Homeಮುಖಪುಟವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದವರು ಈಗ ಸಹಕರಿಸಬೇಕು ಎನ್ನುತ್ತಿದ್ದಾರೆ!

ವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದವರು ಈಗ ಸಹಕರಿಸಬೇಕು ಎನ್ನುತ್ತಿದ್ದಾರೆ!

ಸರಕಾರಕ್ಕೆ ಸಲಹೆ ನೀಡಿ ಅದಕ್ಕೆ ಮಾರ್ಗದರ್ಶನ ಮಾಡಬೇಕಾದ ಸಂಸ್ಥೆಗಳನ್ನು ಸ್ತಂಭೀಭೂತಗೊಳಿಸಿ ನಿಷ್ಕ್ರಿಯಗೊಳಿಸಲಾಗಿದೆ

- Advertisement -
- Advertisement -

ಈ ಬಾಲನರೇಂದ್ರ ಆ ಕಾಲದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ರೈಲ್ವೇ ಸ್ಟೇಶನ್ನಲ್ಲಿ ಟೀ ಮಾರುವ ಬದಲು ಶಾಲೆಯಲ್ಲೇ ಒಂದಷ್ಟು ವರ್ಷ ಕಳೆದಿದ್ದರೆ ಆತನಿಗೆ ಹಳೇ ಜಾಣ್ನುಡಿ ಕೆಲವು ಒಳಗಿಳಿಯುತ್ತಿತ್ತೋ ಏನೋ,
“ದಾಟಿದ ಸೇತುವೆಯನ್ನು ನಾಶ ಮಾಡಬೇಡ, ನಾಳೆ ಮರಳುವಾಗ ಬೇಕಾದೀತು”
“ ಮೇಲಕ್ಕೇರುವಾಗ ಸಿಗುವ ಮಂದಿಯೊಂದಿಗೆ ಸೌಜನ್ಯದಿಂದ ವರ್ತಿಸು, ನಾಳೆ ಇಳಿತಾ ಬರುವಾಗ ಅವರು ಮತ್ತೆ ಸಿಗಬಹುದು!”

ಈ ನುಡಿಗಳು ಮೋದಿಗೆ ತನ್ನ ರಾಜಕೀಯದ ಈ ಕಡು ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತಿತ್ತು. ಯಾಕೆಂದರೆ ಇವರು ಸೇತುವೆ ಸುಟ್ಟಿದ್ದಷ್ಟೇ ಅಲ್ಲ, ಎಲ್ಲರನ್ನೂ ಮುಖಭಂಗ ಮಾಡಿದ್ದಾರೆ ಮತ್ತು ಪ್ರತಿಯೊಂದು ಸಂಸ್ಥೆಯನ್ನೂ ಕೆಡಿಸಿದ್ದಾರೆ.

ಭಾರತವನ್ನು ಮೋದಿ ನಾಶ ಮಾಡಿದ ಪ್ರಕ್ರಿಯೆಯನ್ನು ಮೂರು ಘಟ್ಟಗಳಲ್ಲಿ ಗುರುತಿಸಬಹುದು.

  1. ನೋಟು ಅಮಾನ್ಯೀಕರಣ.
  2. 2019ರ ಗೆಲುವು.
  3. ಕೋವಿಡ್‌ ಸಾಂಕ್ರಾಮಿಕ.

ಮೊದಲನೇ ಸಂದರ್ಭದಲ್ಲಿ ನಮ್ಮ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದಾಯಿತು. ಎರಡನೇ ಸಂದರ್ಭದ ಬಳಿಕ ದೇಶದ ಒಕ್ಕೂಟ ವ್ಯವಸ್ಥೆಗೇ ಕೊಡಲಿಯೇಟು ನೀಡಿದರು. ಒಂಭತ್ತು ರಾಜ್ಯಗಳಲ್ಲಿ ಬುಡಮೇಲು ರಾಜಕೀಯದ ಮೂಲಕವೇ ಅಧಿಕಾರ ಸ್ಥಾಪಿಸಿದ್ದಾಯ್ತು. ಆಮೇಲೆ ಹಿಂದೂ ರಾಷ್ಟ್ರದ ಗುರಿಗಾಗಿ ಸಿಎಎಯನ್ನು ಮುಂದೊತ್ತಲಾಯಿತು. ಮಾದ್ಯಮಗಳನ್ನಂತೂ ಬೆದರಿಸಿ ನಿಯಂತ್ರಣದಲ್ಲಿಡಲಾಯಿತು. ಮೂರು ಕೃಷಿ ಕಾನೂನು, ಕಾರ್ಮಿಕ ಕಾನೂನುಗಳನ್ನು ತಂದ ರೀತಿಯಲ್ಲೇ ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯ ನಾಶದ ಬೀಜವಿತ್ತು.

ಇದನ್ನೂ ಓದಿ: ರಾಷ್ಟ್ರೀಯ ದುರಂತಕ್ಕೆ ನಾಂದಿ ಹಾಡಿದ ಗುಜರಾತ್ ಮಾದರಿಯ ಅನುಷ್ಠಾನ

ಈ ಮೂರು ಘಟ್ಟದಲ್ಲೂ ಒಂದು ಸಾತತ್ಯವಿತ್ತು. ಎಲ್ಲಾ ರೀತಿಯ ಸಂವಿಧಾನಿಕ, ನಿಯಂತ್ರಕ ಸಂಸ್ಥೆಗಳನ್ನು ನಿಯಂತ್ರಿಸಲಾಯಿತು. ನ್ಯಾಯಾಂಗವನ್ನು ಅಪಮೌಲ್ಯಗೊಳಿಸಲಾಯಿತು. ಸಾರ್ವಜನಿಕ ಅಭಿಪ್ರಾಯಗಳಿಗೆ ನಿರ್ಲಕ್ಷ್ಯ ತೋರಲಾಯಿತು. ಮೋದಿ ಮತ್ತು ಮಾಸ್ಕನ್ನು ಕಣ್ಣ ಮೇಲೆ ಧರಿಸಿರುವ ಅವರ ಪಡೆಗೆ ಇದೆಲ್ಲಾ ಮಹಾ ಸಾಧನೆಯಂತೆ ಗೋಚರಿಸುತ್ತಿದೆ.

ಆಡಳಿತದ ಒಂದೊಂದು ಸಾಧನಗಳೂ ಮೊಂಡಾಗಿ ನಿರುಪಯೋಗವಾದವು. ಅಧಿಕಾರದ ತೀರದ ದಾಹ ಇಷ್ಟು ಅದ್ವಾನಗಳಿಗೆ ಕಾರಣವಾಗಿದೆ.

ಚುನಾವಣೆಯಿರುವ ರಾಜ್ಯಗಳಿಂದ ಆನ್‌ಲೈನ್‌ ಶಾಪಿಂಗ್ ಮಾಡಿದ ಮೋದಿ!

ಈಗ ಇವರು “ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರಕಾರದ ಜೊತೆ ಕೈಗೂಡಿಸಬೇಕು” ಅಂತಿದ್ದಾರೆ. ಇದರ ವ್ಯಂಗ್ಯ ಅದ್ಭುತ. ಕಳೆದ ಏಳು ವರ್ಷ ಇವರು ಇದರ ತದ್ವಿರುದ್ಧ ಮಾಡಿದ್ದೇ ಜಾಸ್ತಿ. ಧರ್ಮ, ಪ್ರಾದೇಶಿಕತೆ, ಜಾತಿ – ಹೀಗೆ ರಾಜಕೀಯ ಅಧಿಕಾರಕ್ಕಾಗಿ ಏನೇನೆಲ್ಲ ಒಡೆಯಬಹುದೋ ಅಷ್ಟೆಲ್ಲಾ ಒಡೆದದ್ದಾಗಿದೆ. ರೈತರು, ವಿದ್ಯಾರ್ಥಿಗಳು, ಬುದ್ಧಿ ಜೀವಿಗಳು, ಸಾಮಾಜಿಕ ಕಾರ್ಯಕರ್ತರು ಹೀಗೆ ಯಾರನ್ನೂ ಬಿಡದೇ ಪೀಡಿಸಲಾಗಿದೆ. ಎಷ್ಟೇ ಪ್ರತಿಭಟನೆಗಳಾದರೂ ಯಾವುದಕ್ಕೂ ಬಗ್ಗದ ಪೆಡಸುತನ ತೋರಿದ್ದಾರೆ. ಈಗ ಈ ಗುಂಪುಗಳೆಲ್ಲಾ ಅವರ ಹಿಂದೆ ಬೆಂಬಲಕ್ಕೆ ನಿಲ್ಲಬೇಕು ಎಂದು ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ನಾವೂ ಬದುಕಬೇಕು’: ಜನಾಗ್ರಹ ಆಂದೋಲನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲ

ವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವುದೇ ಗುರಿ ಎಂದು ಸಾರಿದವರು ಈಗ ವಿರೋಧಪಕ್ಷಗಳು ಸಹಕರಿಸಬೇಕು ಎನ್ನುತ್ತಿದ್ದಾರೆ. ಸಿಬಿಐ, ಇಡಿ, ಎನ್‌ಐಎ ಮತ್ತಿತರ ಏಜೆನ್ಸಿಗಳನ್ನು ಬಳಸಿ ರಾಜಕೀಯ ನಾಯಕರನ್ನು ಬೇಟೆಯಾಡಲಾಗಿದೆ. ಸಾವಿರಾರು ಕೋಟಿಯ ಚುನಾವಣಾ ಬಾಂಡ್‌ ನಿಧಿಸಂಗ್ರಹಿಸಲಾಗಿದೆ. ಭಾಜಪಕ್ಕೆ ಬೇಕಾದ ರೀತಿಯಲ್ಲಿ ಚುನಾವಣೆಗಳು ನಡೆಯುತ್ತಿವೆ.

ಒಕ್ಕೂಟ ವ್ಯವಸ್ಥೆಯನ್ನು ಅಣಕ ಮಾಡುವ ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಅಧಿಕಾರವನ್ನು ಹಂಚಿಕೊಳ್ಳುವ ಮಾತೇ ಇಲ್ಲ. ಎಲ್ಲಾ ಕ್ರೆಡಿಟ್‌ ತನಗೇ ಸಲ್ಲಬೇಕು.

ಫೈನಾನ್ಸ್‌ ಕಮಿಷನ್ನಿನ ನಿಯಮಾವಳಿಗಳನ್ನು ಬದಲಾಯಿಸಿ ರಾಜ್ಯಗಳ ಕಾಸು ಮುಕ್ಕಿ ತಿಂದಾಗಿದೆ. ಎರಡು ಬಾರಿಯೂ ತನ್ನ ಪಕ್ಷವನ್ನು ತಿರಸ್ಕರಿಸಿದ ದೆಹಲಿಯ ಮತದಾರರನ್ನು ಅವಮಾನಿಸುವಂತೆ ಲೆಫ್ಟಿನೆಂಟ್‌ ಗವರ್ನರ್‌‌ಗೆ ಸರ್ವಾಧಿಕಾರ ನೀಡಲಾಯಿತು. ಈ ಸಾಂಕ್ರಾಮಿಕದ ಕಾಲದಲ್ಲಿ ಸಾಂಕ್ರಾಮಿಕ ಕಾನೂನಿನ ನೆಪದಲ್ಲಿ ಎಲ್ಲಾ ಅಧಿಕಾರವನ್ನೂ ತಾನೇ ಇಟ್ಟುಕೊಂಡು ರಾಜ್ಯಗಳಿಗೆ ಈ ವಿಷಯದಲ್ಲಿ ಏನೂ ಪಾತ್ರವಿಲ್ಲದಂತೆ ನೋಡಿಕೊಂಡಿದ್ದಾಯಿತು.

ಲಾಕ್‌‌ಡೌನ್‌, ಆರ್ಥಿಕ ಪ್ಯಾಕೇಜು, ಲಸಿಕೆ ಹೀಗೆ ಪ್ರತಿಯೊಂದರಲ್ಲೂ ಅಷ್ಟೇ. ಈಗ ಅವರ ಅದಕ್ಷತೆ ಬಯಲಾಗುತ್ತಿದ್ದಂತೆ ಸಮಸ್ಯೆಯನ್ನು ರಾಜ್ಯಗಳ ಮಡಿಲಿಗೆ ಎಸೆಯುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಸಹಕರಿಸಬೇಕು ಎನ್ನುತ್ತಾರೆ. ಆದರೆ ಬಲು ಸೌಜನ್ಯದ ಮಾಜಿ ಪ್ರಧಾನಿ ಕೊಟ್ಟ ಸಲಹೆಗಳನ್ನು ಅಹಂಕಾರದ ನಿರ್ಲಕ್ಷ್ಯದಲ್ಲಿ ಪಕ್ಕಕ್ಕಿಡುವುದಷ್ಟೇ ಅಲ್ಲ ತನ್ನ ಪಕ್ಷದವರ ಮೂಲಕ ಅವರನ್ನು ಗೇಲಿ ಮಾಡಲಾಗುತ್ತದೆ. ಮಹಿಳಾ ಮುಖ್ಯಮಂತ್ರಿಯೊಬ್ಬರನ್ನು ಅಸಭ್ಯ ಧ್ವನಿಯಲ್ಲಿ ಈತ ಅಣಕಿಸುತ್ತಾರೆ.

ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

ಸರಕಾರಕ್ಕೆ ಸಲಹೆ ನೀಡಿ ಅದಕ್ಕೆ ಮಾರ್ಗದರ್ಶನ ಮಾಡಬೇಕಾದ ಸಂಸ್ಥೆಗಳನ್ನು ಸ್ತಂಭೀಭೂತಗೊಳಿಸಿ ನಿಷ್ಕ್ರಿಯಗೊಳಿಸುತ್ತಾರೆ. ಸರ್ವೋಚ್ಛ ನ್ಯಾಯಾಲಯವೂ ನಿಯಂತ್ರಣಕ್ಕೊಳಗಾದಂತಿದೆ. ಚುನಾವಣಾ ಆಯೋಗವೂ ಇನ್ನೊಂದು ಸರಕಾರಿ ಇಲಾಖೆಯಂತಿದೆ. ಮಾಹಿತಿ ಆಯೋಗ ಮಾಹಿತಿಯನ್ನು ಬಿಡುಗಡೆ ಮಾಡಿದ್ದಕ್ಕಿಂತ ಮುಚ್ಚಿಟ್ಟದ್ದೇ ಜಾಸ್ತಿ. ಲೋಕ್‌‌ಪಾಲ್‌ ಏನಾಯಿತು ಎಂಬುದು ಈ ದಶಕದ ಬಲು ದೊಡ್ಡರಹಸ್ಯವೇ ಸರಿ. ಮಾನವ ಹಕ್ಕು ಆಯೋಗ ಮತ್ತಿತರ ಆಯೋಗಗಳು ಬರೆಯುವ ಪತ್ರಕ್ಕೆ ಯಾವ ಇಲಾಖೆಯೂ ಉತ್ತರಿಸುವ ಗೋಜಿಗೂ ಹೋಗುವುದಿಲ್ಲ.

ಆರೋಗ್ಯ ಭಾರತಕ್ಕಾಗಿ ಸರ್ಕಾರ ನಾಲ್ಕು ರಂಗಗಳಲ್ಲಿ ಕೆಲಸ ಮಾಡುತ್ತಿದೆ- ಪ್ರಧಾನಿ ಮೋದಿ
PC: Asian Age

 

ಕೇಂದ್ರ ಸಂಪುಟವೂ ಪ್ರಧಾನಮಂತ್ರಿ ಕಛೇರಿ ತೆಗೆದುಕೊಂಡ ತೀರ್ಮಾನಗಳಿಗೆ ಸಮ್ಮತಿ ನೀಡುವ ಒಂದು ಕಛೇರಿ ಅಷ್ಟೇ. ಯಾವ ಮಂತ್ರಿಗೂ ತೂಕವಿಲ್ಲ. ಆದ್ದರಿಂದಲೇ ಅವರು ಈ ಸಾಂಕ್ರಾಮಿಕದ ಸಮಯದಲ್ಲಿ ಎಲ್ಲೋ ಅವಿತು ಕೂತಿದ್ದಾರೆ. ಸರಕಾರದ ಅಧಿಕಾರಿಗಳು ನೀತಿ ನಿರೂಪಣೆಗೆ ಕೊಡುಗೆ ನೀಡುವ ಬದಲು ಪ್ರಧಾನಮಂತ್ರಿ ಕಛೇರಿ ಹೇಳಿದ್ದನ್ನು ಮಾಡುವವರಾಗಿದ್ದಾರೆ. ಅತ್ಯುತ್ತಮ ಅಧಿಕಾರಿಗಳು ಕೇಂದ್ರ ಸೇವೆಯಲ್ಲಿಲ್ಲ. ಹೆಚ್ಚಿನವರು ರಾಜ್ಯಗಳಲ್ಲಿ ಇದ್ದಾರೆ. ಗುಜರಾತಿನ ಬಾಹುಳ್ಯವುಳ್ಳ ಅಧಿಕಾರಿಗಳ ಗಡಣದ ಮೇಲೆ ಮೋದಿ ಅವಲಂಬಿತರಾಗಿದ್ದಾರೆ

ಒಟ್ಟಾರೆ, ಪ್ರತಿಧ್ವನಿ ಸೂಸುವ ಕೋಣೆಯೊಂದರಲ್ಲಿ ಮೋದಿ ಬಂಧಿತರಾಗಿದ್ದಾರೆ. ವಾಸ್ತವದ ಸಂಪರ್ಕವೇ ಅವರಿಗಿದ್ದಂತಿಲ್ಲ. ಈ ಸಾಂಕ್ರಾಮಿಕವನ್ನು ಎದುರಿಸಲು ಅವರಲ್ಲಿ ಐಡಿಯಾಗಳೂ ಇಲ್ಲ, ಸಾಧನಗಳೂ ಇಲ್ಲ. ರಾಜ್ಯಭಾರದ ಕಾರ್ಯಾಂಗದ ಯಂತ್ರ ಕೆಲಸ ಮಾಡದೇ ಕೂತಿದೆ. ನ್ಯಾಯಾಂಗ ತನ್ನ ಪಾತ್ರದ ಘನತೆ ಮರುಪಡೆಯಲು ಇನ್ನೆಷ್ಟು ಸಮಯ ಬೇಕೋ?! ಮುಖ್ಯವಾಹಿನಿಯ ಮಾಧ್ಯಮಗಳಿಗೆ ವಿಶ್ವಾಸಾರ್ಹತೆಯೇ ಇಲ್ಲ. ಈತನ ಸಹವಾಸ ಅಂದರೆ ಹುಲಿ ಸವಾರಿ ಎಂಬ ಭಾವನೆ ವಿರೋಧ ಪಕ್ಷಗಳಿಗಿದೆ. ವೈಜ್ಞಾನಿಕ ತಜ್ಞರಿಗೆ ತಮ್ಮ ಬದಲು ಕೊರೋನಿಲ್‌ಗೆ ಆದ್ಯತೆ ನೀಡಲಾಗಿದೆ ಎಂಬ ಭಾವನೆ ಇದೆ.

ಇದನ್ನೂ ಓದಿ: ‘ಅಲೋಪತಿ’ ಕುರಿತ ತನ್ನ ವಿವಾದಾತ್ಮಕ ಹೇಳಿಕೆ ಹಿಂಪಡೆದ ಯೋಗ ಗುರು ರಾಮ್‌ದೇವ್‌

ಮೋದಿಯ ಮಾತು ಮತ್ತು ಕೃತಿ ಎರಡನ್ನೂ ನಂಬಲಾರದ ಸ್ಥಿತಿಯಲ್ಲಿ ಜನರಿದ್ದಾರೆ. ಈ ಸಾಂಕ್ರಾಮಿಕ ತಾಂಡವವಾಡುತ್ತಿರುವ ಈ ದಿನಗಳಲ್ಲಿ ಈತ ಕಣ್ಮರೆಯಾದಂತಿದೆ. ನಿಧಾನಕ್ಕೆ ಇದು ಕಣ್ಮರೆಯಾದಾಗ ಈತ ಮತ್ತೆ ಎದ್ದು ಬಂದು ಕೋವಿಡ್‌ ಮರೆಯಾಗಲು ನಾನೇ ಕಾರಣ ಎಂದು ಕ್ರೆಡಿಟ್‌ ತೆಗೆದುಕೊಂಡು ಸೆಂಟ್ರಲ್‌ ವಿಸ್ತಾ ಕಾಮಗಾರಿ ಮುಂದುವರಿಸುತ್ತಾರೆ. ಆದರೆ ಗಂಗೆಯಲ್ಲಿ ತೇಲುವ ಹೆಣಗಳು ಬೇರೆಯೇ ಕತೆ ಹೇಳುತ್ತಿರುತ್ತವೆ.

ಮೋದಿಗೆ ಸಹಾಯ ಮಾಡಬಹುದಾಗಿದ್ದ ಪ್ರತಿಯೊಂದು ಸಂಸ್ಥೆ/ ರಾಜ್ಯ/ ಸೇವೆಗಳನ್ನು ಉದ್ದಿಶ್ಯಪೂರ್ವಕ ತಿರುಚಿ, ಟೊಳ್ಳಾಗಿಸಲಾಗಿದೆ. ಅಥವಾ ತಿರಸ್ಕಾರಪೂರ್ವಕ ಮೂಲೆಗೆ ತಳ್ಳಲಾಗಿದೆ. ಸದ್ಯಕ್ಕೆ ಈ ಪ್ರಧಾನಿ ಸೈನ್ಯ, ಶಸ್ತ್ರಾಸ್ತ್ರ ಇಲ್ಲದ ದಂಡನಾಯಕನಂತಿದ್ದಾರೆ. ಯಾರ ಸಹಾಯವೂ ಇಲ್ಲದೆ ತಾನು ಬಾನೆತ್ತರಕ್ಕೆ ಏರಬಲ್ಲೆ ಎಂಬ ಅವರ ಅಹಂಕಾರ ಈಗ ಅವರನ್ನು ಒಂಟಿಯಾಗಿಸಿದೆ.

ಆತ ಮತ್ತೆ 2024 ರ ಚುನಾವಣೆ ಗೆಲ್ಲಬಹುದು. ಅಗಣಿತ ನಿಧಿ, ಮಾತಿನ ವೈಖರಿ, ಸರಕಾರಿ ಯಂತ್ರಗಳ ದುರುಪಯೋಗ, ಮುರುಕು ವಿರೋಧ ಪಕ್ಷಗಳು, ಜೊತೆಗೂಡದೇ ಪ್ರತ್ಯೇಕ ಗೂಡುಕಟ್ಟಿಕೊಳ್ಳುವ ವಿರೋಧ ಪಕ್ಷಗಳ ನಾಯಕರು – ಈ ಎಲ್ಲಾ ಕಾರಣಗಳಿಂದ ಆತ ಮತ್ತೆ ಗೆದ್ದು ಆಳಬಹುದು. ಆದರೆ ಆತನ ಬತ್ತಳಿಕೆಯ ಬಾಣಗಳೆಲ್ಲಾ ಬರಿದಾಗಿದೆ. ಇದು ಸಾಂಕ್ರಾಮಿಕ ತಂದ ದುರಂತವಷ್ಟೇ ಅಲ್ಲ, ನಮ್ಮೆಲ್ಲರ ಸಾಮೂಹಿಕ ದುರಂತವೇ ಸರಿ.

ಮೂಲ: ಅವಯ್‌ ಶುಕ್ಲಾ (ನಿವೃತ್ತ IAS)
ಅನುವಾದ: ಕೆ.ಪಿ. ಸುರೇಶ್‌ 

ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತದ ಸೇನಾ ಪಡೆಯನ್ನೂ ರಾಜಕೀಯಕರಣ ಗೊಳಿಸಿದ ಮೊಟ್ಟ ಮೊದಲ ಪ್ರಧಾನಿ ಮೋದಿ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈಗ ಕೇವಲ ಮೋದಿಯ ಗುಮಾಸ್ತ ಅಷ್ಟೇ.
    “ದಿ ವೈರ್” ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮೂಲ ಇಂಗ್ಲಿಷ್ ಲೇಖನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು.

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...