ಮಹಾರಾಷ್ಟ್ರದಲ್ಲಿ ಬ್ಯಾನರ್, ಪೋಸ್ಟರ್ ಗಳು ಸಾಲು ಸಾಲಾಗಿ ರಾರಾಜಿಸುತ್ತಿವೆ. ಅದರಲ್ಲಿ ಮುಂದಿನ ಮಹಾರಾಷ್ಟ್ರ ಸಿಎಂ ಆದಿತ್ಯ ಠಾಕ್ರೆ ಎಂಬ ಪೋಸ್ಟರ್ ಗಳು ಗಮನಸೆಳೆಯುತ್ತಿವೆ. ಮೈತ್ರಿ ಮೂಲಕ ಚುನಾವಣೆ ಎದುರಿಸಿರುವ ಬಿಜೆಪಿ ಮತ್ತು ಶಿವಸೇನೆಯಲ್ಲಿ ಇನ್ನೂ ಸಿಎಂ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಶಿವಸೇನೆ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿದೆ.

ಮುಂಬೈನ ‘ಮಾತೋಶ್ರೀ’ ಠಾಕ್ರೆ ನಿವಾಸದ ಬಳಿ ಪೋಸ್ಟರ್ ಅಳವಡಿಸಲಾಗಿದೆ. ಅದರಲ್ಲಿ ಶಿವಸೇನೆಯ ಆದಿತ್ಯ ಠಾಕ್ರೆ ಮುಂದಿನ ಸಿಎಂ ಎಂದು ಬರೆಯಲಾಗಿದೆ. ಚುನಾವಣಾ ಪೂರ್ವ ಮೈತ್ರಿಯಂತೆ 50:50 ಸೂತ್ರಕ್ಕೆ ಬಿಜೆಪಿ ಬದ್ಧವಾಗಿರಬೇಕು. ಮೈತ್ರಿ ವೇಳೆ ಮಾಡಿಕೊಂಡ ಷರತ್ತುಗಳನ್ನು ಕಡೆಗಣಿಸಬಾರದು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.
ಅಲ್ಲದೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಜೆಪಿ 50:50 ಸೂತ್ರಕ್ಕೆ ಬದ್ಧವಾಗಿದ್ದು, ಸಿಎಂ ಸ್ಥಾನವನ್ನು ಸಮಾನ ಅಧಿಕಾರ ಮತ್ತು ಸಮಪಾಲು ನಿಯಮವ್ನು ಲಿಖಿತರೂಪದಲ್ಲಿ ಖಾತ್ರಿ ಪಡಿಸಬೇಕು ಎಂದು ಹೇಳಿದ್ದಾರೆ ಎಂದು ಶಿವಸೇನೆ ಹೇಳಿದೆ. ಸಿಎಂ ಸ್ಥಾನದ ಬಗ್ಗೆ ಎದ್ದಿರುವ ವಿವಾದ ಮತ್ತು ಈ ಬಾರಿ ಸಿಎಂ ಗಾದಿಯನ್ನು ಶಿವಸೇನೆ ಅಲಂಕರಿಸಲಿದೆ ಎಂಬ ಮಾತುಗಳು ದಟ್ಟವಾಗಿವೆ. ಒಂದು ವೇಳೆ ಸಿಎಂ ಸ್ಥಾನ ಬಿಟ್ಟುಕೊಡಲು ಬಿಜೆಪಿ ಒಪ್ಪದಿದ್ದರೆ ಶಿವಸೇನೆ ಬೇರೆ ದಾರಿ ಹುಡುಕಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.


