ಪ್ರತಿಪಕ್ಷಗಳೊಂದಿಗಿನ ಮಾತುಕತೆಯ ನಂತರ ಸಂಸತ್ತಿನಲ್ಲಿ ಸುಮಾರು 15 ಗಂಟೆಗಳ ಕಾಲ ರೈತರ ವಿಷಯ ಚರ್ಚಿಸಲಾಗುತ್ತಿದೆ. ದೆಹಲಿಯ ಗಡಿಯಲ್ಲಿ ರೈತರ ಭಾರಿ ಆಂದೋಲನಕ್ಕೆ ಕಾರಣವಾಗಿರುವ ವಿವಾದಾತ್ಮಕ ಕಾನೂನುಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಿನ ನಿಲುವನ್ನು ವ್ಯಕ್ತಪಡಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು. “ಬ್ರಿಟಿಷರು ಕೂಡ ಒಮ್ಮೆ ಕೃಷಿ ಕಾನೂನನ್ನು ಹಿಂತೆಗೆದುಕೊಂಡಿದ್ದರು” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದರು.
ಪ್ರತಿಪಕ್ಷಗಳೊಂದಿಗಿನ ಮಾತುಕತೆಯ ನಂತರ ಸಂಸತ್ತಿನಲ್ಲಿ ಸುಮಾರು 15 ಗಂಟೆಗಳ ಕಾಲ ರೈತರ ವಿಷಯ ಚರ್ಚಿಸಲಾಗುತ್ತಿದೆ. ಎರಡು ದಿನಗಳ ಕಾಲ ಪ್ರಶ್ನೋತ್ತರ ಅವಧಿಯನ್ನು ಅಮಾನತುಗೊಳಿಸಿರುವ ರಾಜ್ಯಸಭೆಯಲ್ಲಿ ಈಗ ಈ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ: ತಿರುಗಿಬಿದ್ದ ಕನ್ನಡ ಚಿತ್ರರಂಗ
“ಜನವರಿ 26 ರಿಂದ ಕಾಣೆಯಾದವರನ್ನು” ಹುಡುಕಲು ಸಮಿತಿಯನ್ನು ರಚಿಸುವಂತೆ ಪಿಎಂ ಮೋದಿಯವರನ್ನು ಅಜಾದ್ ಕೇಳಿಕೊಂಡರು. ಗಣರಾಜ್ಯೋತ್ಸವದಂದು ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
16 ಕ್ಕೂ ಹೆಚ್ಚು ವಿರೋಧ ಪಕ್ಷಗಳು ರೈತ ಪ್ರತಿಭಟನೆ ಕುರಿತು ಐದು ಗಂಟೆಗಳ ಸ್ವತಂತ್ರ ಚರ್ಚೆಗೆ ಒತ್ತಾಯಿಸಿದ್ದವು, ಸ್ವತಂತ್ರ ಚರ್ಚೆಯ ಬದಲು ಅದನ್ನು ಒಟ್ಟು 15 ತಾಸುಗಳಿಗೆ ಹೆಚ್ಚಿಸಲು ಸರ್ಕಾರ ಒಪ್ಪಿಕೊಂಡಿತು.
ಗಾಜಿಪುರದ ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿನ ಬೃಹತ್ ಭದ್ರತಾ ವ್ಯವಸ್ಥೆಗಳನ್ನು ಉಲ್ಲೇಖಿಸಿದ ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್, “ಗಾಜಿಪುರದಲ್ಲಿರುವ ಭದ್ರತಾ ವ್ಯವಸ್ಥೆ ಪಾಕಿಸ್ತಾನ ಗಡಿಯಲ್ಲಿಯೂ ಇಲ್ಲ. ನಾನು ಪಾಕಿಸ್ತಾನ ಗಡಿಯನ್ನು ನೋಡಿದ್ದೇನೆ” ಎಂದರು.
ಇದನ್ನೂ ಓದಿ: ಜಗತ್ತಿನ ಸರ್ವಾಧಿಕರಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ
ಕಳೆದ ವರ್ಷ ಸಂಸತ್ತಿನಲ್ಲಿ ಕೃಷಿ ಮಸೂದೆಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದ ವಿರೋಧ ಪಕ್ಷಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಸೂದೆಗಳಿಗೆ ಸಹಿ ಮಾಡದಂತೆ ಮನವಿ ಮಾಡಿದ್ದವು. ಮಸೂದೆಗಳನ್ನು ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅಂಗೀಕರಿಸಲಾಗಿದೆ ಎಂದು ಅವು ಆರೋಪಿಸಿದ್ದವು. ಆದಾಗ್ಯೂ, ರಾಷ್ಟ್ರಪತಿ ಈ ಮೂರು ಮಸೂದೆಗಳಿಗೆ ತಮ್ಮ ಒಪ್ಪಿಗೆಯನ್ನು ನೀಡಿದ್ದರು.
ಹೊಸ ಕಾನೂನುಗಳು ಖಾತರಿಪಡಿಸಿದ ಕನಿಷ್ಟ ಗಳಿಕೆಯನ್ನು ಕಿತ್ತುಕೊಳ್ಳುತ್ತವೆ ಮತ್ತು ದೊಡ್ಡ ಉದ್ಯಮಗಳಿಂದ ಶೋಷಣೆಗೆ ಅವಕಾಶ ಮಾಡಿಕೊಡುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ ಹನ್ನೊಂದು ಸುತ್ತಿನ ಮಾತುಕತೆ ನಡೆದರೂ ಯಾವುದೇ ಪ್ರಗತಿಯಾಗಿಲ್ಲ. 18 ತಿಂಗಳ ಕಾಲ ಕಾನೂನುಗಳನ್ನು ಸ್ಥಗಿತಗೊಳಿಸುವ ಕೇಂದ್ರದ ಕೊನೆಯ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ನೀವು ಸುಳ್ಳು ಹೇಳುವ ವಿಧಾನ ನನಗೆ ಇಷ್ಟ: ಕಂಗನಾಗೆ ಕುನಾಲ್ ವ್ಯಂಗ್ಯ


