Homeಮುಖಪುಟಜಗ್ಗಿ ವಾಸುದೇವ್ ಎಂಬ ಸೇಲ್ಸ್‌ಮನ್: ಧರ್ಮ, ಆಧ್ಯಾತ್ಮ, ಕಾವೇರಿ, ಶಿವನ ಹೆಸರಲ್ಲಿ ಸುಲಿಗೆ, ತೆರಿಗೆ ವಂಚನೆ....

ಜಗ್ಗಿ ವಾಸುದೇವ್ ಎಂಬ ಸೇಲ್ಸ್‌ಮನ್: ಧರ್ಮ, ಆಧ್ಯಾತ್ಮ, ಕಾವೇರಿ, ಶಿವನ ಹೆಸರಲ್ಲಿ ಸುಲಿಗೆ, ತೆರಿಗೆ ವಂಚನೆ….

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಬರುತ್ತಿದ್ದಂತೆಯೇ, ‘ಸದ್ಗುರು’ ಎಂದು ಕರೆಯಲ್ಪಡುವ ವಾಸುದೇವ್ ಎಂಬ ತೆರಿಗೆ ವಂಚಕ, ಸ್ವಘೋಷಿತ ದೇವಮಾನವ ತತ್ತರಿಸಿ ಹೋಗಿದ್ದಾರೆ.

- Advertisement -
- Advertisement -

ಒಂದು ಸಸಿ ನೆಡ್ತೀವಿ, ಅದಕ್ಕಿಷ್ಟ ರೊಕ್ಕ ಕೊಡ್ರೀ ಎಂದು ‘ಕಾವೇರಿ ಕಾಲಿಂಗ್’ ಹೆಸರಲ್ಲಿ ಈ ವೃದ್ಧ ವಂಚಕ ಕಳ್ಳಾಟ ನಡೆಸಿದ್ದನ್ನು ಮೊದಲು ಪ್ರಶ್ನೆ ಮಾಡಿದ್ದು ಕರ್ನಾಟಕದ ಹೈಕೋರ್ಟ್. ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಎಂದು ಸುಳ್ಳೇ ಪ್ರಚಾರ ಮಾಡಿದ್ದ ಜಗ್ಗಿ ವಾಸುದೇವ್, ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮಕ್ಕಳಿಂದಲೂ ಒಂದು ಸಸಿಗೆ 42 ರೂ. ಪೀಕಿದ್ದರು. ಅಲ್ಲಪ್ಪಾ, ಕರ್ನಾಟಕ ಸರ್ಕಾರದ ಹೆಸರು ಯಾಕ್ ದುರ್ಬಳಕೆ ಮಾಡಿಕೊಂಡಿರಿ? ಸಸಿ ಎಲ್ಲಿ ನೆಟ್ಟಿದ್ದಿರಿ ದಾಖಲೆ ತೋರಿಸ್ರಪ್ಪಾ ಎಂದು ಹೈಕೋರ್ಟ್ ಪ್ರಶ್ನಿಸಿದಾಗ ಜಗ್ಗಿಯ ಇಶಾ ಫೌಂಡೇಷನ್ ಏನೋ ಹೇಳಿ ಮತ್ತಷ್ಟು ತೊಂದರೆಗೆ ಸಿಲುಕಿತ್ತು. ಕೊನೆಗೆ ಹೈಕೋರ್ಟ್ ದಂಡ ವಿಧಿಸಿತು.

ಹೀಗೆ ಹಲವಾರು ಕಾನೂನು ಸಮಸ್ಯೆ ಎದುರಿಸುತ್ತಿರುವ ಈ ಮಹಾಶಯ ಈಗ, ತಮಿಳುನಾಡಿನ ಸರ್ಕಾರ ತನಿಖೆಯ ಮಾತಾಡಿದೊಡನೇ ಗಾಯಬ್ ಆಗಿದ್ದಾರೆ. ಆದರೆ ಅವರ ಇಶಾ ಸಂಸ್ಥೆಯ ಅಧಿಕಾರಿ ವಲಯ ಈತನ ಪರ ವಕಾಲತ್ತು ವಹಿಸಿದೆ. ಇದಕ್ಕೆ ಪೂರಕವಾಗಿ ಇಶಾ ಸಂಸ್ಥೆಯ ಅಕ್ರಮ ಕಟ್ಟಡಗಳ ಬಗ್ಗೆ ನ್ಯೂಸ್‌ಲಾಂಡ್ರಿ ಪ್ರಕಟಿಸಿದ ವರದಿಗೆ ಅದು ಆಕ್ಷೇಪ ವ್ಯಕ್ತಪಡಿಸಿ, ಸಮರ್ಥನೆ ಮಾಡಿಕೊಂಡಿದೆ. ಆದರೆ, ದಾಖಲೆಗಳೇ ಇಲ್ಲ!

ಜಗ್ಗಿ ವಾಸುದೇವ್ ಹಿನ್ನಲೆ

ಈತ ಮೆಟಾ-ಫಿಜಿಕ್ಸ್ ವ್ಯಾಪಾರಿ. ನಿತ್ಯಾನಂದನಂತೆ ಸೈನ್ಸ್ ಮತ್ತು ಆಧ್ಯಾತ್ಮವನ್ನು ಮಿಕ್ಸ್ ಮಾಡಿ ‘ಬೋಧನೆ’ ಮಾಡುತ್ತಾರೆ. ಈತನ ಬಹುತೇಕ ಶಿಷ್ಯರು, ಅನುಯಾಯಿಗಳು ಉನ್ನತ ಶಿಕ್ಷಣ ಪಡೆದ ಮಧ್ಯಮವರ್ಗದ ನಗರವಾಸಿಗಳು! ರಾಮದೇವ್, ರವಿಶಂಕರ್ ಅವರಂತೆಯೇ ಈ ಜಗ್ಗಿಯೂ ಮೋದಿ ಬೆಂಬಲಿಗ. ರಾಮದೇವ್, ರವಿಶಂಕರ್, ಜಗ್ಗಿ ವಾಸುದೇವರ ಅನುಯಾಯಿಗಳನ್ನು ಪ್ರತಿನಿಧಿಸುವ ಮೂರು ವೃತ್ತಗಳ ಒಂದು ವೆನ್ ನಕ್ಷೆ ಹಾಕಿದರೆ, ಒಂದಕ್ಕೊಂದು ಸಂಧಿಸುವ ಜಾಗದಲ್ಲಿ ಮತ್ತು ಮೂರು ವೃತ್ತಗಳು ಸಂಧಿಸುವ ಜಾಗದಲ್ಲಿ ಮೋದಿಯ ಅನುಯಾಯಿಗಳೇ ಇರುತ್ತಾರೆ! ಭಾರತದಲ್ಲಿ ಆಧ್ಯಾತ್ಮಿಕ ಬಂಡವಾಳಶಾಹಿಯ ಬೆಳವಣಿಗೆಗೆ ಭಕ್ತಗಣ ಒಂದು ದೊಡ್ಡ ಗ್ರಾಹಕ ಸಮೂಹವಾಗಿದೆ.

ಕಟ್ಟಡವೂ ಅಕ್ರಮ, ದಂಧೆಯೂ ಅಕ್ರಮ

ವಾಸುದೇವ್ ಅವರ ಇಶಾ ತನ್ನ ಯೋಗ ಕೇಂದ್ರವನ್ನು ಅಕ್ರಮವಾಗಿ ನಿರ್ಮಿಸಿದೆ ಎಂದು ನ್ಯೂಸ್‌ಲಾಂಡ್ರಿ ಕಳೆದ ವಾರ ವರದಿ ಮಾಡಿದೆ. ಅದಕ್ಕೆ ಪುರಾವೆ ಕೂಡ ಇದೆ.
ಪರಿಸರ ಇಲಾಖೆ ಅಧಿಸೂಚನೆಯನ್ನು ಉಲ್ಲಂಘಿಸಿ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ ಎಂದು ಇಶಾ ಸ್ವತಃ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಎದುರು ಒಪ್ಪಿಕೊಂಡಿದೆ!

ಭಾರತದ ಅತ್ಯಂತ ಪ್ರಭಾವಶಾಲಿ ‘ದೇವಮಾನವ’ರಲ್ಲಿ ಒಬ್ಬರಾದ ಜಗ್ಗಿ ವಾಸುದೇವ್ ಅವರ ಏರಿಕೆ, ಅವರ ಲೌಕಿಕ ಮತ್ತು “ಆಧ್ಯಾತ್ಮಿಕ” ವ್ಯವಹಾರಗಳು ಮತ್ತು ಕೊಯಮತ್ತೂರು ಬಳಿ ಅವರ ಇಶಾ ಯೋಗ ಕೇಂದ್ರವನ್ನು ಸ್ಥಾಪಿಸುವಲ್ಲಿ ಅನೇಕ ಅಕ್ರಮಗಳ ಕುರಿತು ನ್ಯೂಸ್‌ಲಾಂಡ್ರಿ ಮೂರು ಭಾಗಗಳ ಸರಣಿಯನ್ನು ಪ್ರಕಟಿಸಿತು. ಈ ವರದಿಗಳಿಗೆ ಪ್ರತಿಕ್ರಿಯಿಸಿದ ಇಶಾ, “ಯೋಗ ಕೇಂದ್ರದಲ್ಲಿನ ಎಲ್ಲಾ ಕಟ್ಟಡಗಳು ಕಾನೂನುಬದ್ಧವಾಗಿವೆ ಮತ್ತು ಯಾವುದೇ ಕಾನೂನುಗಳನ್ನು ಉಲ್ಲಂಘಿಸಿಲ್ಲ’ ಎಂದು ಹೇಳಿದೆ.

ಪರಿಸರ ನಿಯಮಗಳನ್ನು ಉಲ್ಲಂಘಿಸಿ ತನ್ನ ಯೋಗ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಇಶಾ ಒಪ್ಪಿಕೊಂಡಿದ್ದಕ್ಕೆ ನ್ಯೂಸ್‌ಲಾಂಡ್ರಿ ಸಾಕ್ಷ್ಯವನ್ನು ಹೊಂದಿದೆ.
ಇಶಾ ಯೋಗ ಕೇಂದ್ರವು 4,87,418 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಇದು ಧ್ಯಾನಲಿಂಗ ಧ್ಯಾನ ಸಂಕೀರ್ಣ, ಸ್ಪಂಡಾ ಹಾಲ್, ಅದಿಯೋಗಿ ಧ್ಯಾನ ಭವನ, ಮಂಟಪ, ಇಶಾ ಶಾಲೆ ಮತ್ತು ಕಾವೇರಿ, ನರ್ಮದಾ, ನೊಯಾಲ್ ಮತ್ತು ನೇತ್ರಾವತಿ ಕುಟೀರಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ, 68 ರಚನೆಗಳಿವೆ. ಕಾರ್ಯವಿಧಾನದ ಪ್ರಕಾರ, ನಿರ್ಮಾಣದ ನಂತರದ ಪರಿಸರ ಅನುಮತಿ ಪಡೆಯಲು ಬಯಸುವ ಅರ್ಜಿದಾರರು ತಮ್ಮ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಂಡವನ್ನು ಪಾವತಿಸಲು ಕಾನೂನು ಪ್ರಕರಣವನ್ನು ಎದುರಿಸಬೇಕಾಗುತ್ತದೆ. ಕಾನೂನು ಮೊಕದ್ದಮೆ ಹೂಡಲು ಇಶಾ ಬಯಸಲಿಲ್ಲ.

ಇಂತಹ ಉಲ್ಲಂಘನೆಗಳನ್ನು ಮಾಡುವವರು ಕಾನೂನು ಪ್ರಕರಣವನ್ನು ಎದುರಿಸಬೇಕಾಗುತ್ತದೆ ಮತ್ತು ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಅದು ನಿಯಮ. ಇಶಾ ತನ್ನ ಅರ್ಜಿಯನ್ನು ಸಲ್ಲಿಸಿದಾಗ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು, “ಇಶಾ ಕಾರ್ಯವಿಧಾನವನ್ನು ಅನುಸರಿಸಲು ಸಿದ್ಧವಾಗಿಲ್ಲ. ಅವರು ಪರಿಹಾರವನ್ನು ಪಾವತಿಸುವುದಾಗಿ ಹೇಳಿದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುವುದಿಲ್ಲ. ಅವರು ಪ್ರಕರಣವನ್ನು ತಪ್ಪಿಸಲು ಯಾವುದೇ ಮಾರ್ಗವಿಲ್ಲ ಎಂದು ನಾವು ಅವರಿಗೆ ಹೇಳಿದೆವು. ಅವರು ಪರಿಸರ ಕಾನೂನು ಉಲ್ಲಂಘನೆ ಮಾಡಿದ್ದಾರೆ’ ಎನ್ನುತ್ತಾರೆ. ಸರ್ಕಾರದ ಮೂಲಗಳ ಪ್ರಕಾರ, ಕಟ್ಟಡಗಳಾಚೆ ನೋಡುವುದಾದರೆ, ಅದಕ್ಕೂ ಮಿಗಿಲಾದ ತೆರಿಗೆ ವಂಚನೆಯನ್ನು ಸದ್ಗುರು ಮಾಡುತ್ತಿದ್ದಾರೆ.

ಮ್ಯಾಜಿಕ್ ಮಂತ್ರವೆಂದರೆ ‘ದಾನ, ದೇಣಿಗೆ’

ಅಮೆರಿಕದಲ್ಲಿ ನೋಂದಾಯಿಸಲ್ಪಟ್ಟ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್, ಆಂತರಿಕ ಕಂದಾಯ ಸೇವೆಯ ದಾಖಲೆಗಳ ಪ್ರಕಾರ, 2018 ರಲ್ಲಿ 56.43 ಕೋಟಿ ರೂ. ಆದಾಯ ಹೊಂದಿತ್ತು. ಇದರಲ್ಲಿ ಭಾರತದಲ್ಲಿನ ಪ್ರತಿಷ್ಠಾನದ ಸುಮಾರು 35.81 ಕೋಟಿ ರೂ. ಆದಾಯದ ಬಗ್ಗೆ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ. ಆದರೆ ಅದು ಅಂತಹ ವಹಿವಾಟುಗಳನ್ನು ದೇಣಿಗೆಗಳು ಅಥವಾ ಕೊಡುಗೆಗಳು ಎಂದು ಹೇಳುತ್ತದೆ. ಕನಿಷ್ಠ ಕೆಲವು ದೇಣಿಗೆಗಳು ಹಾಗಲ್ಲ ಎಂಬುದಕ್ಕೆ ಪುರಾವೆಗಳಿವೆ..

ಇದನ್ನೂ ಓದಿ: ’ಕಾವೇರಿ ಕಾಲಿಂಗ್’ ಪ್ರಕರಣ: ಡಿಸ್ಕವರಿ ಚಾನೆಲ್‌ಗೆ ಕಾರ್ಯಕ್ರಮ ನಿಲ್ಲಿಸಲು ಕಾನೂನು ನೋಟಿಸು ನೀಡಿದ್ದೀರ ಎಂದು ಕೇಳಿದ ಹೈಕೋರ್ಟ್

ಆದರೆ ಅದರ ಆದಾಯವು ಮುಖ್ಯವಾಗಿ ದೇಣಿಗೆಗಳಿಂದ ಬರಬೇಕೆಂದು ಇಶಾ ಏಕೆ ಬಯಸುತ್ತದೆ? ಪುಸ್ತಕ, ಸಸಿಗಳನ್ನು ಮಾರಾಟ ಮಾಡುವಾಗಲೂ ಈ ಸಂಸ್ಥೆ ತೆರಿಗೆ ವಿನಾಯ್ತಿ ಪಡೆದಿದೆ. ಇದನ್ನು ಕೋರ್ಟುಗಳೂ ಪ್ರಶ್ನೆ ಮಾಡಿವೆ.

ಸಸಿ ವ್ಯಾಪಾರದ ಸ್ಯಾಂಪಲ್

“ನಾನು 2017 ರ ಕೊನೆಯಲ್ಲಿ ಮೂರು ಬಾರಿ ಇಶಾ ಮಧುರೈ ಕೇಂದ್ರದಿಂದ ಸಸಿಗಳನ್ನು ಖರೀದಿಸಿದೆ, ಒಮ್ಮೆ 8,000 ರೂಗಳಿಗೆ ಮತ್ತು ಎರಡು ಬಾರಿ 3,000 ರೂಗಳಿಗೆ ಖರೀದಿಸಿದ್ದೆನೆ. ಅವರು ಎಂದಿಗೂ ನನಗೆ ಬಿಲ್ ನೀಡಿಲ್ಲ ಮತ್ತು ನಾನು ಕೇಳಲಿಲ್ಲ. ಏಕೆಂದರೆ ನನಗೆ ಅದರ ಅಗತ್ಯವಿರಲಿಲ್ಲ. 4-5 ತಿಂಗಳ ನಂತರ ನಾನು ಇಶಾ ಅವರಿಗೆ 1,242 ರೂ.ಗಳ ದೇಣಿಗೆ ನೀಡಿದ್ದೇನೆ ಎಂದು ಇಮೇಲ್ ಬಂದಿತು. ಅವರು ನನಗೆ ದೇಣಿಗೆ ರಶೀದಿಯನ್ನು ಸಹ ಕಳುಹಿಸಿದ್ದಾರೆ’ ಎಂದು ತಮಿಳುನಾಡಿನ ದಿಂಡಿಗಲ್‌ನ ಸಾವಯವ ಕೃಷಿಕ ನಾಗಪ್ಪನ್ ಗೌತಮ್ (37) ಹೇಳಿದರು. “ಆದರೆ ಇದು ದೇಣಿಗೆ ಅಲ್ಲ, ಇದು ಸರಳ ವ್ಯಾಪಾರವಾಗಿತ್ತು. ಇದಕ್ಕಿಂತ ಹೆಚ್ಚಾಗಿ, ನಾನು ಅವರ ಉತ್ಪನ್ನವನ್ನು 14,000 ರೂಗಳಿಗೆ ಖರೀದಿಸಿದೆ ಮತ್ತು ಅವರು 1,242 ರೂ. ಮೊತ್ತ ನಮೂದಿಸಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಅಡಿಯಲ್ಲಿ ವಿನಾಯಿತಿ ಪಡೆದ ಇಶಾ ಟ್ರಸ್ಟ್‌ಗೆ ನಾನು ದೇಣಿಗೆ ನೀಡಿದ್ದೇನೆ ಎಂದು ರಶೀದಿಯಲ್ಲಿ ತಿಳಿಸಿದ್ದಾರೆ. ಇದು ಮೋಸ. ಅವರು ದೇಣಿಗೆಗಳಿಂದ ಬರುವಂತೆ ತೋರಿಸುವುದರ ಮೂಲಕ ಎಲ್ಲಾ ಹಣದ ಮೇಲೆ ತೆರಿಗೆ ಉಳಿಸಲು ಬಯಸುತ್ತಾರೆ’ ಎನ್ನುತ್ತಾರೆ ಎಂದು ನ್ಯೂಸ್ ಲಾಂಡ್ರಿ ವರದಿ ಹೇಳುತ್ತದೆ.

2014ರಲ್ಲಿ, ಕೊಯಮತ್ತೂರಿನ ಅಲಂಡುರೈ ಪೊಲೀಸ್ ಠಾಣೆಯಲ್ಲಿ ಭಾರತೀಯ ಮೂಲದ ಸ್ವೀಡಿಷ್ ಪ್ರಜೆ ಇಶಾ ವಿರುದ್ಧ ಮೋಸ ಮಾಡಿದ ದೂರು ದಾಖಲಿಸಿದ್ದರು. ಜಯಾ ಬಾಲು ಅವರು ಯೋಗ ಅಧಿವೇಶನಗಳಿಗಾಗಿ 4,50,000 ರೂಗಳನ್ನು ಪಾವತಿಸಿದ್ದರು. ಆದರೆ ಬಿಲ್ ಬದಲಿಗೆ ಆಕೆಗೆ ದೇಣಿಗೆ ರಶೀದಿಯನ್ನು ನೀಡಲಾಯಿತು. ತೆರಿಗೆ ವಂಚನೆಯ ಮತ್ತೊಂದು ಕಸುಬು!

ಯೋಗ ಮತ್ತು ಆಧ್ಯಾತ್ಮಿಕ ಸೇವೆಗಳನ್ನು ಮಾರಾಟ ಮಾಡುವುದರ ಹೊರತಾಗಿ, ಇಶಾ ಆಹಾರ ಉದ್ಯಮಗಳು – ಇಶಾ ಫುಡ್ಸ್ ಮತ್ತು ಮಸಾಲೆಗಳು, ಇಶಾ ಕ್ರಾಫ್ಟ್ಸ್, ಇಶಾ ನ್ಯಾಚುರೊ ಆರ್ಗ್ಯಾನಿಕ್ ಸೊಲ್ಯೂಷನ್ಸ್, ತ್ರಿಶೂಲ್ ಫೌಂಡೇಶನ್ಸ್, ತ್ರಿಶೂಲ್ ಶೆಲ್ಟರ್ಸ್, ಕೃಶಿ ಲ್ಯಾಂಡ್ ಫಾರ್ಮ್ಸ್, ಇಶಾ ಆರೋಗ್ಯ, ಇಶಾ ಇನ್‌ಸ್ಟಿಟ್ಯೂಟ್, ಇನ್ನರ್ ಸೈನ್ಸಸ್, ಇಶಾ ಲೈಫ್ ರಿಸರ್ಚ್ ಫೌಂಡೇಶನ್, ಇಶಾ ಲೈಫ್ ಫಿಟ್ನೆಸ್ ಸಿಸ್ಟಮ್, ಇಶಾ ಕ್ಯಾಪಿಟಲ್, ಇಶಾ ಬ್ಯೂಟಿ ಪ್ರಾಡಕ್ಟ್ಸ್ ಮತ್ತು ವೆಲ್ನೆಸ್- ಹೀಗೆ ಹಲವು ಸಂಸ್ಥೆಗಳನ್ನು ನಡೆಸುತ್ತಿದ್ದು ಎಲ್ಲದರಲ್ಲು ತೆರಿಗೆ ವಂಚನೆಯೇ ಎದ್ದು ಕಾಣುತ್ತದೆ.

ಈ ವರ್ಷ, ಕೋವಿಡ್ ಪ್ರಯಾಣದ ಯೋಜನೆಗಳನ್ನು ನಿರ್ಬಂಧಿಸುವ ಮೊದಲು, ತಲಾ 60 ಜನರ 17 ಗುಂಪುಗಳು 2,75,000 ಪ್ಯಾಕೇಜ್ ಅನ್ನು ಕಾಯ್ದಿರಿಸಿದ್ದವು. ಕೋವಿಡ್ ಕಾರಣಕ್ಕೆ ಕಾರ್ಯಕ್ರಮ ರದ್ದಾಗಿತು. ನಾಲ್ವರು 3,45,000 ರೂಗಳನ್ನು ಮತ್ತು ಇಬ್ಬರು 5,50,000 ರೂಗಳನ್ನು ವಾಪಸ್ ಪಡೆದಿದ್ದಾರೆ. ಉಳಿದಿದ್ದು ಎಷ್ಟು? ಲೆಕ್ಕ ಮಾಡಿಕೊಳ್ಳಿ.

ಅಂತೆಯೇ, ಜಗ್ಗಿ ಆಧ್ಯಾತ್ಮಿಕ ಪ್ರವಾಸ ಎಂಬ ಟ್ರಾವೆಲಿಂಗ್ ದಂಧೆಯನ್ನೂ ಮಾಡುತ್ತಿದ್ದಾರೆ. ವಾಸುದೇವ್ ಅವರೊಂದಿಗೆ ಹಿಮಾಲಯಕ್ಕೆ ಮೋಟಾರ್ ಸೈಕಲ್‌ನಲ್ಲಿ 12 ದಿನಗಳ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 12 ಲಕ್ಷ ರೂ! ಐದು ದಿನಗಳ ವಾರಣಾಸಿ ಪ್ರವಾಸಕ್ಕೆ ಐದು ಲಕ್ಷ ರೂ! ಮೈಸೂರಿನ ಚಾಮುಂಡಿ ಬೆಟ್ಟದ ದರ್ಶನದ ಪ್ರವಾಸಕ್ಕೆ 50 ಸಾವಿರ ರೂ ಮತ್ತು ರಾಮೇಶ್ವರಂ ಅಥವಾ ಮಧುರೈಗೆ ಐದು ದಿನಗಳ ಪ್ರವಾಸಕ್ಕೆ ಒಬ್ಬ ಭಕ್ತನಿಗೆ 45,000 ರೂ. ಹೇಗಿದೆ ಆಧ್ಯಾತ್ಮಿಕ ಪ್ರವಾಸದ ರೇಟು ಪಟ್ಟಿ? ಇದು ಸುಲಿಗೆಯಲ್ಲವೇ? ಜೊತೆಗೆ ಇದಕ್ಕೆ ತೆರಿಗೆ ಕಟ್ಟುವ ಜವಾಬ್ದಾರಿಯೂ ಇಶಾ ಸಂಸ್ಥೆಗೆ ಇಲ್ಲ!

ಈ ಎಲ್ಲಾ ‘ಆಧ್ಯಾತ್ಮಿಕ’ ಪ್ರವಾಸಗಳನ್ನು ಮಾರಾಟ ಮಾಡುವುದರಿಂದ, ಜಗ್ಗಿಯ ಇಶಾ ಸಂಸ್ಥೆಗೆ ವಾರ್ಷಿಕ 60 ಕೋಟಿ ರೂ. ಲಾಭ ದೊರಕುತ್ತಿದೆ. ಇದರಲ್ಲಿ ಬಹುತೇಕವನ್ನು ದೇಣಿಗೆ ಹೆಸರಲ್ಲಿ ತೋರಿಸಿ ತೆರಿಗೆ ರಿಯಾಯಿತಿ ಪಡೆಯಲಾಗುತ್ತಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ.

ಅಯ್ಯೋ ಶಿವನೇ!

ಶಿವನ ಹೆಸರಲ್ಲೂ ಇಶಾ ಸಂಸ್ಥೆ ಸುಲಿಗೆ ಮಾಡುತ್ತಿದೆ. ತಮಿಳುನಾಡಿನ ಕೊಯಂಬತ್ತೂರಿನ ಇಶಾ ಕ್ಯಾಂಪಸ್‌ನಲ್ಲಿ ವಾರ್ಷಿಕ ಮಹಾಶಿವರಾತ್ರಿ ಉತ್ಸವ ನಡೆಯುತ್ತದೆ. ಇದಕ್ಕಾಗಿ ಟಿಕೆಟ್ ದರಗಳನ್ನು 250 ರೂ.ಗಳಿಂದ 50,000 ರೂ.ವರೆಗೆ ಫಿಕ್ಸ್ ಮಾಡಲಾಗಿದೆ. 2020ರಲ್ಲಿ ಉತ್ಸವದಲ್ಲಿ ಅಂದಾಜು 10,00,000 ಜನರು ಭಾಗವಹಿಸಿದ್ದರು. ಒದಗಿಸಿದ ಸೌಲಭ್ಯಗಳನ್ನು ಅವಲಂಬಿಸಿ ನಾಲ್ಕು ದಿನಗಳ ಕಾರ್ಯಕ್ರಮಕ್ಕೆ 50,000 ರೂ, 1,50,000 ಅಥವಾ 2,50,000 ರೂ.ಗಳನ್ನು ವಸೂಲಿ ಮಾಡಲಾಗಿದೆ.

ಇದನ್ನೂ ಓದಿ; ಜಗ್ಗಿ ವಾಸುದೇವ್ ಹಣ ಸಂಗ್ರಹಿಸುವಂತಿಲ್ಲ: ಹೈಕೋರ್ಟ್ ನಲ್ಲಿ ಪಿ.ಐ.ಎಲ್

“ನಾನು 1,50,000 ರೂ.ಗಳ ಪ್ಯಾಕೇಜ್ ಖರೀದಿಸಿದೆ ಮತ್ತು ಅದೇ ಪ್ಯಾಕೇಜ್‌ನಲ್ಲಿ ನಮ್ಮಲ್ಲಿ ಸುಮಾರು 300 ಮಂದಿ ಇದ್ದರು” ಎಂದು 2021 ರ ಮಹಾಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಿದ ವಾಸುದೇವ್ ಅನುಯಾಯಿ ಹೇಳಿದರು. “ಈ ಒಂದು ಪ್ಯಾಕೇಜ್‌ನಿಂದಲೇ ನಾಲ್ಕು ದಿನಗಳಲ್ಲಿ ಅದು 4.5 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ. ನೆಟ್ಟ ಸಸಿಗಳ ಲೆಕ್ಕವನ್ನೇ ಕೊಡದ ಜಗ್ಗಿ ಗ್ಯಾಂಗ್ ಹೀಗೆ ಭಕ್ತರಿಂದ ವಸೂಲಿ ಮಾಡಿದ ಲೆಕ್ಕ ತೋರಿಸುತ್ತದೆಯೇ?

2018 ರಲ್ಲಿ, ತಮಿಳುನಾಡಿನ ಮಾಜಿ ವಿಜಿಲೆನ್ಸ್ ಅಧಿಕಾರಿ ಅಚಿಮುತ್ತು ಶಂಕರ್ ಅವರು, ತೆರಿಗೆ ತಪ್ಪಿಸಲು ಕೇವಲ ‘ಸ್ವಯಂಪ್ರೇರಿತ ದೇಣಿಗೆ’ ಯನ್ನು ಒಳಗೊಳ್ಳುವ 80 ಜಿ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಆದಾಯ ತೆರಿಗೆ ಆಯುಕ್ತರಿಗೆ ದೂರು ನೀಡಿದರು. ಫೌಂಡೇಶನ್ ವಿವಿಧ ಉತ್ಪನ್ನಗಳನ್ನು ಮತ್ತು “ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು” ಮಾರಾಟ ಮಾಡುತ್ತಿತ್ತು ಮತ್ತು ಗಳಿಕೆಯನ್ನು ಅದರ ಪುಸ್ತಕಗಳಲ್ಲಿ ದೇಣಿಗೆ ಎಂದು ಪಟ್ಟಿ ಮಾಡಿದೆ ಎಂದು ಅವರು ಗಮನ ಸೆಳೆದರು. ಉತ್ಪನ್ನ ಅಥವಾ “ಆಧ್ಯಾತ್ಮಿಕ ಸೇವೆ”ಗಾಗಿ ಪಾವತಿಸಿದ ಹಣವನ್ನು ಹೇಗೆ ದೇಣಿಗೆ ಎನ್ನಲು ಸಾಧ್ಯ ಎಂದು ಅವರು ಕೇಳಿದರು. ಈಗ ಹೊಸ ಡಿಎಂಕೆ ಸರ್ಕಾರ ಈ ಎಲ್ಲದರ ತನಿಖೆಗೆ ಸಿದ್ಧವಾಗಿದೆ.

ಇದಲ್ಲದೆ, ಶಂಕರ್ ಅವರು, “80 ಜಿ ಅಡಿಯಲ್ಲಿ ವಿನಾಯಿತಿ ನೀಡುವ ಷರತ್ತುಗಳಲ್ಲಿ ಒಂದು ಸಂಸ್ಥೆಯು ಧಾರ್ಮಿಕ ಅಥವಾ ವ್ಯವಹಾರ ಚಟುವಟಿಕೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಬಾರದು. ಇಶಾ ಧಾರ್ಮಿಕ ಮತ್ತು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅವರ ಮಹಾಶಿವರಾತ್ರಿ ಕಾರ್ಯಕ್ರಮವೇ ಇದಕ್ಕೆ ಒಂದು ಉದಾಹರಣೆ” ಎಂದು ನ್ಯೂಸ್ ಲಾಂಡ್ರಿಗೆ ತಿಳಿಸಿದ್ದಾರೆ.

ಶಂಕರ್ ಅವರ ದೂರನ್ನು ಪರಿಶೀಲಿಸಿ ಪರಿಹರಿಸಲಾಗಿದೆಯೇ ಎಂದು ಕೇಳಿದಾಗ, ಆದಾಯ ತೆರಿಗೆ ಆಯುಕ್ತ ಕೆ ರವಿ ರಾಮಚಂದ್ರನ್, “ದೂರುದಾರರು ನಮ್ಮನ್ನು ಮತ್ತೆ ಸಂಪರ್ಕಿಸಬೇಕು. ನಾನು ಈ ವಿಷಯವನ್ನು ಪರಿಶೀಲಿಸುತ್ತೇನೆ. ಅಕ್ರಮಗಳಿದ್ದರೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾನು ಮೊದಲು ದೂರಿನ ವಿವರ ಇನ್ನೊಮ್ಮೆ ನೋಡಬೇಕಾಗಿದೆ” ಎಂದಿದ್ದಾರೆ.

ಕೊಯಮತ್ತೂರಿನ ವಕೀಲ ಕಲೈರಾಸು ಇಶಾ ವಿರುದ್ಧ ಶಂಕರ್ ನೀಡಿದ ದೂರು ಕಾನೂನುಬದ್ಧವಾಗಿದೆ ಎಂದು ವಿವರಿಸಿದರು. “80 ಜಿ ವಿನಾಯಿತಿ ಧಾರ್ಮಿಕೇತರ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಆದರೆ ಇಶಾ ಎಲ್ಲಾ ರೀತಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದೆ. ಪ್ರಸ್ತುತ, ಅವರು ತಮಿಳುನಾಡಿನಲ್ಲಿ ‘ಉಚಿತ ದೇವಾಲಯಗಳು’ ಅಭಿಯಾನವನ್ನು ನಡೆಸುತ್ತಿದ್ದಾರೆ, ಇದು ಧಾರ್ಮಿಕ ಚಟುವಟಿಕೆಯಾಗಿದೆ ಮತ್ತು ಹೀಗಾಗಿ 80 ಜಿ ಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಅದರ ಹಣಕಾಸು ಮತ್ತು ತೆರಿಗೆ ವಂಚನೆಯ ಆರೋಪಗಳ ಕುರಿತ ಪ್ರಶ್ನೆಗಳಿಗೆ ಇಶಾ ಸಂಸ್ಥೆ ಪ್ರತಿಕ್ರಿಯಿಸಲಿಲ್ಲ.

ಕಾವೇರಿ ಹೆಸರಲ್ಲಿ ಕಳ್ಳತನ?

ಪರಿಸರ ಅಭಿಯಾನವಾದ ‘ಕಾವೇರಿ ಕಾಲಿಂಗ್’ ಅನ್ನು ಸೆಪ್ಟೆಂಬರ್ 2019ರಲ್ಲಿ ಪ್ರಾರಂಭಿಸಿ 242 ಕೋಟಿ ಸಸಿಗಳನ್ನು ನದಿ ಜಲಾನಯನ ಪ್ರದೇಶದಲ್ಲಿ ನೆಡಲು ಉದ್ದೇಶಿಸಿದೆ. ಕಾವೇರಿ ಮೂಲವಾದ ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವೂರುವರೆಗೆ 639 ಕಿ.ಮೀ. ದೂರದಲ್ಲಿ ಸಸಿ ನೆಡುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆಯನ್ನು ಉತ್ತೇಜಿಸಲು ವಾಸುದೇವ್ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಕ್ರೀಡಾಪಟುಗಳನ್ನು ಬಳಸಿಕೊಂಡರು. ಸಾರ್ವಜನಿಕರಿಂದ ಒಂದು ಸಸಿಗೆ 42 ರೂ. ಪಡೆದುಕೊಂಡರು.
ಈ ಯೋಜನೆ ವಿವಾದಕ್ಕೆ ಸಿಲುಕಿತು. ಇಶಾ ಸಂಸ್ಥೆ ಹಣ ಸಂಗ್ರಹಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಬೆಂಗಳೂರಿನ ವಕೀಲ ಎ.ವಿ.ಅಮರ್‌ನಾಥ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

2019 ರ ನವೆಂಬರ್‌ನಲ್ಲಿ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ಸರ್ಕಾರಿ ಭೂಮಿಯಲ್ಲಿ ಯೋಜನೆಯನ್ನು ಕೈಗೊಳ್ಳಲು ಸಾರ್ವಜನಿಕ ಸಂಸ್ಥೆಗಳಿಂದ, ಸಾರ್ವಜನಿಕರಿಂದ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಲು ಖಾಸಗಿ ಸಂಸ್ಥೆಗೆ ಹೇಗೆ ಅನುಮತಿ ನೀಡಲಾಗಿದೆ ಎಂದು ಅಮರನಾಥ್ ಪ್ರಶ್ನಿಸಿದ್ದರು.

ಇದನ್ನೂ ಓದಿ: ’ಕಾವೇರಿ ಕೂಗು’ ಎಂಬುದು ರಾಜಕೀಯ, ಮೋಸ ಮತ್ತು ನಾಟಕ: ಜಗ್ಗಿ ವಾಸುದೇವ್ ನಡೆಗೆ ಪರಿಸರ ಕಾರ್ಯಕರ್ತರ ಆಕ್ಷೇಪ

“ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸರ್ಕಾರ ಈಶಾಕ್ಕೆ ಎರಡು ಕೋಟಿ ಸಸಿಗಳನ್ನು ನೀಡುವುದಾಗಿ ಘೋಷಿಸಿದರು. ರಾಜ್ಯ ಅಥವಾ ಕೇಂದ್ರ ಸರ್ಕಾರಗಳಿಂದ ಮಾತ್ರ ಇಂತಹ ಯೋಜನೆ ಹಮ್ಮಿಕೊಳ್ಳಬಹುದು ಎಂದು ನೀತಿ ಆಯೋಗದ ನಿಯಮಗಳು ತಿಳಿಸಿದ್ದರೂ ವಾಸುದೇವ್ ಅವರ ಯೋಜನೆಯನ್ನು ಸರ್ಕಾರ ಅಂಗೀಕರಿಸಿದೆ ಎಂದು ಹೇಳಿದರು. ಯಾವುದೇ ಖಾಸಗಿ ಸಂಸ್ಥೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯದೆ ನದಿ ಪುನರುಜ್ಜೀವನ ಮಾಡುವ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಇಲ್ಲಿ ಸಹ ನೋಂದಾಯಿಸದ ಯೋಜನೆಗಾಗಿ ಇಶಾ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸುತ್ತಿತ್ತು” ಎಂದು ಅಮರನಾಥ್ ನ್ಯೂಸ್‌ಲಾಂಡ್ರಿಗೆ ತಿಳಿಸಿದರು.

ಅಮರನಾಥ್ ಅವರ ವಾದವನ್ನು ಒಪ್ಪಿಕೊಂಡ ಹೈಕೋರ್ಟ್, ಜನವರಿ 2020 ರಲ್ಲಿ ಕಾವೇರಿ ಕಾಲಿಂಗ್ ನೋಂದಾಯಿತ ಯೋಜನೆಯಲ್ಲ ಮತ್ತು ಯೋಜನೆಗಾಗಿ ಹಣವನ್ನು ಕೋರಲು ಇಶಾ ಸಂಸ್ಥೆಗೆ ಸರ್ಕಾರದ ಅನುಮತಿ ಇಲ್ಲ ಎಂದು ಹೇಳಿತು. ಅಂದರೆ, ಯಡಿಯೂರಪ್ಪನವರ ಬಾಯಿಮಾತಿನ ಹೇಳಿಕೆ ಆಧಾರದಲ್ಲಿ ಇಶಾ ಸಂಸ್ಥೆ ಕರ್ನಾಟಕ ಸರ್ಕಾರದ ಹೆಸರನ್ನು ದುರುಪಯೋಗ ಮಾಡಿಕೊಂಡಿತ್ತು.

ಇಲ್ಲಿಯವರೆಗೆ ಕಾವೇರಿ ಕಾಲಿಂಗ್ ಹೆಸರಲ್ಲಿ ಸರ್ಕಾರದ ಹೆಸರನ್ನು ಬಳಸಿಕೊಂಡು ಎಷ್ಟು ಹಣ ಸಂಗ್ರಹಿಸಿದ್ದೀರಿ ಎಂಬುದನ್ನು ಬಹಿರಂಗಪಡಿಸಲು ಪ್ರತಿಷ್ಠಾನಕ್ಕೆ ನಿರ್ದೇಶನ ನೀಡಿದರು.
ಅದೇ ವರ್ಷದ ಮಾರ್ಚ್‌ನಲ್ಲಿ ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ ಇಶಾ ಫೌಂಡೇಶನ್, ಇದು ಕಾವೇರಿ ಕಾಲಿಂಗ್‌ನಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದೆ. ಈ ಯೋಜನೆಯನ್ನು ಇಶಾ ಔಟ್‌ರೀಚ್ ನಡೆಸುತ್ತಿದೆ, ಇದು ಹಿಂದಿನ ತಿಂಗಳವರೆಗೆ 82.50 ಕೋಟಿ ರೂ.ಗಳ “ದೇಣಿಗೆ” ಸಂಗ್ರಹಿಸಿ ಸಂಪೂರ್ಣವಾಗಿ ಸಸಿಗಳನ್ನು ನೆಡಲು ಬಳಸಿಕೊಂಡಿತು ಎಂದಿತು. ಪ್ರಸ್ತುತ, ಈಶಾ ವೆಬ್‌ಸೈಟ್ ಪ್ರಕಾರ, ಈವರೆಗೆ ಯೋಜನೆಗೆ 5.6 ಕೋಟಿ ಸಸಿಗಳನ್ನು ಕೊಡುಗೆಯಾಗಿ ನೀಡಿದೆ ಎಂದು ತೋರಿಸುತ್ತದೆ. 42 ರೂ. ದರದಲ್ಲಿ ಅದು 235 ಕೋಟಿ ರೂ. ಆಗುತ್ತದೆ!

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಅರಿಜಿತ್ ಪಸಾಯತ್, ಉದ್ಯಮಿ ಕಿರಣ್ ಮಜುಂದಾರ್ ಶಾ, ಕೇಂದ್ರ ಜಲಸಂಪನ್ಮೂಲ ಇಲಾಖೆ ಮಾಜಿ ಕಾರ್ಯದರ್ಶಿ ಶಶಿ ಶೇಖರ್, ಭಾರತೀಯ ಕೈಗಾರಿಕೆಗಳ ಒಕ್ಕೂಟದ ಮಾಜಿ ಮುಖ್ಯಸ್ಥ ಚಂದ್ರಜಿತ್ ಬ್ಯಾನರ್ಜಿ, ಇಸ್ರೋ ಅಧ್ಯಕ್ಷ ಎ.ಎಸ್.ಕರಣ್ ಕುಮಾರ್ ಮುಂತಾದವರು ಈ ಯೋಜನೆಗೆ ಬಹಿರಂಗ ಬೆಂಬಲ ನೀಡಿದ್ದರು.
ಹೈಕೋರ್ಟಿನಲ್ಲಿ ಕರ್ನಾಟಕ ಸರ್ಕಾರ ಕಾವೇರಿ ಕಾಲಿಂಗ್ ಯೋಜನೆಗೆ ಅನುಮೋದನೆ ನೀಡಿಲ್ಲ ಎಂದು ಬಹಿರಂಗಪಡಿಸಿತು. ಕೇವಲ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಇಶಾ ಸಂಸ್ಥೆಗೆ ಎರಡು ಕೋಟಿ ಸಸಿಗಳನ್ನು ನೀಡಲಾಗಿದೆ, ಇದು ರೈತರಿಗೆ ಸಸಿಗಳನ್ನು ಸಬ್ಸಿಡಿ ದರದಲ್ಲಿ ನೀಡುವ ಯೋಜನೆ ಮತ್ತು ಅದು ಬೆಳೆದರೆ ಪ್ರತಿ ಸಸ್ಯಕ್ಕೆ ವಾರ್ಷಿಕ ಪ್ರೋತ್ಸಾಹ ಧನ ನೀಡುತ್ತದೆ. ಪ್ರತಿಯಾಗಿ, ಇಶಾ ಈ ಯೋಜನೆಗೆ ಸೇರ್ಪಡೆಗೊಳ್ಳಲು ರೈತರನ್ನು ಪ್ರೋತ್ಸಾಹಿಸಬೇಕಾಗಿತ್ತು, ಆದರೆ ಅದೇ ಸಸಿಗಳನ್ನು ನೆಡುವಂತಿಲ್ಲ ಎಂದು ಸರ್ಕಾರ ಹೇಳಿತು. ಕೊನೆಯಲ್ಲಿ, ಕೇವಲ 73.44 ಲಕ್ಷ ಸಸಿಗಳನ್ನು ಇಶಾಗೆ ನೀಡಿದೆವು ಎಂದೂ ಸರ್ಕಾರ ಸ್ಪಷ್ಟಪಡಿಸಿತ್ತು.

ಈ ವರ್ಷದ ಮಾರ್ಚ್ 8 ರಂದು ನಡೆದ ವಿಚಾರಣೆಯೊಂದರಲ್ಲಿ, ಹೈಕೋರ್ಟ್ ಇಶಾ ಸಂಸ್ಥೆ ಕಾವೇರಿ ಕಾಲಿಂಗ್ ಯೋಜನೆಗೆ ಸರ್ಕಾರದ ಯೋಜನೆಯೆಂದು ದಾರಿ ತಪ್ಪಿಸುವ ಮೂಲಕ ಹಣವನ್ನು ಸಂಗ್ರಹಿಸಿದೆಯೇ ಎಂದು ತನಿಖೆ ನಡೆಸುವಂತೆ ಸೂಚಿಸಿದೆ. ಅಂತಹ ಯಾವುದೇ ವಿಚಾರಣೆಯನ್ನು ನಿಲ್ಲಿಸುವಂತೆ ಇಶಾ ಔಟ್‌ರೀಚ್ ಸುಪ್ರೀಂ ಕೋರ್ಟ್‌ಗೆ ಹೋಗಿದೆ.
ಆಧ್ಯಾತ್ಮ, ಧರ್ಮ ಮತ್ತು ಪರಿಸರದ ಹೆಸರಲ್ಲಿ ಬಿಸಿನೆಸ್ ಮಾಡುವ ದಂಧೆಯಲ್ಲಿ ಜಗ್ಗಿ ವಾಸುದೇವರ ಇಶಾ ತೊಡಗಿದೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಿವೆ.

  • ಮಲ್ಲನಗೌಡರ್ ಪಿ.ಕೆ

ಇದನ್ನೂ ಓದಿ: ಆಧ್ಯಾತ್ಮಕ ಸಂಘಟನೆಯಾದ ಕಾರಣಕ್ಕೆ ಯಾರೂ ಕಾನೂನಿಗಿಂತ ಮಿಗಿಲಲ್ಲ: ಜಗ್ಗಿ ವಾಸುದೇವ್‌ಗೆ ಹೈಕೋರ್ಟ್‌ ತರಾಟೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ರಾಜಕೀಯದವರು, ರಾಜಕೀಯ ಪುಡಾರಿಗಳು, ಸಾಮಾನ್ಯ ಜನರ ಬದುಕಿನಲ್ಲಿ ಹೇಗೆಲ್ಲಾ ದಾಳಿ ನಡೆಸುತ್ತಾರೆ, ಹೀಗೆ ಹಲವು ಹತ್ತು ವಿಷಯಗಳು, ತಿಳಿಯುತ್ತವೆ ಮತ್ತು ಓದುಗರನ್ನು ಹಿಡಿ ದಿಡುತ್ತದೆ. ಇದು ನನಗೆ ಸಂತೋಷದ ವಿಷಯ.

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...