Homeಮುಖಪುಟಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು-‘ಕನ್ನಡ ಮತ್ತು ಮರಾಠಿ ದಾಯಾದಿ ಸಂಬಂಧಗಳ ಶೋಧ’

ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು-‘ಕನ್ನಡ ಮತ್ತು ಮರಾಠಿ ದಾಯಾದಿ ಸಂಬಂಧಗಳ ಶೋಧ’

ಇಂದಿನ ಎಷ್ಟೋ ಸಮಸ್ಯೆ, ಬಿಕ್ಕಟ್ಟುಗಳು ಇಂದೇ ನಿರ್ಮಾಣವಾಗಿರುವುದಿಲ್ಲ; ಅವುಗಳ ಬೇರುಗಳು ಭೂತಕಾಲದ ಗರ್ಭದಲ್ಲಿ ಹೂತುಹೋಗಿರುತ್ತವೆ.

- Advertisement -
- Advertisement -

ಕನ್ನಡ ಸಂಶೋಧನೆಯ ಲೋಕದಲ್ಲಿ ಶಂಬಾ ಜೋಶಿಯರದ್ದು (1896-1991) ಚಿರಸ್ಥಾಯಿ ಹೆಸರು. ಹೈಸ್ಕೂಲ್ ಮೇಷ್ಟ್ರಾಗಿದ್ದ ಶಂಬಾರವರು ಆರು ದಶಕಗಳ ಕಾಲ ಕರ್ನಾಟಕ ಇತಿಹಾಸ, ಕನ್ನಡ ಭಾಷಾಶಾಸ್ತ್ರ, ಜನಪದ ಸಾಹಿತ್ಯ, ಹಿಂದೂ ಧರ್ಮ, ಸಾಹಿತ್ಯ, ಸಮಾಜ, ಸಂಸ್ಕೃತಿಗಳ ಸಂಶೋಧನದಲ್ಲಿ ಆಳವಾಗಿ ತೊಡಗಿಸಿಕೊಂಡವರು; ಅವರು ತಮ್ಮ ವಿಶಿಷ್ಟ ಒಳನೋಟಗಳಿಂದ ಕನ್ನಡ ಸಂಶೋಧನಗೆ ಘನತೆಯನ್ನು ತಂದುಕೊಟ್ಟ ಧೀಮಂತರಾಗಿದ್ದಾರೆ; ಅವರು ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ (ಭಾಗ 1 ಮತ್ತು 2, 1937, 1966) ‘ಹಾಲುಮತ ದರ್ಶನ’ (1960), ‘ಋಗ್ವೇದ ಸಾರ: ನಾಗ ಪ್ರತಿಮಾ ವಿಚಾರ’ (1971) ಮತ್ತು ‘ಪ್ರವಾಹ ಪತಿತರ ಕರ್ಮ: ಹಿಂದೂ ಎಂಬ ಧರ್ಮ’ (1976)-ಇವು ಬಹುರ್ಚಿತ ಕೃತಿಗಳಾಗಿವೆ. ಕೆಲವು ಕೃತಿಗಳು ಸಂಪ್ರದಾಯಸ್ಥ ಬ್ರಾಹ್ಮಣರ ಕೆಂಗಣ್ಣಿಗೂ ಗುರಿಯಾಗಿವೆ. ಈ ಕಾರಣಕ್ಕೆ ‘ಪ್ರವಾಹ ಪತಿತರ ಕರ್ಮ: ಹಿಂದೂ ಎಂಬ ಧರ್ಮ’ ಕೃತಿಯು ಅಂದು ಧಾರವಾಡದಲ್ಲಿ ಪ್ರಕಟವಾಗಲಿಲ್ಲ. (ಇದನ್ನು ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿತು). ಕರ್ಮಠ ಬ್ರಾಹ್ಮಣರಿಂದ ಅವರು ಸಾಕಷ್ಟು ವಿರೋಧವನ್ನು ಎದುರಿಸಬೇಕಾಯಿತು. ಶಂಬಾರವರ ಮನೆಮಾತು ಮರಾಠಿಯಾಗಿದ್ದರು, ಕನ್ನಡದಲ್ಲಿ ಬಹುಶ್ರುತ ವಿದ್ವಾಂಸರು; ಅವರು ಮರಾಠಿಯ ಸಂಶೋಧನೆಯಲ್ಲಿಯು ಅಷ್ಟೇ ಪ್ರಖ್ಯಾತರೂ – ವಿವಾದಿತರೂ ಆಗಿದ್ದಾರೆ.

1940ರ ಸುಮಾರಿನಲ್ಲಿ ಮರಾಠಿ ಸಂಸ್ಕೃತಿಯ ಬಗ್ಗೆ ಪುಣೆಯ ‘ಭಾರತ ಇತಿಹಾಸ ಸಂಶೋಧಕ ಮಂಡಳ’ದಲ್ಲಿ ನಡೆದ ಒಂದು ಚರ್ಚೆಯ ವರದಿಯು ಅಂದಿನ ‘ಕೇಸರಿ’ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ಇದು ಶಂಬಾರ ಗಮನಕ್ಕೂ ಬರುತ್ತದೆ. ಅದೇ ಸಂದರ್ಭದಲ್ಲಿ ಶಂಬಾರವರ ಒಂದು ಲೇಖನವು ‘ಕೇಸರಿ’ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ಆಗ ಮಹಾರಾಷ್ಟ್ರದ ವಿದ್ವಾಂಸರಾದ ಪಿ.ವಿ. ಕಾಣೆ ಮತ್ತು ಯಾ.ಮಾ. ಕಾಳೆಯವರು ಈ ಲೇಖನಕ್ಕೆ ತಮ್ಮ ಭಿನ್ನಾಭಿಪ್ರಾಯಗಳನ್ನು ಕಳುಹಿಸುತ್ತಾರೆ. ಅದಕ್ಕೆ ಶಂಬಾರವರ ಸಹಮತವಿರುವುದಿಲ್ಲ. ಅದೇ ಹೊತ್ತಿನಲ್ಲಿ ಅವರಿಗೆ ಮಹಾರಾಷ್ಟ್ರದ ಸ.ಜ. ಭಾಗವತ ಅವರು ಈ ನಿಟ್ಟಿನಲ್ಲಿ ಪುಣೆಯ ‘ನವಭಾರತ’ ಪತ್ರಿಕೆಯಲ್ಲಿ ಬರೆಯಲು ಶಂಭಾ ಅವರನ್ನು ಕೇಳಿಕೊಳ್ಳುತ್ತಾರೆ. ಆದ್ದರಿಂದ ಶಂಬಾ ಜೋಶಿ ಅವರ ‘ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು’ ಕೃತಿಯ ಮೊದಲ ಲೇಖನಗಳು ‘ನವಭಾರತ’ ಪತ್ರಿಕೆಯಲ್ಲಿ ಪ್ರಕಟವಾದವು. ಈ ಕೃತಿಯನ್ನು ಸ.ಜ. ಭಾಗವತ ಅವರೇ ತಮ್ಮ ‘ಅಂತರ ಭಾರತಿ ಪ್ರಕಾಶನ’ದಿಂದ 1958ರಲ್ಲಿ ಪ್ರಕಟಿಸಿದರು.

ಕನ್ನಡ ಮತ್ತು ಮರಾಠಿ ಸಂಸ್ಕೃತಿಯು ದಾಯಾದಿ ಸಂಬಂಧವನ್ನು ಹೊಂದಿದೆ ಎನ್ನುವ ಶಂಬಾರವರ ಸಂಶೋಧನೆಯು ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತು. ಅಲ್ಲಿ ಈ ಕೃತಿಗೆ ಮಿಶ್ರವಾದ ಅಭಿಪ್ರಾಯಗಳು ಕೇಳಿಬಂದವು. ಕೆಲವರು ಇದನ್ನು ಸಾರ್ವಜನಿಕವಾಗಿ ಸುಟ್ಟು ಹಾಕಬೇಕೆಂದು ವಾದಿಸಿದರು; ಇನ್ನು ಕೆಲವರು ಶಂಬಾರವರನ್ನು ಮುಂಬಯಿಗೆ ಕರೆಯಿಸಿಕೊಂಡು ಸನ್ಮಾನಿಸುವ ಕಾರ್ಯಕ್ರಮವೂ ನಡೆಯಿತು. ಕೀರ್ತಿನಾಥ ಕುರ್ತಕೋಟಿಯವರು ‘ಮರಾಠಿ ಸಂಸ್ಕೃತಿ: ಕಾಂಹೀ ಸಮಸ್ಯಾ’ ಕೃತಿಯನ್ನು 1989ರಲ್ಲಿ ಕನ್ನಡಕ್ಕೆ ಭಾಷಾಂತರಿಸಿದರು.

‘ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು’ ಕೃತಿಯು ಶಂಬಾರವರು 1934ರಲ್ಲಿಯೇ ಬರೆದ ‘ಮಹಾರಾಷ್ಟ್ರದ ಮೂಲ’ ಎಂಬ ಕೃತಿಯ ಮುಂದುವರೆದ ಭಾಗದಂತಿದೆ. ಅವರು ‘ಮಹಾರಾಷ್ಟ್ರ’ ಎಂಬುದರ ಮೂಲ ಶಬ್ದ, ಪ್ರದೇಶ, ಜನಾಂಗ, ಭಾಷೆ, ಸಾಹಿತ್ಯ-ಇವುಗಳ ಆಳಕ್ಕೆ ಇಳಿದು ಆಮೂಲಾಗ್ರವಾಗಿ ಶೋಧಿಸುವ ಬೃಹತ್ ಸಾಹಸಕ್ಕೆ ಕೈಹಾಕಿದರು. ಸ್ಥಳನಾಮ, ಶಬ್ದ ನಿಷ್ಪತ್ತಿ, ವಾಕ್ಪ್ರಯೋಗ, ಗಾದೆ ಮಾತುಗಳ ಜಾಡು ಹಿಡಿದು ‘ಮಹಾರಾಷ್ಟ್ರ’ ಪದದ ಮೂಲವನ್ನು ‘ಮರ್ಹಾಟ’, ‘ಮರಹಟ್ಟ’ ಎಂದು ರುಜುವಾತುಪಡಿಸಲು ಪ್ರಯತ್ನಿಸಿದರು. ಇಂದಿನ ಮರಾಠಿ ಜನರ ಪೂರ್ವಜರನ್ನು ಪ್ರಾಕೃತ ಗ್ರಂಥಗಳು ‘ಮರಹಟ್ಟೆ’ ಎಂದು ಉಲ್ಲೇಖಿಸುತ್ತವೆ; ಅದೇ ಸಂಸ್ಕೃತ ಗ್ರಂಥಗಳು ‘ಮಹಾರಾಷ್ಟ್ರೀಕ’ರೆಂದು ಕರೆದಿವೆ. ಇದರಲ್ಲಿರುವ ‘ಮರ’ ಪದವು ಕನ್ನಡದ್ದೇ ಎಂದೂ, ಅದು ಮರಾಠಿಯ ‘ಝಾಡ ಮಂಡಳ’ಕ್ಕೆ ಮೂಲವೆಂದು ವಾದಿಸಿದ್ದಾರೆ. (ಶಂಬಾರವರ ಈ ವಾದವನ್ನು ಬೇಂದ್ರೆಯವರು ಒಪ್ಪಲಿಲ್ಲವೆಂಬುದು ಬೇರೆ ವಿಷಯ) ಅವರು ಮಹಾರಾಷ್ಟ್ರದ ಮೂಲ ಪ್ರದೇಶವು ‘ವರ್ಹಾಡ’ವೆಂದು ಗುರುತಿಸಲು ಮಹಾಭಾರತ ಮತ್ತು ಪುರಾಣಗಳನ್ನು ಬಳಿಸಿಕೊಂಡಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮೂಲ ಪ್ರದೇಶ ಒಂದೇ ಎಂಬುದರ ರಹಸ್ಯವನ್ನು ಬೇಧಿಸಲು ಸಾಕಷ್ಟು ದೀರ್ಘವಾದ ವಾದಗಳನ್ನು ಮಂಡಿಸಿದ್ದಾರೆ.

ಶಂಬಾರವರ ಈ ಕೃತಿಯು ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುವ ಜನಾಂಗವು ಮೂಲದಲ್ಲಿ ಅವಳಿ ಜವಳಿಯಾಗಿದ್ದು, ದಾಯಾದಿ ಸಂಬಂಧಿಕರು ಎಂಬುದನ್ನು ಅನೇಕ ಪುರಾವೆಗಳಿಂದ ಸಾಬೀತುಪಡಿಸುತ್ತದೆ. ಮರಾಠಿ ಮತ್ತು ಕನ್ನಡಿಗರ ಸಾಮಾಜಿಕ ಬಾಂಧವ್ಯವನ್ನು ವೇದಗಳ ಕಾಲದ ‘ಯದು’ ಮತ್ತು ‘ತುರ್ವಸು’ಗಳ ಕಾಲಕ್ಕೆ ಒಯ್ಯಲಾಗಿದೆ; ಇಂದಿನ ಮರಾಠಿ ಮತ್ತು ಕನ್ನಡಿಗರ ಜಗಳವನ್ನು ಅವರ ದಾಯಾದಿ ಕಲಹಕ್ಕೆ ಸಮೀಕರಿಸಲಾಗಿದೆ. ಈ ಅವಳಿ ಬಂಧುಗಳು 12ನೇ ಶತಮಾನದವರೆಗೂ ಹೆಚ್ಚು ಗದ್ದಲವಿಲ್ಲದೆ ಸ್ವತಂತ್ರವಾಗಿ ಬಾಳಿದರು. ಆಗಿನ ಪೈಠಣದ ಶಾತವಾಹನರು, ಬಾದಾಮಿಯ ಚಾಲುಕ್ಯರು, ಮಳಖೇಡದ ರಾಷ್ಟ್ರಕೂಟರು ಮತ್ತು ಕಲ್ಯಾಣದ ಚಾಲುಕ್ಯರು-ಈ ನಾಲ್ಕು ಸಾಮ್ರಾಜ್ಯಗಳ ಆಡಳಿತದಲ್ಲಿ ಮರಾಠಿ ತನ್ನ ಸ್ವತಂತ್ರವಾದ ಸಂಸಾರವನ್ನು ಹೂಡಿರಲಿಲ್ಲ. ಮೇಲಿನ ನಾಲ್ಕು ರಾಜಧಾನಿಗಳಲ್ಲಿ ಮೂರು ರಾಜಧಾನಿಗಳು ನಿಸ್ಸಂಶಯವಾಗಿ ಕರ್ನಾಟಕದಲ್ಲಿದ್ದವು. ಹಾಗಾಗಿ ಕರ್ನಾಟಕೀಯ ಆಡಳಿತದಲ್ಲಿ ಮರಾಠಿಯು ಕನ್ನಡದ ಕಡೆಗೆಯೇ ಹೆಚ್ಚು ವಾಲುತ್ತಿತ್ತು. ಮುಂದೆ ದೇವಗಿರಿಯ ಯಾದವರ ಕಾಲದಲ್ಲಿ ಮರಾಠಿ ಭಾಷೆಯು ಸ್ಥಿರತೆಯನ್ನು ಪಡೆದುಕೊಂಡಿತು. ಆಗ ಮರಾಠಿಯ ಸ್ವತಂತ್ರ ರಾಜಕಾರಣ ಪ್ರಾರಂಭವಾಯಿತು. ಸೇವುಣರು ಮತ್ತು ಹೊಯ್ಸಳರ ನಡುವಿನ ಯಾದವೀ ಕಲಹದಿಂದ 12ನೇ ಶತಮಾನದದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕಗಳು ಇಬ್ಭಾಗವಾದವು ಎಂಬ ತೀರ್ಮಾನಕ್ಕೆ ಶಂಬಾ ಬರುತ್ತಾರೆ. 13ನೇ ಶತಮಾನದ ನಂತರದಲ್ಲಿ ಮರಾಠಿಯು ಕನ್ನಡದಿಂದ ಸಂಪೂರ್ಣವಾಗಿ ಬೇರೆಯಾಗಿ ಸ್ವತಂತ್ರವಾದ ಸಂಸಾರವನ್ನು ಹೂಡಿತು. ಒಂದು ಕಾಲದಲ್ಲಿ ಒಂದಾಗಿದ್ದ ಈ ಅವಳಿ ಬಂಧುಗಳ ನಡುವೆ ನಿಕಟ ಸಂಬಂಧ ಇತ್ತೋ ಇಲ್ಲವೋ ಎನ್ನುವುದು ಮರೆತು ಹೋಗುವಷ್ಟು ಅವು ಬೇರೆ ಬೇರೆಯಾದವು ಎಂಬುದನ್ನು ಶಂಬಾರವರು ಗುರುತಿಸಿದ್ದಾರೆ. ಕಾಲಗರ್ಭದಲ್ಲಿ ಹೂತುಹೋಗಿದ್ದ ಈ ಬಾಂಧವ್ಯದ ಸಾಂಸ್ಕೃತಿಕ ಕುರುಹುಗಳನ್ನು ತಮ್ಮ ಅಪಾರ ವಿದ್ವತ್ತು ಮತ್ತು ನಿಶಿತಮತಿಯಿಂದ ಹೆಕ್ಕಿ ತೆಗೆದದ್ದು ಶಂಬಾರವರ ಸಂಶೋಧನೆಯ ದೊಡ್ಡ ಹೆಗ್ಗಳಿಕೆಯಾಗಿದೆ.

15-16ನೇ ಶತಮಾನದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ವ್ಯಾಪಕವಾಗಿ ನಡೆದಿದೆ. ಕುಮಾರವ್ಯಾಸನ ಕಾವ್ಯದ ಪದ್ಯಗಳ ಗಾಢ ಪ್ರಭಾವವು ಮರಾಠಿಯ ಮಹಾಕವಿ ಮುಕ್ತೇಶ್ವರನ ಕಾವ್ಯದಲ್ಲಿ ಕಾಣಸಿಗುತ್ತವೆ; ಸಾಮ್ಯತೆಗಳಂತು ತೀರ ಸ್ಪಷ್ಟವಾಗಿಯೇ ಗೋಚರಿಸುತ್ತವೆ. ಮರಾಠಿಯ ಎಷ್ಟೋ ಸಂಖ್ಯಾವಾಚಕಗಳು ಕನ್ನಡದಲ್ಲಿ ಸೇರಿಕೊಂಡಿವೆ. ಭಾಷಾಶಾಸ್ತ್ರಜ್ಞರ ಪ್ರಕಾರ ಸಂಖ್ಯಾವಾಚಕಗಳನ್ನು ಪಡೆದುಕೊಳ್ಳುವ ಭಾಷೆಯು ಹೆಚ್ಚು ಋಣಿಯಾಗಿರಬೇಕೆಂದು ಅಭಿಪ್ರಾಯಪಡುತ್ತಾರೆ. ಇನ್ನು ಮರಾಠಿಯಲ್ಲಿ ಕನ್ನಡದ ಅನೇಕ ಧಾತು ರೂಪಗಳು ಸೇರಿಕೊಂಡಿವೆ. ಒಂದು ಭಾಷೆಗೆ ಇನ್ನೊಂದು ಭಾಷೆಯಿಂದ ಸುಲಭವಾಗಿ ನಾಮಪದಗಳು ಸೇರಿಕೊಳ್ಳುತ್ತವೆ; ಆದರೆ ಧಾತು ರೂಪಗಳನ್ನು ಪಡೆದುಕೊಳ್ಳುವುದು ವಿಶಿಷ್ಟವಾಗಿದೆ. ಆದ್ದರಿಂದ ಮರಾಠಿ ಮತ್ತು ಕನ್ನಡ ಭಾಷೆಗಳ ನಡುವಿನ ನಿಕಟವಾದ ಬಾಂಧವ್ಯವೇ ಇದಕ್ಕೆ ನಿದರ್ಶನವಾಗಿದೆ. ಶಂಬಾರವರ ಕೃತಿಯಲ್ಲಿ ಬಿಡಿಸಲಾಗದೇ ಉಳಿದಿರುವ ಅನೇಕ ರಹಸ್ಯಗಳಿವೆ. ಅವುಗಳಲ್ಲಿ, 10ನೇ ಶತಮಾನದಲ್ಲಿ ಶ್ರವಣಬೆಳಗೊಳದಲ್ಲಿ ನಿರ್ಮಾಣವಾದ ಬಾಹುಬಲಿಯ ಏಕಶಿಲಾ ಮೂರ್ತಿಯ ಅಡಿಯಲ್ಲಿ ‘ಚಾವುಂಡರಾಯ ಕರವೀಯಲೆ’ (ಚಾವುಂಡರಾಯ ನಿರ್ಮಿಸಿದನು) ಎಂದು ಬರೆದಿರುವುದು ಕೂಡ ಒಂದಾಗಿದೆ. ಇದು ಮರಾಠಿ ವಾಕ್ಯವೆಂದು ಶಂಬಾ ಹೇಳುತ್ತಾರೆ. ಇದು ಮರಾಠಿಯ ಮೊದಲ ಸ್ವತಂತ್ರ ವಾಕ್ಯವೆಂದು ಬೇಂದ್ರೆಯವರು ಹೇಳುತ್ತಾರೆ. ಹಾಗಾದರೆ ಶ್ರವಣಬೆಳಗೊಳದವರೆಗೂ ಮರಾಠಿ ಭಾಷೆ ಬಂದಿರುವುದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದುಕೊಂಡಿದೆ.

ಶಂಬಾರವರ ದೃಷ್ಟಿಯಲ್ಲಿ ಸಂಸ್ಕೃತಿ ಎನ್ನುವುದು ಸ್ಥಿರವಾದ ಅಥವಾ ಜಡವಾದ ಸಂಗತಿಯಲ್ಲ; ಅದು ಈಗಾಗಲೇ ರಚನೆಗೊಂಡಿರುವ ಮೂರ್ತ ಸಂಗತಿಯೂ ಅಲ್ಲ; ಸಂಸ್ಕೃತಿಯು ನಿರಂತರವಾಗಿ ಆಗುತ್ತಲೇ ಇರುವ ಒಂದು ವಿದ್ಯಮಾನವಾಗಿದೆ. ಈ ಹಿನ್ನೆಲೆಯಲ್ಲಿ ಭಾಷೆ ಮತ್ತು ಅದನ್ನಾಡುವ ಜನಸಮುದಾಯಗಳ ಆಚರಣೆಯಲ್ಲಿ ಸಂಸ್ಕೃತಿಯು ಅಂತರ್ಗತವಾಗಿರುತ್ತದೆ. ಅದ್ದರಿಂದ ಭಾಷೆ ಮತ್ತು ಸಂಸ್ಕೃತಿಯ ನಡುವಿನ ನಂಟು ಅವಿಭಾಜ್ಯವಾದದ್ದು. ಮನುಷ್ಯನ ಮೂರ್ತವಾದ ವ್ಯವಹಾರಗಳೆಲ್ಲ ಘಟಿಸುವುದು ಭಾಷೆಯಲ್ಲಿಯೇ. ಭಾಷೆಯಲ್ಲಿಯೇ ಪುರಾಣ, ಐತಿಹ್ಯ, ಸಂಕೇತಗಳು ವ್ಯಕ್ತರೂಪವನ್ನು ಪಡೆಯುತ್ತವೆ. ಬದಲಾಗುತ್ತಿರುವ ಕಾಲಮಾನದೊಂದಿಗೆ ಭಾಷೆಗಳು ಸ್ಥಿತ್ಯಂತರಕ್ಕೆ ಒಳಪಡುತ್ತವೆ; ಸಾಹಿತ್ಯ ನಿರ್ಮಾಣದಲ್ಲಿಯೂ ಪಲ್ಲಟಗಳಾಗುತ್ತವೆ. ಆದ್ದರಿಂದ ಶಂಬಾರವರು ತಮ್ಮ ಸಂಶೋಧನೆಯುದ್ದಕ್ಕೂ ಪುರಾಣ, ಐತಿಹ್ಯ, ದೇವತೆ, ಕುಲದೇವತೆಗಳ ಕತೆಗಳನ್ನು ಬಳಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿರುವ ಎಲ್ಲಮ್ಮ/ರೇಣುಕೆಯ ದೇವಿಗೆ ಇಂದಿಗೂ ಮಹಾರಾಷ್ಟ್ರದಿಂದ ಅಸಂಖ್ಯಾತ ಜನರು ನಡೆದುಕೊಳ್ಳುವ ಭಕ್ತರಿದ್ದಾರೆ. ಹಾಗೆಯೇ ಮಹಾರಾಷ್ಟ್ರದ ಮಹಾಲಕ್ಷ್ಮೀ, ಅಂಬಾಭವಾನಿ, ಖಂಡೋಬಾ, ಜ್ಯೋತಿಬಾ, ವಿಠ್ಠಲ-ಇವರಿಗಾಗಿ ಕರ್ನಾಟಕದ ಎಷ್ಟೋ ಜನರು ನಡೆದುಕೊಳ್ಳುತ್ತಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರಗಳು ರಾಜಕೀಯ ಕಾರಣಕ್ಕೆ ಬೇರ್ಪಟ್ಟಿದ್ದರು ಕೂಡ ಇಂದಿಗೂ ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ಒಡನಾಟವು ಮುಂದುವರೆದಿದೆ.

‘ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು’ ಕೃತಿಯಲ್ಲಿ ‘ಧರ್ಮಪಂಥಗಳು’ ಎಂಬ ಅತ್ಯಂತ ಮಹತ್ವದ ಅಧ್ಯಾಯವನ್ನು ಶಂಬಾರವರು ಬರೆದಿದ್ದಾರೆ. ವೈದಿಕೇತರ ಧರ್ಮಪಂಥಗಳು ಈ ಪ್ರದೇಶದಲ್ಲಿ ಹುಟ್ಟಿಕೊಂಡು ಸಂಸ್ಕೃತ ಭಾಷೆಯ ಎದುರಿನಲ್ಲಿ ತಮ್ಮ ಭಾಷಿಕ ಅಸ್ಮಿತೆಯನ್ನು ಕಂಡುಕೊಂಡಿದ್ದು ಬಹುದೊಡ್ಡ ಸಾಧನೆ ಎಂಬುದರ ವಿಸ್ಕೃತ ಚರ್ಚೆಯಿದೆ. ಇವು ತಮ್ಮ ಭಾಷಿಕ ಸಾಹಿತ್ಯದ ಮೂಲಕ ವೈದಿಕ ಪ್ರಭುತ್ವ ಮತ್ತು ಯಜಮಾನಿಕೆಯನ್ನು ನಿರಾಕರಿಸಿದವು. ಕರ್ನಾಟಕದಲ್ಲಿ 12ನೇ ಶತಮಾನದ ವೀರಶೈವ ಕ್ರಾಂತಿಯು 13ನೇ ಶತಮಾನದಲ್ಲಿ ಮಹಾರಾಷ್ಟ್ರದ ‘ಮಹಾನುಭಾವ’ ಭಕ್ತಿ ಪಂಥದ ಉದಯಕ್ಕೆ ಪ್ರೇರಕ ಶಕ್ತಿಯಾಗಿರುವುದನ್ನು ಶಂಬಾರವರು ವಿಶ್ಲೇಷಿಸಿದ್ದಾರೆ. ಜ್ಞಾನೇಶ್ವರದಿಂದ ಆರಂಭವಾದ ವಾರಕರೀ ಭಕ್ತಿ ಪಂಥವು ವೈದಿಕ ಧರ್ಮದ ವಿರೋಧಿಯಾಗಿರಲಿಲ್ಲ ಎಂದಿರುವ ಮಹಾರಾಷ್ಟ್ರದ ಸಂಶೋಧಕರ ನಿಲುವನ್ನು ಶಂಬಾರವರು ಒಪ್ಪುವುದಿಲ್ಲ. ನಾಥಪಂಥಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಸಾಕಷ್ಟು ಕೊಡುಕೊಳ್ಳುವಿಕೆ ನಡೆದಿದೆ.

ಕನ್ನಡದಲ್ಲಿ ಬಹುತೇಕವಾಗಿ 1980ರ ದಶಕದಿಂದ ತೀವ್ರವಾಗಿಯೇ ಶಂಬಾ ಅವರ ಸಂಶೋಧನ ಕೃತಿಗಳ ಅನುಸಂಧಾನ ಶುರುವಾಗುತ್ತದೆ. ಶಂಬಾರವರ ಸಂಶೋಧನೆಯ ಬಹುಮುಖಿ ಅಧ್ಯಯನಗಳ ವಿಧಾನ ಮತ್ತು ಅವುಗಳು ಹುಟ್ಟಿಸಿದ ವಿಶಿಷ್ಟ ಒಳನೋಟಗಳು ಮುಂದಿನ ತಲೆಮಾರಿನ ಲೇಖಕ, ವಿಮರ್ಶಕ ಮತ್ತು ಸಂಶೋಧಕರ ಮೇಲೆ ಪ್ರಭಾವ ಬೀರಿವೆ. ಶಂಬಾರವರ ಸಂಸ್ಕೃತಿಶೋಧದ ವಿಧಾನದಿಂದ ಎಂ. ಚಿದಾನಂದ ಮೂರ್ತಿ, ಕೆ.ವಿ. ನಾರಾಯಣ, ಮಲ್ಲೇಪುರಂ ಜಿ. ವೆಂಕಟೇಶ (ಇವರ ಸಂಪಾದಕತ್ವದಲ್ಲಿ ಶಂಬಾರವರ ಸಮಗ್ರ ಕೃತಿಗಳು ಆರು ಸಂಪುಟಗಳಲ್ಲಿ ‘ಕನ್ನಡ ಪುಸ್ತಕ ಪ್ರಾಧಿಕಾರ’ದಿಂದ 1999ರಲ್ಲಿ ಪ್ರಕಟವಾದವು), ಬಸವರಾಜ ಕಲ್ಗುಡಿ, ಡಿ.ಆರ್. ನಾಗರಾಜ್, ರಹಮತ್ ತರೀಕರೆ, ನಟರಾಜ ಬೂದಾಳ, ಕೆ.ವೈ. ನಾರಾಯಣಸ್ವಾಮಿ, ಆರ್. ಚಲಪತಿ, ಲಕ್ಷ್ಮಿಪತಿ ಕೋಲಾರ ಮುಂತಾದವರು ಪ್ರಭಾವಿತರಾಗಿದ್ದಾರೆ. ಈ ಸಂದರ್ಭದಲ್ಲಿಯೇ ಸಂಸ್ಕೃತಿ ಅಧ್ಯಯನವು ಹೆಚ್ಚು ಮುಂಚೂಣಿಗೆ ಬಂದಿತು. ಈ ಕಾಲದಲ್ಲಿ ಹೆಚ್ಚು ಓದಲ್ಪಡುವ ಸಂಶೋಧಕರಲ್ಲಿ ಶಂಬಾ ಮುಖ್ಯರಾಗಿದ್ದಾರೆ.

ಇಂದಿನ ಎಷ್ಟೋ ಸಮಸ್ಯೆ, ಬಿಕ್ಕಟ್ಟುಗಳು ಇಂದೇ ನಿರ್ಮಾಣವಾಗಿರುವುದಿಲ್ಲ; ಅವುಗಳ ಬೇರುಗಳು ಭೂತಕಾಲದ ಗರ್ಭದಲ್ಲಿ ಹೂತುಹೋಗಿರುತ್ತವೆ. ಆದ್ದರಿಂದ ಶಂಬಾ ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಎಷ್ಟೋ ತೊಡಕು, ಒಗಟು, ಸಮಸ್ಯೆಗಳನ್ನು ತಮ್ಮ ತೀಕ್ಷ್ಣಮತಿ, ಮೇಧಾವಿತನ ಮತ್ತು ಆಳವಾದ ವಿದ್ವತ್ತಿನ ಮೂಲಕ ಪರಿಹರಿಸಲು ಪ್ರಯತ್ನಿಸಿದ್ದಾರೆ. ಕೆಲವು ತೊಡಕುಗಳು ಹಾಗೆ ಉಳಿದುಕೊಂಡಿವೆ. ಅವರು ಏಕಮುಖಿ ಸತ್ಯವನ್ನು ಬಹುಮುಖಿ ನೆಲೆಗಳಿಂದ ಬಗೆದು ನೋಡಿದ್ದಾರೆ. ಈ ಸಂಶೋಧನೆಯ ದಾರಿಯಲ್ಲಿ ತಮಗೆ ಕಂಡ ಸತ್ಯಗಳನ್ನು ಯಾವುದೇ ಮುಲಾಜಿಲ್ಲದೆ ನಿರ್ಭಿಡೆಯಾಗಿ ಹೇಳಿದ್ದಾರೆ. ಆದ್ದರಿಂದಲೇ ಶಂಬಾರವರ ಸಂಶೋಧನೆಗೆ ಒಂದು ಘನತೆ ಮತ್ತು ಗೌರವ ಪ್ರಾಪ್ತವಾಗಿದೆ. ‘ಮರಾಠಿ ಸಂಸ್ಕೃತಿ: ಕೆಲವು ಸಮಸ್ಯೆಗಳು’ ಕೃತಿಯು ಕರ್ನಾಟಕದ ಸಂಸ್ಕøತಿ ಅಧ್ಯಯನದಲ್ಲಿ ಒಂದು ಮೈಲಿಗಲ್ಲು ಎಂದು ಹೇಳಿದರೆ ಅತಿಶಯೋಕ್ತಿಯಾಗದು.

  • ಡಾ. ಸುಭಾಷ್ ರಾಜಮಾನೆ, ಲೇಖಕರು, ಉಪನ್ಯಾಸಕರು ಮತ್ತು ಸಂಸ್ಕೃತಿ ಚಿಂತಕರು.

ಇದನ್ನು ಓದಿ: ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...