ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಕಡಿಮೆ ಮಾಡುವ ಕ್ರಮಗಳನ್ನು ಸರ್ಕಾರ ಪರಿಗಣಿಸುತ್ತಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಸಹ ಇದರ ಕುರಿತು ಪರಿಶೀಲಿಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿ ತೊಂದರೆ ಅನುಭವಿಸಿದ ಬಳಿಕ ಈ ಹೇಳಿಕೆ ಹೊರ ಬಂದಿದೆ. “ಹೆಚ್ಚಿನ ವಿದ್ಯಾರ್ಥಿಗಳಿಗೆ ಇಲ್ಲಿ ಅಧ್ಯಯನ ಮಾಡಲು ಅನುಕೂಲ ಮಾಡಿಕೊಡುವ ಗುರಿ ಇಟ್ಟುಕೊಂಡಿದ್ದೇವೆ. ತಮ್ಮ ಕೋರ್ಸ್ಅನ್ನು ಪೂರ್ಣಗೊಳಿಸುವ ಮೊದಲು ಯುದ್ಧ ಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ರಮಗಳನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ” ಎಂದು ತಿಳಿಸಿದ್ದಾರೆ.
“ಪ್ರಸ್ತುತ ವೈದ್ಯಕೀಯ ಶಿಕ್ಷಣದ ವೆಚ್ಚ ಹೆಚ್ಚುತ್ತಿದೆ. ಸರಕಾರಿ ಸೀಟುಗಳ ವೆಚ್ಚ ಕಡಿಮೆಯಾದರೂ ಖಾಸಗಿ ವಲಯದಲ್ಲಿ ಸೀಟುಗಳ ವೆಚ್ಚ ಹೆಚ್ಚಿದೆ. ಕೆಲವು ಸಂದರ್ಭಗಳಲ್ಲಿ ಶೇ.90-95 ಅಂಕ ಗಳಿಸಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗುತ್ತಿಲ್ಲ. ಮ್ಯಾನೇಜ್‌ಮೆಂಟ್ ಅಥವಾ ಎನ್‌ಆರ್‌ಐ ಸೀಟ್ ವೆಚ್ಚಗಳು ಸಹ ಹೆಚ್ಚಾಗಿದೆ. ಹೀಗಾಗಿ ಇತರ ಆಯ್ಕೆಗಳನ್ನು (ಉಕ್ರೇನ್‌ನಂತಹ ದೇಶಗಳಲ್ಲಿ ಅಧ್ಯಯನ ಮಾಡುವುದು) ನೋಡುವಂತಾಗಿದೆ” ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಉಕ್ರೇನ್‌ನಂತಹ ದೇಶಗಳಿಗೆ ಹೋಗುವ ಬದಲು ಭಾರತದಲ್ಲಿಯೇ ವೈದ್ಯಕೀಯ ಅಧ್ಯಯನ ಮಾಡಲು ಸಾಕಷ್ಟು ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸರ್ಕಾರ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಶುಲ್ಕ ಕಡಿತಗೊಳಿಸಲು ಎ,ಬಿ ಮತ್ತು ಸಿ ವರ್ಗೀಕರಣಕ್ಕೆ ಮುಂದಾಗಿದ್ದೇವೆ. ಆದರೆ ವೈದ್ಯಕೀಯ ಕೋರ್ಸ್‌ಗಳನ್ನು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ನಿಯಂತ್ರಿಸುತ್ತದೆ. ಹೀಗಾಗಿ ಅವರೂ ಇದರ ಕುರಿತು ಗಮನ ಹರಿಸಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶುಲ್ಕ ಕಡಿತದ ಕುರಿತು ಚರ್ಚಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಸ್ಥಗಿತಗೊಳಿಸಿರುವುದರಿಂದ ಅವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಸರ್ಕಾರ ನೀಡುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, “ಕೇಂದ್ರ ಸರ್ಕಾರವು ಈ ಬಗ್ಗೆ ಯೋಚಿಸುತ್ತಿದೆ” ಎಂದಿದ್ದಾರೆ.
“ಮೊದಲ, ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹಿಂತಿರುಗಿದ್ದಾರೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಈ ಸಮಸ್ಯೆಯನ್ನು ಅನುಭವಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿದೆ” ಎಂದು ಪ್ರತಿಕ್ರಿಯೆಸಿದ್ದಾರೆ.
ಮಾರ್ಚ್ 1ರಂದು ಉಕ್ರೇನ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ಬಲಿಯಾದ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಜ್ಞಾನಗೌಡರ ಅವರಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸುವ ಮುನ್ನ ಬೊಮ್ಮಾಯಿ ಮಾತನಾಡಿದರು. ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನವೀನ್ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.
ನೀಟ್ ರದ್ದುಗೊಳಿಸಲು ಕುಮಾರಸ್ವಾಮಿ ಆಗ್ರಹ
ಧನದಾಹಕ್ಕೆ ಕಡಿವಾಣ ಹಾಕಿ ಎಲ್ಲರಿಗೂ ಮೆಡಿಕಲ್ ಸೀಟು ಕೊಡಿಸುವ ಉದ್ದೇಶದಿಂದ ಜಾರಿಗೆ ಬಂದ ನೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ನವೀನ್ ಸಾವಿನಿಂದ ಜ್ಞಾನೋದಯ ಆಗಿದೆ ಎನ್ನುವ ಮುಖ್ಯಮಂತ್ರಿಯವರು ವೈದ್ಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀಟ್ ವಿರುದ್ಧ ಚಕಾರ ಎತ್ತುತ್ತಿಲ್ಲ, ಯಾಕೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಖಾಸಗಿ ಕಾಲೇಜುಗಳಲ್ಲಿ ವೈದ್ಯ ಶಿಕ್ಷಣ ದುಬಾರಿ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಅಂಥ ಕಾಲೇಜುಗಳಿಗೆ ಶಕ್ತಿ ತುಂಬುತ್ತಿರುವುದು ಏಕೆ! ಸರಕಾರಿ ವೈದ್ಯ ಕಾಲೇಜುಗಳಲ್ಲಿ ಕನ್ನಡದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಟ್ಯೂಷನ್ ಅಂಗಡಿಗಳಿಗೆ ಲಕ್ಷ ಲಕ್ಷ ಕಟ್ಟುವುದು ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಾಧ್ಯವಿಲ್ಲ ಎಂದಿದ್ದಾರೆ.
ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದೆ. ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ. ಇದರಲ್ಲಿ ಅನುಮಾನವೇ ಇಲ್ಲ. 1/7
— H D Kumaraswamy (@hd_kumaraswamy) March 21, 2022
ಇದನ್ನೂ ಓದಿರಿ: ವೈದ್ಯಕೀಯ ‘ಭಾರ‘ತ: ಉಕ್ರೇನ್‌ನಲ್ಲಿ ಸಿಲುಕಿದ ಇಂಡಿಯಾ ವಿದ್ಯಾರ್ಥಿಗಳ ನೋವಿನ ಮೂಲ!


