Homeಮುಖಪುಟನಮ್ಮ ಅಂತರಾಳಗಳ ಕೊಳಕನ್ನು ಪ್ರದರ್ಶಿಸಿದ ‘ಸಾಮಾಜಿಕ ಅಂತರ’ದ ಸಮಸ್ಯೆಗಳು

ನಮ್ಮ ಅಂತರಾಳಗಳ ಕೊಳಕನ್ನು ಪ್ರದರ್ಶಿಸಿದ ‘ಸಾಮಾಜಿಕ ಅಂತರ’ದ ಸಮಸ್ಯೆಗಳು

- Advertisement -
- Advertisement -

ವಿಶ್ವ ಆರೋಗ್ಯ ಸಂಸ್ಥೆ ಕೊರೊನ ಸೋಂಕು ಸಾಂಕ್ರಾಮಿಕವನ್ನು ತಡೆಗಟ್ಟಲು ‘ಸಾಮಾಜಿಕ ಅಂತರ’ ಬಹಳ ಪರಿಣಾಮಕಾರಿ ಎಂದು ಎಲ್ಲ ದೇಶಗಳಿಗೆ ಸಲಹೆ, ಸೂಚನೆ ಮಾರ್ಗದರ್ಶನ ನೀಡಿದಾಗ, ಭಾರತದಲ್ಲಿ ಸಾಮಾಜಿಕ ಅಂತರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಅಥವಾ ಅದು ವಿಕೋಪಕ್ಕೆ ತಿರುಗಬಹುದು ಎಂದು ಯೋಚಿಸಿರಲಿಕ್ಕೆ ಇಲ್ಲ. ಒಂದೇ ಮನೆಯಲ್ಲಿದ್ದರೂ ಕೂಡ ಒಬ್ಬರಿಗೊಬ್ಬರು ಅಂತರ ಕಾಪಾಡಿಕೊಳ್ಳುವುದು ಈ ‘ಸೋಶಿಯಲ್ ಡಿಸ್ಟೆನ್ಸ್‍ನ’ ಭಾಗ, ಭಾರತದಲ್ಲಿ ತಲೆತಲಾಂತರದಿಂದ ಆಚರಣೆಯಲ್ಲಿರುವ ಅಸ್ಪೃಶ್ಯತೆಯ ಸಾಮಾಜಿಕ ಅಂತರ ಇದಲ್ಲ ಎಂದು ಸ್ಪಷ್ಟಪಡಿಸುವ ಅಗತ್ಯ ಬಹುಶಃ ಕಂಡಿರಲಿಲ್ಲ. ಎಚ್ಚರಿಕೆ ವಹಿಸದೆ ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳು ಆಗಿರಬಹುದು, ದೌರ್ಜನ್ಯ ಎಸಗುವ ಇತಿಹಾಸವಿರುವ ಸಮುದಾಯಗಳ ಹಿನ್ನೆಲೆಯಿಂದ ಬಂದಿರುವ, ಬದಲಾಗಲು ಇಚ್ಚಿಸದ ಜನರ ಅಸಡ್ಡೆ-ಅಹಂಕಾರಗಳು ಕಾರಣ ಇರಬಹುದು, ಇಲ್ಲಿನ ಪುರಾತನ ಸಾಮಾಜಿಕ ಅಂತರ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಸಾಮಾಜಿಕ ಅಂತರದ ಜೊತೆಗೆ ಬೆರೆತು ಹೋಗಿರುವುದು, ಇಂದು ಕೊರೊನ ಬಿಕ್ಕಟ್ಟಿನಲ್ಲಿ ಸಮಯದಲ್ಲಿ ಅನಾವರಣಗೊಂಡಿರುವ ಅತಿ ದೊಡ್ಡ ದುರಂತ. ಈ ಸೋಷಿಯಲ್ ಡಿಸ್ಟೆನ್ಸಿಂಗ್ ಪದದ ಬದಲು ಫಿಸಿಕಲ್ ಡಿಸ್ಟೆನ್ಸ್ (ಭೌತಿಕ ಅಂತರ) ಹೆಚ್ಚು ಸೂಕ್ತ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದು ಕನಿಷ್ಠ ಪೊಲಿಟಿಕಲ್ ಕರೆಕ್ಟ್‍ನೆಸ್ ದೃಷ್ಟಿಯಿಂದಲಾದರೂ ಸತ್ಯ.

ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು ಲಾಕ್‍ಡೌನ್ ಘೋಷಿಸಿದಾಗ ಇದು ಯಾವ ಸಮುದಾಯಗಳ ಮೇಲೆ ಹೆಚ್ಚು ಹೊರೆ ಹಾಕುತ್ತದೆ ಎಂಬುದನ್ನು ಕಡೆಗಣಿಸಿದ್ದರಿಂದ ಉಂಟಾದ ಸಮಸ್ಯೆಗಳು ನಾವು ಎಣಿಸಿದ್ದಕ್ಕಿಂತಲೂ ವೇಗವಾಗಿ ಉದ್ಭವವಾಗುತ್ತಿವೆ. ನೂರಾರು ಕಿಲೋಮೀಟರ್‍ಗಳಷ್ಟು ನಡೆದ ವಲಸೆ ಕಾರ್ಮಿಕರಿಗೆ ರಾಜ್ಯದ ಗಡಿಗಳು ಮುಚ್ಚಿದರೆ, ಹಾಗೋ ಹೀಗೋ ತಮ್ಮ ಊರಿಗಳಿಗೆ ತೆರಳಿದ್ದ ಜನರು ತಮ್ಮ ಊರುಗಳಲ್ಲೇ ಅಪಮಾನಕ್ಕೆ ಒಳಗಾಗಬೇಕಾದ ಸನ್ನಿವೇಶಗಳು ಎದುರಾದವು. ವಲಸೆ ಕಾರ್ಮಿಕರ ಸಮಸ್ಯೆಯೆಂದರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲಾಗದ ಆರ್ಥಿಕ ದುರ್ಬಲತೆ ಒಂದೆ ಅಲ್ಲ. ಇಲ್ಲಿ ಜಾತಿ, ಧರ್ಮದ ವ್ಯವಸ್ಥೆ ಆರ್ಥಿಕ ದುರ್ಬಲತೆಗೆ ತಳುಕು ಹಾಕಿಕೊಂಡಿದೆ. ದ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗೆ ಬರೆದ ಲೇಖನದಲ್ಲಿ ದಲಿತ ಚಿಂತಕ ಸೂರಜ್ ಯೆಂಗ್ಡೆ ಹೇಳುವಂತೆ “ವಲಸೆ ಕಾರ್ಮಿಕರಿಗೆ ಈ ಅನ್ಯಾಯ ಇನ್ನೂ ಹೆಚ್ಚು ತೀವ್ರವಾಗಿರುತ್ತದೆ. ಏಕೆಂದರೆ ಅವರಲ್ಲಿ ಹೆಚ್ಚು ಜನರು ದಲಿತರು ಮತ್ತು ಆದಿವಾಸಿಗಳು. ಭಾರತದ ಅಂತರ ರಾಜ್ಯಗಳ 39.5 ಕೋಟಿ ವಲಸೆ ಕಾರ್ಮಿಕರಲ್ಲಿ ಸುಮಾರು 6.2 ಕೋಟಿ ದಲಿತರು ಮತ್ತು 3.1 ಕೋಟಿ ಆದಿವಾಸಿಗಳು ಎಂದು ಅಂದಾಜಿಸಲಾಗಿದೆ. ಅವರು ತಮ್ಮ ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದದ್ದು ಜಾತಿ ದೌರ್ಜನ್ಯಗಳು, ದಬ್ಬಾಳಿಕೆಗಳು ಮತ್ತು ಬಡತನದಿಂದ ತಪ್ಪಿಸಿಕೊಳ್ಳಲು ಅಥವಾ ಕಾಡು ಮತ್ತು ತಮ್ಮ ಜಮೀನುಗಳ ಮೇಲಿದ್ದ ಒಡೆತನ ಕಳೆದುಕೊಂಡಿದ್ದಕ್ಕೆ. ಈಗ ಕೋವಿಡ್-19 ನಂತರದ ದಿನಗಳು ಮತ್ತೆ ಅವರನ್ನು ಅದೇ ದೌರ್ಜನ್ಯ ಹಿಂಸೆ ಮತ್ತು ಶೋಷಣೆಗೆ ತಳ್ಳಲಿದೆ” ಎಂದು ಬರೆದಿದ್ದರು.

ನಮ್ಮ ದೇಶದಲ್ಲಿ ಸ್ವಚ್ಛತೆಯನ್ನು ಕೆಲವೇ ಮೇಲ್ಜಾತಿಗಳಿಗೆ ಮಾತ್ರ ಆರೋಪಿಸುವ ಮತ್ತು ಸುದೀರ್ಘ ಕಾಲದಿಂದ ಅವಗಣನೆಗೆ ಒಳಗಾಗಿರುವ ಹಿಂದುಳಿದ, ಶೋಷಿತ ಸಮುದಾಯಗಳು ಮತ್ತು ಅಲ್ಪಸಂಖ್ಯಾತ ಧಾರ್ಮಿಕ ಜನರು ಕೊಳಕು ಎಂದು ಹೇಳುವ ಕೆಟ್ಟ-ದರಿದ್ರ ಮನಸ್ಸಿನ ಪೂರ್ವಾಗ್ರಹ, ಕೊರೊನ ದಿನಗಳಲ್ಲಿ ಅಥವಾ ಕೊರೊನ ಅಕಸ್ಮಾತ್ ತೀವ್ರವಾಗುವ ಸಾಧ್ಯತೆಯ ದಿನಗಳಲ್ಲಿ ಕಳಚಿಹೋಗುವುದಿಲ್ಲ. 2019ರ ಮಾಹಿತಿಯ ಪ್ರಕಾರ ಭಾರತದಲ್ಲಿ 1000 ಜನಕ್ಕೆ 0.55 ಹಾಸಿಗೆಗಳ ಸೌಲಭ್ಯ ಇದೆ. ನಮ್ಮ ಜಿಡಿಪಿಯ ಕೇವಲ 1% ಮಾತ್ರ ಆರೋಗ್ಯಕ್ಕೆ ವಲಯಕ್ಕೆ ಖರ್ಚು ಮಾಡಲಾಗುತ್ತಿದೆ. 138 ಕೋಟಿ ಜನಕ್ಕೆ ಸುಮಾರು 40 ಸಾವಿರ ವೆಂಟಿಲೇಟರ್ ವ್ಯವಸ್ಥೆ ಇದೆ ಎನ್ನಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಪಕ್ಷ ಸೋಂಕು ವಿಪರೀತವಾದರೆ, ಈಗಿರುವ ಪೂರ್ವಗ್ರಹಗಳು ಈಗಾಗಲೇ ನಿರ್ಲಕ್ಷ್ಯವಾಗಿರುವ ಸಮುದಾಯಗಳ ಮೇಲೆ ಹೆಚ್ಚಾಗುವುದಿಲ್ಲವೇ? ಜಾತಿ, ವರ್ಗ ಮತ್ತು ಧರ್ಮ ತಾರತಮ್ಯ ಚಿಕಿತ್ಸೆ ಹಂಚಿಕೆಯಾಗುವಲ್ಲಿಯೂ ಕೆಲಸ ಮಾಡುವುದಿಲ್ಲವೆ? ಕೊರೊನ ವೈರಸ್ ಮನುಷ್ಯನಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಗಲೀ ಅಥವಾ ಅದು ಇಷ್ಟು ದೊಡ್ಡ ಮಟ್ಟದಲ್ಲಿ ಹರಡುವುದಕ್ಕೆ ಆಗಲೀ ಕಾರಣವಾಗದ ಶೋಷಿತ ಸಮುದಾಯಗಳು, ಈ ಸಾಂಕ್ರಾಮಿಕದ ಕೆಟ್ಟ ಪರಿಣಾಮಗಳನ್ನು ಮಾತ್ರ ಹೆಚ್ಚು ಅನುಭವಿಸಬೇಕಾದೀತು ಎನ್ನುವುದು ದೊಡ್ಡ ವಿಪರ್ಯಾಸ ಅಲ್ಲವೇ!

ಏಪ್ರಿಲ್ 6ರ ವಿದ್ಯಮಾನವನ್ನು ಗಮನಿಸಿದಾಗ ಈ ಆತಂಕ ಇನ್ನಷ್ಟು ಹೆಚ್ಚಾಗದೆ ಇರದು. ಮಲೇರಿಯ ಚಿಕಿತ್ಸೆಗೆ ಬಳಸಲಾಗುವ ಹೈಡ್ರೋಕ್ಲೋರಾಕ್ಸಿಕ್ವಿನ್ ಔಷಧ ಕೊರೊನ ಸೋಂಕಿನ ಚಿಕಿತ್ಸೆಗೂ ಪರಿಣಾಮಕಾರಿಯಾಗಬಲ್ಲದು ಎಂಬ ಪರೀಕ್ಷಾಲಯಗಳ ವರದಿಯ ಹಿನ್ನೆಲೆಯಲ್ಲಿ, ಈ ಔಷಧದ ದೊಡ್ಡ ರಫ್ತುದಾರನಾದ ಭಾರತ ರಫ್ತಿಗೆ ನಿಷೇಧ ಹೇರಿತ್ತು. ಆದರೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿ ಅವರಿಗೆ ಕರೆ ಮಾಡಿ ರಫ್ತು ತೆರವುಗೊಳಿಸದೆ ಇದ್ದರೆ ಪ್ರತೀಕಾರದ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ರಫ್ತನ್ನು ಭಾಗಶಃ ತೆರವುಗೊಳಿಸಿತ್ತು. ಈಗ ಇಲ್ಲಿನ ನಿರ್ಲಕ್ಷಿತ ಸಮುದಾಯ ನಮ್ಮ ದೇಶದ ಉಳ್ಳ ಸಮುದಾಯದ ಜನರ ಜೊತೆಗಷ್ಟೇ ಸ್ಪರ್ಧಿಸದೆ, ಜಾಗತಿಕವಾಗಿ ಅತಿ ಹೆಚ್ಚು ಸಂಪನ್ಮೂಲ ಇರುವ ದೇಶಗಳ ನಾಗರಿಕರ ಜೊತೆಗೂ ಚಿಕಿತ್ಸೆಗೆ ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಗಬಹುದೇ ಎಂಬ ಪ್ರಶ್ನೆಯೂ ಮೂಡುತ್ತದೆ.

ಕೆಲವು ದಿನಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳ ಮತ್ತು ಅಸಹ್ಯದ ಜಾತಿ ನಿಂದನೆಗಳ ಮಾದರಿಯನ್ನು ಗಮನಿಸಿದರೆ ಮೇಲಿನ ಆತಂಕಗಳು ನಿಜವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮಾರ್ಚ್ 20ರಂದು ದ ಕ್ವಿಂಟ್ ಅಂತರ್ಜಾಲ ಪತ್ರಿಕೆ ಪ್ರಕಟಿಸಿದ್ದ ಲೇಖನದಲ್ಲಿ ಭಾರತದ ಉಚ್ಛ ಜಾತಿ-ಸಮುದಾಯಗಳಿಗೆ ಸೇರಿದ ಹಲವು ಜನಗಳಲ್ಲಿ ಇರುವ ಅಸಹ್ಯ ಭಾವನೆಯ ಉದಾಹರಣೆಯಾಗಿ ಪ್ರತಿಮಾ ಶರ್ಮ ಎಂಬುವವರ ಒಂದು ಟ್ವೀಟ್‍ಅನ್ನು ಉದಾಹರಿಸಿತ್ತು. ಮೀಸಲಾತಿಗೆ ಕೊರೊನ ಸೋಂಕನ್ನು ತಳುಕು ಹಾಕಿ ವಿಷ ಕಕ್ಕಿ ಹಿಂದಿಯಲ್ಲಿ ಬರೆದಿದ್ದ ಆ ಟ್ವೀಟ್ “ಜಾತಿ ಆಧಾರಿತ ಮೀಸಲಾತಿಯ ಫಲಾನುಭವಿಗಳಾದ ಎಸ್‍ಸಿ, ಎಸ್‍ಟಿ ಜನಗಳಿಗೆ ಮೊದಲು ಕೊರೊನ ಸೋಂಕು ತಗುಲಬೇಕು” ಎಂದಿತ್ತು. ಈ ಸಮಾಜವನ್ನು ಹತ್ತಿರದಿಂದ ನೋಡಿರುವ ಮತ್ತು ಇದರ ಭಾಗವಾಗಿ ಬದುಕಿರುವ ಯಾರೂ ಇದನ್ನು, ಯಾವುದೋ ಒಂದು ಪ್ರತ್ಯೇಕ ವ್ಯಕ್ತಿಯ ದ್ವೇಷ ಎಂದು ಕಡೆಗಣಿಸುವುದಿಲ್ಲ. ನಮ್ಮ ಸುತ್ತ ಮುತ್ತ ಇಂಥವು ಯಥೇಚ್ಛವಾಗಿ ಇದು ಕಾಣಸಿಗುತ್ತದೆ.

ಇದು ಹಿಂದುಳಿದ ಜಾತಿಗಳ ಪ್ರಶ್ನೆಯಾದರೆ, ದೇಶದಾದ್ಯಂತ ಹೆಚ್ಚಾಗಿ ಒಂದು ಪಕ್ಷದ ಮುಖಂಡರು ತಮ್ಮ ರಾಜಕೀಯ ಅವಕಾಶಕ್ಕೋಸ್ಕರ ಕೊರೊನ ಸೋಂಕನ್ನು ಮುಸ್ಲಿಂ ಧರ್ಮಕ್ಕೆ ತಳುಕು ಹಾಕುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಕರ್ನಾಟಕದ ಮಟ್ಟಿಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರೇಣುಕಾಚಾರ್ಯ (ಇನ್ನೂ ಹಲವರು ಇದ್ದಾರೆ) ಸುಳ್ಳು ಮಾಹಿತಿಗಳನ್ನು ನೀಡಿ ಇಂತಹ ದ್ವೇಷವನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿಸಲು ಪ್ರಯತ್ನ ಪಟ್ಟಿದ್ದಾರೆ.

ಇದು ಈಗಾಗಲೇ ಸಾಮಾನ್ಯ ಜನರನ್ನು ತಲುಪಿ, ಮುಸ್ಲಿಮರು ಬೇಕಂತಲೇ ಕೊರೊನ ಹರಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಸ್ಲಿಮರ ಜೊತೆಗೆ ವ್ಯವಹಾರ ಮಾಡಬೇಡಿ, ಅವರ ಅಂಗಡಿಗಳಲ್ಲಿ ತರಕಾರಿ ದಿನನಿತ್ಯದ ಸಾಮಾನುಗಳನ್ನು ಖರೀದಿಸಬೇಡಿ ಎಂಬ ಸಾಮಾಜಿಕ ಬಹಿಷ್ಕಾರದ ಕರೆಯಿಂದ ಹಿಡಿದು, ಬಡ ಕಾರ್ಮಿಕರಿಗೆ ಪರಿಹಾರ ಸಾಮಗ್ರಿ ಒದಗಿಸುತ್ತಿದ್ದಾಗ ಸ್ವರಾಜ್ ಅಭಿಯಾನದ ಸಾಮಾಜಿಕ ಕಾರ್ಯಕರ್ತೆ ಜರೀನ್ ತಾಜ್ ಅವರ ಮೇಲೆ ಹಲ್ಲೆ ನಡೆಸಿದಂತಹ ಘಟನೆಗಳು ದೇಶದೆಲ್ಲೆಡೆ ಹೆಚ್ಚಾಗಿವೆ. ಉತ್ತರ ಪ್ರದೇಶದಲ್ಲಿಯೇ ಮುಸ್ಲಿಂ ವ್ಯಕ್ತಿಯೊಬ್ಬ ಉಗಿದು ಕೊರೊನ ಹರಡಲು ಪ್ರಯತ್ನಿಸಿದ ಎಂಬ ಸುಳ್ಳು ಸುದ್ದಿಯನ್ನು ಹರಡಲು ಪ್ರಯತ್ನಿಸುತ್ತಿದ್ದ ಮೂವರು ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನ ಸಮಯದಲ್ಲಿ ಲಾಕ್‍ಡೌನ್ ಕಾನೂನು ಸುವ್ಯವಸ್ಥೆ, ಪರಿಹಾರ ಸಾಮಗ್ರಿ ಪೂರೈಕೆ ಇತ್ಯಾದಿ ಕೆಲಸಗಳಲ್ಲಿ ನಿರತರಾಗಿರುವ ಪೊಲೀಸರಿಗೆ ಹೆಚ್ಚುವರಿ ಸಮಸ್ಯೆಯಾಗಿ ಈ ಅನಗತ್ಯ ಸಾಮಾಜಿಕ ಬಹಿಷ್ಕಾರದ ಘಟನೆಗಳು ಎದುರಾಗಿವೆ. ಸುಳ್ಳು ಸುದ್ದಿಗಳಿಗೆ ಬಲಿಯಾಗಿ ಒಂದು ಸಮುದಾಯದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಲು, ಮತ್ತೊಂದು ಬಹುಸಂಖ್ಯಾತ ಸಮುದಾಯ ಬೀದಿಗೆ ಇಳಿದು ನಿಜವಾಗಿ ಬೇಕಿದ್ದ ಸಾಮಾಜಿಕ ಅಂತರವನ್ನು ಮುರಿಯುವುದು ಕೊರೊನದಷ್ಟೇ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಇನ್ನು ಕೊರೊನ ಸೋಂಕಿಗೆ ಒಳಗಾಗಿರುವ ಸಂಖ್ಯೆಯಲ್ಲಿ ಒಂದು ಸಮುದಾಯದ ಸಂಖ್ಯೆ ಹೆಚ್ಚಿದೆ ಎಂಬ ಮತ್ತದೇ ಪೂರ್ವಗ್ರಹದ ವ್ಯಾಖ್ಯಾನ, ಮುಂದೆ ಅಗತ್ಯವಾಗುವ ಚಿಕಿತ್ಸೆಯಲ್ಲಿಯೂ ಕಾಣಿಸಿಕೊಳ್ಳುವುದಿಲ್ಲವೇ?

ಇಂತಹುವೇ ಪೂರ್ವಾಗ್ರಹ ಸಮಸ್ಯೆಗಳನ್ನು ಎದುರಿಸುವ ತೃತೀಯಲಿಂಗಿಗಳು, ಎಲ್‍ಜಿಬಿಟಿ ಸಮುದಾಯ, ನಗರಗಳ ಸ್ಲಂಗಳಲ್ಲಿ ವಾಸಿಸುವ ಅವಕಾಶ ವಂಚಿತರು ಹೀಗೆ ವಿವಿಧ ಕಡೆಗಣಿತ ಸಮುದಾಯಗಳಿಗೆ ಕೊರೊನ ಸೋಂಕು ಉಲ್ಬಣವಾದ ಸನ್ನಿವೇಶದಲ್ಲಿ ಅಗತ್ಯ ನೆರವು ಸಮಾನವಾಗಿ ಸಿಗುತ್ತದೆಯೇ?

ವಿಶ್ವದಾದ್ಯಂತ ಕೆಲವು ದೇಶಗಳಲ್ಲಿ ನಿರ್ದಿಷ್ಟ ಜನಾಂಗ ಮತ್ತು ಸಮುದಾಯಗಳ ವಿರುದ್ಧ ಪೂರ್ವಾಗ್ರಹಪೀಡಿತರಾಗಿ ಕೋವಿಡ್-19 ಪರೀಕ್ಷೆಗಳನ್ನು ನಡೆಸುವುದರಿಂದ ಹಿಡಿದು ಚಿಕಿತ್ಸೆ ನೀಡುವವರೆಗೆ ತಾರತಮ್ಯ ಎಸಗಿರುವ ವರದಿಗಳು ಬಂದಿವೆ. ಅಮೆರಿಕಾದ ವಿಸ್ಕೊಂನ್ಸಿನ್ ರಾಜ್ಯದ ಮಿಲ್ವಾಕಿ ಎಂಬ ಊರಿನ ಜನಸಂಖ್ಯೆಯಲ್ಲಿ 26% ಜನ ಆಫ್ರಿಕನ್ ಅಮೆರಿಕನ್ನರು. ಮಿಚಿಗನ್‍ನಲ್ಲಿ 14% ಆಫ್ರಿಕನ್ ಅಮೆರಿಕನ್ನರು. ಆದರೆ ಅಲ್ಲಿ ಕೊರೊನ ಸೋಂಕಿನಿಂದ ಮೃತರಾದವರಲ್ಲಿ ಹೆಚ್ಚು ಶೇಕಡಾ ಆಫ್ರಿಕನ್ ಅಮೆರಿಕನ್ನರು ಇದ್ದಾರೆ ಎನ್ನುವುದನ್ನು ಪ್ರಾಥಮಿಕ ಮಾಹಿತಿ ತೋರಿಸುತ್ತದೆ ಎಂದು ಅಮೇರಿಕಾದ ಅಂತರ್ಜಾಲ ಸುದ್ದಿ ಸಂಸ್ಥೆ ಪ್ರೊಪಬ್ಲಿಕ ವರದಿ ಮಾಡಿದೆ. ಈಗಾಗಲೇ ಇರುವ ಜನಾಂಗೀಯ ತಾರತಮ್ಯ ಇಲ್ಲಿಯೂ ಕೆಲಸ ಮಾಡಿರಬಹುದೇ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಅಲ್ಲದೆ ಯೂರೋಪ್ ರಾಷ್ಟ್ರಗಳಿಗೆ ವಲಸೆ ಹೋಗಿರುವ ಸಮುದಾಯದ ಜನರನ್ನು ನೋಡಿಕೊಳ್ಳುವಲ್ಲಿ, ಅವರನ್ನು ಸೋಂಕು ಪರೀಕ್ಷೆಗೆ ಒಳಪಡಿಸುವಲ್ಲಿ ಅಲ್ಲಿನ ಸರ್ಕಾರಗಳು ತೋರಿರುವ ತಾರತಮ್ಯದ ಬಗ್ಗೆಯೂ ವರದಿಯಾಗಿದೆ.

ಐತಿಹಾಸಿಕವಾಗಿ ಬದುಕು ನಡೆಸಲು ಅವರಿಗಿರುವ ಸವಾಲುಗಳು ಆಗಲಿ, ಪೌಷ್ಟಿಕಾಂಶಗಳ ಕೊರತೆಯಿಂದಾಗಿ ಅವರ ದೈಹಿಕ ಬೆಳವಣಿಗೆ ಕುಂಠಿತವಾಗಿರುವುದಾಗಲೀ, ಉತ್ತಮ ಗಾಳಿ, ನೀರು ಆಹಾರ ವಂಚಿತರಾಗಿ ಅವರ ರೋಗ ನಿರೋಧಕ ಶಕ್ತಿ ಕುಂದಿರುವ ವಾಸ್ತವಗಾಗಲಿ, ಅವರಿಗೆ ಸಿಗದ ಗಳಿಕೆ- ಸೌಲಭ್ಯಗಳ ಕಾರಣದಿಂದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಧರ್ಮದ ಬಡಜನರಲ್ಲಿ ಸಾಂಕ್ರಾಮಿಕವನ್ನು ಗುರುತಿಸುವುದರಿಂದ ಹಿಡಿದು, ಒಂದು ಪಕ್ಷ ಅದು ಕಂಡುಬಂದರೆ, ನಿಭಾಯಿಸುವ ಪ್ರಾಥಮಿಕ ಆರೈಕೆಯಾದ ಮನೆಮಂದಿಯಿಂದ ಪ್ರತ್ಯೇಕಗೊಳ್ಳುವ ನಿಯಮಕ್ಕೆ ಬೇಕಾಗುವ ಜಾಗ ಕೂಡ ಅವರ ಮನೆಗಳಲ್ಲಿ ಇರುವುದಿಲ್ಲ ಎಂಬ ಸಂಗತಿಯಿಂದ ಹಿಡಿದು ಸವಾರ್ಂಗೀಣವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಅವಕಾಶ ವಂಚಿತರಾದ ಇವರು ಚಿಕಿತ್ಸೆಯ ಸಮಯದಲ್ಲಿಯೂ ಪೂರ್ವಗ್ರಹಗಳನ್ನು ಎದುರಿಸಬೇಕಾದ ಸಂದರ್ಭ ನಮ್ಮ ಮುಂದೆ ದಟ್ಟವಾಗಿದೆ ಎಂಬ ಅಂಶ ನಮ್ಮನ್ನೆಲ್ಲಾ ತಲೆತಗ್ಗಿಸುವಂತೆ ಮಾಡಬೇಕು.

ಸಾಮಾಜಿಕ ಅಂತರದ ಸವಲತ್ತು ಪಡೆಯಬಹುದಾದ ನಮ್ಮೆಲ್ಲರಿಗೆ ಎಚ್ಚರಿಕೆ ಮೂಡಿ, ಸಾಂಕ್ರಾಮಿಕ ಸಮಯದಲ್ಲಿ ಅದನ್ನು ಪಡೆಯಲು ವಂಚಿತರಾದವರು ತಲೆತಲಾಂತರದಿಂದ ಅದನ್ನು ಅನಾವಶ್ಯಕವಾಗಿ ಅನುಭವಿಸಿ ನೊಂದಿದ್ದಾರೆ ಎಂಬ ಸಣ್ಣ ತಿಳುವಳಿಕೆಯನ್ನು ಮೂಡಿಸಿಕೊಂಡು ಎಚ್ಚರಿಕೆಯಿಂದ, ಸಂವೇದನೆಯಿಂದ ಮತ್ತು ಸೂಕ್ಷ್ಮತೆಯಿಂದ ಬದುಕುವುದನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...