇ ಕೇಳುತ್ತಿದ್ದವು. ಹರಕೆ ಎಂದರೆ ಮರಿ ಅಥವಾ ಕೋಳಿ ಕೊಯ್ಯುವುದೇ ಎಂಬುದಾಗಿತ್ತು. ಇವುಗಳನ್ನು ಕಾಲ ಕ್ರಮೇಣ ಸಾಂಕೇತೀಕರಣಗೊಳಿಸಲಾಯಿತು. ಕುಂಬಳಕಾಯಿ ಒಡೆಯುವುದು, ಕುತ್ತಿಗೆಯನ್ನು ಮುರಿಯುವ ರೀತಿಯಲ್ಲಿ ಬಾಳೇಹಣ್ಣಿನ ಚೊಟ್ಟನ್ನು ಮುರಿಯುವುದು, ತೆಂಗಿನ ಕಾಯಿ ಜುಟ್ಟು ಕಿತ್ತು ಒಡೆದು ಇಡುವುದು- ಇವೆಲ್ಲವೂ ಪ್ರಾಣಿಬಲಿ ಸಾಂಕೇತಿಕರಗೊಂಡ ಕುರುಹುಗಳು. ವಿಗ್ರಹಕ್ಕೆ ಅಚ್ಚುವ ಕುಂಕುಮ ಕೂಡ ಒಂದು ಕಾಲದಲ್ಲಿ ರಕ್ತದ ತಿಲಕ ಇಡುತ್ತಿದ್ದರ ಸಾಂಕೇತೀಕರಣ. ಹೀಗಿದ್ದಾಗ ನಮ್ಮ ದೇವರುಗಳಿಗೆ ಮಾಂಸಾಹಾರ ಸಲ್ಲದು ಎಂಬ ವಾದ ಯಾವಾಗ ಶುರುವಾಯಿತು? ಗುಪ್ತರ ಕಾಲಾನಂತರದಲ್ಲಿ ಆಗಿರುವ ಪಲ್ಲಟಗಳನ್ನು ಗುರುತಿಸಬಹುದು. ಗುಪ್ತರ ಕಾಲದಲ್ಲಿ ಊರ ಒಳಗಡೆ ದೇವಾಲಯಗಳು ನಿರ್ಮಾಣವಾದವು. ಈ ಕಾಲಘಟ್ಟಕ್ಕಿಂತ ಹಿಂದೆ ಊರ ಹೊರಗೆ ದೇವರ ಪೂಜಾಸ್ಥಳಗಳು ಇರುತ್ತಿದ್ದವು. ಅಂದರೆ ಅವು ದೇವಾಲಯಗಳಾಗಿರಲಿಲ್ಲ…”
“ಬ್ರಿಟಿಷ್ ಅಧಿಕಾರಾವಧಿಯಲ್ಲಿ ಬ್ರಾಹ್ಮಣ ಸುಧಾರಣಾವಾದಿಗಳು ಪ್ರಾಣಿಬಲಿ ನಿಲ್ಲಿಸಬೇಕೆಂದು ಒತ್ತಾಯ ಮಾಡಲಾರಂಭಿಸಿದರು. ಬ್ರಿಟಿಷರು ಆ ಸುಧಾರಕರ ಮಾತುಗಳಿಗೆ ಬೆಲೆಕೊಟ್ಟು ದೇವರುಗಳ ಮುಂದೆ ಪ್ರಾಣಿ ಬಲಿ ಕೊಡಬಾರದೆಂಬ ಕಾನೂನು ಜಾರಿಗೆ ತಂದರು. ಆದರೂ ಬಹುಸಂಖ್ಯಾತ ದೇವರುಗಳ ವಿಚಾರದಲ್ಲಿ ಇದು ಸಾಧ್ಯವಾಗಲಿಲ್ಲ. ಬಿಳಿಗಿರಿರಂಗನಿಗೆ ಕಳೆದ ಇಪ್ಪತ್ತು ವರ್ಷಗಳ ಹಿಂದಿನವರೆಗೂ ಮಾಂಸಾಹಾರದ ನೈವೇದ್ಯ ನಡೆಯುತ್ತಿತ್ತು. ಮಂಟೇಸ್ವಾಮಿಗೂ ಮಾಂಸಾಹಾರದ ಎಡೆಯನ್ನು ಇಡಲಾಗುತ್ತಿತ್ತು. ಪೂಜಾರಿ ತಿನ್ನದಿದ್ದರೂ ದೇವರ ಮುಂದೆ ಮಾಂಸಾಹಾರ ತಟ್ಟೆಯನ್ನಿಟ್ಟು ನೈವೇದ್ಯ ಮಾಡಿ ಹಿಂತಿರುಗಿಸುತ್ತಿದ್ದನ್ನು ನೋಡಿದ್ದೇವೆ…”
“ಬೇರೆಬೇರೆ ರೂಪಗಳಲ್ಲಿ ಮಾಂಸಾಹಾರದ ನೈವೇದ್ಯ ನಡೆದುಕೊಂಡು ಬಂದಿದೆ. ಬ್ರಾಹ್ಮಣ ತತ್ವಶಾಸ್ತ್ರದ ಪ್ರಕಾರ ದೇವನೊಬ್ಬ ನಾಮ ಹಲವು. ಬಹುಸಂಖ್ಯಾತ ಗ್ರಾಮೀಣರ ದೇವತೆಗಳು ಮಾಂಸಾಹಾರವನ್ನು ಎಡೆಯಾಗಿ ಸ್ವೀಕರಿಸುತ್ತವೆ ಎಂದರೆ, ಇರುವ ಒಬ್ಬನೇ ದೇವರು, ಬೇರೆ ಹೆಸರಲ್ಲಿ ಅಥವಾ ಬೇರೆ ರೂಪದಲ್ಲಿ ಮಾಂಸಾಹಾರವನ್ನು ಸ್ವೀಕರಿಸಿದ್ದಾನೆ ಎಂದರ್ಥ ಅಲ್ಲವೇ?”

“ಕೆಲವು ದೇವರಿಗೆ ತಂಬಿಟ್ಟಿನ ನೈವೇದ್ಯ, ಕೆಲವರಿಗೆ ಕಡುಬಿನ ನೈವೇದ್ಯ, ಕೆಲವರಿಗೆ ಕೋಳಿ ನೈವೇದ್ಯ. ಆದರೆ ಎಲ್ಲವನ್ನೂ ಸಸ್ಯಾಹಾರಿ ಮಾಡಬೇಕು ಎಂಬ ಕಾರಣಕ್ಕೆ ಪ್ರಾಣಿ ಬಲಿ ಕಾನೂನನ್ನು ಹೇರಿಕೆ ಮಾಡಲು ಹೊರಟರು. ದೇವರಿಗೆ ಪ್ರಾಣಿಬಲಿ ಕೊಡಬಾರದು, ರಕ್ತಾಭಿಷೇಕ ಮಾಡಬಾರದು, ಎಡೆ ಕೊಡಿಸಬಾರದು, ದೂರದ ತೋಪುಗಳಲ್ಲಿ ಅಡುಗೆ ಮಾಡಿಕೊಂಡು ತಿನ್ನಬಹುದು ಎಂದರು. ಹೀಗಾಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಗೆ ಹೊರ ಮಠದಲ್ಲಿ ಮಾಂಸಾಹಾರ ನಡೆಯುತ್ತದೆ, ಒಳಮಠ ಊರೊಳಗಿದ್ದು ಅಲ್ಲಿ ಸಸ್ಯಾಹಾರ ನಡೆಯುತ್ತದೆ. ಒಬ್ಬನೇ ತಿಪ್ಪೇಸ್ವಾಮಿ ಎರಡೂ ಆಹಾರವನ್ನು ಸ್ವೀಕರಿಸಿದ್ದಾನೆ. ಈ ರೀತಿಯಲ್ಲಿರುವ ಕಲ್ಪನೆ ಬೆಳೆದು ಸಸ್ಯಾಹಾರದ ಎಡೆ ಒಂದು ದಿನ, ಮಾಂಸಾಹಾರದ ಎಡೆ ಒಂದು ದಿನ ಮಾಡಲಾಗುತ್ತಿದೆ. ಮಾಂಸಾಹಾರ ದೇವರಿಗೆ ಸಲ್ಲದು ಎನ್ನಲಾಗದು. ಗಣಪತ್ಯ ಪರಂಪರೆಯಲ್ಲಿ ಮಾಂಸಾಹಾರದ ಎಡೆಯನ್ನು ಗಣಪತಿಗೆ ಇಡುತ್ತಿದ್ದರು. ಕಾಲಾನಂತರದಲ್ಲಿ ಅದು ಕಡುಬು, ಕಜ್ಜಾಯವಾಯಿತು. ಈ ರೀತಿಯ ಮಾರ್ಪಾಟುಗಳು ಬೇಕಾದಷ್ಟಿವೆ. ಇದು ಬೇರೆ ವಿಷಯ…”
“ಊರಿಗೊಂದು ದೇವಾಲಯ ಪರಿಕಲ್ಪನೆ ಬರುವ ಮುಂಚೆಯೇ ದೇವರುಗಳು ಮನೆಗಳಿಗೆ ಸೀಮಿತವಾಗಿದ್ದವು. ಪೂಜೆ ಕುಟುಂಬಕ್ಕೆ ಸಂಬಂಧಪಟ್ಟಿದ್ದಾಗಿತ್ತು. ದೇವರು ಮನೆಯೊಳಗೆ ಇದ್ದಾನೆ ಎಂಬ ಮೇಲೆ, ತಿಂದವರು ಕೂಡ ಮನೆಯೊಳಗೆಯೇ ಇರುತ್ತಾರೆ ತಾನೇ? ಹೀಗಾಗಿ ಕ್ರಮೇಣ ಬದಲಾವಣೆಗಳನ್ನು ತಂದರು. ಸ್ನಾನ ಮಾಡಿಕೊಂಡು ಮನೆಯೊಳಗೆ ಹೋಗಬೇಕು, ಸ್ನಾನ ಮಾಡಲು ಆಗದಿದ್ದರೆ ಕೈಕಾಲು ತೊಳೆದುಕೊಂಡು, ತಲೆಯ ಮೇಲೆ ನೀರನ್ನು ಚುಮುಕಿಸಿಕೊಂಡು ಹೋಗಬೇಕು ಎಂಬ ಪದ್ಧತಿಯನ್ನು ರೂಢಿಸಲಾಯಿತು…”
ಇದನ್ನೂ ಓದಿ: ಎಲ್ಲಾ ರೀತಿ ವಿಫಲವಾಗಿರುವ ಬಿಜೆಪಿ ಅಧಿಕಾರಕ್ಕಾಗಿ ಮಾತ್ರ ಸಾವರ್ಕರ್ ಹೆಸರು ಬಳಸುತ್ತಿದೆ: ಹಿಂದೂ ಮಹಾಸಭಾ ಆರೋಪ
“ಬ್ರಾಹ್ಮಣಿಕೆಯನ್ನು ಹಂತಹಂತವಾಗಿ ದಕ್ಷಿಣ ಭಾರತದ ಸಂಸ್ಕೃತಿಯ ಮೇಲೆ ಹೇರುತ್ತಾ ಬರಲಾಗಿದೆ. ಶಿಕ್ಷಣ ಕ್ರಮದಲ್ಲೂ ಇದನ್ನು ತರಲಾಯಿತು. ಆಧುನಿಕ ಶಿಕ್ಷಣ ವ್ಯವಸ್ಥೆ ರೂಢಿಗೆ ಬಂದಾಗ ಇದ್ದ ಬಹುತೇಕ ಮೇಷ್ಟ್ರುಗಳು ಬ್ರಾಹ್ಮಣರಾಗಿದ್ದರು. ಆಹಾರ ಕ್ರಮದ ಮೇಲೆ ಕೀಳರಿಮೆ ಮನೋಭಾವ ಬೆಳೆಸಲಾಯಿತು. ಸ್ವಾತಂತ್ರ್ಯಾನಂತರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಸಸ್ಯಾಹಾರಿಗಳಾಗಿದ್ದರು. ಹೀಗಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಮಾಂಸಾಹಾರ ನಿಷದ್ಧವಾಯಿತು. ಮಾಂಸಾಹಾರಿ ಜನರ ಸೌಜನ್ಯ ಕೂಡ ಇದಕ್ಕೆ ಕಾರಣ ಎನ್ನಬಹುದು. ನಾವು ಎರಡನ್ನೂ ತಿನ್ನುವವರಾಗಿರುವುದರಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಸ್ಯಾಹಾರವನ್ನೇ ತಿನ್ನೋಣ ಎಂದು ಭಾವಿಸಿದರು. ಆದರೆ ಈ ಸೌಜನ್ಯವನ್ನೇ ಶರಣಾಗತಿಯನ್ನಾಗಿಯೂ, ಕೀಳರಿಮೆಯನ್ನಾಗಿಯೂ ಬೆಳೆಸಲಾಗಿದೆ. ಇವತ್ತು ಇಲ್ಲಿಗೆ ಬಂದು ನಿಂತಿದೆ”.
ಹೀಗೆ ಬಂಜಗೆರೆ ಜಯಪ್ರಕಾಶ್ ಅವರು ಆಹಾರ ಮತ್ತು ದೇವರುಗಳ ಇತಿಹಾಸವನ್ನು ಬಿಚ್ಚಿಟ್ಟರು.
ಜಾತಿ ವ್ಯವಸ್ಥೆಯ ಯಥಾಸ್ಥಿತಿಗೆ ಗ್ರಾಮದೇವರುಗಳ ಬಳಕೆ
ಗ್ರಾಮ ದೇವತೆಗಳು, ದೇಸೀಯ ಪರಂಪರೆಗಳು ಸಾಂಸ್ಕೃತಿಕ ಪ್ರತಿರೋಧದ ಭಾಗವಾಗಿರುವಂತೆಯೇ ಅವು ಯಥಾಸ್ಥಿತಿವಾದಕ್ಕೂ ಬಳಕೆಯಾಗಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಬ್ರಾಹ್ಮಣಶಾಹಿ ವ್ಯವಸ್ಥೆಯು ಮಾರಮ್ಮನ ಕಥೆಯ ಮೂಲಕ ವರ್ಣ ಸಂಕರದ ಕುರಿತು ಅಪಕಲ್ಪನೆಯನ್ನು ಕಟ್ಟಿರುವ ಚರ್ಚೆಗಳಾಗಿವೆ.
ಪ್ರಾಣಿ ಬಲಿ ವಿಚಾರದಲ್ಲಿರುವ ಮಿಥ್ ಹೀಗಿದೆ: ತಾನು ಬ್ರಾಹ್ಮಣನೆಂದೋ, ಲಿಂಗಾಯತನೆಂದೋ ಹೇಳಿಕೊಂಡ ಹೊಲೆಯ ಅಥವಾ ಮಾದಿಗ ಸಮುದಾಯದ ಗಂಡಸು, ಬ್ರಾಹ್ಮಣ ಅಥವಾ ಲಿಂಗಾಯತ ಜಾತಿಯ ಕನ್ಯೆಯನ್ನು ಮದುವೆಯಾಗುತ್ತಾನೆ. ಆದರೆ ಕಾಲಾ ನಂತರದಲ್ಲಿ ಗಂಡನ ಜಾತಿ ತಿಳಿದ ಹೆಂಡತಿ, ಸಿಡಿದೆದ್ದು ಶಾಪ ಹಾಕಿ ಸಾಯುತ್ತಾಳೆ. ಆನಂತರದಲ್ಲಿ ಆಕೆ ಮಾರಮ್ಮನಾಗಿಯೋ ದುರ್ಗಮ್ಮನಾಗಿಯೋ ರೂಪ ತಾಳುತ್ತಾಳೆ. ಮಾರಮ್ಮನಿಗೆ ಕಡಿಯುವ ಕೋಣ ಅಥವಾ ಕುರಿಯು ಹಿಂದಿನ ಜನ್ಮದಲ್ಲಿ ಸುಳ್ಳು ಹೇಳಿ ಮದುವೆಯಾಗಿದ್ದ ಮಾರಮ್ಮನ ಗಂಡನೇ ಆಗಿರುತ್ತಾನೆ.
ಈ ರೀತಿಯಲ್ಲಿ ಮಿಥ್‌ಗಳನ್ನು ಕಟ್ಟುವ ಮೂಲಕ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಪೋಷಿಸುತ್ತಿರುವುದನ್ನು ಜಾನಪದೀಯ ಅಧ್ಯಯನಗಳು ತಿಳಿಸುತ್ತವೆ. ಪುರಾಣಗಳು ಗ್ರಾಮೀಣ ಸಂಸ್ಕೃತಿಯ ಮೇಲೆ ಬೀರಿರುವ ಪ್ರಭಾವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ರಕ್ತದ ಭಯ ಹೋಗಲಾಡಿಸಲು ಪ್ರಾಣಿಬಲಿ ಆರಂಭ: ಕೃಷ್ಣಮೂರ್ತಿ ಹನೂರು
“ಹಿಂದೆ ಯಜ್ಞಯಾಗಾದಿಗಳಲ್ಲಿ ಇದ್ದ ಪ್ರಾಣಿಬಲಿ ಪರಿಕಲ್ಪನೆ ಮುಂದೆ ಮಾರಿ ಪೂಜೆಯಲ್ಲೂ ಕಾಣಿಸಿಕೊಂಡಿತು” ಎಂದು ವಿಶ್ಲೇಷಿಸುವ ಹಿರಿಯ ಜಾನಪದ ವಿದ್ವಾಂಸರಾದ ಡಾ. ಕೃಷ್ಣಮೂರ್ತಿ ಹನೂರು ಅವರು, “ಅಂದು ಸೈನ್ಯದಲ್ಲಿದ್ದವರಲ್ಲಿ ರಕ್ತದ ಭಯವನ್ನು ಹೋಗಲಾಡಿಸಲು ಪ್ರಾಣಿಬಲಿ ಸಂಸ್ಕೃತಿಯನ್ನು ಬೆಳೆಸಲಾಯಿತು” ಎನ್ನುತ್ತಾರೆ.
ಪತ್ರಿಕೆಯ ಜೊತೆ ಮಾತನಾಡಿದ ಅವರು, “ಶ್ರೇಣೀಕೃತವಾಗಿ ಮೇಲಿರುವ ಸಮುದಾಯಗಳಲ್ಲಿನ ಮಾಂಸಾಹಾರ ಪದ್ಧತಿ ಕಾಲಕ್ರಮದಲ್ಲಿ ಬಿಟ್ಟುಹೋಯಿತು. ವ್ಯವಸಾಯ, ಯುದ್ಧ ಮತ್ತಿತ್ತಿರ ಶ್ರಮದಾಯಕ ಕೆಲಸದಲ್ಲಿ ತೊಡಗಿರುವವರು ಬಲಿಷ್ಠರಾಗಿರಬೇಕಿತ್ತು. ರಣರಂಗದಲ್ಲಿದ್ದವರಿಗೆ ಮಾಂಸಾಹಾರ ಅಗತ್ಯವಿತ್ತು. ಕಾಲಾನಂತರದಲ್ಲಿ ಅದೊಂದು ಆಚರಣೆಯಾಯಿತು” ಎಂದರು.

“ಹಿಂದೆ ಯಜ್ಞಯಾಗಾದಿಗಳಲ್ಲಿ ಇದ್ದ ಪದ್ಧತಿಗಳೇ ಮಾರಿ ಪೂಜೆಯಲ್ಲೂ ಕಂಡು ಬಂದಿದ್ದು ಗಮನಿಸಬಹುದು. ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಅರಸರು ಯಜ್ಞಗಳನ್ನು ನಡೆಸುತ್ತಿದ್ದರು. ಇದೇ ರೀತಿಯಲ್ಲಿ ಊರಿಗೆ ಒಳ್ಳೆಯದಾಗಲಿ ಎಂದು ಗೌಡರು ಹಬ್ಬಗಳನ್ನು ಶುರು ಮಾಡಿದರು. ಯಜ್ಞಯಾಗಾದಿ ವಿಧಿವಿಧಾನಗಳ ಗ್ರಾಮೀಣ ರೂಪವೇ ಮಾರಿಹಬ್ಬ. ಅಲ್ಲಿ ಯಜ್ಞದ ಕುದುರೆ ಎನ್ನುತ್ತಿದ್ದನ್ನು ಇಲ್ಲಿ ಜನಿಗೆ ಕೋಣ ಎಂದಿದ್ದಾರೆ. ಎರಡೂ ಕೂಡ ಒಂದೇ ರೀತಿಯವು. ಯಜ್ಞದ ಕುದುರೆ ಒಂದು ವರ್ಷ ಊರಲ್ಲಿ ಅಡ್ಡಾಡಿದಂತೆಯೇ ಇಲ್ಲಿನ ಕೋಣವೂ ವರ್ಷ ಕಾಲ ಊರಿನಲ್ಲಿ ಅಡ್ಡಾಡಿಕೊಂಡು ಇರುತ್ತದೆ” ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ: ಹೈವೆ ಬಂದ್ ಮಾಡಿ ರಸ್ತೆ ಮಧ್ಯದಲ್ಲಿಯೇ ರಕ್ತದಾನ ಮಾಡಿದ ರೈತರು
“ಈ ಬಲಿಗಳನ್ನು ಆರಂಭಿಸಿದ್ದರ ಹಿಂದೆ- ಹಿಂಸೆಯನ್ನು ನೋಡಿ ಹೆದರಬಾರದು ಎಂಬ ಉದ್ದೇಶವಿದ್ದದ್ದು ಗಮನಿಸಬಹುದು. ಯುದ್ಧ ಮಾಡಬೇಕಾದ ಸೈನಿಕ ಮತ್ತೊಂದು ಸೈನ್ಯದ ಮುಂದೆ ಇರಬೇಕಿತ್ತು. ರಕ್ತಕ್ಕೆ ಹೆದರಬಾರದು ಎಂಬುದು ಬಲಿಯ ಸಾರಾಂಶವಾಗಿತ್ತು. ಯುದ್ಧದ ಸಂದರ್ಭದಲ್ಲಿ ಮಾಂಸ ಹಾಗೂ ಮದ್ಯಪಾನ ಎರಡೂ ನಡೆಯುತ್ತಿತ್ತು. ಆನೆಗಳಿಗೂ ಮದ್ಯ ಸೇವನೆ ಮಾಡಿಸುತ್ತಿದ್ದರು. ಕಾಲ ಉರುಳಿದಂತೆ ಬಲಿ ಕೊಡುವುದು ಒಂದು ಆಚರಣೆಯಾಗಿ, ಆಹಾರ ಪದ್ಧತಿಯಾಗಿ ಉಳಿಯಿತು. ಇಂದು ಎಲ್ಲ ಸಮುದಾಯದವರೂ ಮಾಂಸವನ್ನು ತಿನ್ನುವಾಗ, ಇದರ ಕುರಿತು ವಿವಾದ ಸೃಷ್ಟಿಸುವ ಅಗತ್ಯವೇನಿದೆ? ಜನರು ಯಾವ ಆಹಾರವನ್ನು ಸೇವಿಸುತ್ತಾರೋ ಅದನ್ನು ತಮ್ಮ ದೇವರಿಗೂ ಆರೋಪಿಸಿದ್ದಾರೆ. ಸಸ್ಯಾಹಾರಿ ಮಾರಮ್ಮ ಇರುವಂತೆ, ಮಾಂಸಾಹಾರಿ ಮಾರಮ್ಮನೂ ಇದ್ದಾಳೆ. ಆಂಜನೇಯ ದೇವಸ್ಥಾನದ ಮುಂದೆಯೂ ಬಲಿಕೊಡುವ ಆಚರಣೆಗಳಿವೆ. ’ನಮ್ಮ ಅಳತೆಯನ್ನು ಮೀರಲಾರದ ದೇವರು’ ಎಂದು ಶಿವರಾಮ ಕಾರಂತರು ಬರೆದಿದ್ದಾರೆ” ಎಂದು ಸ್ಮರಿಸಿದರು.
ಬುಡಕಟ್ಟು ಕಾಲದಿಂದ ದೇವರುಗಳು ಬಂದಿವೆ. ತಿರುಪತಿ ತಿಮ್ಮಪ್ಪ ಬುಡಕಟ್ಟು ದೇವರು. ಧರ್ಮಸ್ಥಳದಲ್ಲಿರುವ ದೇವರು ಕೂಡ ಬುಡಕಟ್ಟು ದೇವರು. ಆ ನಂತರದಲ್ಲಿ ಅಲ್ಲೆಲ್ಲ ಸಾಂಸ್ಕೃತಿಕ ಪಲ್ಲಟಗಳಾಗಿವೆ.
ದೇವರು ಮತ್ತು ಭಕ್ತರ ನಡುವಿನ ಸಂಬಂಧವಿದು: ಎಚ್.ಡಿ.ಉಮಾಶಂಕರ್
ಕನ್ನಡ ಉಪನ್ಯಾಸಕರಾದ ಡಾ.ಎಚ್.ಡಿ.ಉಮಾಶಂಕರ್ ಮಾತನಾಡಿ, “ದೇವರನ್ನು ನಂಬಿದಾತ ಏನಾದರೂ ತಿಂದುಕೊಂಡು ದೇವರನ್ನು ನೋಡಲು ಹೋಗಲಿ. ಇದು ದೇವರು ಮತ್ತು ಭಕ್ತನಿಗೆ ಸಂಬಂಧಿಸಿದ ವಿಚಾರ. ಇದು ಬೇರೆಯವರ ಭಾವನೆಗಳಿಗೆ ಹೇಗೆ ಧಕ್ಕೆಯಾಗುತ್ತದೆ? ಬೇಡರ ಕಣ್ಣಪ್ಪನ ಪರಂಪರೆಯವನು ನಾನು. ನನ್ನ ಹೊಟ್ಟೆಯೊಳಗಿರುವುದನ್ನು ಆಹಾರವೆಂದು ನೋಡುತ್ತೇನೆಯೇ ಹೊರತು ಅದರಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದರು.
“ದೇವರು ಎಲ್ಲ ಕಡೆ ಇದ್ದಾನೆ ಎನ್ನುತ್ತಾರೆ. ದೇವಸ್ಥಾನಕ್ಕೆ ಮಾತ್ರ ಮಾಂಸ ತಿಂದುಕೊಂಡು ಬರಬೇಡ ಎನ್ನಲು ಇವರು ಯಾರು? ಮರ, ಗಿಡ, ಕಲ್ಲು ಎಲ್ಲದರಲ್ಲೂ ದೇವರನ್ನು ಕಾಣುತ್ತೇನೆ. ದೇವಸ್ಥಾನವೂ ಮರದ ಮತ್ತೊಂದು ರೂಪವಾಗಿ ಕಾಣುತ್ತದೆ. ಮರ ಕಂಡರೂ ಕೈ ಮುಗಿಯುತ್ತೇನೆ, ದೇವಸ್ಥಾನ ಕಂಡರೂ ಕೈ ಮುಗಿಯುತ್ತೇನೆ. ಇವರ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ” ಎಂದು ಪ್ರಶ್ನಿಸಿದರು. “ನಮ್ಮ ಸಂಸ್ಕೃತಿಯಲ್ಲಿ ಮಾಂಸಾಹಾರ ಆರಾಧನೆಯ ದೇವರುಗಳು ಊರಿಗೊಂದು ಇವೆ. ಮಾಂಸವಿಲ್ಲದೆ ಬಹುತೇಕ ಹಬ್ಬಗಳು ಪರಿಪೂರ್ಣವಾಗುವುದೇ ಇಲ್ಲ ಎಂದರು.

ಈ ದೇಶದ ಬಹುಸಂಸ್ಕೃತಿಗಳ ಬಗ್ಗೆ ತಿಳಿವಳಿಕೆ ಹೆಚ್ಚಿದಂತೆ ಸಂಘಪರಿವಾರದವರ ಹುನ್ನಾರಗಳು ಸುಲಭವಾಗಿ ಬಯಲಾಗುತ್ತವೆ. ದೇವಸ್ಥಾನ ಮತ್ತು ಮಾಂಸಾಹಾರ ವಿವಾದ ಕೂಡ ಇದಕ್ಕೆ ಹೊರತೇನಲ್ಲ.



We try to be spread this information to more literal people’s for creating unwanted thoughts.