ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯರನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೋರಿದ್ದಾರೆ. ಅವರನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದಿಲ್ಲ ಎಂದು ಅವರು ಪತ್ರದಲ್ಲಿ ಕೇಂದ್ರಕ್ಕೆ ತಿಳಿದ್ದಾರೆ.
ಐದು ಪುಟಗಳ ಪತ್ರಗಳನ್ನು ಬರೆದಿರುವ ಮಮತಾ ಬ್ಯಾನರ್ಜಿ ಮುಖ್ಯ ಕಾರ್ಯದರ್ಶಿಯನ್ನು ವಾಪಸ್ ಕರೆಸಿಕೊಳ್ಳುವ ಕೇಂದ್ರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಕೇಂದ್ರದ ಆದೇಶವನ್ನು ಏಕಪಕ್ಷೀಯ ಎಂದು ಕರೆದಿರುವ ಅವರು, “ಈ ನಿರ್ಧಾರದಿಂದ ತಾನು ಆಘಾತಕ್ಕೊಳಗಾಗಿದ್ದು, ಇದನ್ನು ರಾಜ್ಯ ಸರ್ಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ಆದೇಶ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೇ 10 ರಿಂದ ಲಾಕ್‌ಡೌನ್ – ‘ಜನ ಹೊಟ್ಟೆಗೆ ಏನು ತಿಂತಾರೆ?’; ಆಕ್ರೋಶ
ಪಶ್ಚಿಮ ಬಂಗಾಳದ ಜನರಿಗಾಗಿ ನಾನು ಮನವಿ ಮಾಡುತ್ತಿದ್ದೇನೆ, ಸಾರ್ವಜನಿಕರ ಹಿತಾಸಕ್ತಿಗಾಗಿ ನಿಮ್ಮ ಆದೇಶವನ್ನು ಕೈಬಿಡಬೇಕು, ಹಿಂದೆಗೆದುಕೊಳ್ಳಬೇಕು ಮತ್ತು ಮರುಪರಿಶೀಲಿಸಬೇಕು ಎಂದು ಅವರು ತಿಳಿಸಿದ್ದು, “ಈ ನಿರ್ಣಾಯಕ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಅವರನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ಆಗುವುದಿಲ್ಲ” ಎಂದು ಪತ್ರದಲ್ಲಿ ಹೇಳಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ಕೇಂದ್ರವು ಮೇ 28 ರ ಶುಕ್ರವಾರದಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು.
ಅದಕ್ಕೂ ಮೊದಲು ಅಲಪನ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ಮೋದಿಯನ್ನು ಭೇಟಿ ಮಾಡಿ ಯಾಸ್ ಚಂಡಮಾರುತದಿಂದ ಉಂಟಾದ ಹಾನಿ ಕುರಿತಾಗಿ ವರದಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಕೇಂದ್ರವು ಕರೆದಿದ್ದ ಪುನರ್ ಪರಿಶೀಲಿನೆ ಸಭೆಗೆ ಅವರು ಗೈರಾಗಿದ್ದರು. ಇದರ ಬೆನ್ನಲ್ಲೆ ಅವರನ್ನು ಕೇಂದ್ರಕ್ಕೆ ವಾಪಾಸ್ ಕಳುಹಿಸಬೇಕು ಎಂದು ಕೇಂದ್ರವು ರಾಜ್ಯವನ್ನು ಕೇಳಿಕೊಂಡಿತ್ತು.
ಈ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ ಕೇಂದ್ರವು ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ


