ತಾಲಿಬಾನ್ ಇಂದು ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಘೋಷಿಸಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ. ಅಷ್ಟೇ ಅಲ್ಲದೆ ದೇಶದಲ್ಲಿ ಆಹಾರ ಪೂರೈಕೆಯ ಅಭಾವ ಕಾಡುತ್ತಿದ್ದು, ದೇಶವು ಬಡತನಕ್ಕೆ ಜಾರುತ್ತಿದೆ ಎಂದು ವರದಿ ತಿಳಿಸಿದೆ. ಈ ಹಿನ್ನಲೆಯಲ್ಲಿ ಅಂತರ್‌ರಾಷ್ಟ್ರೀಯ ಮಾನವೀಯ ನೆರವು ಪಡೆಯಲು ಸಹಿಷ್ಣು ಸರ್ಕಾರವನ್ನು ಸ್ಥಾಪಿಸಲು ತಾಲಿಬಾನ್‌ಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಒತ್ತಡವಿದೆ.
ಪ್ರಸ್ತಾಪಿತ ತಾಲಿಬಾನ್ ಸರ್ಕಾರವು ಇರಾನಿನ ನಾಯಕತ್ವದ ಮಾದರಿಯಲ್ಲಿರುತ್ತದೆ ಎಂದು ವರದಿಯಾಗಿದ್ದು, ತಾಲಿಬಾನ್‌ನ ಉನ್ನತ ಧಾರ್ಮಿಕ ನಾಯಕ ಮುಲ್ಲಾ ಹಿಬಾತುಲ್ಲಾ ಅಖುಂನ್‌ಜಾದ ಅಫ್ಘಾನಿಸ್ತಾನದ ಸರ್ವೋಚ್ಚ ಅಧಿಕಾರದ ಪಟ್ಟವನ್ನು ಏರಲಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ತಿಳಿದಿರುವ ತಾಲಿಬಾನ್ ಅಧಿಕಾರಿಗಳ ಪ್ರಕಾರ, ಇಂದಿನ ಶುಕ್ರವಾರದ ಪ್ರಾರ್ಥನೆಯ ನಂತರ ಹೊಸ ಆಡಳಿತವನ್ನು ಘೋಷಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್ ಮುಖಂಡರಿವರು
ಸರ್ಕಾರದ ರಚನೆಯನ್ನು ಅಂತಿಮಗೊಳಿಸಲು, ಹೊಸ ಸರ್ಕಾರದ ಕುರಿತು ಸಮಾಲೋಚನೆ ಮತ್ತು ಚರ್ಚೆಯನ್ನು ಈಗಾಗಲೇ ಮಾಡಲಾಗಿದೆ. ಹೊಸ ರಚನೆಯ ಪ್ರಕಾರ, ದೇಶದ ಅಧ್ಯಕ್ಷರು ಸರ್ವೋಚ್ಚ ನಾಯಕನ ಕೆಳಗೆ ಇರುತ್ತಾರೆ.
ಹೊಸ ಸರ್ಕಾರದಲ್ಲಿ 60 ವರ್ಷದ ಮುಲ್ಲಾ ಅಖುಂನ್‌ಜಾದ ತಾಲಿಬಾನ್ ಸರ್ಕಾರದ ಸರ್ವೋಚ್ಚ ನಾಯಕರಾಗಿರುತ್ತಾರೆ. ಇದು ಇರಾನ್ ನಾಯಕತ್ವದ ಮಾದರಿಯಾಗಿದೆ. ಅಲ್ಲಿ ಸರ್ವೋಚ್ಚ ನಾಯಕನೆ ದೇಶದ ಅತ್ಯುನ್ನತ ನಾಯಕನಾಗಿದ್ದು, ರಾಜಕೀಯ ಮತ್ತು ಧಾರ್ಮಿಕ ನೀತಿಗಳ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರು ದೇಶದ ಅಧ್ಯಕ್ಷರಿಗಿಂತ ಉನ್ನತ ಸ್ಥಾನದಲ್ಲಿದ್ದು, ದೇಶದ ಮಿಲಿಟರಿ, ಸರ್ಕಾರ ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನು ನೇಮಿಸುತ್ತಾರೆ. ದೇಶದ ರಾಜಕೀಯ, ಧಾರ್ಮಿಕ ಮತ್ತು ಸೇನಾ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ತೀರ್ಮಾನವೆ ಅಂತಿಮ.
ಮುಲ್ಲಾ ಅಖುಂನ್‌ಜಾದ ಅವರು ಸರ್ಕಾರದ ನಾಯಕರಾಗಿರುತ್ತಾರೆ ಮತ್ತು ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ತಾಲಿಬಾನ್‌ನ ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾ ಸಮಂಗಾನಿ ಹೇಳಿದ್ದು, ಅಧ್ಯಕ್ಷರು ಅವರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ ಎಂದು ಅವರು ಸೂಚಿಸಿದ್ದಾರೆ. ಮುಲ್ಲಾ ಅಖುಂನ್‌ಜಾದ ಅವರು ತಾಲಿಬಾನ್‌ನ ಉನ್ನತ ಧಾರ್ಮಿಕ ನಾಯಕರಾಗಿದ್ದು, 15 ವರ್ಷಗಳಿಂದ ಬಲೂಚಿಸ್ತಾನ ಪ್ರಾಂತ್ಯದ ಕಚ್ಲಾಕ್ ಪ್ರದೇಶದ ಮಸೀದಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು
ಪಾಕಿಸ್ತಾನದ ಸೆರೆಮನೆಯಲ್ಲಿದ್ದ ತಾಲಿಬಾನ್‌ನ ಸಹ-ಸಂಸ್ಥಾಪಕ ಮತ್ತು ಉಪ ನಾಯಕರಾಗಿರುವ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರು ಕೂಡಾ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.
2013 ರಲ್ಲಿ ನಿಧನರಾದ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಮುಹಮ್ಮದ್ ಒಮರ್ ಅವರ ಪುತ್ರ ಮೊಹಮ್ಮದ್ ಯಾಕೂಬ್ ಮತ್ತು ಇನ್ನೊಬ್ಬ ಉಪನಾಯಕ ಸಿರಾಜುದ್ದೀನ್ ಹಕ್ಕಾನಿ ಸೇರಿದಂತೆ ತಾಲಿಬಾನ್‌ನ ಹಿರಿಯ ನಾಯಕರು ಸರ್ಕಾರದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಹೊಸ ಸರ್ಕಾರದ ಅಡಿಯಲ್ಲಿ, ಗವರ್ನರ್‌ಗಳು ಪ್ರಾಂತ್ಯಗಳನ್ನು ನಿಯಂತ್ರಿಸುತ್ತಾರೆ, ಜಿಲ್ಲಾ ಗವರ್ನರ್‌ಗಳು ತಮ್ಮ ಜಿಲ್ಲೆಗಳ ಉಸ್ತುವಾರಿ ವಹಿಸುತ್ತಾರೆ ಎಂದು ಸಮಂಗಾನಿ ಹೇಳಿದ್ದಾರೆ.
ತಾಲಿಬಾನ್ ಈಗಾಗಲೇ ಪ್ರಾಂತ್ಯಗಳು ಮತ್ತು ಜಿಲ್ಲೆಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಕಮಾಂಡರ್‌ಗಳನ್ನು ನೇಮಿಸಿದೆ. ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ’ ಎಂದರೆ ಅಫ್ಘಾನ್‌ಗೆ ಹೋಗಿ ಎಂದ ಬಿಜೆಪಿ ನಾಯಕ!


