Homeಅಂತರಾಷ್ಟ್ರೀಯಟರ್ಕಿ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರೀಕರಣದ ಕರಿನೆರಳು

ಟರ್ಕಿ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರೀಕರಣದ ಕರಿನೆರಳು

- Advertisement -
- Advertisement -

14ನೇ ಮೇ 2023ರಂದು ನಡೆದ ಸಾರ್ವತ್ರಿಕ ಚುನಾವಣೆಯು ಟರ್ಕಿಯ ರಾಜಕೀಯವನ್ನೇ ಬದಲಿಸುವ ಮಹತ್ವದ ಕಾಲಘಟ್ಟವಾಗಿದೆ. ಏಕೆಂದರೆ ಹಿಂದೆ ಚಾಲ್ತಿಯಲ್ಲಿದ್ದ ಸಂಸತ್ತು ಮಾದರಿಯಿಂದ ಅಧ್ಯಕ್ಷೀಯ ವ್ಯವಸ್ಥೆಗೆ ಹೊರಳಿಕೊಂಡ ನಂತರ ಟರ್ಕಿಯಲ್ಲಿ ನಡೆದಿರುವ ಎರಡನೇ ಚುನಾವಣೆ ಇದಾಗಿದೆ. ಈ ಬದಲಾವಣೆಯು ಸರ್ಕಾರದೊಳಗಿನ ಅಧಿಕಾರ ಕೇಂದ್ರೀಕರಣ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.

ಇತ್ತೀಚಿನ ಚುನಾವಣೆಯಲ್ಲಿ ರಿಸೆಪ್ ತಯ್ಯಿಪ್ ಎರ್ಡೋಗನ್ ಅವರು ಅಧ್ಯಕ್ಷರಾಗಿ ಚುನಾಯಿತರಾದರು. ಸಂಸದೀಯ ಚುನಾವಣೆಗಳಲ್ಲಿ ಅವರ ಪಕ್ಷವಾದ ಜಸ್ಟೀಸ್ ಮತ್ತು ಡೆವಲಪ್ಮೆಂಟ್ ಪಕ್ಷವು (ಎಕೆಪಿ) ದೊಡ್ಡ ನಷ್ಟ ಅನುಭವಿಸಿತ್ತು. ಯಾವುದೇ ಪಕ್ಷವು ಬಹುಮತ ಪಡೆಯದಿದ್ದರೂ, ಎಕೆಪಿ ಪಕ್ಷವು ಇತರೆ ಮೂರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೂ 21ನೇ ಶತಮಾನದಲ್ಲಿ ಚುನಾವಣಾ ಕಣದಲ್ಲಿ ಎಕೆಪಿ ಪಕ್ಷವು ತೋರಿರುವ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ.

ಈ ಹಿಂದೆ ಎಕೆಪಿ ಪಕ್ಷವು ಕೇವಲ ಒಂದು ರಾಜಕೀಯ ಪಕ್ಷದೊಂದಿಗೆ ಕೂಡಿ ಸರ್ಕಾರ ರಚಿಸಿತ್ತು ಆದರೆ, ಇಂದಿನ ಪರಿಸ್ಥಿತಿ ಇನ್ನಷ್ಟು ದುಸ್ತರವೆನಿಸಿದೆ. ಇರುವ ಒಟ್ಟು 600 ಕ್ಷೇತ್ರಗಳ ಪೈಕಿ 267 ರಲ್ಲಿ ಮಾತ್ರವೇ ಎಕೆಪಿ ಪಕ್ಷ ಗೆಲುವು ಸಾಧಿಸಿದೆ. ಅಂದರೆ, ಕಳೆದ ಚುನಾವಣೆಯಲ್ಲಿ ಎಕೆಪಿ ಪಕ್ಷ ಗೆದ್ದ ಕ್ಷೇತ್ರಗಳಿಗಿಂತ 28 ಕ್ಷೇತ್ರಗಳು ಕಡಿಮೆ.

ಪ್ರಮುಖ ವಿರೋಧ ಪಕ್ಷವಾದ ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (ಸಿಎಚ್‌ಪಿ) ಕಳೆದ ಬಾರಿಗಿಂತ 23 ಹೆಚ್ಚುವರಿ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಕಾಂಗ್ರೆಸ್ ಪಕ್ಷದೊಂದಿಗೆ ಹೋಲಿಸಲಾಗುವ ಸಿಎಚ್‌ಪಿ ಪಕ್ಷವು ಟರ್ಕಿ ದೇಶದ ರಾಜಕೀಯ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳು

2023ರ ಮೇ 14 ರಂದು ಮೊದಲ ಹಂತದ ಮತದಾನ ನಡೆದಾಗ ನಾಲ್ಕು ಜನ ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎರ್ಡೋಗನ್ ಶೇ.49.52ರಷ್ಟು ಮತಗಳನ್ನು ಪಡೆದರೆ, ಎದುರಾಳಿ ಕೆಮಾಲ್ ಕಿಲಿಡಾರೊಗ್ಲು ಶೇ.44.88 ಮತಗಳಿಗೆ ಸೀಮಿತಗೊಂಡಿದ್ದರು. ಇನ್ನು ತೀವ್ರ-ಬಲಪಂಥೀಯ ಅಭ್ಯರ್ಥಿಗಳಾಗಿದ್ದ ಮುಹರ್ರ್‍ಎಮ್ ಇನ್ಸ್ ಮತ್ತು ಸಿನಾನ್ ಓಗಾನ್ ಸಹ ಕಣದಲ್ಲಿದ್ದರು. ಅದರಲ್ಲಿ ಸಿನಾನ್ ಓಗಾನ್ 5.2% ಮತ ಗಳಿಸಿ, ಎರ್ಡೋಗನ್‌ರ ಮತ ಪಾಲನ್ನು ಕಡಿತಗೊಳಿಸಿದರು. ಒಟ್ಟಿನಲ್ಲಿ ಯಾರೊಬ್ಬರೂ ಸಹ ಶೇ.50 ರಷ್ಟು ಮತಗಳನ್ನು ಪಡೆಯಲು ವಿಫಲವಾದ್ದರಿಂದ ಟರ್ಕಿಯ ಅಧ್ಯಕ್ಷೀಯ ಚುನಾವಣೆಯು ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಮ್ಮೆ ಚುನಾವಣೆ ನಡೆಸಲಾಯಿತು. ಇದು ರಾಷ್ಟ್ರದ ಗಮನ ಸೆಳೆದು, ಜನರ ಬದಲಾವಣೆಯ ಬಯಕೆ ಮತ್ತು ರಾಜಕೀಯ ಪಕ್ಷಗಳ ವೈವಿಧ್ಯಮಯ ಸಿದ್ದಾಂತಗಳು ಕಣದಲ್ಲಿದ್ದಿದ್ದನ್ನು ಪ್ರತಿನಿಧಿಸಿತ್ತು. ಎರಡನೇ ಸುತ್ತಿನ ಚುನಾವಣೆಯಲ್ಲಿ ಎರ್ಡೋಗನ್ 52% ಮತಗಳನ್ನು ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೇರಿದರೆ, ಎದುರಾಳಿ ಕೆಮಾಲ್ ಕಿಲಿಡಾರೊಗ್ಲು 48% ಮತಗಳೊಂದಿಗೆ ಸೋಲೊಪ್ಪಿಕೊಂಡರು.

ಸಂಸತ್ತಿನ ಚುನಾವಣೆಯು ವೈವಿಧ್ಯಮಯ ವಿಷಯಗಳ ಕುರಿತು ಚರ್ಚೆಗೆ ಕಾರಣವಾಗಿತ್ತು. ಆದರೆ ಅಧ್ಯಕ್ಷೀಯ ಸ್ಪರ್ಧೆಯು ರಾಷ್ಟ್ರೀಯತೆಯ ಸುತ್ತಲಿನ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು. ಚುನಾವಣಾ ಪ್ರಚಾರಗಳು ಹೆಚ್ಚಾಗಿ ಅಭ್ಯರ್ಥಿಗಳ ವ್ಯಕ್ತಿತ್ವ – ವರ್ಚಸ್ಸು, ರಾಷ್ಟ್ರೀಯತೆ, ಭಯೋತ್ಪಾದನೆ ಮತ್ತು ಟರ್ಕಿಶ್ ಹೆಮ್ಮೆಯ ವಿಷಯಗಳ ಮೇಲೆಯೇ ಕೇಂದ್ರೀಕೃತವಾದ್ದವು.

ಟರ್ಕಿಯ ಎರಡು ವಿಭಿನ್ನ ವಿಚಾರಧಾರೆಗಳು

ಟರ್ಕಿಯು ಎರಡು ವಿಭಿನ್ನ ರಾಷ್ಟ್ರೀಯತಾವಾದಿ ವಿಚಾರಧಾರೆಗಳಿಂದ ನಿರೂಪಿಸಲ್ಪಟ್ಟಿದೆ. ಮೊದಲನೆಯದು ಮುಸ್ತಫಾ ಕೆಮಾಲ್ ಅಟಾತುರ್ಕ್‌ನಿಂದ ಪ್ರೇರಿತವಾದದ್ದು; ಗಣರಾಜ್ಯದ ತತ್ವಗಳು, ಜಾತ್ಯತೀತತೆ, ಪ್ರಗತಿಪರತೆ, ಆಡಳಿತ ಸುಧಾರಣೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಆಗುಹೋಗುಗಳ ಮೇಲೆ ಕೇಂದ್ರಿತವಾದ ತತ್ವಗಳ ಆಧಾರದ ಮೇಲೆ ಆಧುನಿಕ ಜಾತ್ಯತೀತ ರಾಷ್ಟ್ರವನ್ನು ನಿರ್ಮಾಣ ಮಾಡುವ ಸಿದ್ಧಾಂತದ ತಳಹದಿಯನ್ನು ಹೊಂದಿದೆ. ಇದನ್ನು ಕೆಮಾಲಿಸಂ ಅಥವಾ ಅಟಾತುರ್ಕಿಸಂ ಎಂದು ಕರೆಯಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಂದು ಸಿದ್ಧಾಂತವು ಟರ್ಕಿಯನ್ನು ಪುರಾತನ ನಾಗರಿಕತೆಯ ಕೇಂದ್ರವೆಂದು ಬಣ್ಣಿಸುತ್ತದೆ. ಅದು ಟರ್ಕಿಯು ತನ್ನ ಹಿಂದಿನ ಗತವೈಭವಕ್ಕೆ ಮರಳಬೇಕೆಂದು ಬಯಸುತ್ತದೆ. ಇದನ್ನು ಒಟ್ಟೋಮನಿಸಂ ಎಂದು ಕರೆಯಲಾಗುತ್ತದೆ. ಈ ಸಿದ್ಧಾಂತವು ಇಸ್ಲಾಮಿಕ್ ಕ್ಯಾಲಿಫೇಟ್ ಮಾದರಿಯ ಅಭಿವೃದ್ದಿಯನ್ನು ಬೆಂಬಲಿಸುತ್ತದೆ ಮತ್ತು ಇದರ ಅನುಯಾಯಿಗಳು ಸಂಪ್ರದಾಯವಾದಿಗಳಾಗಿದ್ದು ಹಾಗೂ ಧಾರ್ಮಿಕ ಮೂಲಭೂತವಾದವನ್ನು ಅಪ್ಪಿಕೊಳ್ಳುತ್ತಾರೆ.

ಚುನಾವಣೆಯಲ್ಲಿ ಚರ್ಚೆಯಾದ ಪ್ರಮುಖ ಸಮಸ್ಯೆಗಳು

ಸಿರಿಯಾ-ಟರ್ಕಿಯಲ್ಲಿ ಕಳೆದ ವರ್ಷ ಘಟಿಸಿದ, 50,000ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಭೂಕಂಪವನ್ನು ನಿಭಾಯಿಸಿದ ರೀತಿಯು ಈ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿತ್ತು. ಭೂಕಂಪದಂತಹ ತುರ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದ ಕಾರಣಕ್ಕೆ ಎರ್ಡೋಗನ್ ಕಟು ಟೀಕೆಗೆ ಗುರಿಯಾಗಬೇಕಾಯಿತು. ತನ್ನ ಅಧಿಕಾರಾವಧಿಯಲ್ಲಿ ಎರ್ಡೋಗನ್ ವಿಪತ್ತು ನಿರ್ವಹಣೆಗೆ ನೀಡಬೇಕಿದ್ದ ಹಣಕಾಸನ್ನು ಕಡಿತಗೊಳಿಸಿ, ಅದರ ಬದಲಿಗೆ ಸರ್ಕಾರೇತರ ಸಂಸ್ಥೆಗಳಿಗೆ ಮಣೆಹಾಕಿದರು. ಇದು ಭೂಕಂಪದ ಸಂದರ್ಭದಲ್ಲಿ ಅಪಾರ ತೊಂದರೆಗೆ ಎಡೆ ಮಾಡಿಕೊಟ್ಟಿತು. 1999ರಲ್ಲಿ ನಡೆದಿದ್ದ ಭೂಕಂಪದ ಸಂದರ್ಭದಲ್ಲಿ ಸಾವಿರಾರು ಜನರು ಅಸು ನೀಗಿದ್ದರು. ಆನಂತರ ನಡೆದ 2002ರ ಚುನಾವಣೆಯಲ್ಲಿ ಎರ್ಡೋಗನ್ ಟರ್ಕಿಯ ನಾಯಕರಾಗಿ ಹೊರಹೊಮ್ಮಿದ್ದರು. ಆ ವರ್ಷದ ಭೂಕಂಪನದ ನಂತರ ಎರ್ಡೋಗನ್ ರಾಷ್ಟ್ರೀಯ ವಿಪತ್ತುಗಳನ್ನು ತಡೆಗಟ್ಟಲು ಸಮರ್ಥ ಕೇಂದ್ರೀಕೃತ ನಾಯಕತ್ವವಿರಬೇಕು ಎಂದು ಪ್ರಚಾರ ಮಾಡಿದ್ದಲ್ಲದೆ, ನೈಸರ್ಗಿಕ ವಿಕೋಪಗಳಿಗೆ ತುರ್ತಾಗಿ ಸ್ಪಂದಿಸುವ ಮತ್ತು ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದ್ದರು. ಅಂತಿಮವಾಗಿ ಸಿಎಚ್‌ಪಿ ವಿರುದ್ಧ 363 ಸೀಟುಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಇದನ್ನೂ ಓದಿ: ಸುಡಾನ್ ಬಿಕ್ಕಟ್ಟಿನ ಮೂಲವೇನು?

ಈ ಚುನಾವಣೆಯಲ್ಲಿ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮತ್ತು ಭಯೋತ್ಪಾದನೆಯ ಬಗ್ಗೆ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದವು. ಅಧ್ಯಕ್ಷೀಯ ಸ್ಪರ್ಧೆಯು ಟರ್ಕಿಶ್ ರಾಷ್ಟ್ರೀಯತೆಯ ಎರಡು ವಿಭಿನ್ನ ದೃಷ್ಟಿಕೋನಗಳ ಮೇಲೆ ಕೇಂದ್ರೀಕರಿಸಿತು. ಬಹುಪಾಲು ಟರ್ಕಿಯನ್ನರು ಸಿರಿಯನ್ ನಿರಾಶ್ರಿತರು ವಾಪಸ್ ಸಿರಿಯಾಕ್ಕೆ ಮರಳಬೇಕೆಂದು ಬಯಸುತ್ತಾರೆ ಎಂದು ಚುನಾವಣಾ ಸಮೀಕ್ಷೆಗಳು ನುಡಿದಿದ್ದವು. ಹಾಗಾಗಿ ಎಲ್ಲಾ ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಗಳು ನಿರಾಶ್ರಿತರ ವಾಪಸಾತಿಯನ್ನು ಬೆಂಬಲಿಸಿದರು. ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳು ಟರ್ಕಿಯ ಕುರ್ದಿಶ್-ಬಹುಸಂಖ್ಯಾತ ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯ, ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ಸಿರಿಯಾದ ಕುರ್ದಿಶ್-ನಿಯಂತ್ರಿತ ಪ್ರದೇಶಗಳ ಮೇಲೆ ಬಾಂಬ್ ದಾಳಿಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು.

ನಿರ್ದಿಷ್ಟ ಸಮಸ್ಯೆಗಳ ಸಂದರ್ಭದಲ್ಲಿ, ಸಿಎಚ್‌ಪಿ ಪಕ್ಷವು ಎಕೆಪಿ ಪಕ್ಷಕ್ಕಿಂತ ಹೆಚ್ಚೇನೂ ಭಿನ್ನವಾಗಿರುವುದಿಲ್ಲ. ಸಿಎಚ್‌ಪಿ ಪಕ್ಷವು ಸಂಸದೀಯ ಮಾದರಿಯ ಪ್ರಜಾಪ್ರಭುತ್ವಕ್ಕೆ ಮರಳುವ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಮತ್ತು ಎರ್ಡೋಗನ್‌ರವರ ನವ ಉದಾರವಾದಿ ಆರ್ಥಿಕ ನೀತಿಗಳಿಂದ ಒಂದು ಸಣ್ಣ ಹೆಜ್ಜೆ ದೂರ ನಿಲ್ಲುವ ಬಗ್ಗೆ ಪ್ರಚಾರ ಮಾಡಿತು. ಈ ನಡೆಗಳು ಪ್ರಗತಿಪರ ಶಕ್ತಿಗಳಿಗೆ ಸ್ವಲ್ಪ ಆಶಾದಾಯಕವಾಗಿ ತೋರಿದ್ದವು. ಆದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೋಗನ್‌ನ ವಿಜಯ ಮತ್ತು ಸಂಸತ್ತಿನ ಮೇಲೆ ಅವರ ಮುಂದುವರಿದ ಆಳ್ವಿಕೆಯಿಂದಾಗಿ ಆ ಆಶಾವಾದವು ಕರಗಿಹೋಗಿದೆ. ಜಾತ್ಯತೀತತೆ, ಮಹಿಳಾ ಹಕ್ಕುಗಳು ಮತ್ತು ಎಲ್‌ಜಿಬಿಟಿಕ್ಯುಐ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಿಎಚ್‌ಪಿ ಹೆಚ್ಚು ಪ್ರಗತಿಪರ ನಿಲುವನ್ನು ಹೊಂದಿದೆ.

ಪರ್ಯಾಯ ಚಿಂತನೆಗಳ ನೆಲೆ ಕುಗ್ಗುತ್ತಿದೆ

ಟರ್ಕಿಯ ಪ್ರಸ್ತುತ ರಾಜಕೀಯ ಸಂರಚನೆಯು ಭಿನ್ನಾಭಿಪ್ರಾಯಕ್ಕೆ ಬಹಳ ಕಡಿಮೆ ಅವಕಾಶ ನೀಡಿದೆ. ಬಲಪಂಥೀಯರ ಗೆಲುವಿನಿಂದಾಗಿ ಕೇಂದ್ರೀಕರಣ ಮತ್ತು ಸಂಕುಚಿತ ಮನಸ್ಥಿತಿಯ ವಾತಾವರಣ ಆವರಿಸಿಕೊಳ್ಳುತ್ತಿದೆ. ಈ ಚುನಾವಣೆ ಹೆಚ್ಚೆಚ್ಚು ಧ್ರುವೀಕರಣಗೊಂಡಿತ್ತು. ಜನ ಬೆಂಬಲದ ದೃಷ್ಟಿಯಲ್ಲಿ ಚುನಾವಣೆ ಮುಗಿಯುವವರೆಗೂ ಸಮೀಕ್ಷೆಗಳು ಅನಿಶ್ಚಿತವಾಗಿದ್ದವು.

ಹಾಗಾಗಿ ಹಿಂದಿನ ದಿನಗಳಿಗೆ ಮರಳುವುದು ಮಾತ್ರವೇ ಏಕೈಕ ಭರವಸೆಯಾಗಿದೆ. ಅಂದರೆ ಎರ್ಡೋಗನ್ ಪೂರ್ವದ ಮಾದರಿಯ ರಾಜಕೀಯಕ್ಕೆ ಕರೆ ನೀಡುವುದಾಗಿದೆ. ರಾಜಕೀಯ ವಿರೋಧವನ್ನು ದಮನ ಮಾಡುತ್ತಿರುವ ಇಂದಿನ ಒಟ್ಟೊಮೊನಿಸ್ಟ್ ರಾಜಕೀಯಕ್ಕೆ ಕೆಮಾಲಿಸಂ ಮಾತ್ರ ನಿಜವಾದ ಪರ್ಯಾಯವಾಗಿದೆ. ಸಂಸತ್ತಿನ ಚುನಾವಣೆಗಳಲ್ಲಿ ಸಿಎಚ್‌ಪಿ ಪಕ್ಷದ ಉತ್ತಮ ಪ್ರದರ್ಶನವು ಬದಲಾವಣೆಗೆ ಇನ್ನೂ ಅವಕಾಶವಿದೆ ಎಂಬುದನ್ನು ತೋರಿಸುತ್ತದೆ. ಆದರೆ ಆ ಬದಲಾವಣೆಗೆ ತೀವ್ರತರದ ಕ್ರಾಂತಿಕಾರಕ ಚಳವಳಿ ಅಥವಾ ದೀರ್ಘ ಸಮಯವನ್ನು ಬೇಡುತ್ತದೆ. ಅಲ್ಲಿಯವರೆಗೆ, ಎರ್ಡೋಗನ್ ಟರ್ಕಿಶ್ ರಾಜಕೀಯದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ತಮ್ಮ ಕಾರ್ಯಸೂಚಿಯನ್ನು ಮುಂದುವರಿಸುತ್ತಾರೆ.

ಈ ಚುನಾವಣೆಗಳು ಕಳೆದುಹೋದ ಅವಕಾಶವನ್ನು ತೋರಿಸುತ್ತವೆ. ಸಿರಿಯನ್-ಟಿರ್ಕಿಶ್ ಭೂಕಂಪನವನ್ನು ಅತ್ಯಂತ ಕಳಪೆ ರೀತಿಯಲ್ಲಿ ನಿಭಾಯಿಸಿದ್ದರಿಂದ ಎರ್ಡೋಗನ್ ಅವರ ಜನಪ್ರಿಯತೆಯು ಸಾರ್ವಕಾಲಿಕವಾಗಿ ಕುಸಿತಗೊಂಡಿತ್ತು. ಪ್ರತಿಪಕ್ಷಗಳ ಬಲ ಹೆಚ್ಚುತ್ತಿರುವಾಗಲೂ, ಅದು ಇನ್ನೂ ಸಾಕಷ್ಟು ಬಲವಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಕಿಶೋರ್ ಗೋವಿಂದ

ಕನ್ನಡಕ್ಕೆ: ಮುತ್ತುರಾಜು & ಶಶಾಂಕ್ ಎಸ್.ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನಾಸಿಕ್‌ನ...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...