Homeಚಳವಳಿಸರ್ಕಾರದಿಂದ ಮಹಿಳಾ ಸಂಕುಲಕ್ಕೆ ಅವಮಾನ: ಪಠ್ಯದಿಂದ ತಮ್ಮ ಕವಿತೆ ಕೈಬಿಡುವಂತೆ ಲೇಖಕಿ ರೂಪ ಹಾಸನ ಪತ್ರ

ಸರ್ಕಾರದಿಂದ ಮಹಿಳಾ ಸಂಕುಲಕ್ಕೆ ಅವಮಾನ: ಪಠ್ಯದಿಂದ ತಮ್ಮ ಕವಿತೆ ಕೈಬಿಡುವಂತೆ ಲೇಖಕಿ ರೂಪ ಹಾಸನ ಪತ್ರ

- Advertisement -
- Advertisement -

ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ವಿರೋಧಿಸಿ ತಮ್ಮ ಪಠ್ಯವನ್ನು ಸೇರಿಸಬೇಡಿ ಎಂದು ಪತ್ರ ಬರೆಯುವ ಲೇಖಕ-ಲೇಖಕಿಯರ ಸಂಖ್ಯೆ ಏರತೊಡಗಿದೆ. ಈ ಅಭಿಯಾನಕ್ಕೆ ಕೈಜೋಡಿಸಿರುವ ಕನ್ನಡದ ಕವಯತ್ರಿ, ಲೇಖಕಿ ರೂಪ ಹಾಸನರವರು ಪರಿಷ್ಕೃತ 9 ನೆಯ ತರಗತಿಯ ಪಠ್ಯದಿಂದ ನನ್ನ “ಅಮ್ಮನಾಗುವುದೆಂದರೆ” ಕವಿತೆ ಕೈಬಿಡಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ಗೆ ಪತ್ರ ಬರೆದಿದ್ದಾರೆ.

“ಈ ವರ್ಷ ಶಾಲಾ ಪಠ್ಯಪುಸ್ತಕಗಳು ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯದಲ್ಲಿ ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆಯುವ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಆದರೆ ಆದ ತಪ್ಪನ್ನು ಸರಿಪಡಿಸಿ, ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಂದಲೇ ಅಂತಹ ಘನತೆಯುತ ಸಾಹಿತಿಗಳನ್ನು ಇನ್ನಷ್ಟು ಅವಮಾನಿಸುವ ಸಂಗತಿಗಳು ನಡೆಯುತ್ತಿರುವುದು ಖಂಡನೀಯ” ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಈಗಿನ ಪಠ್ಯ ಮರು ಪರಿಷ್ಕರಣಾ ಸಮಿತಿಯಲ್ಲಿ ಒಬ್ಬೇ ಒಬ್ಬ ಮಹಿಳಾ ಸದಸ್ಯರಿಲ್ಲದಿರುವುದು, ಹತ್ತನೆಯ ತರಗತಿಯ ಕನ್ನಡ ಪಠ್ಯದಲ್ಲಿ ಒಬ್ಬ ಮಹಿಳೆಯದೂ ಗದ್ಯ-ಪದ್ಯವಿಲ್ಲದಿರುವುದೂ, ಒಬ್ಬೇ ಒಬ್ಬ ಸಾಧಕಿಯ ಕುರಿತೂ ಪಠ್ಯವಿಲ್ಲದಿರುವುದೂ ಸರ್ಕಾರ ಮಹಿಳಾ ಸಂಕುಲಕ್ಕೆ ಮಾಡಿದ ಅವಮಾನವೆಂಬುದು ನೋವಿನ ಸಂಗತಿಯಾಗಿದೆ” ಎಂದು ರೂಪ ಹಾಸನರವರು ಬರೆದಿದ್ದಾರೆ.

“ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005″ ಸಂವಿಧಾನದ ಮೂಲತತ್ವಗಳಿಗೆ ಬದ್ಧವಾಗಿ ರೂಪುಗೊಂಡಿದೆ. ಪ್ರಜಾಪ್ರಭುತ್ವದ ಆಶಯಗಳನ್ನೊಳಗೊಂಡು ಸಮಾನತೆ, ಧರ್ಮನಿರಪೇಕ್ಷತೆ, ಲಿಂಗಸಮಾನತೆ, ಸಾಮಾಜಿಕ ನ್ಯಾಯ, ತಾರತಮ್ಯ ನಿರ್ಮೂಲನೆ, ಹಕ್ಕುಗಳ ಬಗ್ಗೆ ಗೌರವವನ್ನು ಪಠ್ಯದ ಆದ್ಯತೆಯಾಗಿ ಪರಿಗಣಿಸಬೇಕೆಂದು ಅದು ಘೋಷಿಸಿದೆ. ಆದರೆ ಪರಿಷ್ಕೃತ ಪಠ್ಯಗಳು ಆ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ” ಎಂದು ಅವರು ಹೇಳಿದ್ದಾರೆ.

ಮಗುವಿನ ಬುದ್ಧಿ ಮತ್ತು ಮನಸುಗಳು ನಮ್ಮ ಬಹುತ್ವ ಭಾರತದ ಬಹುಸಂಸ್ಕೃತಿಗಳ ಬಹು ಆಯಾಮಗಳನ್ನು ಒಳಗೊಳ್ಳುವಂತಿರಬೇಕು. ಪಠ್ಯಗಳು ವಿಶಾಲ, ಉದಾತ್ತ, ವೈಚಾರಿಕ, ವೈಜ್ಞಾನಿಕ, ಸಹಬಾಳ್ವೆ, ಸಾಮರಸ್ಯದ ಉದ್ದೇಶ ಹೊಂದಿರಬೇಕು. ಪ್ರತಿ ಮಗುವೂ ಪ್ರೀತಿ, ಆಹಿಂಸೆ ಮತ್ತು ಐಕ್ಯತೆದಿಂದ ಬೆಳೆಯುವಂತೆ, ಮುಕ್ತಚಿಂತನೆಯಿಂದ ಕೂಡಿದ ಸಮಚಿತ್ತದ ಪಠ್ಯವನ್ನು ರೂಪಿಸಲು ಆದ್ಯತೆ ನೀಡಬೇಕಿದ್ದುದು ಅತ್ಯಂತ ಮುಖ್ಯವಾಗಿತ್ತು. ಆದರೆ ಈ ಚೌಕಟ್ಟಿನ ಆಶಯಕ್ಕನುಗುಣವಾಗಿ ಮರು ಪರಿಷ್ಕರಣೆ ನಡೆದಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಒಂಬತ್ತನೆಯ ತರಗತಿ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ನುಡಿಕನ್ನಡ’ ಪಠ್ಯದಲ್ಲಿ ಅಳವಡಿಕೆಯಾಗಿದ್ದ ನನ್ನ “ಅಮ್ಮನಾಗುವುದೆಂದರೆ” ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ದೇವನೂರು ಮಹಾದೇವರವರು ಆರಂಭಿಸಿದ ಈ ಪಠ್ಯ ವಾಪ್ಸಿ ಚಳವಳಿಗೆ ವ್ಯಾಪಕ ಬೆಂಬಲ ದೊರಕಿದೆ. ಅವರ ಹಾದಿಯಲ್ಲಿದೇ ಹಿರಿಯ ಸಾಹಿತಿಗಳಾದ ಜಿ.ರಾಮಕೃಷ್ಣ, ಎಸ್‌.ಜಿ ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಈರಪ್ಪ ಕಂಬಳಿ,ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನರವರ ಸೇರ್ಪಡೆಗೊಂಡಿದ್ದರು. ಇದೀಗ ರೂಪ ಹಾಸನರವರು ಅದೇ ಹಾದಿ ತುಳಿದಿದ್ದಾರೆ. ಇದು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಇದನ್ನೂ ಓದಿ: ಮುಂದುವರಿದ ಪಠ್ಯ ಅನುಮತಿ ನಿರಾಕರಣೆ ಪರ್ವ: ಪಠ್ಯ ಕೈಬಿಡಿ ಹೋರಾಟಕ್ಕೆ ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನ ಸೇರ್ಪಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...