ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿ ಪಠ್ಯ ಕೋಮುವಾದೀಕರಣ ಮಾಡಿರುವುದನ್ನು ವಿರೋಧಿಸಿ ಪಠ್ಯ ಅನುಮತಿ ನಿರಾಕರಣೆ ಪರ್ವ ಮುಂದುವರೆದಿದೆ. ಹಿರಿಯ ಸಾಹಿತಿ ದೇವನೂರ ಮಹಾದೇವರಿಂದ ಆರಂಭಗೊಂಡ ನನ್ನ ಪಠ್ಯ ಕೈಬಿಡಿ ಹೋರಾಟಕ್ಕೆ ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನರವರು ಸಹ ಕೈ ಜೋಡಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರಿಗೆ ಪತ್ರ ಬರೆದಿರುವ ಪ್ರೊ. ಕೆ.ಎಸ್ ಮಧುಸೂದನರವರು, “ಕರ್ನಾಟಕ ರಾಜ್ಯದ 9ನೇ ತರಗತಿಯ ದ್ವೀತಿಯ ಭಾಷಾ ಕನ್ನಡ ಪುಸ್ತಕ “ತಿಳಿಗನ್ನಡ” ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ್ದೆನು. ಈಗಲೂ ನನ್ನ ಅಧ್ಯಕ್ಷತೆಯಲ್ಲಿ ಅದೇ ಪಠ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ. ಕರ್ನಾಟಕದ ನಾಡು ನುಡು ಸಂಸ್ಕೃತಿಯ ಅಂತಃಸಾಕ್ಷಿಯಂತಿರುವ ಮಾನ್ಯ ಕುವೆಂಪುರವರನ್ನು ಈಗನ ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಲಘುವಾಗಿ ಗೇಲಿ ಮಾಡಿದ್ದಕ್ಕೆ ಮನನೊಂದು ಹಾಗೂ ಪ್ರತಿಭಟಿಸುತ್ತಾ ಭಾಷಾ ಪಠ್ಯಪುಸ್ತಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ಪಠ್ಯದಲ್ಲಿ ನನ್ನ ಹೆಸರು ಮತ್ತು ನಾನು ಬರೆದ ಪಾಠ ಮುನ್ನ ಪ್ರಸ್ತಾವನೆಯನ್ನು ಸೇರಿಸಬಾರದು” ಎಂದು ಮನವಿ ಮಾಡಿದ್ದಾರೆ.
ಅದೇ ರೀತಿಯಾಗಿ ನಿವೃತ್ತ ತರ್ಕ ಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ ತಾಳ್ಯರವರು 6ನೇ ತರಗತಿಯ ದ್ವಿತೀಯ ಭಾಷಾ ಪಠ್ಯದಲ್ಲಿ ನನ್ನ ಒಂದು ಸೋಜಿಗದ ಪದ್ಯ ಎಂಬ ಕವಿತೆ ಸೇರ್ಪಡೆಯಾಗಿದೆ. ಅದನ್ನು ಪಠ್ಯವಾಗಿ ಬೋಧಿಸಲು ನನ್ನ ಅನುಮತಿಯನ್ನು ವಾಪಸ್ ಪಡೆಯುತ್ತಿರುವೆ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ “ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಶಿಕ್ಷಣ ಕ್ಷೇತ್ರದ ಮೇಲಿನ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದೆ. ಅದೀಗ ಪಠ್ಯಕ್ರಮದ ಮೇಲೂ ತನ್ನ ಕರಿನೆರಳು ಚಾಚುತ್ತಿದೆ. ಅಸಾಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಅನೈತಿಕ ನಡೆ ನನ್ನಂಥ ಲೇಖಕನನ್ನು ಅಧೀರನನ್ನಾಗಿ ಮಾಡುತ್ತದೆ. ಇದು ಕನ್ನಡ ಪರಂಪರೆಯನ್ನು ಕುಬ್ಜಗೊಳಿಸುವ ಅಕ್ರಮ ನಡೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪಠ್ಯ ಪರಿಷ್ಕರಣೆಯ ನೆಪದಲ್ಲಿ ನಡೆಯುತ್ತಿರುವ ಈ ಸಂಸ್ಕ್ರತಿ ತಿರುಚೀಕರಣ ನಮ್ಮ ಪರಂಪರಾಗತ ಸಂಸ್ಕೃತಿಯನ್ನೇ ವಿರೂಪಗೊಳಿಸವಂತಿಹುದು. ಇದನ್ನು ತಾವು ಗಮನಿಸಬೇಕು ಎನ್ನುವುದು ನನ್ನ ಆಗ್ರಹ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಠ್ಯದ ಮೂಲಕ ಮಕ್ಕಳಿಗೆ ವಿಷಪ್ರಾಸನ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿ



ಇನ್ನೂ ನಾಡಿನ ಸಾಹಿತಿಗಳು ಈ ಮರುಪರೀಕ್ಷೆಗೆ ಅಭಿಪ್ರಾಯ ಮಂಡಿಸಬೇಕು… ಮುಖ್ಯವಾಗಿ ನಮ್ಮ ಚೆಡ್ಡಿ ಸಾಹಿತಿ ಎಸ್. ಎಲ್ ಭೈರಪ್ಪ ಅವರ ಅಭಿಪ್ರಾಯ ಏನು ಅಂತಾ ತಿಳಿಯಬೇಕಾಗಿದೆ