132 ಜನರನ್ನು ಹೊತ್ತೊಯ್ಯುತ್ತಿದ್ದ ‘ಚೀನಾ ಈಸ್ಟರ್ನ್ ಏರ್‌ಲೈನ್ಸ್’ ಪ್ರಯಾಣಿಕ ವಿಮಾನವು ದಕ್ಷಿಣ ಚೀನಾದಲ್ಲಿ ಪತನಗೊಂಡಿದೆ ಎಂದು ದೇಶದ ಸರ್ಕಾರಿ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅದು ವರದಿ ಮಾಡಿದೆ.
ಬೋಯಿಂಗ್ 737 ಎಂಬ ವಿಮಾನವು ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಬಳಿಯ ಗ್ರಾಮಾಂತರ ಪ್ರದೇಶದಲ್ಲಿ ಪತನಗೊಂಡಿದೆ. ಇದರಿಂದಾಗಿ ಭಾರಿ ಬೆಂಕಿ ಭುಗಿಲೆದ್ದಿದೆ ಎಂದು CCTV ವರದಿಯಲ್ಲಿ ಹೇಳಿದ್ದು, ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಶಿಕಾರಿಪುರ: ಲಾಯರ್ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಅಧಿಕಾರಿ ಅಮಾನತು
ವಿಮಾನದ ಪತನದ ಕಾರಣದ ಬಗ್ಗೆ ಮಾಹಿತಿಯನ್ನು ಅದು ನೀಡಿಲ್ಲ. ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ ಆಗಿರುವ ‘ಫ್ಲೈಟ್‌ರಾಡಾರ್24’ ಪತನಗೊಂಡ ವಿಮಾನವನ್ನು, ‘ಆರು ವರ್ಷದ 737-800 ವಿಮಾನ’ ಎಂದು ಗುರುತಿಸಿದೆ.
“MU5735 ವಿಮಾನವು ಕುನ್ಮಿಂಗ್ ನಗರದಿಂದ ಮಧ್ಯಾಹ್ನ 1 ಗಂಟೆಯ ನಂತರ (05:00 GMT) ಟೇಕ್ ಆಫ್ ಆಗಿದೆ. ಆದರೆ ಅದು ಇಳಿಯಬೇಕಾದ ಗುವಾಂಗ್‌ಝೌ ಪ್ರದೇಶವನ್ನು ತಲುಪಿಲ್ಲ” ಎಂದು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಮಾನವು ತನ್ನ ಗುರಿಯನ್ನು ಮಧ್ಯಾಹ್ನ 3:05ಕ್ಕೆ (07:05 GMT) ತಲುಪಬೇಕಿತ್ತು.
“ಈ ದುರ್ಘಟನೆಯು ಇತ್ತೀಚೆಗಿನ ವರ್ಷಗಳಲ್ಲಿ ಚೀನಾದ ಅತಿದೊಡ್ಡ ಘಟನೆಯಾಗಿದೆ” ಎಂದು ಅಲ್‌ಜಝೀರಾ ತನ್ನ ವರದಿಗಾರ್ತಿ ಕತ್ರೀನಾ ಯು ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಬಗ್ಗೆ ಬೀಜಿಂಗ್‌ನಲ್ಲಿ ಮಾತನಾಡಿದ ಕತ್ರಿನಾ, “ಸಿಬ್ಬಂದಿ ಸೇರಿದಂತೆ 132 ಮಂದಿ ವಿಮಾನದಲ್ಲಿದ್ದರು ಎಂದು ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು: ಕಾಗದದ ಕೊರತೆಯಿಂದಾಗಿ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ!
“ವಿಮಾನವು ಕ್ವಾಂಗ್ಕ್ಸಿ ಮೇಲಿನಿಂದ ಹಾರುತ್ತಿರ ಬೇಕಾದರೆ ಕೆಳಗೆ ಬರುವುದರಿಂದ ಕಾಳ್ಗಿಚ್ಚು ಸಂಭವಿಸಿದೆ ಎಂದು ತೋರುತ್ತದೆ, ಮತ್ತು ಈ ಪ್ರದೇಶವು ಎಷ್ಟು ದೂರದಲ್ಲಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು” ಎಂದು ಅವರು ಮುಂದುವರಿಸಿದರು.
“ವಿಮಾನವು ಕ್ವಾಂಗ್ಕ್ಸಿಯಲ್ಲಿ ಕೆಳಗೆ ಬರುವುದರಿಂದ ಕಾಳ್ಗಿಚ್ಚು ಸಂಭವಿಸಿದೆ ಎಂದು ತೋರುತ್ತದೆ. ಈ ಭೂಪ್ರದೇಶಕ್ಕೆ ತಲುಪುವುದು ಕಷ್ಟಕರವಾಗಿದ್ದು, ಇದರಿಂದಾಗಿ ರಕ್ಷಣಾ ತಂಡಗಳನ್ನು ಅಲ್ಲಿಗೆ ತ್ವರಿತವಾಗಿ ತಲುಪಿಸುವುದು ಸುಲಭವಲ್ಲ” ಎಂದು ಅವರು ಹೇಳಿದ್ದಾರೆ.
ಚೀನಾ ಈಸ್ಟರ್ನ್ ಚೀನಾದ ಮೂರು ಪ್ರಮುಖ ವಿಮಾನ ಸಂಸ್ಥೆಗಳಲ್ಲಿ ಒಂದಾಗಿದೆ. 248 ಸ್ಥಳಗಳಿಗೆ ಸೇವೆ ಸಲ್ಲಿಸುವ ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳನ್ನು ನಿರ್ವಹಿಸುತ್ತದೆ. ದೇಶದ ವಿಮಾನಯಾನ ಉದ್ಯಮದ ಸುರಕ್ಷತಾ ದಾಖಲೆಯು ಕಳೆದ ದಶಕದಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದು ಅಲ್ ಜಝೀರಾ ಉಲ್ಲೇಖಿಸಿದೆ.
ಇದನ್ನೂ ಓದಿ: NATO ಸದಸ್ಯತ್ವಕ್ಕೆ ಇನ್ನು ಮುಂದೆ ಒತ್ತಾಯಿಸುವುದಿಲ್ಲ; ಮಾತುಕತೆಗೆ ಒಪ್ಪಿಕೊಂಡ ಝೆಲೆನ್ಸ್ಕಿ!


