ಎಲೆಮರೆ – 24
ಮಾರ್ಚ್ 13 ರಿಂದ 15 ರ ತನಕ ಬಳ್ಳಾರಿಯ ರಂಗತೋರಣ ಸಂಸ್ಥೆಯು 13ನೇ `ರಾಜ್ಯ ವಿದ್ಯಾರ್ಥಿ ನಾಟಕೋತ್ಸವ’ ಆಯೋಜಿಸಿತ್ತು. ಬಳ್ಳಾರಿ ಭಾಗದಲ್ಲಿ ರಂಗಭೂಮಿ ಕುರಿತು ವಿಶೇಷ ಅರಿವು ಮತ್ತು ಕಾಳಜಿ ಮೂಡಿಸುತ್ತ ನಿರಂತರ ಕ್ರಿಯಾಶೀಲವಾಗಿರುವ ರಂಗತೋರಣ ಸಂಸ್ಥೆಯು ಈ ನಾಟಕೋತ್ಸವಕ್ಕೆ ಸರ್ವಾಧ್ಯಕ್ಷರನ್ನಾಗಿ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ರಂಗಜಂಗಮ ಪಿಂಜಾರ ಅಬ್ದುಲ್ಲ ಅವರನ್ನು ಆಯ್ಕೆ ಮಾಡಿತ್ತು. ಇದು ತೆರೆಮರೆಯಲ್ಲಿ ಪಿ.ಅಬ್ದುಲ್ ಅವರು ನಡೆಸುತ್ತಿರುವ ರಂಗಚಟುವಟಿಕೆಗಳಿಗೆ ಸಾರ್ಥಕ ಗೌರವ ಸಲ್ಲಿಕೆಯಾಗಿತ್ತು.
ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ಕೊಳಗೇರಿಯಲ್ಲಿ `ಶಿಶುನಾಳ ಶರೀಫ’ ರ ಹೆಸರಿನ ಪುಟ್ಟ ರಂಗಮಂದಿರವಿದೆ. ಈ ವೇದಿಕೆಯ ಹಿಂದಣ ಬೆಳಕು `ಭಾವೈಕ್ಯತಾ ವೇದಿಕೆ’. ಈ ವೇದಿಕೆ ರೂಪುಗೊಂಡದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ, ವೇದಿಕೆಯನ್ನು ರೂಪಿಸುವಲ್ಲಿ ತನ್ನನ್ನೇ ತೇಯ್ದುಕೊಂಡ ಪಿ.ಅಬ್ದುಲ್ ಅವರು ತಮ್ಮದೇ ಆತ್ಮಕಥನದ ಮುಖ್ಯ ಎಳೆ ಎಂಬಂತೆ `ಪಯಣ’ದ ಹೆಜ್ಜೆಗಳನ್ನು ವಿವರಿಸುತ್ತಾರೆ. ಇದು ವೇದಿಕೆಯ ಆತ್ಮಕಥನದಂತೆಯೂ ಕೇಳಿಸತೊಡಗುತ್ತದೆ.
ಅಬ್ದುಲ್ ಅವರು `ಪಿಂಜಾರ’ ಸಮುದಾಯದವರು. ಹತ್ತಿಯನ್ನು ಹದಗೊಳಿಸಿ ದಿಂಬು, ಗಾದಿಯನ್ನು ಹೊಲಿಯುವ `ಪಿಂಜಾರ’ ಸಮುದಾಯ ಮೂಲತಃ ಧಾರ್ಮಿಕ ಸಂಕರತೆಯ ಸೃಷ್ಟಿ. ಅಂತೆಯೇ ಇವರು ಹಿಂದೂಮುಸ್ಲಿಂ ಬೆಸುಗೆಯ ಸಾಂಸ್ಕೃತಿಕ ವಕ್ತಾರರಂತೆ ಕಾಣುತ್ತಾರೆ. ಹಾಗಾಗಿ ಮುಸ್ಲಿಂ ಧರ್ಮದಲ್ಲಿ ಪಿಂಜಾರರು ಒಂದು ಬಗೆಯಲ್ಲಿ ಅಸ್ಪೃಶ್ಯರು. ಮೂಲತಃ ಎರಡು ಸಂಗತಿಗಳನ್ನು ಹೊಲಿದು ಜೋಡಿಸುವ ಈ ಸಮುದಾಯ ಎರಡು ಧರ್ಮಗಳ ಜನರನ್ನು `ಬಂಧುತ್ವ’ `ಸಾಮರಸ್ಯ’ದ ನೆಲೆಯಲ್ಲಿ ಹೊಲಿಯುವ ಕೆಲಸವನ್ನೂ ಮಾಡುತ್ತಿದೆ. ಅಬ್ದುರ್ ಅವರ ಕುಟುಂಬದವರು `ಅಮೀನ್ ಬೆಡ್ಸ್’ ಮೂಲಕ ಮೂಲ ಕುಲವೃತ್ತಿಯನ್ನೂ, ಜತೆಗೆ ಸಾಮರಸ್ಯದ ಸಮುದಾಯಿಕ ಪ್ರಜ್ಞೆಯ `ಭಾವೈಕ್ಯತಾ ವೇದಿಕೆ’ಯನ್ನೂ ಕಾಪಿಟ್ಟುಕೊಂಡಿದ್ದಾರೆ.
ಈ ವೇದಿಕೆಯ ಕನಸು ಅಬ್ದುಲ್ ಅವರದಾದರೂ, ಈ ಕನಸಿನ ಬೇರುಗಳು ರೂಪುಗೊಂಡಿದ್ದು ಶಿವಮೊಗ್ಗದ ಹೆಚ್.ಇಬ್ರಾಹಿಂ ಸಾಹೇಬರ ಮನೆಯ ಸಾಂಸ್ಕೃತಿಕ ವಾತಾವರಣದಲ್ಲಿ. ಸ್ವತಃ ಇಬ್ರಾಹಿಂ ಸಾಹೇಬರು ರೂಪುಗೊಂಡ ಕತೆಯೂ ಕುತೂಹಲಕಾರಿಯಾಗಿದೆ. ಪ್ಲೇಗ್ ಭೀಕರತೆಗೆ ಹೆದರಿ ಬಾಲಕ ಇಬ್ರಾಹಿಂ ತಂದೆ ಹುಸೇನಪ್ಪ ತನ್ನೂರು ತೊರೆದು ಬಳ್ಳಾರಿ ಸಮೀಪದ ದಂಡಿನ ಹಿರೇಹಾಳು ಗ್ರಾಮಕ್ಕೆ ಬರಿಗೈಯಲ್ಲಿ ಬರುತ್ತಾರೆ. ತನ್ನ ಪ್ರಾಮಾಣಿಕತೆ ಮತ್ತು ಅವಿರತ ದುಡಿಮೆಯ ಕಾರಣಕ್ಕೆ ಊರಜನರ ಮನಸ್ಸು ಗೆಲ್ಲುತ್ತಾರೆ. ಅಲ್ಲಿನ ನೀಲಕಂಠೇಶ್ವರ ದೇವಾಲಯದ ಎದುರು ಮನೆ ಕಟ್ಟಿಕೊಂಡು ನೆಲೆಯೂರುತ್ತಾರೆ. ವ್ಯವಹಾರದ ಸೋಲುಗೆಲುವಿನ ಆಟದಲ್ಲಿ ಹುಸೇನಪ್ಪ ತನ್ನ ಕುಲವೃತ್ತಿಯಾದ ಗಾದಿ ಹೊಲಿಯುವುದನ್ನು ಬಿಟ್ಟು, ಆಕಸ್ಮಿಕವಾಗಿ ಅಬಕಾರಿ ಗುತ್ತಿಗೆ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಇದು ಇವರನ್ನು ಹಿರೇಹಾಳಿನಿಂದ ಶಿವಮೊಗ್ಗಕ್ಕೆ ತೆರಳುವಂತೆ ಮಾಡುತ್ತದೆ. ಮಗ ಇಬ್ರಾಹಿಂನನ್ನು ಹೆಚ್ಚು ಓದಿಸಬೇಕೆಂಬ ಕನಸಿದ್ದರೂ, ಮಗನೂ ಅಬಕಾರಿ ವ್ಯವಹಾರದಲ್ಲೆ ಮುಂದುವರಿಯುತ್ತಾನೆ. ಈ ಕ್ಷೇತ್ರದಲ್ಲಿ ದುಡಿದು ದೊಡ್ಡ ಉದ್ಯಮಿಯಾಗುತ್ತಾರೆ. ಮುಂದೆ ವೃತ್ತಿಗೆ ವಿರುದ್ಧವೆಂಬಂತೆ ಸಾಂಸ್ಕೃತಿಕ ವಲಯದ ಒಡನಾಡಿಯಾಗಿ ಬದಲಾಗುತ್ತಾರೆ.
ಕತೆಗಾರ್ತಿ ವೈದೇಹಿಯವರು ಹೇಳುವಂತೆ, `ಎಚ್. ಇಬ್ರಾಹಿಂ ಎಲ್ಲಿಂದಲೋ ಬಂದವರು ಎಲ್ಲರ ಮನ ಗೆದ್ದರು, ಎಲ್ಲದಕ್ಕೂ ಬೇಕಾದವರಾದರು. ಸಂಗೀತಕಛೇರಿ, ವಿಚಾರಸಂಕಿರಣ, ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ಪುಸ್ತಕ ಬಿಡುಗಡೆ, ಗಣೇಶೋತ್ಸವ, ಈದ್ ಮಿಲಾದ್ ಶಿವಮೊಗ್ಗೆಯಲ್ಲಿ ಏನೇ ನಡೆಯಲಿ, ಅಲ್ಲಿ ಎದುರಿಗೆ ಕಾಣಿಸದೆ, ಹಿಂದೆಯೇ ಇದ್ದು ಎಲ್ಲವನ್ನೂ ಸಾಂಗವಾಗಿ ನಡೆವಂತೆ ಸಹಕಾರ, ಸಹಯೋಗವಿತ್ತು ಕಣ್ಣಿಡುವ ದಾಕ್ಷಿಣ್ಯವಂತ ಈ ಇಬ್ರಾಹಿಂ’ ಎನ್ನುತ್ತಾರೆ.
ಹೀಗೆ ಇಬ್ರಾಹಿಂ ಅವರ ಮನೆಯೆಂದರೆ ಸಾಹಿತಿಗಳು, ನಾಟಕಕಾರರು, ಸಂಸ್ಕøತಿ ಚಿಂತಕರು, ಜನಪದ ಕಲಾವಿದರು ಒಡನಾಡುವ ಸಾಂಸ್ಕೃತಿಕ ಕೇಂದ್ರವಾಗಿ ಬದಲಾಯಿತು. ಸಾಹಿತ್ಯದ ಚರ್ಚೆಗಳು, ನಾಟಕದ ಅಭಿನಯಗಳು ಶಿವಮೊಗ್ಗದಲ್ಲಿ ಗರಿಗೆದರಲು ಇಬ್ರಾಹಿಂ ಸಾಹೇಬರು ಒತ್ತಾಸೆಯಾದರು. ಹಿಂದು ಮುಸ್ಲಿಂ ಎನ್ನುವ ಗಡಿರೇಖೆಗಳು ಅಳಿಸಿ ಸೌಹಾರ್ದದ ಸಾಂಸ್ಕೃತಿಕ ಪರಿಸರವೊಂದು ಸದ್ದಿಲ್ಲದೆ ಅರಳತೊಡಗಿತು. ಇಂತಹ ಪರಿಸರದ ಭಾಗವಾಗಿ ಚಿಕ್ಕಪ್ಪನ ಮನೆಯಲ್ಲಿ ಅಬ್ದುಲ್ ಅವರ ಬಾಲ್ಯ ರೂಪುಗೊಂಡಿತು. ಆಗಲೆ ಅವರ ಒಳಗೊಂದು ಸೌಹಾರ್ದದ ಕನಸಿನ ಕೂಸು ಮೊಳಕೆಯೊಡೆಯಿತು. ರಂಗಭೂಮಿಯ ಜತೆಗಿನ ನಂಟು ಗಾಢವಾಯಿತು, ಹೋರಾಟದ ಪ್ರಾಥಮಿಕ ಪಾಠವೆಂಬಂತೆ ಗೋಕಾಕ್ ಚಳವಳಿಯಲ್ಲಿ ಉಪವಾಸ ಕೈಗೊಂಡು ಜೈಲುವಾಸವನ್ನೂ ಅನುಭವಿಸಿದರು. ಹೀಗೆ ಅಬ್ದುಲ್ ಅವರಿಗೆ ಪ್ರೇರಕಶಕ್ತಿಯಾಗಿದ್ದ ಹೆಚ್.ಇಬ್ರಾಹಿಂ ಸಾಹೇಬರು ಆಗಸ್ಟ್ 1, 2014 ರಲ್ಲಿ ದೇಹ ತ್ಯಜಿಸಿದರು. ಆ ಹೊತ್ತಿಗೆ ಅವರ ಸೌಹಾರ್ದದ ಕನಸು ಭಾವೈಕ್ಯತಾ ವೇದಿಕೆ 23 ವರ್ಷ ಪೂರೈಸಿ ಬೆಳ್ಳಿಹಬ್ಬದತ್ತ ಹೆಜ್ಜೆ ಇಟ್ಟಿತ್ತು.
ಹೀಗೆ ಅಬ್ದುಲ್ ಅವರು ಇಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದು, ಪದವಿವರೆಗೂ ಓದಿ ಕ್ರಾಂತಿಯ ಕನಸೊತ್ತು, ಸಮಾಜವನ್ನು ಬದಲಿಸಬೇಕೆಂಬ ಉತ್ಸಾಹದಲ್ಲಿ ತಾನು ಹುಟ್ಟಿದ ಇದೇ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಗೆ ವಾಪಸಾದರು. ಮಹಿಳೆಯರ ಕಳ್ಳ ಸಾಗಣೆ ವಿರುದ್ಧ ಸಮುದಾಯದವರು ಹೇಳಿದ ದೂರನ್ನು ದಾಖಲಿಸಿದ್ದಕ್ಕೆ ಹಲ್ಲೆಗೆ ಒಳಗಾದರು, ಊರು ಬಿಟ್ಟು ಓಡಿದರು. ಸುಳ್ಳು ಕೇಸುಗಳ ಜಾಲದಲ್ಲಿ ಸಿಲುಕಿ ಕೆಲಕಾಲ ತಲೆಮರೆಸಿಕೊಂಡರು, ಕುಟುಂಬ ನಲುಗಿತು. ಇಷ್ಟಾಗಿಯೂ ಇದೇ ಚೌಕಿಯಲ್ಲಿ ಏನನ್ನಾದರೂ ಮಾಡಬೇಕೆಂದು ಪಣತೊಟ್ಟರು.
1991 ರಲ್ಲಿ ಹೊಸಪೇಟೆ ಭಾಗದಲ್ಲಿ ನಡೆದ ಕೋಮುಗಲಭೆಯಿಂದಾಗಿ ಇಡೀ ನಗರ ಮತ್ತು ಸುತ್ತಮುತ್ತಣ ಹಳ್ಳಿಗಳಲ್ಲಿ ಆತಂಕದ ಛಾಯೆಯಿತ್ತು. ಸೌಹಾರ್ದದಿಂದ ಬದುಕುವ ಜನಬದುಕಿನಲ್ಲಿ ದೊಡ್ಡದೊಂದು ಗಾಯವಾಗಿ ನೋಯತೊಡಗಿತ್ತು. ಇಂತಹದ್ದೊಂದು ಗಾಯಕ್ಕೆ ಮುಲಾಮು ಹುಡುಕುವ ಯೋಚನೆ ಅಬ್ದುಲ್ ಅವರನ್ನು ನಿದ್ದೆಗೆಡಿಸಿತು. ಫಲವಾಗಿ ಹೊಸಪೇಟೆಯ ಜಂಬಯ್ಯ ನಾಯಕ, ನಾರಾಯಣಭಟ್, ಕಲ್ಲಂಭಟ್, ಪರುಷರಾಮ ಕಲಾಲ್ ಮೊದಲಾದವರು ಸೇರಿ ಚರ್ಚಿಸಿದರು. ಹಿಂದು ಮುಸ್ಲಿಂ ಸೌಹಾರ್ದತೆಯ ಕುರುಹಾದ ಮೊಹರಂ ಹಾಡುಗಳ ಸ್ಪರ್ಧೆಯನ್ನು ಆಯೋಜಿಸಿದರು. ಈ ಸಮಾವೇಶಕ್ಕೆ ಹೆಸರಿಡುವ ಚರ್ಚೆ ಬಂದಾಗ ಕನ್ನಡ ವಿಶ್ವವಿದ್ಯಾಲಯದಿಂದ ಬರುತ್ತಿದ್ದ ಕಿರಂ ನಾಗರಾಜ ಅವರು ಸೂಚಿಸಿದ `ಭಾವೈಕ್ಯತೆ’ ಎನ್ನುವ ಹೆಸರು ಅಂತಿಮವಾಯ್ತು. ಮುಂದೆ ಅದೇ ಹೆಸರಿನ ವೇದಿಕೆಯೊಂದು ರೂಪುಗೊಂಡಿತು. ಅಬ್ದುಲ್ ವೇದಿಕೆಯ ಖಜಾನ್ಸಿಯಾದರು. ಇದೀಗ ಇಪ್ಪತ್ತೆಂಟರ ಹರೆಯದಲ್ಲಿ ವೇದಿಗೆ ತನ್ನದೇ ಆದ ಛಾಪು ಮೂಡಿಸುತ್ತಾ ಹೊಸ ಶೋಧಗಳಿಗೆ ಮುಖಮಾಡಿದೆ.
ಒಮ್ಮೆ ಚೌಕಿಯಲ್ಲಿ ಹೆಣ್ಣೊಬ್ಬಳ ಅಸಹಜ ಸಾವು ಕೊಲೆಯಾಗಿರಬಹುದೆಂಬ ಪಿಸುಮಾತುಗಳು ಧ್ವನಿಗೂಡಿದಾಗ, ಈ ಘಟನೆ ಅಬ್ದುಲ್‍ರನ್ನು ಕಾಡುತ್ತದೆ. ಕೂಡಲೆ ತಮ್ಮ ಓಣಿಯ ಹುಡುಗರಿಂದ ಜಾಗೃತಿ ಮೂಡಿಸಲು ಬೀದಿ ನಾಟಕ ರೂಪಿಸುತ್ತಾರೆ. ಅದು ಮನೆಯಿಂದ ಮನೆಗೆ ಹಬ್ಬುತ್ತದೆ. `ಈ ಸಾವು ನ್ಯಾಯವೇ? ಎನ್ನುವ ಪ್ರತಿಧ್ವನಿಯನ್ನು ಮೂಡಿಸುತ್ತದೆ. ಪರಿಣಾಮವಾಗಿ ಇಡೀ ಚೌಕಿಯಲ್ಲಿ ಮಹಿಳೆಯ ಸಾವಿನ ಬಗ್ಗೆ ತಳೆದಿದ್ದ ಮೌನದ ಕಟ್ಟೊಡೆದು, ಪೊಲೀಸರಿಗೆ ದೂರು ಕೊಡಲು ಜನರು ಮುಂದಾಗುತ್ತಾರೆ. ಈ ಪ್ರಯೋಗ ಹೆಣ್ಣಿನ ದಾರುಣ ಅಂತ್ಯಕ್ಕೆ ಹೋರಾಟದ ಆಯಾಮ ನೀಡುತ್ತದೆ. ಈ ಘಟನೆಯೇ ಭಾವೈಕ್ಯತಾ ವೇದಿಕೆಯ ಬಹುಮುಖ್ಯ ಸಂವಹನದ ಗುರುತಾಗಿ `ಬೀದಿನಾಟಕ’ ಮುನ್ನಲೆಗೆ ಬರುತ್ತದೆ.
ಅಬ್ದುಲ್ ಅವರು ಮಾತನಾಡುತ್ತ `ರಂಗಭೂಮಿಗೆ ಜನರನ್ನು ಕರೆಯುವ ಬದಲು ಜನರ ಬಳಿಗೆ ಹೋಗುವ ಮಾಧ್ಯಮವಾದ ಬೀದಿನಾಟಕವನ್ನು ಮೊದಲಿಗೆ ಆಯ್ದುಕೊಂಡೆವು. ತೀರಾ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರನ್ನು ಮುಟ್ಟುವ ತಟ್ಟುವ ಮಾಧ್ಯಮ ಇದಾಗಿದೆ. ಅಂತೆಯೇ ವಿಷಯಗಳನ್ನು ಸರಳವಾಗಿಯೂ, ನೇರವಾಗಿಯೂ ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಭಾವೈಕ್ಯತಾ ವೇದಿಕೆಯ ಮುಖ್ಯ ಮಾಧ್ಯಮ ಬೀದಿ ನಾಟಕವಾಯಿತು’ ಎನ್ನುತ್ತಾರೆ. ಹೀಗೆ ನಿರಂತರವಾಗಿ ರಂಗಭೂಮಿಯನ್ನು ಉಸಿರಾಡುತ್ತಾ ಪ್ರಚಾರ ಬಯಸದೆ, ಪದವಿ ಹುದ್ದೆಗಳಿಗಾಗಿ ಅಂಗಲಾಚದೆ ತಮ್ಮದೇ ಕಾಲುದಾರಿಯಲ್ಲಿ ಬೀದಿ ನಾಟಕದ ಕನಸು ಕಾಣುವ ಪಿ.ಅಬ್ದುಲ್ ಅವರ ಕನಸುಗಳು ನನಸಾಗಲಿ.


