ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಪ್ರಸ್ತಾಪಿತ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದು ಮತ್ತು ಕನಿಷ್ಟ ಬೆಂಬಲ ಬೆಲೆ ಖಾತ್ರಿಗಾಗಿ ಕಾಯ್ದೆ ತರಬೇಕೆಂದು (3+1+1) ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ, ಕೊರೆಯುವ ಚಳಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಭರ್ತಿ ಒಂದು ತಿಂಗಳು ತುಂಬಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮನಸ್ಸು ಮಾತ್ರ ಕರಗಿಲ್ಲ. ಬದಲಿಗೆ ಪದೇ ಪದೇ ರೈತರನ್ನು ಪ್ರತಿಪಕ್ಷಗಳು ಸುಳ್ಳು ಹೇಳಿ ದಿಕ್ಕುತಪ್ಪಿಸುತ್ತಿವೆ ಎನ್ನುತ್ತ ರೈತರು ಸ್ವಂತ ಆಲೋಚನೆಯಿಲ್ಲದವರು ಎಂಬಂತೆ ಚಿತ್ರಿಸುವ ಮೂಲಕ ಮೋದಿ ಅವಮಾನ ಎಸಗುತ್ತಲೇ ಇದ್ದಾರೆ.
ಇಂದು ಬೆಳಿಗ್ಗೆಯೇ ನೂರಾರು ಮಹಿಳೆಯರು ಮತ್ತು ಪುರುಷರು ಎಂದಿನಂತೆ ರೈತ ಆಂದೋಲನ ಆರಂಭಿಸಿದ್ದಾರೆ. ಟಿಕ್ರಿ ಗಡಿಯಲ್ಲಿ ಧರಣಿ ಕುಳಿತ ಮಹಿಳೆಯರು ‘We Are Not Mislead’ ಎಂಬ ಪ್ಲಕಾರ್ಡು ಹಿಡಿದಿದ್ದಾರೆ. ‘ನಾವು ದೆಹಲಿಗೆ ಬಂದು ಒಂದು ತಿಂಗಳಾಯಿತು. ಸರ್ಕಾರ ಈ ಕಾನೂನುಗಳನ್ನು ವಾಪಸ್ ಪಡೆಯಬೇಕು. ಇದು ಬೇಗ ಸಂಭವಿಸಿದ್ದಲ್ಲಿ ಆಗ ನಾವು ನಮ್ಮ ಊರುಗಳಿಗೆ ಹಿಂದಿರುಗಬಹುದು’ ಎನ್ನುವ ಈ ಮಹಿಳೆಯರ ಕೂಗು ಮೋದಿಯವರಿಗೆ ಕೇಳಿಸತ್ತದೆಯೇ? ಕೇಳಿದರೂ ಅವರು ಸ್ಪಂದಿಸುತ್ತಾರೆಯೇ?
ನಿನ್ನೆ ಆರು ರಾಜ್ಯಗಳ ರೈತರೊಂದಿಗೆ ಮಾತನಾಡಿದ್ದೇನೆ ಮತ್ತು ರೈತರಿಗಾಗಿ 18,000 ಕೋಟಿ ರೂಗಳ ಪ್ಯಾಕೇಜ್ ನೀಡಿದ್ದೇನೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಆದರೆ ಅಲ್ಲಿಯೂ ಸಹ ಮೋದಿ ‘ರೈತರು ಸಂಕಷ್ಟದಲ್ಲಿದ್ದಾರೆ ಎಂದು ಪ್ರತಿಪಕ್ಷಗಳು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿವೆ. ದೇಶಾದ್ಯಂತ ರೈತರು ನಮ್ಮ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದ್ದಾರೆ. ಆದರ ಪ್ರತಿಪಕ್ಷಗಳು ಮಾತ್ರ ರೈತರ ಹೆಗಲಮೇಲೆ ಬಂದೂಕಿಟ್ಟು ಸರ್ಕಾರಕ್ಕೆ ಗುಂಡು ಹೊಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.
ಎಪಿಎಂಸಿ ಮಂಡಿಗಳು ಮತ್ತು ಎಂಎಸ್‌ಪಿ ಉಳಿಯುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮನ್ನು ವಿರೋಧಿಸುವವರ ಜೊತೆಯೂ ನಾನು ಮಾತನಾಡಲು ಸಿದ್ದನಿದ್ದೇನೆ. ಆದರೆ ರೈತರು ದಾರಿತಪ್ಪಬಾರದು ಎಂದು ಮೋದಿ ಘೋಷಿಸಿದ್ದಾರೆ. ಇದು ಹೋರಾಟನಿರತ ರೈತರಿಗೆ ಸಾಕಷ್ಟು ಸಿಟ್ಟು ತರಿಸಿದೆ. ಒಂದು ಕಡೆ ಮೋದಿಯವರು ಮಾತನಾಡುತ್ತೇನೆ ಎನ್ನುತ್ತಲೇ ಇನ್ನೊಂದು ಕಡೆ ಹೋರಾಟನಿರತ ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ.
ಅಲ್ಲದೇ ಬಿಜೆಪಿಯು ಹಲವು ರಾಜ್ಯಗಳಿಂದ ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ದೆಹಲಿಗೆ ರ್ಯಾಲಿ ಬರುವಂತೆ ಕರೆ ನೀಡಿದೆ. ಉತ್ತರ ಪ್ರದೇಶ ಮತ್ತು ಗುಜರಾತ್‌ನಿಂದ ಹಲವು ರೈತ ಸಂಘಗಳು ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಮೆರವಣಿಗೆ ಹೊರಟಿವೆ. ನಿನ್ನೆ ಮೋದಿಯವರು 9 ಕೋಟಿ ರೈತರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡು ಕಾಯ್ದೆಗಳನ್ನು ಸಮರ್ಥಿಸಿಕೊಂಡಿರುವುದರಿಂದ ದೆಹಲಿಯ ಹೋರಾಟನಿರತ ರೈತರು ರೊಚ್ಚಿಗೆದ್ದಿದ್ದಾರೆ. ಇಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಸಭೆ ಸೇರಲಿರುವ ರೈತ ಮುಖಂಡರು ಇನ್ನು ಮುಂದೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬಾರದೆಂದು ತೀರ್ಮಾನಿಸಲಿವೆ ಎನ್ನಲಾಗಿದೆ. ಇದುವರೆಗೂ ರೈತ ಹೋರಾಟ ಆರಂಭವಾದಾಗಿನಿಂದ 5 ಬಾರಿ ಮಾತುಕತೆ ನಡೆದಿದ್ದು ಅವೆಲ್ಲವೂ ವಿಫಲವಾಗಿವೆ.
ದೆಹಲಿಯ ರೈತರು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದಾರೆ. ಈಗಾಗಲೇ ಪಂಜಾಬ್‌ನಲ್ಲಿ ಜಿಯೋ ಟವರ್‌ಗಳಿಗೆ ವಿದ್ಯುತ್ ಸರಬರಾಜು ತಡೆಹಿಡಿಯುವಲ್ಲಿ ರೈತರು ಸಫಲರಾಗಿದ್ದಾರೆ. ಹರಿಯಾಣದಲ್ಲಿ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡನ ಮೇಲೆ ಮುತ್ತಿಗೆ ಹಾಕಿದ್ದರಿಂದ ಆತ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಇನ್ನು ಮುಖ್ಯ ರಸ್ತೆಯ ಟೋಲ್‌ಗೇಟ್‌ಗಳನ್ನು ವಶಕ್ಕೆ ಪಡೆದು ಟೋಲ್ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ ಹಂತ ಹಂತವನ್ನು ಹೋರಾಟವನ್ನು ಜಾರಿಯಲ್ಲಿಡಲು ರೈತರು ಬಯಸಿದ್ದಾರೆ. ನಾಳೆ ಮೋದಿಯವರು ಮನ್ ಕಿ ಬಾತ್ ಮುಗಿಯುವವರೆಗೂ ತಟ್ಟೆ ಬಾರಿಸಲು ರೈತರು ಕರೆ ನೀಡಿದ್ದಾರೆ.
ಇದೊಂದು ಐತಿಹಾಸಿಕ ರೈತ ಹೋರಾಟವಾಗಿದೆ. 2020ರ ಆರಂಭದಲ್ಲಿಯೂ ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟಗಳು ಮುಗಿಲು ಮುಟ್ಟಿದ್ದವು. ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳುವ ಜೊತೆಗೆ ದೆಹಲಿಯ ಶಾಹೀನ್‌ಬಾಗ್‌ನಲ್ಲಿ 100ಕ್ಕೂ ಹೆಚ್ಚು ದಿನ ಪ್ರತಿಭಟನೆ ದಾಖಲಾಗಿ ವಿಶ್ವದ ಗಮನ ಸೆಳೆದಿತ್ತು. ಆದರೆ ಆ ನಂತರ ಆವರಿಸಿದ ಕೊರೊನಾ ಸಾಂಕ್ರಾಮಿಕವು ಹೋರಾಟಗಳಿಗೆ ಬ್ರೇಕ್ ಹಾಕಿತ್ತು. ಆದರೆ ಮೋದಿ ಸರ್ಕಾರ ಈ ದುರಂತ ಸಂದರ್ಭದಲ್ಲಿಯೇ ಈ ರೀತಿಯ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಈಗ ವರ್ಷದ ಕೊನೆಯಲ್ಲಿಯೂ ಸಹ ಮತ್ತೆ ರೈತರು ಬೀದಿಗೆ ಬಂದು ದೊಡ್ಡ ಮಟ್ಟದಲ್ಲಿ ಹೋರಾಡುತ್ತಿದ್ದಾರೆ. ಸುಪ್ರೀಂ ಮೂಲಕ ಅದನ್ನು ದಮನ ಮಾಡಲು ಮೋದಿ ಸರ್ಕಾರ ಮುಂದಾದರೂ ಅದು ಸಾಧ್ಯವಾಗಿಲ್ಲ. ಈಗ ರೂಪಾಂತರ ಕೊರೊನಾ ವೈರಸ್ ನೆಪ ಹೇಳಿ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗುತ್ತಿದೆ. ಆದರೆ ದಿಟ್ಟ ರೈತರು ಅದಕ್ಕೆ ಅವಕಾಶ ಕೊಡದೇ ಶಾಂತಿಯುತ ಹೋರಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ; ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ – ನೂರ್ ಶ್ರೀಧರ್


