Homeಮುಖಪುಟಕರ್ನಾಟಕದ್ದೇ ರೈತ ಹೋರಾಟ ರೂಪು ತಳೆಯುವ ಸಾಧ್ಯತೆ ನಮ್ಮ ಮುಂದಿದೆ

ಕರ್ನಾಟಕದ್ದೇ ರೈತ ಹೋರಾಟ ರೂಪು ತಳೆಯುವ ಸಾಧ್ಯತೆ ನಮ್ಮ ಮುಂದಿದೆ

- Advertisement -
- Advertisement -

ಪ್ರಧಾನವಾಗಿ ಪಂಜಾಬಿನ ರೈತರು ಮತ್ತು ದೆಹಲಿಯ ಸುತ್ತಲಿನ ಇತರ ರಾಜ್ಯಗಳ ರೈತರು ದೆಹಲಿ ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ. ಇಡೀ ದೇಶಕ್ಕೆ ಅನ್ವಯಿಸುವ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಒಕ್ಕೂಟ ಸರ್ಕಾರದ ನಡೆಯ ವಿರುದ್ಧ ಈ ಕೆಲವು ರಾಜ್ಯಗಳ ರೈತರ ಜೊತೆ ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ರೈತರೇಕೆ ಜೊತೆಗೂಡಿಲ್ಲ ಎಂಬ ಪ್ರಶ್ನೆ ಎದ್ದಿದೆ. ಪ್ರಶ್ನೆ ಕೇಳುತ್ತಿರುವವರಲ್ಲಿ ಎರಡು ವಿಧಗಳಿವೆ. ಒಂದು, ಪಂಜಾಬಿನ ರೈತರಾದರೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನೂ ನೋಡಲಿಚ್ಛಿಸದೇ, ಈ ಹೋರಾಟವನ್ನು ಹೇಗಾದರೂ ಹತ್ತಿಕ್ಕಲು ಬಯಸುತ್ತಿರುವ ಬಿಜೆಪಿ ಪಕ್ಷದ ಹಿಂಬಾಲಕರು. ಇವರಲ್ಲಿ ಮಾಧ್ಯಮಗಳೂ ಇವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ ಸುಪ್ರೀಂಕೋರ್ಟೂ ಇದೆಯೇ ಎಂಬ ಪ್ರಶ್ನೆ ಏಳುವಂತೆ ಅದರ ಕೆಲವು ಮಾತುಗಳಿದ್ದವು.

ಎರಡನೆಯದಾಗಿ, ಈ ಹೋರಾಟ ಯಶಸ್ವಿಯಾಗಬೇಕೆಂದರೆ ಎಲ್ಲಾ ರಾಜ್ಯಗಳ ರೈತರೂ ಭಾರೀ ಸಂಖ್ಯೆಯಲ್ಲಿ ಬೀದಿಗಿಳಿಯಬೇಕು ಎಂದು ಬಯಸುತ್ತಿರುವವರಿದ್ದಾರೆ. ಇವರಲ್ಲಿ ದೆಹಲಿ ಸುತ್ತ ಹೋರಾಟ ನಡೆಸುತ್ತಿರುವ ರಾಜ್ಯಗಳವರೂ ಇದ್ದಾರೆ; ಅಷ್ಟು ದೊಡ್ಡ ಪ್ರಮಾಣದಲ್ಲಿ ಚಳವಳಿ ನಡೆಯದ ರಾಜ್ಯಗಳವರೂ ಇದ್ದಾರೆ. ಹಾಗೆ ನೋಡಿದರೆ ದೇಶದಲ್ಲಿ ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆಗಳನ್ನು ಕಂಡಿರುವ ರಾಜ್ಯಗಳಿಂದ ಸಾಪೇಕ್ಷವಾಗಿ ಕಡಿಮೆ ಪ್ರಮಾಣದ ಮೊಬಿಲೈಸೇಷನ್ ಇದೆ.

ಅಂದರೆ, ಕೃಷಿ ಬಿಕ್ಕಟ್ಟು ಎಲ್ಲೆಡೆ ಇದೆ ಮತ್ತು ಇಂದು ಸಾಪೇಕ್ಷವಾಗಿ ಕಡಿಮೆ ಮೊಬಿಲೈಸೇಷನ್ ಇರುವ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ, ನಿರ್ದಿಷ್ಟ ಸಂದರ್ಭವೊಂದರಲ್ಲಿ ಆ ಬಿಕ್ಕಟ್ಟುಗಳಿಗೆ ರೈತರಾಗಲೀ, ಯಾವುದೇ ಸಮುದಾಯವಾಗಲೀ ಪ್ರತಿಕ್ರಿಯಿಸುವ ರೀತಿ ಹೀಗೇ ಇರುತ್ತದೆಂದು ಹೇಳಲಾಗದು. ಹೀಗಿದ್ದೂ, ಪಂಜಾಬಿನ ಕುರಿತು ಹೇಳಲೇಬೇಕಾದ ಒಂದು ಮಾತಿದೆ. ಅಲ್ಲಿ ಇಂತಹ ಹೋರಾಟ ನಡೆಯಲು ಕಾಲ ಕೂಡಿ ಬಂದಿದೆ; ಅಂದರೆ ಈ ಹೊತ್ತಿನಲ್ಲಿ ಇಂತಹ ದೊಡ್ಡ ಮತ್ತು ದೃಢ ಸಂಕಲ್ಪವುಳ್ಳ ರೈತ ಸಮುದಾಯದ ಸತ್ಯಾಗ್ರಹಕ್ಕೆ ಹತ್ತಾರು ಸಂಗತಿಗಳು ಕಾರಣವಾಗಿವೆ. ಆದರೆ, ಅದರಾಚೆಗೆ ವರ್ಷಗಳ ಕಾಲ ಸುಸಂಘಟಿತ ಪ್ರಯತ್ನವೂ ಅಲ್ಲಿ ನಡೆದಿದೆ.

ಕರ್ನಾಟಕದ ಬಗ್ಗೆ ಪ್ರೀತಿ ಕಾಳಜಿಗಳುಳ್ಳ ಪ್ರತಿಯೊಬ್ಬರೂ ಚಿಂತಿಸಬೇಕಾದ ಕೆಲವು ಸಂಗತಿಗಳಿವೆ. ಅವನ್ನಿಟ್ಟುಕೊಂಡು ಇಲ್ಲೂ ವರ್ಷಗಳ ಕಾಲ ಸುಸಂಘಟಿತವಾದ ಪ್ರಯತ್ನವೊಂದು ನಡೆಯಬೇಕು. ಅದನ್ನು ಆರಂಭಿಸಲು ಈ ಸಮಯವೇ ಸರಿಯಾದುದು. ಕರ್ನಾಟಕವು ರಾಜಸ್ತಾನದ ನಂತರ ಅತಿ ಹೆಚ್ಚು ಬರಪೀಡಿತ ಪ್ರದೇಶವುಳ್ಳ ರಾಜ್ಯವಾಗಿದೆ. ಮಳೆ ನೆರಳಿನ ಪ್ರದೇಶವಾಗಿರುವುದು ಒಂದು ಕಾರಣವಾದರೆ, ಇರುವ ನದೀ ಸಂಪನ್ಮೂಲದ ಸದ್ಬಳಕೆಗೆ ಸರಿಯಾದ ಯೋಜನೆ ಹಾಗೂ ಇಚ್ಛಾಶಕ್ತಿ ಇಲ್ಲದಿರುವುದು ಇನ್ನೊಂದು ಕಾರಣ. ಉತ್ತರ ಒಳನಾಡಿಗೆ ಲಭ್ಯವಿರುವ (ಆದರೆ ಈಗಲೂ ಸಮರ್ಪಕವಾಗಿ ಬಳಕೆಯಾಗದ) ಕೃಷ್ಣಾ ನೀರಿನಂತೆ ಜಲಸಂಪನ್ಮೂಲವಿಲ್ಲದ ದಕ್ಷಿಣ ಒಳನಾಡಿನ ಸಾವಿರಾರು ಕೆರೆ ಕಟ್ಟೆಗಳು ಹೂಳಿನಿಂದ ತುಂಬಿಕೊಂಡಿದ್ದು, ರಾಜಕಾಲುವೆಗಳು ಕಾಣದಾಗಿವೆ. ಜಲಸಂಪನ್ಮೂಲ ಖಾತೆಯು ಪ್ರಭಾವೀ ಸಚಿವರ ಸಂಪನ್ಮೂಲವನ್ನು ಹೆಚ್ಚಿಸುವ ಫಲವತ್ತಾದ ಖಾತೆಯಾಗಿ ಬಹುಕಾಲ ಕಳೆದರೂ, ನೆಲ ಬರಡಾಗಿಯೇ ಇದೆ.

ಇದರ ಫಲವಾಗಿ ಕಳೆದ 20 ವರ್ಷಗಳಲ್ಲಿ 15 ವರ್ಷಗಳ ಕಾಲ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು ಬರದಿಂದ ಬಳಲಿವೆ. ಇನ್ನೊಂದಷ್ಟು ತಾಲೂಕು/ಜಿಲ್ಲೆಗಳ ಭೀಕರ ಪ್ರವಾಹದಿಂದ ತತ್ತರಿಸಿವೆ. ಬರದಿಂದಲೇ ಸುಮಾರು 4 ಲಕ್ಷ ಕೋಟಿ ರೂ.ಗಳ ಬೆಳೆ ನಷ್ಟವನ್ನು ಗ್ರಾಮೀಣ ಕರ್ನಾಟಕವು ಕಂಡಿದ್ದರೆ, ಅದರಲ್ಲಿ ಶೇ.6ರಷ್ಟು ಪರಿಹಾರವನ್ನೂ ಪಡೆದುಕೊಂಡಿಲ್ಲ. ಇಂತಹ ಗ್ರಾಮೀಣ ಕರ್ನಾಟಕದ ಪುನಶ್ಚೇತನಕ್ಕೆ ಒಂದು ಸಮಗ್ರ ಪ್ಯಾಕೇಜ್ ಬೇಕಿದೆ ಎಂದು ಯಾವ ರಾಜಕೀಯ ಪಕ್ಷಕ್ಕೂ ಅನಿಸಿಲ್ಲ. ಹೆಚ್ಚೆಂದರೆ ರೈತರ ಸಾಲಮನ್ನಾ ಎಂಬ ತಾತ್ಕಾಲಿಕವಾಗಿ ಮೂಗಿಗೆ ಸವರುವ ತುಪ್ಪವನ್ನು ಹಿಡಿದು ಜಗ್ಗಾಡುತ್ತವೆ. ಇದನ್ನು ರೈತಾಪಿಗೂ ಸಮರ್ಥವಾಗಿ ವಿವರಿಸಿ ಒಂದು ಆಂದೋಲನ ಮಾಡಬೇಕೆಂದರೆ ಅದಕ್ಕೆ ಒಂದಷ್ಟು ಅಧ್ಯಯನ, ಚಿಂತನೆ ಕೇಳುತ್ತದೆ. ಇದಕ್ಕೆ ರಾಜಕೀಯ ಪಕ್ಷಗಳು ಸಿದ್ಧವಾಗುವ ಸಾಧ್ಯತೆಗಳಿಲ್ಲ. ಅವು ಶುರು ಮಾಡಿದರೂ ಆರೋಪ ಪ್ರತ್ಯಾರೋಪಗಳಷ್ಟೇ! ಅಲ್ಲಿಂದಿಲ್ಲಿಗೆ ಹಾರಬಹುದು.

PC : India Legal

ಕರ್ನಾಟಕದಲ್ಲಿ ಹತ್ತು ಕೃಷಿ ಪರಿಸರ ವಲಯಗಳಿವೆ. ಆದರೆ ಹತ್ತಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುವ, ಒಂದೇ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವ ವೈವಿಧ್ಯತೆ ಇದೆ. ಹೀಗಾಗಿ ಬೆಳೆ ಬೆಳೆಯುವವರದ್ದೂ ಬೇರೆ ಬೇರೆ ವಲಯಗಳಾಗಿವೆ. ರೈತಸಂಘವು ರಾಜ್ಯಮಟ್ಟದ ಹೋರಾಟವೊಂದನ್ನು ಸಂಘಟಿಸಿದರೆ, ಅದರಲ್ಲಿ ವಿವಿಧ ಬೆಳೆಗಳಿಗೆ ಸಂಬಂಧಿಸಿದ ಹತ್ತಿಪ್ಪತ್ತು ಹಕ್ಕೊತ್ತಾಯಗಳು ಸೇರಿಸುವುದು ಆ ಕಾರಣಕ್ಕೇ. ಆದರೆ, ಒಂದೇ ಬೆಳೆಯ ಬೆಳೆಗಾರರನ್ನು ಸಂಘಟಿಸಿ ಅವರ ಹಕ್ಕೊತ್ತಾಯ ಮಾತ್ರ ಕೇಂದ್ರೀಯ ಘೋಷಣೆಯಾಗಿದ್ದರೆ ಮಾತ್ರ ರೈತರ ಜಮಾವಣೆ ಹೆಚ್ಚು. ಅದರಲ್ಲೂ ಕಬ್ಬು ಕ್ರಷಿಂಗ್ ಆಗುವ, ಬೆಲೆ ಹೆಚ್ಚಿಸುವ ಅಥವಾ ಈಗಾಗಲೇ ಕ್ರಷಿಂಗ್ ಆಗಿರುವ ಕಬ್ಬಿನ ಬಾಕಿ ಕೊಡಿಸುವ ತಕ್ಷಣದ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಡುವ ಕಬ್ಬು ಬೆಳೆಗಾರರಷ್ಟು ಸಂಘಟಿತವಾದ ಇನ್ನೊಂದು ಗುಂಪು ಕಾಣುವುದಿಲ್ಲ. ಸುಸಂಘಟಿತವಾದ ವಲಯವಾದ ಹಾಲು ಉತ್ಪಾದಕರನ್ನು ಅಷ್ಟೇ ಸಂಘಟಿತವಾಗಿ ರಾಜ್ಯವ್ಯಾಪಿ ಒಟ್ಟುಗೂಡಿಸಿದ ಒಂದು ಹೋರಾಟವೂ ನಮ್ಮ ನೆನಪಿನಲ್ಲಿ ಇಲ್ಲ.

ಹೀಗಿದ್ದಾಗಲೂ ಕೇವಲ ಎರಡು ದಶಕಗಳ ಕೆಳಗೆ ಇದೇ ರಾಜ್ಯದಲ್ಲಿ ಅಭೂತಪೂರ್ವ ರೈತ ಚಳವಳಿಯೊಂದು ನಡೆದಿದ್ದು, ಆಳುವ ಸರ್ಕಾರಗಳ ನಿದ್ದೆಗೆಡಿಸಿದ್ದು ಹೇಗೆ?

ಅದು ಹೇಗೆಂಬುದು ಇಂದು ಅಧ್ಯಯನಯೋಗ್ಯ ವಿಚಾರವಾದರೂ, ಅಲ್ಲಿಂದಿಲ್ಲಿಗೆ ರಾಜ್ಯದ ಕೃಷಿ ಸ್ವರೂಪವು ಸಾಕಷ್ಟು ಬದಲಾಗಿದೆ ಎಂಬ ಕುರಿತು ಒಂದೆರಡಾದರೂ ಅಧ್ಯಯನಗಳು ಬಂದಿವೆ. ಅವುಗಳನ್ನೂ ಮುಂದಿಟ್ಟುಕೊಂಡು ಬದಲಾಗಿರುವ ಮತ್ತು ಬದಲಾಗುತ್ತಿರುವ ಕೃಷಿ ಸ್ವರೂಪದ ಕುರಿತು ಚಿಂತನ-ಮಂಥನ ನಡೆದರೆ ರೈತ ಸಂಘಟನೆಗಳ ಹೋರಾಟವು ಇಡೀ ರೈತ ಸಮುದಾಯದ ಹೋರಾಟವಾಗುತ್ತದೆ.

ದೆಹಲಿಯ ಸುತ್ತ ಹೋರಾಟ ನಡೆಸುತ್ತಿರುವ ರೈತ ಸಮುದಾಯಕ್ಕೆ ಮತ್ತು ಅದಕ್ಕೆ ನೇತೃತ್ವ ವಹಿಸಿರುವ ಸಂಘಟನೆಗಳಿಗೆ ನಮ್ಮ ಗೌರವವು ಸಲ್ಲಲೇಬೇಕು. ಆದರೆ, ಕರ್ನಾಟಕವು ಕರ್ನಾಟಕದ ರೀತಿಯ ಆಂದೋಲನವನ್ನೇ ಕಟ್ಟಬೇಕು. ಒಕ್ಕೂಟ ಸರ್ಕಾರದ ಬಾಲಂಗೋಚಿಯಾಗಿ ಕರ್ನಾಟಕ ಸರ್ಕಾರವು ಕರ್ನಾಟಕದ ರೈತರು ಕೇಳದಿದ್ದ ಬದಲಾವಣೆಗಳನ್ನು ಏಕೆ ತರುತ್ತಿದೆ ಎಂಬ ಪ್ರಶ್ನೆಯು ಕೇವಲ ರೈತರ ಪ್ರಶ್ನೆಯಲ್ಲ; ಇಡೀ ಕರ್ನಾಟಕದ ನಾಗರಿಕರ ಆಕ್ರೋಶಕ್ಕೆ ಕಾರಣವಾಗಬೇಕು. ಒಕ್ಕೂಟ ಸರ್ಕಾರದ ಅಧಿಕಾರಿಯೊಬ್ಬರು ರಾಜ್ಯ ಸರ್ಕಾರದ ಅಧಿಕಾರಿಗೆ ಪತ್ರ ಬರೆದು ಈಗಿಂದೀಗಲೇ ಇದನ್ನು ಸುಗ್ರೀವಾಜ್ಞೆ ತನ್ನಿ ಎಂದಪ್ಪಣೆ ಮಾಡುವ ಧಾರ್ಷ್ಟ್ಯದ ಕುರಿತು ಕರ್ನಾಟಕದ ಪ್ರಜ್ಞಾವಂತ ಸಮುದಾಯಕ್ಕೆ ಸಿಟ್ಟೇ ಬರಲಿಲ್ಲ. ಹಾಗಾಗಿಯೇ ಯಡಿಯೂರಪ್ಪನವರ ಸರ್ಕಾರವು ಅದನ್ನೂ ತಂದಿತು, ನಂತರ ಕಾಯ್ದೆಯನ್ನೂ ತಂದುಕೊಂಡಿತು.

ಈ ರಾಜ್ಯದ ಎಲ್ಲಾ ರೈತರ ಸಂಕಷ್ಟವನ್ನು ಒಂದು ತಂತುವಿನಲ್ಲಿ ಬೆಸೆಯುವುದು ಕೇವಲ ನೆರೆ ಹಾಗೂ ಬರದ ಸಂಕಷ್ಟ ಮಾತ್ರವಾಗಿಲ್ಲ; ಇಲ್ಲಿನ ಪ್ರತೀ ಬೆಳೆಯ ಬೆಲೆಯ ಏರಿಳಿತ ಮತ್ತು ನಷ್ಟಗಳಿಗೆ ಸರ್ಕಾರಗಳ (ಅದರಲ್ಲೂ ದೆಹಲಿ ಸರ್ಕಾರದ) ಒಂದಲ್ಲಾ ಒಂದು ನೀತಿ ಕಾರಣವಾಗಿದೆ. ಅಂದರೆ ಸರ್ಕಾರದ ನೀತಿಯೇ ಕಬ್ಬು, ತೊಗರಿ, ಭತ್ತ, ರೇಷ್ಮೆ, ಮೆಣಸು, ಜೋಳ, ಹತ್ತಿ, ಅಡಿಕೆ ಮತ್ತಿತರ ಬೆಳೆಗಾರರು ಬಿಕ್ಕಟ್ಟಿಗೆ ಗುರಿಯಾಗುವಂತೆ ಮಾಡಿವೆ. ಇದನ್ನು ಅರ್ಥ ಮಾಡಿಕೊಂಡು ಅಣಿನೆರೆಯುವ ದೊಡ್ಡ ಸಮುದಾಯ ಈಗಿಲ್ಲದೇ ಇರಬಹುದು. ಆದರೆ ಅದನ್ನು ಅರ್ಥೈಸಿಕೊಂಡು ನಂತರ ಎಲ್ಲರಿಗೂ ತಿಳಿಹೇಳುವ ಹತ್ತಾರು ಜನರು ಪ್ರತಿ ಹಳ್ಳಿಯಲ್ಲೂ ಇದ್ದಾರೆ. ಮೊದಲ ಹಂತದಲ್ಲಿ ಅಂಥವರನ್ನು ಒಂದೆಡೆ ತರುವ ಕೆಲಸವಾಗಬೇಕು. ರಾಜ್ಯವ್ಯಾಪಿ ಈ ಕೆಲಸ ನಡೆದರೆ ಅದೇ ದೊಡ್ಡ ಸಮೂಹವಾಗುತ್ತದೆ. ಅದಾನಿ, ಅಂಬಾನಿಯ ತಿಜೋರಿ ತುಂಬಿಸಲು ಮುಂದಿನ ದಿನಗಳಲ್ಲಿ ಇನ್ನೂ ಘಾತುಕವಾದ ನೀತಿಗಳು ಬಂದಾಗ, ಈ ಸಮೂಹವು ಇನ್ನಷ್ಟು ಜನರಲ್ಲಿ ಅರಿವು ತುಂಬಿ ಪ್ರವಾಹವಾಗುತ್ತದೆ.
ಆ ನಿಟ್ಟಿನಲ್ಲಿ ಮೊದಲ ಗಟ್ಟಿ ಹಾಗೂ ವ್ಯಾಪಕ ಹೆಜ್ಜೆಗಳನ್ನಿಡಲು ಇದು ಸಕಾಲವಾಗಿದೆ.


ಇದನ್ನೂ ಓದಿ: ರೈತ ಹೋರಾಟ: ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಗೆ ರಾಜ್ಯ ರೈತ ಸಂಘ ಆಕ್ಷೇಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...