ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನಲ್ಲಿ ಉಮಾಶ್ರೀ ಅವರಿಗೆ ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿದೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗುರುವಾರ (ಫೆ.5) ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅವರು, “ಇತ್ತೀಚೆಗೆ ವಿಧಾನಪರಿಷತ್ತಿನ ಸಭೆಯಲ್ಲಿ ಉಮಾಶ್ರೀ ಮೇಡಮ್ ಅವರೊಂದಿಗೆ ಸಭಾಪತಿ ಹೊರಟ್ಟಿ ಅವರು ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿತ್ತು. ಸಭಾಧ್ಯಕ್ಷರ ಕುರ್ಚಿ ಎನ್ನುವುದು ವ್ಯಂಗ್ಯಕ್ಕೆ ಅಲ್ಲ. ಗೌರವ, ಸಮತೋಲನ ಮತ್ತು ಸಂವಿಧಾನಾತ್ಮಕ ಶಿಷ್ಟಾಚಾರಕ್ಕೆ ಅನ್ನುವುದನ್ನು ಅವರು ಮರೆತಂತಿತ್ತು” ಎಂದಿದ್ದಾರೆ.
“ಮಾತಿಗೆ ಉತ್ತರ ನೀಡದೆ ವ್ಯಕ್ತಿತ್ವವನ್ನು ಗುರಿಯಾಗಿಸುವುದು ಅಧಿಕಾರದ ದುರುಪಯೋಗ. “ಇದು ಸ್ಟೇಜ್ ಅಲ್ಲ” ಎನ್ನುವ ಹೊರಟ್ಟಿ ಮಾತು ಕೇವಲ ವ್ಯಕ್ತಿಗಲ್ಲ, ಕಲೆಯ ಬಗೆಗಿನ ಆಕೆಯ ಅಂತ:ಸತ್ವವನ್ನೇ ಅಡಗಿಸುವ ಧ್ವನಿಯಾಗಿತ್ತು” ಎಂದು ಸುಮನಾ ಹೇಳಿದ್ದು, “ಇಂತಹ ಅಸಂವೇದನಾ ಗಂಡಸೇಕೆ ಆ ಸ್ಥಾನ ಅಲಂಕರಿಸಿದ್ದಾರೆ?!” ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಚರ್ಚೆಯ ವೇಳೆ ಮಾತನಾಡುತ್ತಿದ್ದ ಸದಸ್ಯೆ ಉಮಾಶ್ರೀ ಅವರಿಗೆ, “ಏಯ್ ಉಮಾಶ್ರೀ..ಕನ್ನಡ ತಿಳೀತದಲ್ಲ ನಿನಗ..ಏಯ್.. ಉಮಾಶ್ರೀ.. ಸುಮ್ನೆ ಕೂತ್ಕೋ..ಇಲ್ಲಿ ನೀನ್ ಸಿನಿಮಾ ಸ್ಟೈಲಲ್ಲಿ ಯಾಕ್ ಮಾತಾಡ್ತೀ? ಮೆಂಬರಾಗಿ ಮಾತಾಡು.. ಸುಮ್ನೇ ಕೂತ್ಕೋ” ಎಂದು ಗದರಿದ್ದರು. ಸಭಾಪತಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.


