“ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದಾರೆ, ಪ್ರಜ್ವಲ್ ವಿದೇಶಕ್ಕೆ ಹಾರಿಹೋಗಿದ್ದ ಹಿಂದೆಯೂ ಕೇಂದ್ರ ಸರ್ಕಾರ ನಿಂತಿದೆ. ಪ್ರಕರಣವನ್ನು ಹಳ್ಳ ಹಿಡಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ” ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ನಡೆದ ‘ಹೋರಾಟದ ನಡಿಗೆ, ಹಾಸನದ ಕಡೆಗೆ..’ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನಾಡಿನ ಜನರ ಪರವಾಗಿ ಧನಿ ಎತ್ತಿದ್ದ ಹಾಸನ ಜಿಲ್ಲೆಯಲ್ಲಿ ಇಂದು ಬೃಹತ್ ಶೋಷಣೆ ನಡೆದಿದೆ. ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧ ಇಲ್ಲವೆಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಇಂದು ಅವರು ಮಾಧ್ಯಮಗಳ ಮುಂದೆ ಪದೇಪದೆ ಬಂದು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ತಮ್ಮಕಾಮುಕರ ಕುಟುಂಬದ ಪರವಾಗಿರುವ ಕುಮಾರಸ್ವಾಮಿ ಮತ್ತು ಅವರ ಕುಟುಂಬವನ್ನು ಬಗ್ಗುಬಡಿಯಬೇಕು” ಎಂದು ಕರೆ ನೀಡಿದರು.
“ಕಾನೂನಿನ ಮುಂದೆ ರೇವಣ್ಣ ಕುಟುಂಬದ ನಿಂಬೆಕಾಯಿಗಳು ಕೆಲಸಕ್ಕೆ ಬರುವುದಿಲ್ಲ. ದೇವರೇ ನನ್ನನ್ನ ಕಳಿಸಿದ್ದಾರೆ ಎಂದು ಪ್ರಧಾನಿ ಹೇಳ್ತಿದ್ದಾರೆ. ದೇವರಾದ ಮೋದಿ ಅವರಿಗೆ ನಾನು ಹೇಳುತ್ತಿದ್ದೇನೆ.. ವಿವೇಕಾನಂದರನ್ನ, ದೇವರನ್ನ ನೀವು ಅವಮಾನಿಸಬೇಡಿ. ಪ್ರಜ್ವಲ್ ಪ್ರಕರಣದಲ್ಲಿ ಮೋದಿ ಮೌನವಾಗಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹಾರಿಹೋಗಿದ್ದ ಹಿಂದೆಯೂ ಕೇಂದ್ರ ಸರ್ಕಾರ ನಿಂತಿದೆ. ಪ್ರಕರಣವನ್ನು ಹಳ್ಳ ಹಿಡಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅದಕ್ಕೆ ಆಸ್ಪದ ಕೊಡದೆ, ರಾಜ್ಯ ಸರ್ಕಾರ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಮುಖಂಡರಾದ ವರಲಕ್ಷ್ಮಿ, “ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನ ಪಕ್ಷಗಳು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣವನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡಿತು. ಆಕೆಯ ಕುಟುಂಬಸ್ಥರನ್ನು ಭೇಟಿ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಹೆಣ್ಣು ಮಕ್ಕಳ ರಕ್ಷಣೆಗೆ ನಮ್ಮ ಸರ್ಕಾರ ಪಣ ತೊಟ್ಟಿದೆ ಎಂದು ಹೇಳಿದ್ದರು. ಆದರೆ, ಹಾಸನ ಪ್ರಕರಣದಲ್ಲಿ ಅವರು ಎಲ್ಲಿದ್ದಾರೆ. ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ; ‘ಓನ್ಲೀ ಜೈಲ್, ನೋ ಬೇಲ್’ ಎಂದು ಪ್ರಜ್ವಲ್ ರೇವಣ್ಣನಿಗೆ ಸರ್ಕಾರ ಹೇಳಬೇಕು: ಸುಭಾಷಿಣಿ ಅಲಿ


