ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರೆಸಲಿದ್ದಾರೆ. ಈ ಬಾರಿಯ ಹೋರಾಟ ಬೀದಿಗಳಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಎಂದು ಭಾನುವಾರ ಹೇಳಿದ್ದಾರೆ.
ಲೈಂಗಿಕ ಕಿರುಕುಳದ ಆರೋಪಿ ಸಿಂಗ್‌ನನ್ನು ಬಂಧಿಸುವಂತೆ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಏಪ್ರಿಲ್‌ನಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಜೂನ್ 7ರಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದ ಕುಸ್ತಿಪಟುಗಳು ಸಿಂಗ್ ವಿರುದ್ಧದ ತನಿಖೆಯನ್ನು ಜೂನ್ 15 ರೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. ಅದರಂತೆ ಜೂನ್ 15 ರಂದು, ದೆಹಲಿ ಪೊಲೀಸರು ಉತ್ತರ ಪ್ರದೇಶದ ಬಿಜೆಪಿ ಸಂಸದರೂ ಆಗಿರುವ ಕ್ರೀಡಾ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಬ್ರಿಜ್ಭೂ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು.
ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ದೂರುಗಳ ವಿಷಯದಲ್ಲಿ ಸರ್ಕಾರವು ಮಾತುಕತೆಯ ಸಮಯದಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ, ದೆಹಲಿ ಪೊಲೀಸರು ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆಯನ್ನು ಪೂರ್ಣಗೊಳಿಸಿದರು ಮತ್ತು ಆರೋಪಪಟ್ಟಿ ಸಲ್ಲಿಸಿದರು. ”ನಮಗೆ ಈಗ ನ್ಯಾಯ ಸಿಗುವವರೆಗೂ ಈ ಹೋರಾಟವು ನ್ಯಾಯಾಲಯದಲ್ಲಿ ಮುಂದುವರಿಯುತ್ತದೆ ಬೀದಿಗಳಲ್ಲಿ ಅಲ್ಲ” ಎಂದು ಜೂನ್ 15ರಂದು ಫೋಗಟ್, ಪುನಿಯಾ ಮತ್ತು ಮಲಿಕ್ ಒಂದೇ ರೀತಿಯ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
— Sakshee Malikkh (@SakshiMalik) June 25, 2023
”ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಜುಲೈ 11ರಂದು ಚುನಾವಣೆಗಳು ನಡೆಯಲಿವೆ ಮತ್ತು ಈ ನಿಟ್ಟಿನಲ್ಲಿ ಸರ್ಕಾರದ ಭರವಸೆಗಳ ಅನುಷ್ಠಾನಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಬಿಜೆಪಿ ಸಂಸದ ಸಿಂಗ್ ವಿರುದ್ಧದ ಎಫ್‌ಐಆರ್‌ಗಳ ವಿವರಗಳು ಅವರು ಕನಿಷ್ಠ ಇಬ್ಬರು ಮಹಿಳಾ ಕುಸ್ತಿಪಟುಗಳಿಗೆ ವೃತ್ತಿಪರ ಸಹಾಯ ಮಾಡುವುದಾಗಿ ಲೈಂಗಿಕತೆಗೆ ಸಹಕರಿಸುವ ಬೇಡಿಕೆಯಿಟ್ಟಿದ್ದಾರೆ ಮತ್ತು ಅರ್ಧ ಡಜನ್‌ಗಿಂತಲೂ ಹೆಚ್ಚು ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತೋರಿಸುತ್ತದೆ.
ಆಪಾದನೆ ಮಾಡಿದ್ದ ದೂರುದಾರರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದ ಕಾರಣಕ್ಕೆ ದೆಹಲಿ ಪೊಲೀಸರು ಈ ಹಿಂದೆ ಸಿಂಗ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ಜೂನ್ 15 ರಂದು, ”ಸಿಂಗ್ ವಿರುದ್ಧ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿ ಪ್ರಕರಣವನ್ನು ರದ್ದುಗೊಳಿಸಲು ಪೊಲೀಸರು ಶಿಫಾರಸು ಮಾಡಿದರು.
”ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂದೆಯ ಹೇಳಿಕೆಗಳ ಆಧಾರದ ಮೇಲೆ ಪೋಕ್ಸೋ ಪ್ರಕರಣದ ರದ್ದತಿ ವರದಿಯನ್ನು ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಜುಲೈ 4 ರಂದು ದೆಹಲಿ ನ್ಯಾಯಾಲಯವು ವಿಚಾರಣೆ ನಡೆಸಲಿದೆ.
ಜೂನ್ 18 ರಂದು, ಅಪ್ರಾಪ್ತ ಕ್ರೀಡಾಪಟು ತನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದರಿಂದ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಮಲಿಕ್ ಹೇಳಿದ್ದರು.
”ಕುಸ್ತಿಯಲ್ಲಿ ತೊಡಗುವವರೆಲ್ಲರೂ ಬಡ ಕುಟುಂಬದಿಂದ ಬಂದವರು. ವ್ಯವಸ್ಥೆಯ ವಿರುದ್ಧ ಮತ್ತು ಅಂತಹ ಶಕ್ತಿಯುತ ವ್ಯಕ್ತಿಯ ವಿರುದ್ಧ ಮಾತನಾಡಲು ಅವರಿಗೆ ಸಾಧ್ಯವಿಲ್ಲ” ಎಂದು ಮಲಿಕ್ ಹೇಳಿದರು.
ದೆಹಲಿ ನ್ಯಾಯಾಲಯವು ಗುರುವಾರ ಸಿಂಗ್ ವಿರುದ್ಧದ ಪ್ರಕರಣವನ್ನು ಸಂಸದರು ಮತ್ತು ಶಾಸಕರ ಪ್ರಕರಣಗಳನ್ನು ವ್ಯವಹರಿಸುವ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ನ್ಯಾಯಾಲಯಕ್ಕೆ ವರ್ಗಾಯಿಸಿದೆ.


