ವಿಧಾನಸಭೆ ಅಧಿವೇಶನ ದಿನಾಂಕವನ್ನು ಬುಧವಾರ ಅಂತಿಮಗೊಳಿಸಿದ ಕೂಡಲೇ ಹೊಸ ದರಗಳನ್ನು ಘೋಷಿಸಲಾಗಿರುವುದರಿಂದ ರಾಜಸ್ಥಾನದಲ್ಲಿ ಕುದುರೆ ವ್ಯಾಪಾರ ದರ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಫೇರ್‌ಮಾಂಟ್ ಹೋಟೆಲ್‌ನಲ್ಲಿ ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿರುವ ಕಾಂಗ್ರೆಸ್ ಶಾಸಕರನ್ನು ಗೆಹ್ಲೋಟ್ ಗುರುವಾರ ಭೇಟಿಯಾಗಿದ್ದು, ಕುದುರೆ ವ್ಯಾಪಾರದ ಭಯದಿಂದ ಅವರನ್ನು ಮತ್ತೊಂದು ರೆಸಾರ್ಟ್‌ಗೆ ಸ್ಥಳಾಂತರಿಸುತ್ತಿದ್ದಾರೆ.
ಆಗಸ್ಟ್ 14 ರಿಂದ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆಯಲು ರಾಜಸ್ಥಾನ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಅಂದು ವಿಶ್ವಾಸಮತ ಯಾಚನೆ ಮಾಡವು ಇರಾದೆ ಗೆಹ್ಲೋಟ್‌ರವರಿಗಿದೆ.
ಹೋಟೆಲ್ ನಿಂದ ಬಂದ ಕೂಡಲೇ ಗೆಹ್ಲೋಟ್ ಸಂಪೂರ್ಣ ವಿಭಿನ್ನ ಮನಸ್ಥಿತಿಯಲ್ಲಿದ್ದಂತೆ ಕಂಡುಬಂದರು ಎಂದು ಎನ್‌ಡಿಟಿವಿ ವರದಿ ಮಾಡಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ವಿಧಾನಸಭಾ ಅಧಿವೇಶನ ಘೋಷಣೆಯ ನಂತರ ಕುದುರೆ ವ್ಯಾಪಾರದ ದರಗಳು ಹೆಚ್ಚಾಗಿದೆ. ಈ ಮೊದಲು, ಮೊದಲ ಕಂತು 10 ಕೋಟಿ ರೂ. ಮತ್ತು ಎರಡನೆಯ ಕಂತಿನಲ್ಲಿ ಶಾಸಕರಿಗೆ 15 ಕೋಟಿ ರೂ. ದರು ಇತ್ತು. ಆದರೆ ಈಗ ಅದು ಅಪರಿಮಿತವಾಗಿದೆ. ಕುದುರೆ ವ್ಯಾಪಾರ ಮಾಡುವಲ್ಲಿ ಯಾರು ಭಾಗಿಯಾಗಿದ್ದಾರೆಂದು ಎಲ್ಲರಿಗೂ ತಿಳಿದಿದೆ” ಎಂದು ಹೇಳಿದರು.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯನ್ನೂ ಗುರಿಯಾಗಿಸಿಕೊಂಡು ಟೀಕಿಸಿದ ಗೆಹ್ಲೋಟ್, ಬಿಜೆಪಿಯ ಆಜ್ಞೆಯ ಮೇರೆಗೆ ಅವರು ನನ್ನ ವಿರುದ್ಧ ಮತ ಚಲಾಯಿಸುವ ನಿಲುವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜಸ್ಥಾನ ವಿಧಾನಸಭೆ ಆಗಸ್ಟ್ 14 ಕ್ಕೆ: ಗವರ್ನರ್ ಕಾಲ್ರಾಜ್ ಮಿಶ್ರಾ


