Homeಚಳವಳಿಕನ್ನಡ ವಿರೋಧಿ ರೋಹಿತ್ ಚಕ್ರತೀರ್ಥನನ್ನು ಗಡಿಪಾರು ಮಾಡಿ: ಟಿ ಎ ನಾರಾಯಣಗೌಡ ಆಗ್ರಹ

ಕನ್ನಡ ವಿರೋಧಿ ರೋಹಿತ್ ಚಕ್ರತೀರ್ಥನನ್ನು ಗಡಿಪಾರು ಮಾಡಿ: ಟಿ ಎ ನಾರಾಯಣಗೌಡ ಆಗ್ರಹ

- Advertisement -
- Advertisement -

ವಿವಾದಿತ ಶಾಲಾ ಪಠ್ಯವನ್ನು ಹಿಂಪಡೆಯಬೇಕು ಮತ್ತು ರಾಷ್ಟ್ರಕವಿ ಕುವೆಂಪು, ನಾಡಗೀತೆ ಹಾಗೂ ನಾಡಧ್ವಜವನ್ನು ಅವಮಾನಿಸಿರುವ ರೋಹಿತ್‌ ಚಕ್ರತೀರ್ಥನನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡ ಒತ್ತಾಯಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು “ನಾಡಕವಿ ಕುವೆಂಪು ರಾಜ್ಯ ಮಾತ್ರವಲ್ಲ, ಈ ದೇಶದ ಹೆಮ್ಮೆ. ಆದರೆ, ಅವರನ್ನೇ ಅವಮಾನಿಸಿರುವುದು ಈ ನಾಡಿನ ಅಸ್ಮಿತೆಗೆ ಮಾಡಿದೆ ಅವಮಾನ. ಇನ್ನೂ ನಾಡಗೀತೆ ಮತ್ತು ನಾಡಧ್ವಜಕ್ಕೆ ಅಪಹಾಸ್ಯ ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಾಲಾ ಮಕ್ಕಳು ಪ್ರತಿನಿತ್ಯ ಹಾಡುವ ನಾಡಗೀತೆಯನ್ನೇ ತಿರುಚಿದ ರೋಹಿತ್ ಚಕ್ರತೀರ್ಥನಂತವರಿಂದ ಮಕ್ಕಳಿಗೆ ಎಂತಹ ಪಠ್ಯ ರಚಿಸಲು ಸಾಧ್ಯ? ಹೀಗಾಗಿ ಕೂಡಲೇ ಆತನನ್ನು ಬಂಧಿಸಬೇಕು, ರಾಜ್ಯದಿಂದ ಗಡಿಪಾರು ಮಾಡಬೇಕು” ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

“ರಾಜ್ಯ ಸರ್ಕಾರ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪರಿಷ್ಕರಣ ಸಮಿತಿ ಸಿದ್ಧಪಡಿಸಿದ್ದ ಶಾಲಾ ಪಠ್ಯ ಪುಸ್ತಕಗಳನ್ನು ತರಾತುರಿಯಲ್ಲಿ ಮರು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಎಂಬುವವರನ್ನು ನೇಮಿಸಿದೆ. ಅವರ ಶಿಫಾರಸಿನ ಅನ್ವಯ ಭಾಷಾ ಪಠ್ಯ ಹಾಗೂ ಸಮಾಜ ವಿಜ್ಞಾನ ಪಠ್ಯಗಳಲ್ಲಿ ಬದಲಾವಣೆ ತಂದಿರುವುದು ಖಂಡನಾರ್ಹ. ವಿವಾದ ಇನ್ನೂ ತಣ್ಣಗಿರುವಾಗಲೇ ಮರು ಪರಿಷ್ಕರಿಸಿದ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ಹಂಚಲು ಸರ್ಕಾರ ಹೊರಟಿದೆ. ಸರ್ಕಾರದ ಈ ಕ್ರಮ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ್ದು ಲಕ್ಷಾಂತರ ಮಕ್ಕಳ ಭವಿಷ್ಯ ಮತ್ತು ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ” ಎಂದು ಅಭಿಪ್ರಾಯಪಟ್ಟರು.

“ಮೊದಲನೆಯದಾಗಿ ಪಠ್ಯ ಪುಸ್ತಕಗಳಲ್ಲಿ ಯಾವುದೇ ಬದಲಾವಣೆ ತರುವುದನ್ನು ಯಾವುದೇ ಸರ್ಕಾರ ಮನಸಿಗೆ ಬಂದ ರೀತಿಯಲ್ಲಿ ಮಾಡುವಂತಿಲ್ಲ. ಅದಕ್ಕೆ ತನ್ನದೇ ರೀತಿ ನೀತಿ ಘನತೆಗಳಿರುತ್ತವೆ. ರಾಷ್ಟ್ರೀಯ ಪಠ್ಯ ಚೌಕಟ್ಟುಗಳ ಮಾರ್ಗಸೂಚಿ ಇರುತ್ತದೆ. ಸಂವಿಧಾನದ ತತ್ವಗಳಿಗೆ ಅನುಸಾರವಾಗಿ ಇಂತಹ ಸಮಿತಿಗಳನ್ನು ರಚಿಸಬೇಕಾಗಿರುತ್ತದೆ. ಆದರೆ, ರಾಜ್ಯ ಸರ್ಕಾರ ಮೇಲ್ನೋಟಕ್ಕೆ ಕಾಣುವಂತೆ ಎಲ್ಲಾ ರೀತಿ ನೀತಿಗಳನ್ನು ಗಾಳಿಗೆ ತೂರಿ ಯಾರದೋ ಅಜೆಂಡಾವನ್ನು ಶಿಕ್ಷಣದಲ್ಲಿ ತೂರಿಸಲು ಒಂದೇ ಸಿದ್ದಾಂತ ಸಂಘಟನೆಯ ಬೆಂಬಲಿಗರನ್ನು ಸಮಿತಿಯಲ್ಲಿ ಇರಿಸಿ ದುಂಡಾವರ್ತನೆ ಪ್ರದರ್ಶಿಸಿದೆ” ಎಂದು ಟಿ ಎ ನಾರಾಯಣಗೌಡ ಕಿಡಿಕಾರಿದರು.

“ಕನ್ನಡದ ಸಂಸ್ಕೃತಿ ಪರಂಪರೆಗೆ ತಕ್ಕುದಾಗಿ ಇದ್ದಂತಹ ಹಲವಾರು ಪಠ್ಯಗಳನ್ನು ಯಾವುದೇ ಕಾರಣ ನೀಡದೇ ತೆಗದು ಹಾಕಲಾಗಿದೆ. ಕನ್ನಡದ ಹೆಮ್ಮೆಯ ಸಾಹಿತಿ ಲೇಖಕರಾದ ಪಿ ಲಂಕೇಶ್, ಸಾರಾ ಅಬೂಬಕರ್, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಅರವಿಂದ ಮಾಲಗತ್ತಿ, ಬಿ ಟಿ ಲಲಿತಾನಾಯಕ್ ಮೊದಲಾದವರ ಮೌಲಿಕ ಪಠ್ಯಗಳನ್ನೂ ಕಿತ್ತುಹಾಕಿ ಕನ್ನಡ ಚಿಂತನೆಯನ್ನೇ ಅಪಮಾನಿಸಲಾಗಿದೆ” ಎಂದು ಆಕ್ರೋಶ ಹೊರಹಾಕಿದರು.

“ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಪೆರಿಯಾರ್ ಹಾಗೂ ನಾರಾಯಣಗುರುಗಳ ಪಾಠ ತೆಗೆದು ಹಾಕಲಾಗಿದೆ. ಇವುಗಳ ಬದಲಿಗೆ ಸಂಘಪರಿವಾರದ ಸಿದ್ದಾಂತ ಆರ್‌ಎಸ್‌ಎಸ್‌ ಸಂಘಟನೆಯ ಪರವಾದ ಪಠ್ಯಗಳನ್ನು ತುರುಕಲಾಗಿದೆ. ಆ ಪಾಠಗಳು ಕುವೆಂಪು ಹೇಳಿದ ವಿಶ್ವಮಾನವತೆ ವಿರುದ್ಧ ದಿಕ್ಕಿನಲ್ಲಿವೆ. ಇನ್ನು ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯಲ್ಲಿ ಯಾವುದೇ ಶಿಕ್ಷಣ ತಜ್ಞರಿರುವುದಿಲ್ಲ” ಎಂದರು.

ಸ್ವತಃ ರೋಹಿತ್ ಚಕ್ರತೀರ್ಥ ಒಬ್ಬ ಕನ್ನಡ ವಿರೋಧಿ ಕಿಡಿಗೇಡಿ ಎಂಬುದನ್ನು ಹಲವಾರು ಸಲ ತೋರಿಸಿಕೊಂಡ ವ್ಯಕ್ತಿ. ಇವರನ್ನು ಸಮರ್ಥನೆ ಮಾಡಿಕೊಳ್ಳಲು ಶಿಕ್ಷಣ ಸಚಿವರು ಆತ ಸಿಇಟಿ ಐಐಟಿ ಪ್ರೊಫೆಸರ್‌ ಎಂದು ಹಸಿ ಹಸಿ ಸುಳ್ಳು ಹೇಳಿ ಪೇಚಿಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಈ ಪಠ್ಯವನ್ನು ಹಿಂಪಡೆದು, ಹಳೆ ಪಠ್ಯವನ್ನೇ ಮಕ್ಕಳಿಗೆ ಪೂರೈಸಬೇಕು” ಎಂದು ಟಿ ಎ ನಾರಾಯಣಗೌಡ ಒತ್ತಾಯಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗೂ ಮುನ್ನ ಕರವೇ ಕಾರ್ಯಕರ್ತರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ರಾಜ್ಯ ಸರ್ಕಾರ ಮತ್ತು ಪಠ್ಯಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕರವೇ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿನೇಶ್ ಕುಮಾರ್ ಜೊತೆಗಿದ್ದರು.

ಇದನ್ನೂ ಓದಿ: ಮುಂದುವರಿದ ಪಠ್ಯ ಅನುಮತಿ ನಿರಾಕರಣೆ ಪರ್ವ: ಪಠ್ಯ ಕೈಬಿಡಿ ಹೋರಾಟಕ್ಕೆ ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರಜಾತಂತ್ರಕ್ಕೆ ಕೊಟ್ಡ ಓಟಿನಿಂದ ಗೆದ್ದ ಪ್ರಜಾ ದ್ರೋಹಿಗಳಾದ ಶಾಸಕರನ್ನು ಖರೀದಿಸಿ ಸೆಕ್ಯುಲರ್ ಸರಕಾರವನ್ನು ಉರುಳಿಸಿ ಸರಕಾರ ಮಾಡಿಕೊಂಡ ಧರ್ಮಾಂಧ ಕೋಮುವಾದಿಗಳು ಪಾಠ ಪುಸ್ತಕವನ್ನೇ ಬುಡಮೇಲು‌ ಮಾಡಹೊರಟಿರುವುದು ದೇಶಕ್ಕೇ ಮಾಡಿದ ಅವಮಾನ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...