ದೇಶದ ಸಾಮಾಜಿಕ ಮತ್ತು ಜಾತ್ಯತೀತ ನೇಯ್ಗೆಯನ್ನು ಇತ್ತೀಚಿನ ದಶಕಗಳಲ್ಲಿ ಛಿದ್ರಗೊಳಿಸಿದ್ದ ಅಯೋಧ್ಯೆಯ ಬಾಬರಿ ಮಸೀದಿ-ರಾಮಮಂದಿರ ವಿವಾದಕ್ಕೆ ತೆರೆ ಎಳೆದಿದೆ ಸುಪ್ರೀಮ್ ಕೋರ್ಟು.
”1949ರ ಡಿಸೆಂಬರ್ 22-23ರ ನಡುವಣ ರಾತ್ರಿ ಹಿಂದೂ ದೇವತೆಗಳ ಮೂರ್ತಿಗಳನ್ನು ಒಳಪ್ರಾಂಗಣದಲ್ಲಿ ತಂದಿಟ್ಟು ಮಸೀದಿಯನ್ನು ಅಪವಿತ್ರಗೊಳಿಸಲಾಯಿತು. ಆ ಸಂದರ್ಭದಲ್ಲಿ ಮುಸಲ್ಮಾನರನ್ನು ಅಲ್ಲಿಂದ ಹೊರದಬ್ಬಿದ್ದು ಕಾನೂನುಬಾಹಿರವಾಗಿತ್ತು. ಅವರ ಧಾರ್ಮಿಕ ತಾಣವನ್ನು ಅವರ ಕೈ ತಪ್ಪಿಸುವ ಲೆಕ್ಕಾಚಾರದ ಕೃತ್ಯವಾಗಿತ್ತು”.
”ಕ್ರಿಮಿನಲ್ ಪ್ರಕರಣವೊಂದನ್ನು ದಾಖಲು ಮಾಡಿಕೊಂಡ ನಂತರ ರಿಸೀವರ್ ನೇಮಕ ಮಾಡಿ ಒಳಪ್ರಾಂಗಣವನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಹಿಂದೂ ದೇವತಾ ಮೂರ್ತಿಗಳ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ತಕರಾರು ಅರ್ಜಿಗಳ ವಿಚಾರಣೆ ಬಾಕಿ ಇರುವಂತೆಯೇ ಇಡೀ ಮಸೀದಿಯನ್ನು ನೆಲಸಮ ಮಾಡಲಾಯಿತು. ಸಾರ್ವಜನಿಕ ಪೂಜಾ ಸ್ಥಳವನ್ನು ನಾಶ ಮಾಡಿದ ಲೆಕ್ಕಾಚಾರದ ಕೃತ್ಯವದು. 450 ವರ್ಷಗಳ ಹಿಂದೆ ಕಟ್ಟಲಾಗಿದ್ದ ಮಸೀದಿಯೊಂದನ್ನು ಮುಸಲ್ಮಾನರ ಕೈ ತಪ್ಪಿಸಿದ್ದು ತಪ್ಪು” ಎಂದು ನ್ಯಾಯಾಲಯ ನಿಚ್ಚಳವಾಗಿ ಸಾರಿದೆ.
ಈ ಮಾತುಗಳನ್ನು ಹೇಳಿದ ನಂತರವೂ ವಿವಾದಿತ ಜಮೀನನ್ನು ಮಂದಿರ ನಿರ್ಮಾಣಕ್ಕೆ ಮಾತ್ರವೇ ಕೊಡಬೇಕಾಗಿ ಬಂದಿತಲ್ಲ ಅದು ಹೇಗೆ ಎಂಬ ಪ್ರಶ್ನೆಗಳನ್ನು ಸುಪ್ರೀಮ್ ಕೋರ್ಟಿನ ಹಲವು ನಿವೃತ್ತ ನ್ಯಾಯಮೂರ್ತಿಗಳು ಎತ್ತಿದ್ದಾರೆ. ಈ ಸಂದೇಹಕ್ಕೆ ನ್ಯಾಯಾಲಯ 799ನೆಯ ಪ್ಯಾರಾದಲ್ಲಿ ನೀಡಿರುವ ಸಮಾಧಾನ ಹೀಗಿದೆ- ‘ಸಾರ್ವಜನಿಕ ಶಾಂತಿ ಸಾಮರಸ್ಯ ಕಾಪಾಡುವ ಉದ್ದೇಶದಿಂದ 2010ರ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟು ವಿವಾದಿತ ಜಾಗವನ್ನು ಮೂರೂ ಅರ್ಜಿದಾರರಿಗೆ (ಸುನ್ನಿ ವಕ್ಫ್ ಮಂಡಳಿ, ರಾಮಲಲ್ಲಾ ವಿರಾಜಮಾನ್ ಹಾಗೂ ನಿರ್ಮೋಹಿ ಅಖಾಡ) ಹಂಚಿಕೊಟ್ಟಿದೆಯಾದರೂ, ಈ ಪರಿಹಾರ ಕಾರ್ಯಸಾಧ್ಯ ಅಲ್ಲ. ವಿವಾದಿತ ಜಾಗದ ಒಟ್ಟು ವಿಸ್ತೀರ್ಣ ಕೇವಲ 1500 ಚದರ ಗಜಗಳು. ಈ ಜಾಗವನ್ನು ವಿಭಾಗಿಸಿ ಹಂಚಿಕೊಡುವುದರಿಂದ ಯಾರ ಹಿತದ ಸಾಧನೆಯೂ ಆಗುವುದಿಲ್ಲ. ಅಷ್ಟೇ ಅಲ್ಲ, ಇಂತಹ ಕ್ರಮದಿಂದ ಶಾಂತಿ ಸಾಮರಸ್ಯ ಕಾಯಮ್ಮಾಗಿ ನೆಲೆಸುತ್ತದೆಂದು ಹೇಳುವುದು ಸಾಧ್ಯವಿಲ್ಲ’.
ನ್ಯಾಯಾಲಯದ ಮುಂದಿರುವ ನಿರ್ದಿಷ್ಟ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹೊರಗೆ ನಡೆಯುವ ಘಟನಾವಳಿಗಳು ನಮಗೆ ಅಪ್ರಸ್ತುತ. ಕಾಯಿದೆ ಮತ್ತು ಸಂವಿಧಾನವೇ ನಮಗೆ ಪರಮ ಒರೆಗಲ್ಲುಗಳು. ನಮ್ಮ ನ್ಯಾಯ ನಿರ್ಣಯ ಪ್ರಕ್ರಿಯೆ ಈ ಎರಡು ಅಂಶಗಳನ್ನು ಮಾತ್ರವೇ ಆಧರಿಸಿರುತ್ತದೆ ಎಂದು ಸುಪ್ರೀಮ್ ಕೋರ್ಟ್ ನೂರಾರು ಪ್ರಕರಣಗಳಲ್ಲಿ ಸಾರಿರುವುದು ಉಂಟು.
ಆದರೆ ಸುಪ್ರೀಮ್ ಕೋರ್ಟಿನ ನಿಲುವಿಗೆ ಅಲ್ಲಲ್ಲಿ ಬಹುದೊಡ್ಡ ಅಪವಾದಗಳು ಕಾಣಸಿಗುತ್ತವೆ. ಉದಾಹರಣೆಗೆ ಇಂದಿರಾಗಾಂಧೀ ಅವರು ಹೇರಿದ್ದ ತುರ್ತುಪರಿಸ್ಥಿತಿಯ ಕಾಲ. ಹೊರಗಿನ ವಾತಾವರಣದ ಪ್ರಭಾವದಿಂದ ನ್ಯಾಯಾಲಯವೂ ತಪ್ಪಿಸಿಕೊಳ್ಳದೆ ಹೋಯಿತು ಎಂಬ ಮಾತಿಗೆ ಜ್ವಲಂತ ನಿದರ್ಶನವೊಂದು ಇತಿಹಾಸದಲ್ಲಿ ಸದಾ ಕಾಲಕ್ಕೆ ದಾಖಲಾಗಿಬಿಟ್ಟಿತು. ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಪ್ರಾಣದ ಹಕ್ಕು ಸಂವಿಧಾನವೇ ನೀಡಿರುವ ಮೂಲಭೂತ ಹಕ್ಕುಗಳು (ಈ ಹಕ್ಕುಗಳು ಅನಿರ್ಬಂಧಿತ ಅಲ್ಲ). ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈ ಎರಡು ಹಕ್ಕುಗಳನ್ನು ಅಮಾನತುಗೊಳಿಸಬಹುದು ಎಂದು ಐವರು ಸದಸ್ಯರ ನ್ಯಾಯಪೀಠ ಬಹುಮತದ ತೀರ್ಪು ನೀಡಿಬಿಟ್ಟಿತ್ತು. ನ್ಯಾಯಮೂರ್ತಿ ಎಚ್.ಆರ್. ಖನ್ನಾ ಭಿನ್ನಮತದ ತೀರ್ಪು ಬರೆದರು. ನಾಗರಿಕ ಸಮಾಜಗಳಲ್ಲಿ ಪ್ರಾಣದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾನವ ಜೀವಿಗಳ ಅತ್ಯಮೂಲ್ಯ ಹಕ್ಕುಗಳು?. ಈ ಹಕ್ಕುಗಳನ್ನು ಕಾರ್ಯಾಂಗದ ಪದತಲಕ್ಕೆ ಶರಣಾಗಿಸುವುದನ್ನು ಭಾರತದ ಸಂವಿಧಾನ ಮತ್ತು ಕಾಯಿದೆ ಕಾನೂನುಗಳು ಒಪ್ಪುವುದಿಲ್ಲ ಎಂದು ಸಾರಿದರು. ಈ ಭಿನ್ನಮತದ ತೀರ್ಪಿನ ಕಾರಣ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಹುದ್ದೆಗೆ ಬಡ್ತಿಯನ್ನು ನಿರಾಕರಿಸಲಾಯಿತು. ಸೇವಾ ಜ್ಯೇಷ್ಠತೆಯನ್ನು ಅವಗಣಿಸಿ ಅವರಿಗಿಂತ ಕಿರಿಯ ನ್ಯಾಯಮೂರ್ತಿಗೆ ಬಡ್ತಿ ನೀಡಿದ್ದು ತುರ್ತುಪರಿಸ್ಥಿತಿಯ ಅತಿರೇಕಗಳಲ್ಲೊಂದು.
ಮುಂದೊಂದು ದಿನ ಸುಪ್ರೀಮ್ ಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಚಂದ್ರಚೂಡ್ ಅವರು ಈ ತೀರ್ಪಿಗಾಗಿ ಕ್ಷಮೆ ಯಾಚಿಸಿದರು. ಪಿ.ಎನ್.ಭಗವತಿ ಪಶ್ಚಾತ್ತಾಪಪಟ್ಟರು. ಇಂತಹ ತೀರ್ಪಿನಲ್ಲಿ ಭಾಗಿಯಾಗುವುದರ ಬದಲು ತಾವು ರಾಜೀನಾಮೆ ನೀಡುವುದೇ ಲೇಸಿತ್ತು ಎಂದರು.
ನ್ಯಾಯಾಲಯದ ಹೊರಗಿನ ವಾತಾವರಣವೂ ನ್ಯಾಯಾಲಯದ ತೀರ್ಪಿನ ಮೇಲೆ ಪರಿಣಾಮ ಬೀರಬಲ್ಲದು ಎಂಬ ಮಾತಿಗೆ ಉದಾಹರಣೆಯಾಗಿ ಮಾತ್ರವೇ ಈ ತೀರ್ಪನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಮಂದಿರ-ಮಸೀದಿ ವಿವಾದದ ತೀರ್ಪಿನಲ್ಲೂ ಬಾಹ್ಯ ವಾತಾವರಣ ಪ್ರಭಾವ ಬೀರಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲು ಬರುವುದಿಲ್ಲ. ಆದರೆ ಹಾಲಿ ಪ್ರಭಾವದ ಹಿಂದೆ ಸಾಮಾಜಿಕ ಶಾಂತಿ ಸಾಮರಸ್ಯಗಳನ್ನು ಕಾಪಾಡುವ ‘ಸದಾಶಯ’ದ ಹಿರಿಯ ಉದ್ದೇಶ ಇದ್ದೀತು. ನ್ಯಾಯಾಲಯದ ಹೊರಗಿನ ಇಂದಿನ ವಾತಾವರಣ ಹಿಂದುಸ್ತಾನ ಹಿಂದೆಂದೂ ಕಾಣದಂತಹುದು. ಉಗ್ರ ಹಿಂದುತ್ವ ಮತ್ತು ಆಕ್ರಮಣಕಾರಿ ರಾಷ್ಟ್ರವಾದಗಳು, ದೈತ್ಯ ಮತ್ತು ನಿರ್ದಯೀ ಬಹುಸಂಖ್ಯಾತ ವಾದವನ್ನು ಕಟೆದು ನಿಲ್ಲಿಸಿವೆ. ಈ ವಿವಾದವು 1989ರಿಂದ ದೇಶವನ್ನು ಉದ್ದಗಲಕ್ಕೆ ಹರಿಯಬಿಟ್ಟ ಹಿಂಸೆ ದ್ವೇಷ ತಿರಸ್ಕಾರ ಕೋಮು ಧೃವೀಕರಣದ ಹೆದ್ದೆರೆಗಳ ಭಯಾನಕ ಇತಿಹಾಸ ಪ್ರಾಯಶಃ ನ್ಯಾಯಾಲಯದ ಗಮನದಲ್ಲಿ ಇದ್ದಿರಬೇಕು. ಅಂತಹ ಮತ್ತೊಂದು ಉತ್ಕಟ ಸಂಕಟವನ್ನು ದೇಶ ಹಾದುಹೋಗುವುದು ಬೇಡ ಎಂಬ ಸದಾಶಯ ಕೆಲಸ ಮಾಡಿದ್ದೀತು. ತೀರ್ಪು ಯಾರ ಪರವಾಗಿ ಬಂದರೂ ಒಬ್ಬರು ಸೋತರು ಮತ್ತೊಬ್ಬರು ಗೆದ್ದರು ಎಂದು ಭಾವಿಸುವುದು ಬೇಡ ಎಂಬ ವಿವೇಕದ ಮಾತುಗಳನ್ನು ಆಳುವ ಪಕ್ಷ ಮತ್ತು ಅದರ ಹಿಂದಿನ ಪರಿವಾರ ಆಡಿದ್ದು ಮೇಲ್ನೋಟಕ್ಕೆ ಪ್ರಶಂಸನೀಯ. ಆದರೆ ಆಳುವ ಪಕ್ಷ ಮತ್ತು ಅದರ ಬೆನ್ನಿಗಿರುವ ಪರಿವಾರ 1989ರಿಂದ ದೇಶದ ಬಹುಸಂಖ್ಯಾತರ ಸಾಮೂಹಿಕ ಮನಸ್ಥಿತಿಯನ್ನು ಬಹುತೇಕ ಹಿಂದೂರಾಷ್ಟ್ರದ ಪರಿಕಲ್ಪನೆಯ ಪರವಾಗಿ ಪ್ರಚೋದಿಸಿ ತಿದ್ದಿ ತೀಡಿ ರೂಪಿಸಿಬಿಟ್ಟಿದೆ. ದಶಕಗಟ್ಟಲೆ ‘ಮಂಡಲ’ವನ್ನು ಕುದಿಸಿ ಮಾಡಿದ ‘ಕಮಂಡಲ’ದ ಕಡುಪಾಕವನ್ನು ದಿನ ಬೆಳಗಾಗುವುದರ ಒಳಗೆ ಬದಲಾಯಿಸುವುದು ಸಾಧ್ಯವಿಲ್ಲ. ಈ ನಗ್ನ ವಾಸ್ತವ ಖುದ್ದು ಆಳುವ ಪಕ್ಷ ಮತ್ತು ಪರಿವಾರಕ್ಕೆ ಚೆನ್ನಾಗಿ ಗೊತ್ತು. ಇನ್ನು ಈ ನಿಷ್ಠುರ ಸತ್ಯ ದೇಶದ ಅತ್ಯುನ್ನತ ನ್ಯಾಯಸ್ಥಾನಕ್ಕೆ ತಿಳಿಯದೆ ಇದ್ದೀತೇ? ಹೀಗಾಗಿ ಮತ್ತೊಂದು ಕಡುದ್ವೇಷದ ಹೀನ ಹಿಂಸೆಯ ಹೆದ್ದೆರೆ ದೇಶದ ಸಮಾಜಜೀವನವನ್ನು ಅಪ್ಪಳಿಸುವ ಸಾಧಕ ಬಾಧಕಗಳು ನ್ಯಾಯಮೂರ್ತಿಗಳ ಕಣ್ಣ ಮುಂದೆ ಸುಳಿದಿರಲೇಬೇಕು. ಹೀಗಾಗಿಯೇ ನ್ಯಾಯ ನೀಡಿಕೆಯ ಉದಾತ್ತ ತತ್ವವು, ಕೇವಲ ವಿವಾದ ಇತ್ಯರ್ಥದ ಅನುಸಂಧಾನಕ್ಕೆ ಇಳಿದಿರಬೇಕು. ನ್ಯಾಯ ನೀಡಿಕೆ ಬೇರೆ. ವಿವಾದದ ಇತ್ಯರ್ಥ ಬೇರೆ ಎಂಬುದನ್ನು ಗಮನಿಸಬೇಕಿದೆ. ನ್ಯಾಯ ನೀಡಿಕೆಗೆ ಆದ್ಯತೆ ದೊರೆತಿದ್ದರೆ 2.77 ಎಕರೆ ಜಾಗದಲ್ಲಿ ಮಂದಿರ-ಮಸೀದಿಗಳೆರಡೂ ಸಹಬಾಳ್ವೆ ನಡೆಸಬೇಕಿತ್ತು.


