Homeಮುಖಪುಟಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅವರಿಗೆ ಅರ್ಥವಾಗುತ್ತಿಲ್ಲ..

ಇದು ಹಿಂದೂ ಧರ್ಮದ ಮೇಲಿನ ದಾಳಿ ಎಂದು ಅವರಿಗೆ ಅರ್ಥವಾಗುತ್ತಿಲ್ಲ..

ಒಬ್ಬ ನಿಜವಾದ ಹಿಂದು ಏಕಕಾಲದಲ್ಲಿ ನಿಜವಾದ ಮುಸ್ಲಿಮನೂ, ಕ್ರಿಶ್ಚಿಯನೂ, ಸಿಖ್ಖನೂ ಆಗಿರುತ್ತಾನೆ. ಅಂದರೆ ಒಬ್ಬ ನಿಜವಾದ ಧರ್ಮಿಯನು ಏಕಕಾಲದಲ್ಲಿ ಬೇರೆ ಧರ್ಮಿಯನೂ ಆಗಿರುತ್ತಾನೆ.

- Advertisement -
- Advertisement -

ಗಾಂಧಿ ಮತ್ತು ಗಾಂಧಿ ವಿಚಾರದ ಮೇಲೆ ಇಂದು ಕಂಡು ಕೇಳರಿಯದಷ್ಟು ದಾಳಿ ನಡೆಯುತ್ತಿದೆ. ಗಾಂಧಿಯ ಮೇಲೆ ಮತ್ತು ಅವರ ಚಿಂತನೆಯ ಮೇಲೆ ದಾಳಿ ಪ್ರಾರಂಭವಾಗಿ ಸುಮಾರು 100 ವರ್ಷಗಳೇ ಕಳೆದಿವೆ. ಆದರೂ ಈ ಮಟ್ಟದ ದಾಳಿಯನ್ನು ಹಿಂದೆ ನೋಡಿಲ್ಲ. ಗಾಂಧಿಯ ಮೇಲೆ ದಾಳಿ ಎಂದರೆ ಈ ದೇಶದ ಆತ್ಮದ ಮೇಲೆ ದಾಳಿ ಎಂಬುದು ದಾಳಿಕೋರರಿಗೆ ಅರ್ಥವಾಗುತ್ತಿಲ್ಲ. ಗಾಂಧಿಯ ಮೇಲೆ ದಾಳಿಗೆ ನಿಜವಾದ ಕಾರಣವೆಂದರೆ ಗಾಂಧಿ ಅಸಲಿ ಹಿಂದೂ ಆಗಿರುವುದೇ ಆಗಿದೆ. ಹಿಂದೂ ಧರ್ಮದ ವಿಶಾಲ ಮನೋಭಾವದ ವಿಚಾರವನ್ನು ತಾನು ಅಳವಡಿಸಿಕೊಂಡು ಆ ವಿಚಾರದ ಹಿನ್ನೆಲೆಯಲ್ಲಿ ಭಾರತೀಯರು ಯೋಚನೆ ಮಾಡಬೇಕು ಎಂದು ಅವರು ಪ್ರತಿಪಾದಿಸತೊಡಗಿದ್ದೇ ಅವರ ಮೇಲೆ ದಾಳಿಗೆ ನಿಜವಾದ ಕಾರಣ. ಹಿಂದೂ ಧರ್ಮವನ್ನು ಕೇವಲ ಭೌತಿಕ ಆಚರಣೆಗಷ್ಟೇ ಸೀಮಿತಗೊಳಿಸಿಕೊಂಡಿದ್ದ ಜನಕ್ಕೆ ಗಾಂಧಿಯವರ ವಿಚಾರ ಸಹಿಸಿಕೊಳ್ಳಲಾಗದ್ದು. ದುರಂತವೆಂದರೆ ಒಂದು ಧರ್ಮದ ಅನುಯಾಯಿ ನಾನು ಎಂದುಕೊಳ್ಳುವವರು ಧರ್ಮದ ಆತ್ಮವನ್ನು ಬಿಟ್ಟು ಅದರ ದೇಹಕ್ಕೆ ತಗುಲಿಕೊಂಡಿರುತ್ತಾರೆ. ಹಿಂದೂ ಧರ್ಮದಲ್ಲೂ ಹಾಗೆಯೇ ಆಗಿದೆ. ಹಾಗಾಗಿ ದೇಹದ ಮೇಲಿರುವ ಗಾಯವನ್ನು ಯಾರಾದರೂ ಒರೆಸಲು ನೋಡಿದರೆ ಆ ನೋವನ್ನು ತಡೆದುಕೊಳ್ಳಲಾಗದೆ ಅವರು ಸೆಟೆದು ನಿಲ್ಲುತ್ತಾರೆ. ಇದು ಗಾಂಧಿ ಒಬ್ಬರಿಗೆ ಮಾತ್ರವಲ್ಲ ಜಡಹಿಡಿದ ಧರ್ಮದ ಆಚರಣೆಯನ್ನು ಪ್ರಶ್ನಿಸಿದವರೆಲ್ಲಾ ಈ ದಾಳಿಯನ್ನು ಎದುರಿಸಿದ್ದಾರೆ. ಮುಂದೆಯೂ ಎದುರಿಸಬೇಕಾಗುತ್ತದೆ.

ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ. ಬೇರೆ ಧರ್ಮಗಳಿಗೆ ಹೋಲಿಸಿದರೆ ಹಿಂದೂ ಧರ್ಮ ತನ್ನ ವಿಮರ್ಶಕರನ್ನೂ, ಸುಧಾರಕರನ್ನೂ ಹೆಚ್ಚು ಸಹನೆಯಿಂದಲೇ ನೋಡುತ್ತಾ ಬಂದಿದೆ ಎನ್ನಬಹುದು. ಏಕೆಂದರೆ ಹೆಚ್ಚಿನ ಹಿಂದೂ ಧರ್ಮಿಯರು ಉದಾರ ಮನೋಭಾವದವರು. ಹಿಂದೂ ಧರ್ಮ ಸ್ವಭಾವತಃ ಉದಾರಿ ಧೋರಣೆಯುಳ್ಳದ್ದು. ಹಿಂದೂ ಧರ್ಮೀಯರ ಈ ಸ್ವಭಾವವೇ ಧರ್ಮವನ್ನು ತಮ್ಮ ಇಚ್ಛೆಯಂತೆ ಮುನ್ನಡೆಸಬೇಕೆನ್ನುವ ಹಠಮಾರಿ ಜನರಿಗೆ ತೊಂದರೆಯಾಗಿದೆ. ಹೆಚ್ಚಿನ ಹಿಂದೂಗಳಿಗೆ ತಮ್ಮ ಧರ್ಮ ಅಪಾಯಕ್ಕೆ ಸಿಲುಕಿದೆ ಎನಿಸಿಲ್ಲ. ಅವರಲ್ಲಿ ಧರ್ಮ ಸಹಿಷ್ಣುತೆಯ ಭಾವ ಸಹಜವಾಗಿ ಇದೆ. ಅವರಂತೆಯೇ ಬೇರೆ ಧರ್ಮಿಯರೂ ನೂರಾರು ವರ್ಷಗಳಿಂದ ಈ ಮಣ್ಣಿನ ನಿಯಮಕ್ಕೆ ಹೊಂದಿಕೊಂಡು ಬದುಕುವುದನ್ನು ಸಾಮಾನ್ಯವಾಗಿ ಕಲಿತಿದ್ದಾರೆ.

ಗಾಂಧಿಯವರು ಹೇಳುವಂತೆ ಒಬ್ಬ ನಿಜವಾದ ಹಿಂದು ಏಕಕಾಲದಲ್ಲಿ ನಿಜವಾದ ಮುಸ್ಲಿಮನೂ, ಕ್ರಿಶ್ಚಿಯನೂ, ಸಿಖ್ಖನೂ ಆಗಿರುತ್ತಾನೆ. ಅಂದರೆ ಒಬ್ಬ ನಿಜವಾದ ಧರ್ಮಿಯನು ಏಕಕಾಲದಲ್ಲಿ ಬೇರೆ ಧರ್ಮಿಯನೂ ಆಗಿರುತ್ತಾನೆ. ಅವನಿಗೆ ಬೇರೆ ಧರ್ಮಗಳು ಶತ್ರುಗಳಾಗಿ ಕಾಣುವುದಿಲ್ಲ. ಆದರೆ ಮತಾಂಧರು ನಿಜವಾದ ಧರ್ಮಿಯರಾಗಿಲ್ಲದಿರುವುದರಿಂದ ಅವರಿಗೆ ಮಿಕ್ಕವರೆಲ್ಲರೂ ಶತ್ರುಗಳಂತೆ ಕಾಣುತ್ತಾರೆ, ತಮ್ಮ ಧರ್ಮವೇ ಶ್ರೇಷ್ಠವಾದ ಧರ್ಮವೆಂದು ಭಾವಿಸಿ ಸದಾ ಧರ್ಮದ ಅಮಲಿನಲ್ಲಿ ತಮ್ಮ ಧರ್ಮಿಯರೂ ಇರುವಂತೆ ನೋಡಿಕೊಳ್ಳುತ್ತಾರೆ. ಗಾಂಧಿ ಎಲ್ಲ ಹಿಂದುಗಳೂ ಉತ್ತಮ ಹಿಂದೂಗಳು ಆಗಬೇಕೆಂದು ಬಯಸಿದರು. ಬಹಿರಂಗ ಹಿಂದುಗಳು ನೀಡುವ ಧರ್ಮದ ವ್ಯಾಖ್ಯೆಗೂ, ಗಾಂಧಿ ನೀಡುವ ಧರ್ಮದ ವ್ಯಾಖ್ಯೆಗೂ ಅಜಗಜಾಂತರ ವ್ಯತ್ಯಾಸ. ಗಾಂಧಿಯ ಧರ್ಮ ಚಿಂತನೆ ಮತ್ತು ಅವರ ನಂಬಿಕೆ ಸೂರ್ಯನಷ್ಟೇ ಪ್ರಖರ. ಇದನ್ನು ಬಹಿರಂಗಿಗಳು ಸಹಿಸರು. ಹಾಗಾಗಿ ಅವರು ಗಾಂಧಿಯ ಮೇಲೆ ಹಲ್ಲೆ ಮಾಡತೊಡಗಿದರು. ಆದ್ದರಿಂದ ಇದು ಅಂತರಂಗಿ ಮತ್ತು ಬಹಿರಂಗಿ ಹಿಂದುಗಳ ನಡುವಿನ ಸಂಘರ್ಷ.

ಇದು ಗಾಂಧಿಗಿಂತ ಮೊದಲು ಧರ್ಮದಲ್ಲಿ ಸುಧಾರಣೆ ತರಲು ಬಯಸಿದ ಎಲ್ಲ ನಾಯಕರು ಅನುಭವಿಸಿದ್ದೇ ಆಗಿದೆ. ಭಾರತವು ಸರ್ವ ಜನಾಂಗದ ಶಾಂತಿಯ ತೋಟವಾಗಿ ಪ್ರಪಂಚದ ಇತರ ರಾಷ್ಟ್ರಗಳಿಗೆ ಮಾದರಿಯಾಗಬೇಕು ಎಂಬದು ಅಂತರಂಗದ ಹಿಂದೂಗಳ ಕನಸು. ಆದರೆ ಬಹಿರಂಗಿಗಳಿಗೆ ರಾಷ್ಟ್ರವೆಂದರೆ ದೇಶದ ಗಡಿ. ಅಂತರಂಗದ ಹಿಂದುಗಳಿಗೆ ರಾಷ್ಟ್ರವೆಂದರೆ ಜನ. ಗಾಂಧಿಗೆ ರಾಷ್ಟ್ರವೆಂದರೆ ನಾವು ನಿರ್ಮಿಸಬೇಕಾದ ಒಂದು ಸಭ್ಯತೆ. ಹೀಗಾಗಿ ಬಹಿರಂಗಿಗಳಿಗೆ ಗಾಂಧಿ ಮತ್ತು ಗಾಂಧಿ ವಿಚಾರ ಅಡಚಣೆಯಾಗಿ ತೋರಿದೆ. ಗಾಂಧಿಯ ಹತ್ಯೆಯನ್ನು ಮಾಡಿದ ತಪ್ಪಿಗಾಗಿ ಅವರು ಸುಮಾರು 60 ವರ್ಷ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು. ಕಳೆದೆರಡು ಚುನಾವಣೆಗಳಲ್ಲಿ ಬಹಿರಂಗಿಗಳಿಗೆ ಜನತೆ ತೋರಿದ ಬೆಂಬಲವನ್ನು ಅವರು ತಮಗೆ ಅಡ್ಡಗಾಲಾಗಿರುವ ಗಾಂಧಿಯನ್ನೂ ಅವರ ವಿಚಾರವನ್ನೂ ನಾಶ ಮಾಡಲು ನೀಡಿರುವ ಬೆಂಬಲ ಎಂದು ಭಾವಿಸಿದಂತಿದೆ. ಅವರ ಮಾಡಿರುವ ಪಾಪಕ್ಕೆ ಅವರನ್ನು ಸತತವಾಗಿ ಕಾಡುತ್ತಿರುವುದು ಗಾಂಧಿ. ಹಾಗಾಗಿ ಗಾಂಧಿಯನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಮಾಡಿಬಿಟ್ಟರೆ ತಮಗೆ ಇನ್ನು ಈ ದೇಶದಲ್ಲಿ ಶತ್ರುವೇ ಇಲ್ಲ ಎಂದು ಅವರು ಭಾವಿಸಿದ್ದಾರೆ.

ಅದಕ್ಕಾಗಿ ಅವರು ತಮಗೆ ದೊರೆತಿರುವ ಅಧಿಕಾರವನ್ನು ಬಳಸಿ ಶತಾಯ ಗತಾಯ ಪ್ರಪಂಚಕ್ಕೆ ಈ ದೇಶ ನೀಡಿದ ದೊಡ್ಡ ಕೊಡುಗೆಯನ್ನು ನಿರ್ನಾಮ ಮಾಡಬೇಕು ಎಂದು ತೀರ್ಮಾನಿಸಿದಂತಿದೆ. ಅವರ ಬೆಂಬಲಕ್ಕೆ ಅಧಿಕಾರದೊಂದಿಗೆ ಆಧುನಿಕ ತಂತ್ರಜ್ಙಾನ ಅವರ ಕೈಗೆ ಸಿಕ್ಕಿರುವುದು ತಮ್ಮ ಅಧರ್ಮಿಯ ವಿಚಾರಗಳನ್ನು ಹರಡಲು ನೆರವಿಗೆ ಬಂದಿದೆ. ಅವರೊಂದಿಗಿರುವ ಅಲ್ಪ ಸಂಖ್ಯೆಯ ಜನರಿಗೆ ಇಷ್ಟು ವರ್ಷ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಅಭಿವ್ಯಕ್ತಿಗೆ ಬೇಕಾದ ಮಾಧ್ಯಮವೇ ಅವರಲ್ಲಿ ಇರಲಿಲ್ಲ. ಈಗ ಈ ಸಾಮಾಜಿಕ ಮಾಧ್ಯಮಗಳ ಮೂಲಕ ವಾಟ್ಸಾಪ್ ವಿಶ್ವವಿದ್ಯಾಲಯಗಳು ಹರಡುವ ಸುಳ್ಳು ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಅವರು ತಮ್ಮದೇ ಎನ್ನುವ ರೀತಿ ಹಂಚತೊಡಗಿದ್ದಾರೆ. ಆಳವಾದ ತಿಳಿವಳಿಕೆಯಿಲ್ಲದ ಹೊರಗೆ ಕಾಣುವ ಕೆಲ ವಿಚಾರಗಳೇ ದೇಶದ ದೊಡ್ಡ ಸಮಸ್ಯೆ ಎಂದು ಅವರು ಭಾವಿಸುವಂತೆ ಮಾಡಲಾಗಿದೆ. ನಿಜವಾದ ಧರ್ಮಿಯನಿಗೆ ಇರಬೇಕಾದ ಸತ್ಯದ ಹುಡುಕಾಟದ ಮನೋಭಾವವೇ ಇಲ್ಲದ ಈ ಜನತೆಯನ್ನು ನೋಡಿದಾಗ ಜನರು ನಿಜವಾಗಿ ಧರ್ಮ ನಿಷ್ಠರಾಗಿರಲಿಲ್ಲ ಎಂಬುದನ್ನು ಪ್ರಚಲಿತ ವಿದ್ಯಮಾನ ಸಾಬೀತುಮಾಡಿದೆ. ಜನರಿಗೆ ಧರ್ಮದ ಅಫೀಮು ಮಾಡುವಷ್ಟು ದುಷ್ಟ ಪರಿಣಾಮವನ್ನು ಯಾವುದೇ ವಿಚಾರ ಮಾಡದು.

ಗಾಂಧಿ ಧರ್ಮವನ್ನು ರಚನಾತ್ಮಕವಾಗಿ ಸಮಾಜವನ್ನು ನಿರ್ಮಿಸಲು ಬಳಸುವ ಪ್ರಯತ್ನ ಮಾಡಿದರೆ ಈ ಬಹಿರಂಗಿಗಳು ಸಮಾಜವನ್ನು ಒಡೆಯಲು, ಧರ್ಮ ಧರ್ಮಗಳ ಮಧ್ಯೆ ಗೋಡೆ ನಿರ್ಮಿಸಲು ಬಳಸತೊಡಗಿದ್ದಾರೆ. ಎಲ್ಲದಕ್ಕೂ ಚರಿತ್ರೆಯನ್ನು ಉಲ್ಲೇಖಿಸಿ ಮಾತನಾಡುವ ಅವರು ಚರಿತ್ರೆಯಿಂದ ಯಾವ ಪಾಠವನ್ನೂ ಕಲಿತಂತೆ ಕಾಣುತ್ತಿಲ್ಲ. ಈ ದೇಶದ ಜನಕ್ಕೆ ಧರ್ಮ ಬಹುದೊಡ್ಡ ನಂಬಿಕೆಯಾಗಿದೆ. ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಬಯಸುವವರು ಗಾಂಧೀ ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಮುಂದಿಟ್ಟುಕೊಂಡು ಮುಂದುವರೆಯುವುದು ಈ ನಿಮಿಷದ ಅಗತ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...