Homeಮುಖಪುಟಜಾತ್ಯತೀತತೆಯ ಪರಿಕಲ್ಪನೆಗಳು ಮತ್ತದರ ಉಳಿವು: ಅಚಿನ್ ವನಾಯಕ್

ಜಾತ್ಯತೀತತೆಯ ಪರಿಕಲ್ಪನೆಗಳು ಮತ್ತದರ ಉಳಿವು: ಅಚಿನ್ ವನಾಯಕ್

ಆಕ್ರಮಿಸಲು ಸುತ್ತುವರೆದಿರುವವರ ಮಧ್ಯೆ ಸಿಕ್ಕಿಕೊಂಡಿರುವವರ ಮತ್ತು ಸುತ್ತುವರೆದಿರುವ ಆಕ್ರಮಣಶೀಲರ ನಡುವೆ- ಅದೂ ಆಕ್ರಮಣಶೀಲರಿಗೆ ಅಧಿಕಾರ ಬೆಂಬಲ ಅಥವಾ ಪರೋಕ್ಷ ಕೃಪೆ ಇದ್ದಲ್ಲಿ- ಸಮಾನತೆ ಇರಲು ಸಾಧ್ಯವಿಲ್ಲ.

- Advertisement -
- Advertisement -

1. ಸೆಕ್ಯುಲರಿಸಂ ಅಥವಾ ಜಾತ್ಯತೀತತೆಯು 19ನೇ ಶತಮಾದ ಮಧ್ಯಭಾಗದಲ್ಲಿ ಪಾಶ್ಚಾತ್ಯ ಜ್ಞಾನೋದಯೋತ್ತರ ಯುಗದ (Post-Enlightenment) ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಅದು ಎಲ್ಲಕ್ಕಿಂತಲೂ ಹೆಚ್ಚಾಗಿ ಜೀವನವು ಇನ್ನು ಮುಂದೆ ಧಾರ್ಮಿಕವಾದ ಅತೀಂದ್ರಿಯ ತತ್ವಗಳಿಗೆ ಬದಲಾಗಿ ಉತ್ತಮ ಮನುಷ್ಯರಿಂದ ನಿರ್ದೇಶಿಸಲ್ಪಡಬೇಕೆಂಬ ನೈತಿಕತೆಗೆ ಸಂಬಂಧಿಸಿದ ಸಿದ್ಧಾಂತ ಮತ್ತು ಚಳವಳಿಯನ್ನು ಸೂಚಿಸುತ್ತದೆ. ಅದು, “ನಾನು/ನಾವು ಹೇಗೆ ಬದುಕಬೇಕು? (“ನಾವು” ಎಂಬುದರಿಂದ ಪ್ರತ್ಯೇಕವಾದ “ನಾನು” ಇಲ್ಲವಾದುದರಿಂದ) ಎಂಬ ಚಿರಂತನವಾದ ಪ್ರಶ್ನೆಗೆ ಒಂದು ಹೊಸ ಉತ್ತರವನ್ನು ನೀಡಲು ಬಯಸುತ್ತದೆ. ಈ ವಿಶಾಲವಾದ ಪ್ರಶ್ನೆಯ ಅತಿಮುಖ್ಯ ಉಪಪ್ರಶ್ನೆ ಎಂದರೆ, “ನಾನು/ ನಾವು ರಾಜಕೀಯವಾಗಿ ಬದುಕಬೇಕಾದುದು ಹೇಗೆ?” ಈ ಪ್ರಶ್ನೆಯು ಸಹಜವಾಗಿಯೇ- ಪ್ರಭುತ್ವದ ಗುಣಗಳು; ವ್ಯಕ್ತಿ, ಗುಂಪು ಮತ್ತು ಧರ್ಮಗಳ ಜೊತೆ ಅದರ ಸಂಬಂಧ ಏನಾಗಿರಬೇಕು ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಅಂದಿನಿಂದಲೂ ಜಾತ್ಯತೀತತೆಯ ನಿರ್ಣಾಯಕ ಸಂಬಂಧವು ಪ್ರಭುತ್ವದ ಜೊತೆಗಿರುವಂತೆಯೇ, ಜಾತ್ಯತೀತಗೊಳ್ಳುವಿಕೆ ಮತ್ತು ಅದರ ಪ್ರಕ್ರಿಯೆಯ ಸಂಬಂಧವು ನಾಗರಿಕ ಸಮಾಜದೊಂದಿಗಿದೆ.

2. ಮೌಲ್ಯಗಳು/ಆದರ್ಶಗಳ ಒಂದು ಸಮೂಹವಾಗಿ ಜಾತ್ಯತೀತತೆಯನ್ನು ಇತರ ಯಾವುದೇ ಹೊರಹೊಮ್ಮುತ್ತಿರುವ ಮೌಲ್ಯಗಳು, ಪರಿಕಲ್ಪನೆಗಳು ಮತ್ತು ಆಧುನಿಕತೆಯೊಂದಿಗೆ ಹುಟ್ಟುವ ಬದಲಾವಣೆಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಇವುಗಳಲ್ಲಿ ವೈಯಕ್ತಿಕ ವ್ಯಕ್ತಿನಿಷ್ಟತೆಯ ಆತ್ಮವಿಮರ್ಶೆಯ ಭಾವನೆ ಬಲವಾಗಿ ಹೊರಹೊಮ್ಮುವುದೂ ಸೇರಿದೆ. ಅದರಲ್ಲಿ ಒಂದು ಉದಾರವಾದಿ ವ್ಯಕ್ತಿವಾದ; ಪ್ರತ್ಯೇಕ ಶಾಸನಾತ್ಮಕ ಮತ್ತು ಸಾರ್ವಭೌಮ ರಾಷ್ಟ್ರೀಯತೆಗಳು ಎಂದು ಪರಿಗಣಿಸಿ ವಿಂಗಡಿಸಲಾದ ಜನರ ಹಿತಾಸಕ್ತಿಗಾಗಿ ಕೆಲಸ ಮಾಡುವ ಪ್ರತಿಪಾದನೆಯೊಂದಿಗೆ ತಮ್ಮ ಅಧಿಕೃತತೆಯನ್ನು ಮಾನ್ಯಮಾಡಿಕೊಳ್ಳಲು ಅಧಿಕಾರಶಾಹಿ ಹುಟ್ಟಿಹಾಕಿದ ನಂತರದ ರಾಷ್ಟ್ರೀಯವಾದದ ಭಾವನೆಗಳು/ಸಿದ್ಧಾಂತಗಳು/ ಚಳವಳಿಗಳು ಕೂಡ ಇದರಲ್ಲಿ ಸೇರಿವೆ. ಈಗ ಜನರನ್ನು ತಟಸ್ಥ ಅಂಗಗಳಾಗಿ ಅರ್ಥೈಸಲಾಗುವುದನ್ನು ಕೊನೆಗೊಳಿಸಿ ಅವರನ್ನು ನಾಗರಿಕ ಹಕ್ಕುಗಳನ್ನು ಒಳಗೊಂಡ ನಾಗರಿಕರು ಎಂದು ಪರಿಗಣಿಸಲಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ- ಒಳ್ಳೆಯದಕ್ಕೇ ಇರಲಿ, ಕೆಟ್ಟದ್ದಕ್ಕೇ ಇರಲಿ- ಈಗ ಇರುವಂತೆ, ಜಾತ್ಯತೀತ ತಿಳುವಳಿಕೆಯನ್ನು- ಉದಾರವಾದಿ ವ್ಯಕ್ತಿವಾದ, ಪ್ರಜಾಸತ್ತಾತ್ಮಕ ರಾಜಕೀಯ, ರಾಷ್ಟ್ರ ಪ್ರಭುತ್ವ ಮತ್ತು ರಾಷ್ಟ್ರೀಯತೆ ಇತ್ಯಾದಿಯಾಗಿ ಆಧುನಿಕತೆಗೆ ಸಂಬಂಧಿಸಿದ ಮೌಲ್ಯಗಳು, ನಂಬಿಕೆಗಳು, ಸಂಸ್ಥೆಗಳ ತಿಳುವಳಿಕೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಆಧುನಿಕತೆಯ ವೈವಿಧ್ಯಮಯ ದಾರಿಗಳ ಅರ್ಥವೆಂದರೆ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಸೇರಿದಂಯೆ ಇವೆಲ್ಲವುಗಳಿಗೂ ವೈವಿಧ್ಯಮಯ ರೂಪಗಳು ಇವೆ ಎಂಬುದು.

3. ಜಾತ್ಯತೀತತೆಯ ಈ ವೈವಿಧ್ಯಮಯ ರೂಪಗಳು ಎಷ್ಟೇ ಸಾಮಾನ್ಯ ಅಥವಾ ಅಮೂರ್ತವಾಗಿರಲಿ, ಕೆಲವು ಮೂಲಭೂತ ತತ್ವಗಳನ್ನು ಹೊಂದಿರಬೇಕಾಗುತ್ತದೆ. ಜಾತ್ಯತೀತತೆಯ ಈ ಹಲವು ರೂಪಗಳಲ್ಲಿನ ಕೆಲವು ಸಮಾನ ಗುಣಲಕ್ಷಣಗಳನ್ನು ಗುರುತಿಸಲು ತಾರ್ಕಿಕ ಆರಂಭ ಬೇಕಾಗುತ್ತದೆ. ಅದನ್ನು ಜಾತ್ಯತೀತತೆಯ ಸರಳವಾದ ಮತ್ತು ಕಾರ್ಯಸಾಧುವಾದ ವ್ಯಾಖ್ಯಾನದಿಂದ ಮಾಡಬಹುದು: “ಧಾರ್ಮಿಕ ಸಂಸ್ಥೆ ಮತ್ತು ಧಾರ್ಮಿಕ ವ್ಯಕ್ತಿಗಳ ನಿಯಂತ್ರಣದಿಂದ ಪ್ರಭುತ್ವದ ಪ್ರತ್ಯೇಕತೆ ಹಾಗೂ ಧಾರ್ಮಿಕ ನಿಷ್ಠೆಯ ಪರಿಗಣನೆಯಿಲ್ಲದೆ ನಾಗರಿಕರ ಹಕ್ಕುಗಳಲ್ಲಿ ಸಮಾನತೆ”. ಆ ಹಕ್ಕುಗಳು ಹಲವು ರೀತಿಯ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ಹೊಂದಿರಲೇಬೇಕಾಗಿಲ್ಲ ಎಂಬುದನ್ನು ಕೂಡ ಗಮನಿಸಬೇಕು. ಆದುದರಿಂದ, ಒಂದು ಪ್ರಭುತ್ವ ಪ್ರಜಾಸತ್ತಾತ್ಮಕವಾಗಿರದೆ ಜಾತ್ಯತೀತವಾಗಿರಬಹುದು. ಅಲ್ಲದೇ, ಧರ್ಮವನ್ನು ಎಲ್ಲಾ ರೀತಿಯ ರಾಜಕೀಯದಿಂದ ಬೇರ್ಪಡಿಸಬೇಕು ಎಂಬ ಬೇಡಿಕೆಯೂ ಇಲ್ಲಿಲ್ಲ.

ಮೊದಲಿಗೆ ನಾವು ಜಾತ್ಯತೀತ ಪ್ರಭುತ್ವಕ್ಕೆ ಸಂಬಂಧಿಸಿದಂತೆ ಮೂರು ಮುಖ್ಯ ಸಂಬಂಧಗಳನ್ನು ನೋಡೋಣ- ವ್ಯಕ್ತಿ ಮತ್ತು ಧರ್ಮದ ನಡುವೆ, ವ್ಯಕ್ತಿ ಮತ್ತು ಪ್ರಭುತ್ವದ ನಡುವೆ ಮತ್ತು ಪ್ರಭುತ್ವ ಮತ್ತು ಧರ್ಮದ ನಡುವೆ ಸಂಬಂಧ. ಈ ಸಂಬಂಧಗಳನ್ನು ಇನ್ನೂ ಚೆನ್ನಾಗಿ ವಿವರಿಸುವುದಕ್ಕೆ ಮೊದಲಿಗೆ ನಾವು- ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಬೆಳೆಯುತ್ತಿರುವ- ಹೆಚ್ಚು ಕ್ರಿಯಾತ್ಮಕವಾದ ಮತ್ತು ಸ್ವವಿಮರ್ಶೆಯ ವ್ಯಕ್ತಿವಾದ/ವ್ಯಕ್ತಿನಿಷ್ಟತೆಯ ಆಧುನಿಕ ಪರಿಣಾಮವನ್ನು ಗುರುತಿಸೋಣ. ಇದರ ಅರ್ಥವೆಂದರೆ- ಸ್ವಾಯತ್ತತೆ, ಸ್ವಯಂ ಬೆಳವಣಿಗೆ, ಖಾಸಗಿತನ, ಆತ್ಮಗೌರವ ಇತ್ಯಾದಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮೌಲ್ಯವನ್ನು ಕೊಡಬೇಕು ಎಂಬುದು. ಅಂದರೆ, ವ್ಯಕ್ತಿಗಳು ಸಮಾನವಾಗಿ ಮುಖ್ಯರು; ಆದುದರಿಂದ, ಗೌರವಕ್ಕೆ ಅರ್ಹರು ಎಂಬುದು. ಇದಕ್ಕಿಂತ ಹೆಚ್ಚಾಗಿ, ಆಧುನಿಕತೆಯೆಂದರೆ, ಹಕ್ಕುಗಳ ಕುರಿತಾಗಿ ಹೊಸ ಸಂಕಥನವೊಂದನ್ನು ಹುಟ್ಟಿಸಲು ಸಾಧ್ಯವಾಗಿಸಿದೆ (ಹಿಂದೆ ಅದು ಇರಲಿಲ್ಲ). ಇಲ್ಲಿ ಪ್ರಭುತ್ವ ಕಾನೂನುಬದ್ಧ ಹಕ್ಕುಗಳನ್ನು ಸಾಂಸ್ಥೀಕರಣಗೊಳಿಸುವ ಮೂಲಕ ಈ ನಾಲ್ಕು ಮೌಲ್ಯ ಘಟಕಗಳನ್ನು ರಕ್ಷಿಸಲು, ಉಳಿಸಿಕೊಳ್ಳಲು ಮತ್ತು ಪ್ರೋತ್ಸಾಹಿಸಲು- ಈ ಮೌಲ್ಯಗಳನ್ನು ಬೆಳೆದು ಅರಳಲು ಬಿಡಬೇಕು ಎಂದರ್ಥ.

4. ಆದರೆ, ಇದನ್ನು ಮಾಡಲು ಹೊರಟಾಗ, ಒತ್ತಡಗಳು ಮತ್ತು ವಿರೋಧಾಭಾಸಗಳು ಮಾತ್ರವಲ್ಲ; ದೊಡ್ಡಮಟ್ಟದಲ್ಲಿ ಅಸ್ಪಷ್ಟತೆಗಳು ಉಳಿಯುವ ಸಮಸ್ಯೆಗಳು ಕೂಡ ಅನಿವಾರ್ಯವಾಗಿ ಎದ್ದುಬರುತ್ತವೆ. ಭಾಗಶಃ ಇದುವೇ ಜಾತ್ಯಾತೀತತೆಯ ವೈವಿಧ್ಯಮಯ ರೂಪಗಳು ಹುಟ್ಟುವುದಕ್ಕೆ ಕಾರಣ. ವ್ಯಕ್ತಿವಾದದ ವಿವಿಧ ಮೌಲ್ಯ ಘಟಕಗಳನ್ನು ಹೇಗೆ ಅತ್ಯುತ್ತಮವಾಗಿ ವ್ಯಾಖ್ಯಾನಿಸಬಹುದು, ಆ ಮೂಲಕ ಸಾಂಸ್ಥೀಕರಣಗೊಳಿಸಬಹುದು ಎಂಬುದರ ಭಾಗವಾಗಿ ಇವು ಹೊರಹೊಮ್ಮುತ್ತವೆ. ಇದು ಏಕೆಂದರೆ, ಜನರ ವೈಯಕ್ತಿಕ ಸ್ವಯಂ ಪ್ರಾಮುಖ್ಯತೆಯ ಭಾವನೆಯನ್ನು, ಜನರು ವಾಸ್ತವವಾಗಿ ಜೀವಿಸುವ ಮತ್ತು ಅರ್ಥವನ್ನು ಪಡೆದುಕೊಳ್ಳುವ, ಐತಿಹಾಸಿಕವಾಗಿ ರಚನೆಗೊಂಡಿರುವ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯವಾಘಿರುವ ಸಮುದಾಯಗಳಿಂದ (ಧಾರ್ಮಿಕ ಸಮುದಾಯಗಳು ಸೇರಿದಂತೆ) ಪ್ರತ್ಯೇಕಿಸಲು ಸಾಧ್ಯವಿಲ್ಲ. ಈ ಮೌಲ್ಯ ಘಟಕಗಳನ್ನು ರಕ್ಷಿಸಲು, ಉಳಿಸಿಕೊಳ್ಳಲು ಮತ್ತು ಪ್ರೋತ್ಸಾಹಿಸಲು ಇರುವ ನಿರ್ಧಿಷ್ಟ ಕಾನೂನುಗಳು ಮತ್ತು ಆಚರಣೆಗಳು ಸಾಂದರ್ಭಿಕವಾಗಿ ಮಾತ್ರ ಇರಲು ಸಾಧ್ಯ; ಆದುದರಿಂದ ಇದು ಸಮಾಜದಿಂದ ಸಮಾಜಕ್ಕೆ, ಒಂದು ಸಾಂಸ್ಕೃತಿಕ ಸಮುದಾಯದಿಂದ ಇನ್ನೊಂದು ಸಾಂಸ್ಕೃತಿಕ ಸಮುದಾಯಕ್ಕೆ ವ್ಯತ್ಯಾಸವಾಗುತ್ತಾಹೋಗುತ್ತದೆ. ಇಲ್ಲಿ ಯಾರೂ ಸಮಾಜದ ಒಳಗೆ ಅಥವಾ ಸಮಾಜಗಳ ನಡುವೆ ಸಂಪೂರ್ಣ ಸಾಂಸ್ಕೃತಿಕ ಸಾಪೇಕ್ಷತೆಯನ್ನು ಪ್ರತಿಪಾದಿಸುತ್ತಿಲ್ಲ. ವ್ಯಕ್ತಿ ಮತ್ತು ಧರ್ಮದ ನಡುವಿನ ಸಂಬಂಧವನ್ನೇ ತೆಗೆದುಕೊಳ್ಳಿ: ಕಾನೂನಿನಲ್ಲಿ ಎಲ್ಲೆಲ್ಲಿಯೂ ಸಾಂಸ್ಥೀಕರಣಗೊಳ್ಳಬೇಕಾದ ಎರಡು ಬುನಾದಿ ತತ್ವಗಳೆಂದರೆ, ಧಾರ್ಮಿಕವಾಗಿ ಮತಾಂತರಗೊಳ್ಳುವ (ಬಲಪ್ರಯೋಗವಿಲ್ಲದೆ) ಸ್ವಾತಂತ್ರ್ಯ ಮತ್ತು ಯಾವುದೇ ಅಥವಾ ಎಲ್ಲಾ ಧಾರ್ಮಿಕ ಸಮುದಾಯಗಳಿಂದ ಹೊರಬರುವ ಸ್ವಾತಂತ್ರ್ಯ.

ಆಕ್ರಮಿಸಲು ಸುತ್ತುವರೆದಿರುವವರ ಮಧ್ಯೆ ಸಿಕ್ಕಿಕೊಂಡಿರುವವರ ಮತ್ತು ಸುತ್ತುವರೆದಿರುವ ಆಕ್ರಮಣಶೀಲರ ನಡುವೆ- ಅದೂ ಆಕ್ರಮಣಶೀಲರಿಗೆ ಅಧಿಕಾರ ಬೆಂಬಲ ಅಥವಾ ಪರೋಕ್ಷ ಕೃಪೆ ಇದ್ದಲ್ಲಿ- ಸಮಾನತೆ ಇರಲು ಸಾಧ್ಯವಿಲ್ಲ.

5. ನಂತರದ ಸಂಬಂಧ- ವ್ಯಕ್ತಿ ಮತ್ತು ಪ್ರಭುತ್ವದ ನಡುವಿನ ಸಂಬಂಧವನ್ನು ತೆಗೆದುಕೊಳ್ಳಿ. ಇಲ್ಲಿ ಕಾನೂನಿನಲ್ಲಿ ಅಳವಡಿಸಬೇಕಾದ ಬುನಾದಿ ತತ್ವವೆಂದರೆ- ಧಾರ್ಮಿಕ ನಿಷ್ಠೆಯ ಯಾವುದೇ ಹಂಗಿಲ್ಲದೆ, ಎಲ್ಲರಿಗೂ ಸಮಾನ ಪೌರತ್ವದ ಹಕ್ಕು ದೊರಕಬೇಕಿರುವುದು. ವಾಸ್ತವದಲ್ಲಿ ಸಾಧ್ಯವಾಗಿರುವುದಿರಲಿ ಇದನ್ನು ಕನಿಷ್ಟ ಕಾನೂನಿನಲ್ಲಿಯಾದರೂ ಹೊಂದಿರದ ಪ್ರಭುತ್ವವನ್ನು ಪ್ರಜಾಪ್ರಭುತ್ವ ಎಂದು ಪರಿಗಣಿಸಲು ಅಥವಾ ಕರೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ, ಧರ್ಮದ ಯಾವುದೇ ಹಂಗಿಲ್ಲದೇ, ಕಾನೂನು ಪ್ರಕಾರ ಎಲ್ಲರಿಗೂ ಸಮಾನ ಪೌರತ್ವದ ಹಕ್ಕು ನೀಡುವ ಪ್ರಭುತ್ವ ಪ್ರಜಾಸತ್ತಾತ್ಮಕವಾಗಿದೆ ಎಂದೇನಿಲ್ಲ. ಯಾವುದೇ ಧಾರ್ಮಿಕ ಸಮುದಾಯದ ಕುರಿತು ತಾರತಮ್ಯ ನಡೆಸದೇ ಎಲ್ಲರ ಮೇಲೆ ಸಮಾನವಾಗಿ ಸರ್ವಾಧಿಕಾರ ಚಲಾಯಿಸುವ ಸರ್ವಾಧಿಕಾರಿ ಪ್ರಭುತ್ವವನ್ನು ಜಾತ್ಯತೀತ ಎಂದು ಕರೆಯಬಹುದೇ ಹೊರತು ಪ್ರಜಾಸತ್ತಾತ್ಮಕ ಎಂದಲ್ಲ.

6. ಪ್ರಭುತ್ವ ಮತ್ತು ಧರ್ಮದ ನಡುವಿನ ಸಂಬಂಧದ ಕುರಿತಂತೆ ಹೇಳುವುದಾದರೆ, ಐತಿಹಾಸಿಕ ಕಾರಣಗಳಿಗಾಗಿಯೂ ಚರ್ಚ್ (ಮಠ) ಮತ್ತು ಪ್ರಭುತ್ವದ ನಡುವೆ ಔಪಚಾರಿಕವಾದ ಸಂಬಂಧವಿದೆ. ಉದಾಹರಣೆಗೆ, ಬ್ರಿಟಿಷ್ ಪ್ರಭುತ್ವದ ಆಂಗ್ಲಿಕನಿಸಂ. ಅದರ ಜಾತ್ಯತೀತತೆಯನ್ನು ಅಂದಾಜು ಮಾಡಬೇಕೆಂದಿದ್ದರೆ, ಸಮಾನ ಪೌರತ್ವದ ತತ್ವವನ್ನು ಅದು ಕಾನೂನುಬದ್ಧವಾಗಿ ನೆಲೆಗೊಳಿಸಿರುವುದರಲ್ಲಿ ಅದನ್ನು ಕಾಣಬೇಕು. ಅಂದರೆ, ಯಾವುದೇ ಧಾರ್ಮಿಕ ಸಮುದಾಯದಲ್ಲಿ ರಾಚನಿಕವಾಗಿ ನೆಲೆಯೂರದ, ಯಾವುದೇ ನಿರ್ದಿಷ್ಟ ಸಮುದಾಯದ ಪರ ಒಲವು ಹೊಂದಿರದ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದರಲ್ಲಿ ಅದನ್ನು ಕಾಣಬೇಕು. ಇಲ್ಲಿ ಇದು ಧಾರ್ಮಿಕ ಆಯ್ಕೆಯ ಸ್ವಾತಂತ್ರ್ಯ ಮತ್ತು ನಡವಳಿಕೆಯನ್ನು ಗೌರವಿಸುವುದು ಮತ್ತು ಹಾಗಿದ್ದೂ, ಧಾರ್ಮಿಕ ನಿಷ್ಠೆಯ ಹೆಸರಿನಲ್ಲಿ ಕಾರಣ ನೀಡಿ ನಡೆಯುವ ಕೆಲವು ಆಚರಣೆಗಳು ಕೆಲವರ ಭಾವನೆಗೆ ಧಕ್ಕೆ ಬರುವುದೆಂದು ವಿರೋಧಿಸುವುದರ ನಡುವೆ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಶ್ನೆಯಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಇದು ಅಂತಹ ಆಚರಣೆಗಳಿಗೆ ವಿರೋಧವನ್ನು ತಳೆಯುವ ವಿವಿಧ ರೂಪಗಳ ನಡುವಿನ ಸಮತೋಲದ ಪ್ರಶ್ನೆಯಾಗಿದೆ.

ಉದಾಹರಣೆಗೆ ಕೆಲವು ಐರೋಪ್ಯ ದೇಶಗಳು ಜಾತ್ಯತೀತತೆಯ ಹೆಸರಿನಲ್ಲಿ ಪ್ರತಿಪಾದಿಸಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವುದು ಅಸಂಗತ ಮತ್ತು ತಾನು ಬಯಸಿದಂತೆ ಉಡುಗೆ ತೊಡುವ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸಮರ್ಪಕವಾದ ಕ್ರಮವೆಂದರೆ, ಯಾರು ಹಿಜಾಬ್ ತೊಡಲು ಬಯಸುವುದಿಲ್ಲವೋ, ಅವರ ಮೇಲೆ ಅದರ ಹೇರಿಕೆಯನ್ನು ನಿಷೇಧಿಸುವ ಕಾನೂನು ತರುವುದು. ಅಂದರೆ, ಹೊರಹೋಗುವ ತತ್ವದ ರಕ್ಷಣೆ. ಈ ನಿಟ್ಟಿನಲ್ಲಿ ಬಹುಧರ್ಮಗಳ ಸಮಾಜವೊಂದರಲ್ಲಿ ಹೇಗೆ ಕಾರ್ಯಾಚರಿಸಬೇಕು ಎಂದು ಭಾರತವು ಇತರರಿಗೆ ಪಾಠ ಹೇಳುತ್ತದೆ. ಆದರೆ, ಭಾರತವು ಭೂತದಲ್ಲಿಯೂ ಮತ್ತು ವರ್ತಮಾನದಲ್ಲೂ, ಇತರ ದೇಶಗಳ ಜಾತ್ಯತೀತ ತತ್ವಗಳು ಮತ್ತು ಆಚರಣೆಗಳಿಂದ ಕಲಿಯಬಹುದಿತ್ತು, ಕಲಿಯಬಹುದು. ಅಲ್ಲಿ ಧಾರ್ಮಿಕ ಮತಾಂತರಗಳು ಇಲ್ಲಿನ ಹಾಗೆ ಬಹುಸಂಖ್ಯಾತ ಕೋಮುವಾದಿ ಶಕ್ತಿಗಳಿಂದ ದಾಳಿಯ ಮಾತು ಒತ್ತಟ್ಟಿಗಿರಲಿ, ಇಲ್ಲಿನಷ್ಟು ಹಗೆತನವನ್ನೂ ಹುಟ್ಟಿಸುವುದಿಲ್ಲ. ಭಾರತೀಯ ಜಾತ್ಯತೀತತೆಯ ವೈಫಲ್ಯ ಅಥವಾ ದೌರ್ಬಲ್ಯಗಳ ಕುರಿತು ಬಹಳಷ್ಟು ಕಡಿಮೆ ಸ್ವವಿಮರ್ಶೆಯಿದೆ. ಏಕೆಂದರೆ, ಹೆಚ್ಚಿನವರು ಅದರ ಅರ್ಥ ಸಹಿಷ್ಣುತೆ ಎಂದಷ್ಟೇ ಭಾವಿಸಿಕೊಂಡು ಹಿಂದೂಯಿಸಂನ ಅನನ್ಯತೆಯಲ್ಲಿ ಅದು ಆಳವಾಗಿ ಬೇರೂರಿದೆ ಎಂದು ಭಾವಿಸಿದ್ದಾರೆ. ಆದರೆ ಪುರಾತನಕಾಲದ ಧಾರ್ಮಿಕ ಸಮುದಾಯಗಳ ತಟಸ್ಥ ಸಹಬಾಳ್ವೆಯು, ಆಧುನಿಕವಾದ ಸಹಿಷ್ಣುತೆಯ ಪರಿಕಲ್ಪನೆಯಲ್ಲ. ಈ ಪರಿಕಲ್ಪನೆಯು ಯಾವತ್ತೂ ಅಲ್ಪಸಂಖ್ಯಾತರ ಸಾಂಸ್ಕøತಿಕ ಮತ್ತು ರಾಜಕೀಯ ಹಕ್ಕುಗಳ ಕುರಿತ ವ್ಯಾಖ್ಯಾನಕ್ಕೆ ತಳಕುಹಾಕಿಕೊಂಡಿರುತ್ತದೆ. ಬಹಳಷ್ಟು ಭಾರತೀಯರಿಗೆ ಜಾತ್ಯತೀತತೆಯು ಸಹಿಷ್ಣುತೆಯಿಂದ ಹುಟ್ಟುತ್ತದೆ ಎಂಬ ಭಾವನೆಯಿದೆ. ವಾಸ್ತವವಾಗಿ ಆಧುನಿಕ ಸಹಿಷ್ಣುತೆಯು ಹುಟ್ಟುವುದೇ ಮೊದಲಿಗೆ ಜಾತ್ಯತೀತರಾಗಿರುವುದರಿಂದ, ನಂತರ ಪ್ರಜಾಪ್ರಭುತ್ವವಾದಿಯಾಗಿರುವುದರಿಂದ.

7. ಹೌದು, ನಾವು ಧಾರ್ಮಿಕ ವ್ಯವಹಾರಗಳಲ್ಲಿ ಪ್ರಭುತ್ವದ ಮಧ್ಯಪ್ರವೇಶಕ್ಕೆ ಅವಕಾಶ ಕೊಡಬೇಕು. ಯಾವುದೇ ಜಾತ್ಯತೀತ ಸಮಾಜದಲ್ಲಿ ನ್ಯಾಯ ತೀರ್ಮಾನಗಾರನಾಗಿ ನಂಬಿಕೆಯು ಕಾನೂನಿಗಿಂತ ಮೇಲಿರಲು ಸಾಧ್ಯವಿಲ್ಲ. ಆದರೆ, ಕಾನೂನುಗಳು, ನ್ಯಾಯಾಲಯಗಳು ಮತ್ತು ಸರಕಾರಗಳು ಹೊಸದಾದ, ಬದಲಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ತಿಳುವಳಿಕೆಗಳಿಗೆ ಅನುಗುಣವಾಗಿ ತಾವೂ ಬದಲಾಗುವ ಸಾಮಥ್ರ್ಯವನ್ನೂ ಹೊಂದಿರಬೇಕು. ಹೆಚ್ಚಾಗಿ ಭಾರತೀಯ ಪ್ರಭುತ್ವವು ಧಾರ್ಮಿಕ ವ್ಯವಹಾರಗಳಲ್ಲಿ ಯಾವಾಗ ಮಧ್ಯಪ್ರವೇಶ ಮಾಡಬೇಕಿತ್ತೋ ಆಗ ಮಾಡಿಲ್ಲ ಮತ್ತು ಯಾವಾಗ ಮಧ್ಯಪ್ರವೇಶ ಮಾಡಬಾರದಿತ್ತೋ ಆಗ ಮಾಡಿದೆ. ಸಂಘ ಪರಿವಾರವು ಬೃಹತ್ತಾಗಿ ಬೆಳೆಯುವುದಕ್ಕೆ ಮೊದಲು ಭಾರತೀಯ ಸರಕಾರಗಳು ವಿವಿಧ ಧರ್ಮೋ-ರಾಜಕೀಯ ಕೋಮುವಾದಗಳ ಸಮತೋಲನಕ್ಕೆ ಮತ್ತು ಓಲೈಕೆಗೆ ಶ್ರಮಿಸುತ್ತಾ ಬಂದಿವೆ. ಇದರಿಂದ ಎಲ್ಲಾ ಕೋಮುವಾದಗಳಿಗೆ ಲಾಭವಾದರೂ, ಹೆಚ್ಚಿನ ಲಾಭವಾದುದು ಬಹುಸಂಖ್ಯಾತ ಕೋಮುವಾದಕ್ಕೆ. ಈಗ ಅತ್ಯಂತ ಶಕ್ತಿಶಾಲಿಯಾದ ಪ್ರಭುತ್ವ-ದೇವಾಲಯ-ಕಾರ್ಪೋರೇಟ್ ದುಷ್ಟಕೂಟ ಹಿಂದುತ್ವದ ಶಕ್ತಿಗಳಿಗೆ ಭಾರೀ ಲಾಭವಾಗಿ ಪರಿಣಮಿಸಿವೆ.

8. ಕೊನೆಯದಾಗಿ, ಭಾರತದ ಜಾತ್ಯತೀತತೆಯ ಭವಿಷ್ಯದ ಬಗ್ಗೆ ಮಾತನಾಡುವುದೆಂದರೆ ಖಂಡಿತವಾಗಿಯೂ ಜಾತ್ಯತೀತತೆಯ ಬೇರೆಬೇರೆ ಗ್ರಹಿಕೆಗಳ ನಡುವೆ ಇನ್ನಷ್ಟು ಸಂವಾದಗಳು ನಡೆಯುವಂತೆ ಯತ್ನಿಸುವುದು, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಹೆಚ್ಚಿನ ಸೂಕ್ಷ್ಮತೆಗೆ ಯತ್ನಿಸುವುದು ಮತ್ತು ಅದನ್ನು ಮೂಡಿಸುವುದು ಅಗತ್ಯ. ಇಲ್ಲಿ ನಮ್ಮನ್ನು ನಾವೇ ವಂಚಿಸುಕೊಳ್ಳುವುದು ಬೇಡ. ರಾಜಕೀಯ, ನ್ಯಾಯಾಂಗ, ಸರಕಾರಿ, ಸಾಂಸ್ಕೃತಿಕ ಮತ್ತು ರಾಜಕೀಯ ಅಧಿಕಾರ ಹೊಂದಿ ಅದನ್ನು ಬಲವಾಗಿ ಚಲಾಯಿಸುವವರು ತೀರಾ ಅಪರೂಪದಲ್ಲಿ ಮಾತ್ರ ಉತ್ತಮ ತರ್ಕ-ಚರ್ಚೆ, ಅಥವಾ ಹೆಚ್ಚಿನ ಸೂಕ್ಷ್ಮತೆಯಿರುವ ವಿಚಾರ, ಅಥವಾ ಅತಿಸೂಕ್ಷ್ಮ ನೈತಿಕ ನೆಲೆಗಳಿಗೆ ಆಕರ್ಷಿತರಾಗಿ ಬದಲಾಗುತ್ತಾರೆ.

ಆದಾಗ್ಯೂ, ಯಾವತ್ತೂ ಅತ್ಯಂತ ಪ್ರಮುಖವಾದದು ಮತ್ತು ಅಗತ್ಯವಾದುದು ಏನೆಂದರೆ: ಧಾರ್ಮಿಕ ನಂಬಿಕೆಗಳನ್ನು ಮೀರಿ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗಾಗಿ, ಸಾಮಾನ್ಯ ಭಾರತೀಯರ ಸಾಮೂಹಿಕ ಅಗತ್ಯಗಳ ಬೆಂಬತ್ತುವ ವಾಸ್ತವಿಕವಾದ, ರಾಜಕೀಯವಾದ ಸಾಮೂಹಿಕ ಆಂದೋಲನ ತರುವ ಶಕ್ತಿ; ಉದ್ಯೋಗ, ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆಗಾಗಿ; ಜಾತಿ, ಲಿಂಗ, ಧಾರ್ಮಿಕ ಮತ್ತು ಪ್ರಾದೇಶಿಕ ತಾರತಮ್ಯಗಳ ವಿರುದ್ಧ ಜನರ ಆಂದೋಲನ ತರುವ ಶಕ್ತಿ; ಸಂಕ್ಷಿಪ್ತವಾಗಿ, ಹಿಂದುತ್ವಕ್ಕೆ ವಿರುದ್ಧವಾದ ಇನ್ನೊಂದು ರೀತಿಯ ಪರಿವರ್ತಕ ಆಂದೋಲನ- ಗೌರಿ ಲಂಕೇಶ್ ಅವರಂತವರು ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಂತಹ ಆಂದೋಲನ.

ಅಚಿನ್ ವನಾಯಕ್

(ಅಚಿನ್ ವನಾಯಕ್- ಸಾಮಾಜಿಕ ಕಾರ್ಯಕರ್ತ ಮತ್ತು ಬರಹಗಾರ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಅಚಿನ್ ಅವರು ಈಗ ನಿವೃತ್ತರಾಗಿದ್ದಾರೆ. ‘ಪೇಯ್ನ್‌ಫುಲ್ ಟ್ರಾನ್ಸಿಶನ್: ಬೂರ್ಶ್ವ ಡೆಮಾಕ್ರಸಿ ಇನ್ ಇಂಡಿಯಾ’ ಸೇರಿದಂತೆ ಹಲವು ಪುಸ್ತಕಗಳ ಲೇಖಕರು.)


ಇದನ್ನೂ ಓದಿ: ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...