Homeಚಳವಳಿದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ - ನೂರ್‌ ಶ್ರೀಧರ್‌

ದಿಲ್ಲಿಯಲ್ಲೊಂದು ಹಾಡಿ… ಸುತ್ತೀ ಸುತ್ತೀ ಸಂಘರ್ಷದ ತಾಣಕ್ಕೆ – ನೂರ್‌ ಶ್ರೀಧರ್‌

ಇದನ್ನು "ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು.

- Advertisement -
- Advertisement -

ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಿಕೊಳ್ಳಲು ಕರ್ನಾಟಕದಿಂದ ಹೊರಟ ಹೋರಾಟಗಾರ ನೂರ್‌ ಶ್ರೀಧರ್‌ ಅವರು ಆಂದೋಲನದ ಬಗ್ಗೆ ತಮ್ಮ ಅನುಭವಗಳನ್ನು ಬರೆದಿದ್ದಾರೆ.

ನಮ್ಮ ತಂಡ [ನೂರ್ ಶ್ರೀಧರ್, ಕುಮಾರ್ ಸಮತಳ, ಚಾರ್ವಾಕ ರಾಘು, ಮರ್ಸಿ ಮಿಷನ್ ತನ್ವೀರ್] ಬೆಂಗಳೂರಿನಿಂದ ಪಯಣ ಮಾಡಿ, ದೆಹಲಿಯ ಕರ್ನಾಟಕ ಸಂಘ ಹೋಗಿ ಸೇರಿಕೊಳ್ಳುವ ಹೊತ್ತಿಗೆ 10 ಗಂಟೆ. ಎರಡು ತಂಡಗಳಲ್ಲಿ ಐಕ್ಯ ಹೋರಾಟದ ಒಡನಾಡಿಗಳು ಈಗಾಗಲೇ ಬಂದು ಸೇರಿದ್ದರು. ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಚಾಮರಸ ಪಾಟೀಲ್, ಎಸ್. ಆರ್. ಹಿರೇಮಠ, ಶಹನಾಜ್ ದೀದಿ, ಬಿ.ಆರ್. ಪಾಟೀಲ್, ಕಾಳಪ್ಪ, ನಾರಯಣ ಸ್ವಾಮಿ, ಗೋಪಾಲ್, ಜಗದೀಶ್, ಎಸ್‌ಯುಸಿಐನ ನಾಗಮ್ಮ ಮತ್ತು ಮತ್ತೊಬ್ಬ ಸಂಗಾತಿ ಹಾಜರಿದ್ದರು. ದೆಹಲಿಯ ನಮ್ಮ ಆಪ್ತರಾದ ಉಮಾಪತಿ, ಬಿಟ್ಟು, ಅಮಿತ್, ಸಂತೋಷ್, ಸುರೀಂಧರ್, ಶ್ಯಾಂಭೀರ್, ಸಂಜ್ಯೋತ್ ಮುಂತಾದವರು ನಮ್ಮ ಜೊತೆಗೂಡಿದ್ದರು.

11 ಕ್ಕೆ ಪತ್ರಿಕಾ ಗೋಷ್ಟಿ ಕರೆಯಲಾಗಿತ್ತು. ಟಿವಿ ಮಾಧ್ಯಮದವರು ಒಳ್ಳೆ ಸಂಖ್ಯೆಯಲ್ಲೇ ಬಂದಿದ್ದರು. ಆತ್ಮೀಯವಾಗಿ ನಡೆದುಕೊಂಡರು. ಎಷ್ಟು ಕವರ್ ಆಗಿದೆಯೋ ನಮಗೆ ಗಮನಿಸಲು ಆಗಿಲ್ಲ. ನಾವು ನಮ್ಮ ಭೇಟಿಯ ಉದ್ದೇಶ ದೆಹಲಿಯಲ್ಲಿ ನಡೆಯುತ್ತಿರುವ ಚಾರಿತ್ರಿಕ ಹೋರಾಟಕ್ಕೆ ಕರ್ನಾಟಕದ ಹೋರಾಟ ನಿರತ ಜನತೆಯ ಬೆಂಬಲ ಸೂಚಿಸುವುದು, ನಾವೂ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸುವುದು ಮತ್ತು ಮುಂದಾಳತ್ವದ ಜೊತೆ ಮುಂದಿನ ಹೋರಾಟದ ರೂಪರೇಷೆಗಳ ಕುರಿತು ಚರ್ಚಿಸುವುದು ಮತ್ತು ದೆಹಲಿಯ ಜೊತೆ ಕರ್ನಾಟಕದ ಚಳವಳಿಯ ಬಂಧವನ್ನು ಬಲಪಡಿಸಿಕೊಳ್ಳುವುದು ಎಂಬುದನ್ನು ವಿವರಿಸಿದೆವು. ಅಲ್ಲಿಗೆ 1 ಗಂಟೆ.

ಇದನ್ನೂ ಓದಿ: ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಪ್ರಧಾನಿ ಮೋದಿ – ದೆಹಲಿಯಲ್ಲಿ ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ ಆಕ್ರೋಶ

ಮೊದಲ ದಿನ ಜೈಪುರ ರಸ್ತೆಯಲ್ಲಿನ ಶಹಜಹಾನ್ ಪುರದ ಹೋರಾಟದ ತಾಣಕ್ಕೆ ಭೇಟಿ ನೀಡಲು ತೀರ್ಮಾನಿಸಿದ್ದೆವು. ಅದು ನಾವು ಉಳಿದುಕೊಂಡಿದ್ದ ಕರ್ನಾಟಕ ಸಂಘದಿಂದ 80 ಕಿಮೀ. ಹೋದ ಹೋದಂತೆ ಟ್ರಾಫಿಕ್ ಹೆಚ್ಚಾಗುತ್ತಾ ಹೋಯಿತು. ಕೊನೆ 30 ಕೀಮಿ ದೂರವನ್ನು ಹೈವೇಯಲ್ಲಿ ಚಲಿಸಲು ಸಾಧ್ಯವೇ ಇರಲಿಲ್ಲ. ಪೂರ್ತಿ ಜ್ಯಾಮ್. ಹೈವೇಯ ಎಡಕ್ಕೆ ಬಲಕ್ಕೆ ಸುತ್ತಿಬಳಸಿ ಹೇಗೇಗೋ ಮಾಡಿ, ಊಟವೂ ಮಾಡದೆ, ಹೋರಾಟದ ತಾಣಕ್ಕೆ ತಲುಪುವ ಹೊತ್ತಿಗೆ ಸಂಜೆ 6 ಗಂಟೆ. ಸಂಗಾತಿ ಕಪಿಲ್ ನಮ್ಮನ್ನು ಅಲ್ಲಿ ಬರಮಾಡಿಕೊಂಡು ಕರೆದೊಯ್ದರು.

ಆಹಾ ಎಂತಹ ನೋಟ….!

ನಮ್ಮ ಜನ ಹೈವೇ ಮೇಲೆ ಹಾಡಿ ಕಟ್ಟಿದ್ದರು. ಹೈವೆಯ ಮಧ್ಯದಲ್ಲಿ ಎರಡೂ ಕಡೆ ಟೆಂಟುಗಳು. ಮಧ್ಯದಲ್ಲಿ ನಡೆಯಲು ಮಾತ್ರ ಸಣ್ಣ ಓಣಿ, ಅಲ್ಲಲ್ಲಿ ಅನ್ನ ದಾಸೋಹದ ಲಂಗರುಗಳು, 24x 7 ಚಹಾ ಕೆಟಲ್‌ಗಳು, ದವಾಖಾನೆ, ಅಗತ್ಯಗಳನ್ನು ಒದಗಿಸುವ ಬಿಡಾರ, ಸಣ್ಣ ಸಣ್ಣ ಸಭಾಂಗಣಗಳು, ದೊಡ್ಡ ವೇದಿಕೆ. ಇದನ್ನು ಹಳ್ಳಿಯೂ ಎನ್ನದೆ ಹಾಡಿ ಎನ್ನಬೇಕು. ಏಕೆಂದರೆ ಇಲ್ಲಿ ಒಂದೊಂದು ತಂಡಕ್ಕೂ ಪ್ರತ್ಯೇಕ ಟೆಂಟುಗಳಿದ್ದರೂ ಊಟ, ಚಹಾ, ದವಾಖಾನೆ, ಸಭೆ, ಸಭಾಂಗಣ ಎಲ್ಲವೂ ಸಾಮೂಹಿಕ, ಎಲ್ಲವೂ ಸ್ವಯಂಪ್ರೇರಿತ. ಎಲ್ಲರೂ ಅವರವರ ಪಾಲಿಗೆ ತಲ್ಲೀನರು. ಯಾರೋ ಯಾರಿಗೋ ಹೇಳಿ ಮಾಡಿಸುತ್ತಿಲ್ಲ. ಅವರವರೇ ಕೆಲಸ ಹಂಚಿಕೊಂಡು, ಕೆಲಸ ಹಾಕಿಕೊಂಡು, ಸಂತಸ ಮತ್ತು ಉತ್ಸಾಹದ ಜೊತೆ ಮಾಡುತ್ತಾ ಹೋಗುತ್ತಿದ್ದಾರೆ.

ಒಂದು ಉದಾಹರಣೆ ಹೇಳಬೇಕೆಂದರೆ ಎಂಎಲ್‌ಎ ಆಗಿರುವ ಒಬ್ಬ ಯುವತಿ ಹಲವರಲ್ಲಿ ಒಬ್ಬರಾಗಿ ಬೀದಿಯಲ್ಲಿ ಕೂತು ತಮ್ಮ ಪಾಡಿಗೆ ತಾವು ರೊಟ್ಟಿ ಲಟ್ಟಿಸುತ್ತಿದ್ದಾರೆ. ಇದನ್ನು ಹಾಡಿ ಅನ್ನದೆ ಇನ್ನೇನನ್ನಲಿ. “ಹೋರಾಟದ ಹಾಡಿ” ಎನ್ನಬಹುದು. ಹಸಿದು ಬಂದ ಹೊಟ್ಟೆಗೆ ಲಂಗರಿನಲ್ಲಿ ಸಾಲಾಗಿ ಕೂರಿಸಿ ಊಟ ಹಾಕಿದರು. ಕೊಟ್ಟ ರೊಟ್ಟಿಯನ್ನು ಎರಡೂ ಕೈಗಳಿಂದ ಸ್ವೀಕರಿಸಲು ಹೇಳುತ್ತಿದ್ದರು. ನಾವೂ ರೈತರು ಕೊಟ್ಟ ರೊಟ್ಟಿಯನ್ನು ಕಣ್ಣಿಗೆ ಒತ್ತಿಕೊಂಡು ಹೊಟ್ಟೆ ತುಂಬ ಉಂಡು ನಾಯಕತ್ವದ ಜೊತೆ ಮಾತಿಗೆ ಕೂತೆವು.

ಇದನ್ನೂ ಓದಿ: ಮೋದಿಯವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ: ಹೋರಾಟ ನಿರತ ರೈತರ ಆರೋಪ

ಈ ಹೋರಾಟದ ತಾಣದ ಮುಂದಾಳತ್ವ ವಹಿಸಿರುವ ಸ್ವರಾಜಿನ ಕಾಮ್ರೇಡ್ ದಿಲಿಪ್ ಮತ್ತು ರಿಜ್ವಾನ್ ಚೌಧರಿ ಜೊತೆ ನಮ್ಮ ನಿಯೋಗದ ಮಾತುಕತೆ ಶುರುವಾಯಿತು. [ವಾಸ್ತವದಲ್ಲಿ ಈ ತಾಣದ ಒಟ್ಟು ಉಸ್ತುವಾರಿ ಯೋಗೇಂದ್ರ ಯಾದವ್ ಅವರದು. ಅವರ ತಂದೆ ತೀರಿಕೊಂಡಿರುವುದರಿಂದ ಅವರು ಹಾಜರಿರಲಿಲ್ಲ]. ನಮ್ಮ ಕಡೆಯಿಂದ ಇಲ್ಲಿ ನಡೆಯುತ್ತಿರುವ ಹೋರಾಟವನ್ನು ಮತ್ತು ಬಂದಿರುವ ಉದ್ದೇಶವನ್ನು ವಿವರಿಸಿದೆವು. ಅವರು ಅಲ್ಲಿ ನಡಿಯುತ್ತಿರುವ ವಿದ್ಯಾಮಾನಗಳನ್ನು ಬಹಳ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟರು. ಅದರ ಸಾರ ಹೀಗಿದೆ….

  • ದೆಹಲಿಯನ್ನು ರೈತರು 7 ಹಾದಿಗಳಲ್ಲಿ ಸುತ್ತಿಗಟ್ಟಿದ್ದಾರೆ. ಶಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದಾರೆ. ಮಿಕ್ಕ ಕಡೆ ಸಹಸ್ರಾರು ಸಂಖ್ಯೆಗಳಲ್ಲಿ.
  • ಪಂಜಾಬಿ ರೈತರು ಅತಿದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಇಳಿದಿದ್ದರಿಂದ ಹೋರಾಟ ಬಿರುಸು ಪಡೆದುಕೊಂಡಿತು. ಆದರೆ ಇತರೆ ರೈತರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಉದಾಹರಣೆಗೆ ಮೊದಲು ರಾಜಸ್ಥಾನದ ಒಂದೆರಡು ಜಿಲ್ಲೆಗಳು ಮಾತ್ರ ಸ್ಪಂದಿಸಿದವು. ಇಂದು ಬಹುತೇಕ ಜಿಲ್ಲೆಗಳ ರೈತರು ಜೊತೆಗೂಡಿದ್ದಾರೆ. ವಿಶೇವಾಗಿ ಮೇವಾಡ ಭಾಗದ ರೈತರಲ್ಲಿ ದೊಡ್ಡ ಜಾಗೃತಿ ಮೂಡಿದೆ.
  • ಪೋಲೀಸರು ಹಾಕಿರುವ ತಡೆಗಳನ್ನು ಮುರಿದು ಮುನ್ನುಗುವುದು ಅಸಾಧ್ಯವಾದದ್ದಲ್ಲ ಆದರೆ ನಾವು ಅದನ್ನು ಮಾಡುತ್ತಿಲ್ಲ. ಅವರು ತಡೆದಿರುವಲ್ಲೇ ನಿಂತು ಹೋರಾಟವನ್ನು ಸಧೃಡೀಕರಿಸುತ್ತಾ ಹೋಗುವುದು ನಮ್ಮ ಗುರಿ. ಅವರು ಸಮಯ ಎಳೆಯುತ್ತಿದ್ದಾರೆ. ನಾವು ದೇಶವ್ಯಾಪಿ ರೈತರನ್ನು ಸಂಘಟಿಸಿಕೊಳ್ಳಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದೇವೆ. ದೀರ್ಘ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ.
  • ಈ ಹೋರಾಟ ರೈತರ ಹೋರಾಟವಾಗಿ ಪ್ರಾರಂಭವಾಗಿದ್ದರೂ ಕೇವಲ ಅವರ ಹೋರಾಟವಾಗಿಲ್ಲ. ದೇಶದ ಎಲ್ಲಾ ಜನವಿಭಾಗಗಳ ಹೋರಾಟವಾಗಿದೆ. ಎಲ್ಲಾ ಜನವರ್ಗಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ. ಸಾರಾಂಶದಲ್ಲಿ ಇದು ಫ್ಯಾಸಿಸಂ ವಿರುದ್ಧದ ಹೋರಾಟವಾಗಿದೆ. ಇದು ರೈತ ಹೋರಾಟವಾಗಿ ಪ್ರಾರಂಭವಾಗಿದ್ದರೂ ಅಷ್ಟರಿಂದಲೇ ಕೊನೆಗೊಳ್ಳುವುದಿಲ್ಲ.

  • ದಕ್ಷಿಣದಿಂದಲೂ ಜನ ಬರಲು ಪ್ರಾರಂಭಿಸಿದ್ದಾರೆ. ಇಂದು ಮಹರಾಷ್ಟ್ರದಿಂದ ಒಂದುವರೆ ಸಾವಿರದಷ್ಟು ಜನ ಹೋರಾಟಕ್ಕೆ ಬಂದು ಸೇರಿಕೊಂಡಿದ್ದಾರೆ. ಕರ್ನಾಟಕದಿಂದ ವಿವಿಧ ಸಂಘಟನೆಗಳನ್ನು ಪ್ರತಿನಿಧಿಸಿ ತಾವು ಬಂದಿದ್ದೀರಿ. ಇದಕ್ಕೆ ಬಹಳ ಮಹತ್ವವಿದೆ. ದೇಶಕ್ಕೆ ಈ ಭೇಟಿ ಒಳ್ಳೆ ಸಂದೇಶ ನೀಡಲಿದೆ. ನಾಳೆ ಬಹಿರಂಗ ಸಭೆಯಲ್ಲಿ ಮಾತನಾಡಿ. ಕರ್ನಾಟಕ ಎದ್ದು ನಿಂತರೆ ಈ ಹೋರಾಟ ಹೊಸ ತಿರುವನ್ನೇ ಪಡೆದುಕೊಳ್ಳುತ್ತದೆ.

ಮಾತು ಮುಗಿಯಲು ಸಾಧ್ಯವಿರಲಿಲ್ಲ…ಆದರೆ ಮುಂದಿನ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಡಲೇಬೇಕಿತ್ತು. ಆತ್ಮೀಯ ಬೀಳ್ಕೊಡುಗೆ ಸ್ವೀಕರಿಸಿ, ಜೊತೆಗೂಡಿ ಘೋಷಣೆಗಳನ್ನು ಹಾಕಿ, ಸಮೃದ್ಧಿಯ ಭಾವದೊಂದಿಗೆ ’ಹಾಡಿ’ ಬಿಟ್ಟು ಮತ್ತೆ ದಿಲ್ಲಿಗೆ ಹೊರಟೆವು. ಮರಳುವ ಹೊತ್ತಿಗೆ 11.30, ಮಲಗುವ ಹೊತ್ತಿಗೆ 2 ಗಂಟೆ.

ಇಂದು 9 ಕ್ಕೆ ಹೊರಡಬೇಕು… ಹೋರಾಟದ ಮತ್ತೊಂದು ಮುಖ್ಯ ತಾಣವಾದ ಟಿಕ್ರಿಗೆ. ಇಂದು ಕಂಡದ್ದು ನಾಳೆಗೆ!

ಇದನ್ನೂ ಓದಿ: ರೈತ ಹೋರಾಟದಲ್ಲಿ ಖಲೀಸ್ತಾನಿ ಕರಪತ್ರ‌ ಹಂಚಿಕೆ: RSS‌ ಕಾರ್ಯಕರ್ತ ಬಂಧನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...