Homeಪುಸ್ತಕ ವಿಮರ್ಶೆಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

ಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

- Advertisement -
- Advertisement -

ತಿರು ಎಂದರೆ ಶ್ರೀ ಎಂದು ಗೌರವಿಸುವ ಪದ. ಕುರಳ್ ಎಂದರೆ ಚಿಕ್ಕ. ತಮಿಳಿನಲ್ಲಿ ಛಂದಸ್ಸಿನ ಹೆಸರೂ ಹೌದು. ಕುರಳ್ ವೆಣ್ಬಾ ಎಂಬುದು ಆ ಛಂದಸ್ಸಿನ ಪೂರ್ಣ ಹೆಸರು. ನಾವು ಚುಟುಕ ಎನ್ನುವುದಿಲ್ಲವೇ ಹಾಗೆ.

ಇನ್ನು ಪುಟ್ಟ ಗಾತ್ರದ್ದಾಗಿ, ಬರಿಯ ಎರಡೇ ಸಾಲಿನದುದಾಗಿರುವ ವಚನಗಳ ಸಂಕಲನವಾಗಿರುವ ತಿರುಕ್ಕುಳ್ ತಮಿಳು ನಾಡಿನ ಅತ್ಯಂತ ಪ್ರಸಿದ್ಧವಾದ ಮತ್ತು ನಾಡು ನುಡಿಯಲ್ಲಿ ಬೆರೆತು ಹೋಗಿರುವ ಕೃತಿ. ಭಾಷೆ, ರಚನೆ, ವಿಷಯ ಮತ್ತು ಆಶಯ ಎಲ್ಲಾ ವಿಚಾರಗಳಲ್ಲೂ ಅದು ಸಾಮಾಜಿಕವಾಗಿ ಮನ್ನಣೆ ಪಡೆದುಕೊಂಡಿದೆ.

ನಿಜ, ತಿರುವಳ್ಳುವರ್ ಕರ್ನಾಟಕದ ಸರ್ವಜ್ಞರಂತೆ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಜೀವನ ದರ್ಶನವನ್ನು ಮಾಡಿಸುತ್ತಾರೆ. ಹಾಗೆಯೇ ಕಬೀರರಂತೆಯೇ ಇವರು ನೇಯ್ಗೆಯವರು. ನೇಯುವ ಕೆಲಸ ಮಾಡುತ್ತಿದ್ದ ತಿರುವಳ್ಳುವರ್ ಹೊಲಿಯುವ, ಬೆಸೆಯುವ, ಕೂಡಿಸುವ ಕೆಲಸವನ್ನೇ ತಮ್ಮ ಸಾಹಿತ್ಯದ ಮೂಲಕವೂ ಮಾಡುತ್ತಿದ್ದರು. ಅವರ ಸಾಹಿತ್ಯದ ವಸ್ತ್ರವು ಸಮಾಜ, ಅಧ್ಯಾತ್ಮ, ಆತ್ಮಾವಲೋಕನ, ವ್ಯವಸ್ಥೆಯ ವಿಮರ್ಶೆ, ಮನುಷ್ಯತ್ವ, ವಿನಯತೆ; ಹೀಗೆ ವ್ಯಕ್ತಿಗತವಾಗಿ ಒಬ್ಬನ ಹಿತವಾದ ಬದುಕು ಮತ್ತು ಸಮಾಜದಲ್ಲಿ ಹದವಾದ ಮಿಳಿತಗಳೊಂದಾಗಿರುವಂತೆ ಎಳೆಗಳು ಒಂದರೊಳಗೊಂದು ನೇಯ್ದುಕೊಂಡಿರುತ್ತಿದ್ದವು.

“ಸಾಸವೆಯ ಕೊರೆದು ಏಳ್ಕಡಲನೊಳಹೊಗಿಸಿ ಅಡಗುವೊಲು ಸಮರಿದುವು ಕುರಳು” ಅಂದರೆ ಸಾಸುವೆಯನ್ನು ಕೊರೆದು ಟೊಳ್ಳು ಮಾಡಿ ಏಳು ಸಮುದ್ರಗಳನ್ನೂ ಅದರೊಳಗೆ ನುಗ್ಗಿಸಿ ಅಡಗಿಸಿದ ಹಾಗೆ ಈ ಕುರಳು ಎಂದು ಅಭಿಮಾನದಿಂದ ವಿಮರ್ಶಕರೊಬ್ಬರು ಹೇಳುತ್ತಾರೆ. ಈ ಮಾತನ್ನು ಅತ್ಯುತ್ಪ್ರೇಕ್ಷೆ ಎಂದುಕೊಳ್ಳದೇ ರೂಪಕವೆಂದು ವ್ಯಾಕರಣದಲ್ಲಿ ಅಲಂಕಾರವೆಂದು ಬಗೆದರೆ ಒಪ್ಪಿಕೊಳ್ಳುವುದರಲ್ಲಿ ಸಮಸ್ಯೆಯೇನೂ ಇಲ್ಲ.

ಆಗಿನ ಸಮಾಜ ಸುಧಾರಣಾ ದೃಷ್ಟಿಯಿಂದ ಆಗಿನ ಸುಧಾರಕರು ತಮ್ಮ ಕೃತಿಗಳಲ್ಲಿ ವ್ಯವಸ್ಥೆಯ ಅಮಾನವೀಯತೆಯನ್ನು ಧಿಕ್ಕರಿಸಿರುತ್ತಾರೆ, ಅನ್ಯಾಯವನ್ನು ವಿರೋಧಿಸಿರುತ್ತಾರೆ, ಆಗ ಕೊರತೆಯಿರುವ ಮಾನವೀಯತೆಯನ್ನು ಎತ್ತಿ ಹಿಡಿದಿರುತ್ತಾರೆ, ವರ್ಣ ಮತ್ತು ವರ್ಗ ಬೇಧಗಳ ಶೋಷಣೆಯನ್ನು, ಮೌಢ್ಯ, ಅಂಧಾನುಕರಣೆ ಮತ್ತು ಶುಷ್ಕ ಆಚರಣೆಗಳನ್ನು ಖಂಡಿಸಿರುತ್ತಾರೆ. ಆ ಕೃತಿಗಳು ಈಗಲೂ ಪ್ರಸ್ತುತವಾಗಿವೆ ಎಂದರೆ ಆಗಿದ್ದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂದೇ ಅರ್ಥ. ಯಾವಾಗ ಪ್ರಾಚೀನ ಸಮಾಜ ಸುಧಾರಕರ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಆ ಕೃತಿಕಾರರ ಆರಾಧಕರು ಅಭಿಮಾನದಿಂದ ಹೇಳಿಕೊಳ್ಳುವಾಗ ನನಗೆ ನಾಚಿಕೆಯಾಗುತ್ತದೆ. ಇಷ್ಟು ಹೊತ್ತಿಗೆ ಅವುಗಳು ಅಪ್ರಸ್ತುತವಾಗಬೇಕಿತ್ತು. ಆಗಿಲ್ಲ ಎಂದರೆ ನಮ್ಮ ಸಮಾಜ ಇನ್ನೂ ಸುಧಾರಿಸಿಲ್ಲ ಎಂದೇ ಅರ್ಥ. ಹಳೆಯ ಸಮಸ್ಯೆಗಳು ಹೊಸಹೊಸ ರೂಪಗಳನ್ನು ತಾಳಿಕೊಂಡು ನಮ್ಮೊಡನೆ ಇರುವುದರಿಂದ ಇನ್ನೂ ಬುದ್ಧ, ಬಸವ, ಸರ್ವಜ್ಞ, ತಿರುವಳ್ಳುವರ್, ಕಬೀರ್, ಅಂಬೇಡ್ಕರ್, ಗಾಂಧಿ ಎಲ್ಲಾ ಪ್ರಸ್ತುತವಾಗಿಯೇ ಇರುವುದು.

ವ್ಯಕ್ತಿ ಪೂಜೆಯ ಗಮ್ಮತ್ತಿನಲ್ಲಿ ಕೆಲವೊಮ್ಮೆ ಆ ಕೃತಿಕಾರರ ಎಡವಟ್ಟುಗಳಿಗೆ ನಾವು ಒಂದೋ ಕುರುಡರಾಗಿಬಿಡುತ್ತೇವೆ ಅಥವಾ ಸಮರ್ಥಿಸಿಕೊಂಡು ಬಿಡುತ್ತೇವೆ. ಕುರುಡರಾಗುವುದು ತಪ್ಪು ಆದರೆ ಸಮರ್ಥಿಸುವುದು ಅಪರಾಧ. ತಿರುವಳ್ಳುವರ್ ವಿಷಯದಲ್ಲೇ ತೆಗೆದುಕೊಂಡರೆ, ಅವರ ಹೆಂಡತಿ ವಾಸುಗಿ ತಾನು ಪತಿವ್ರತೆಯೆಂದು ನಿರೂಪಿಸಲು ಮರಳಿನಲ್ಲಿ ಅನ್ನವನ್ನು ಮಾಡುತ್ತಾಳಂತೆ. ಇದೊಂದು ದಂತಕತೆಯೇ ಆಗಿದ್ದರೂ, ತಿರುವಳ್ಳುವರ್ ಹೆಣ್ಣಿನ ಪಾತಿವ್ರತ್ಯವನ್ನು ಎತ್ತಿ ಹಿಡಿಯುವ ಧೋರಣೆ ತೋರುತ್ತಾರೆ. ಇನ್ನು ತಿರುಕ್ಕುರಳಿನಲ್ಲಿಯೂ ಹೆಣ್ಣಾದವಳು ಮನೆಗಷ್ಟೇ ಶೋಭೆ ಮತ್ತು ಅವಳ ಬದ್ಧತೆ ಅವಳ ಸಂಸಾರವನ್ನು ಕಾಪಾಡುವುದು ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅವರ ಕಾಲಘಟ್ಟದ ಅಗತ್ಯವೇ ಅವರಿಗೆ ಹಾಗೆ ನುಡಿಸಿರುತ್ತದೆ. ಪುರುಷರು ವ್ಯಾಪಾರಕ್ಕೆ, ವ್ಯವಹಾರಕ್ಕೆ, ಯುದ್ಧಕ್ಕೆ, ಇನ್ನಿತರ ಕಾರ್ಯಗಳಿಗೆಂದು ಮರಳಿ ಬರುವ ಭರವಸೆಯೇ ಇಲ್ಲದಂತೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಗಳು ಇರುತ್ತಿದ್ದವು. ಆದರೆ ಅವು ಈಗ ನಮಗೆ ಪ್ರಸ್ತುತವಲ್ಲ. ಹಾಗೆಯೇ ಮನಸ್ಸಿನ ನಿಯಂತ್ರಣದ ಬಗ್ಗೆ, ಕೋಪವು ಉಂಟು ಮಾಡುವ ಕೆಡಕುಗಳ ಬಗ್ಗೆ ಹೇಳುವಂತಹ, ಆತ್ಮಾವಲೋಕನದ ಕುರಿತಾದ ಮಾತುಗಳು, ಅಲ್ಲಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ, ಸಾಕಷ್ಟು ಅನ್ವಯವಾಗುವಂತವೇ ಆಗಿರುತ್ತವೆ. ಒಟ್ಟಾರೆ ಅವರೆಂತಹ ಮಹಾತ್ಮರೇ ಆಗಿರಲಿ, ಅವರೆಷ್ಟೇ ಜನಪ್ರಿಯರೇ ಆಗಿರಲಿ, ಅವರ ಮಾತುಗಳನ್ನು ಮತ್ತು ಅಭಿಪ್ರಾಯಗಳನ್ನು ತೆಗೆದುಕೊಳ್ಳುವಾಗ ಪ್ರಸ್ತುತ ಕಾಲದ ನಮ್ಮ ಬದುಕಿನಲ್ಲಿ, ನಾವಿರುವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದನ್ನು ಗಮನಿಸುವಷ್ಟರ ಮಟ್ಟಿಗಿನ ಪ್ರಜ್ಞೆಯ ಅವಶ್ಯಕತೆಯಂತೂ ಇದ್ದೇ ಇರುತ್ತದೆ.

ತಿರುವಳ್ಳುವರ್ ದೇವರ ಹಿರಿಮೆಯನ್ನು ವೈಭವೀಕರಿಸುವುದನ್ನು ನೋಡಿದಾಗ ಮನುಷ್ಯನ ಅಹಂಕಾರವನ್ನು ಮಣಿಸಿ ವಿನಯ ವಿಧೇಯತೆಯನ್ನು ತೋರಲು ಪ್ರಯತ್ನಿಸುವಂತೆ ತೋರುತ್ತದೆ. ತಿರುಕ್ಕುರಳ್ ಕೂಡಾ ಸುಂದರವಾದ ಮತ್ತು ಮೌಲ್ಯಗಳಿಂದ ಕೂಡಿರುವ ಕೃತಿಯೇ. ನಮ್ಮ ಈಗಿನ ಮಣ್ಣಿನಲ್ಲಿ ಬಿತ್ತಬೇಕಾದ ಬೀಜಗಳನ್ನು ಗೌರವದಿಂದಲೇ ಆಯ್ದುಕೊಳ್ಳಬೇಕು.

“ಮನದಲ್ಲಿ ತೊರೆಯದವರು, ತೊರೆದವರ ಹಾಗೆ ವಂಚಿಸುತ”
“ಬಾಳುವವರು, ಇವರಿಗಿಂತಲು ಬೇರೆ ಕಟುಕರಿಲ್ಲ.”
ಇದು ಮನಸ್ಸಿನಲ್ಲಿ ವೈರಾಗ್ಯವಿಲ್ಲದೇ ಹೆಸರಿಗೆ ಸಂನ್ಯಾಸಿಗಳಾಗಿರುವವರನ್ನು ಕುರಿತು ಮಾಡುವ ಟೀಕೆ.
“ತನ್ನ ತಾನ್ ಕಾಪಾಡಿಕೊಳ್ಳುವರೆ ಮುನಿಸ ತಡಕೊಳಬೇಕು
ತಡೆಯದಿರೆ ನನ್ನನೆ ಕೊಲ್ಲುವುದು ಮುನಿಸು”
“ತನಗೆ ಅಹಿತ ಎಂಬುದನು ತಾನು ಅರಿತವನು
ಬೇರೆ ಪ್ರಾಣಿಗೆ ಅಹಿತ ಮಾಡುವುದದೆಂತೊ.”
“ನುಣ್ಣನೆಯ ಶಾಸ್ತ್ರಗಳ ಹಲವ ಕಲಿತರೂ ತನ್ನ
ಸಹಜದರಿವೇ ಮತ್ತೆ ಮಿಕ್ಕು ನಿಲ್ಲುವುದು.”
ತಿರುವಳ್ಳುವರ್ ಸಂತೆಯಲ್ಲಿ ತಾವು ನೇಯ್ದ ವಸ್ತ್ರವನ್ನು ಮಾರಲು ಹೋದಾಗ ಮದಿಸಿದ ಯುವಕನೊಬ್ಬ ಬೆಲೆ ಕೇಳುತ್ತಾನೆ. ಅವರು ಎರಡು ಪಣ ಎನ್ನುತ್ತಾರೆ. ಅವನು ವಸ್ತ್ರವನ್ನು ಅರ್ಧಕ್ಕೆ ಹರಿದು ಕೇಳುತ್ತಾನೆ. ಅವರು ಒಂದು ಪಣವೆನ್ನುತ್ತಾರೆ. ಅದನ್ನೂ ಹರಿದ ಮೇಲೆ ಅರ್ಧ ಪಣ ಎನ್ನುತ್ತಾರೆ. ಆ ಯುವಕನು ವಸ್ತ್ರವನ್ನು ಸಂಪೂರ್ಣ ಹರಿದು ಚೂರು ಚೂರು ಮಾಡಿದ ಮೇಲೆ ಇದಕ್ಕೆ ಬೆಲೆ ಇಲ್ಲ. ನೀನೇ ತೆಗೆದಿಕೋ ಎನ್ನುತ್ತಾರೆ ತಿರುವಳ್ಳುವರ್. ನಿಮಗೇಕೆ ಕೋಪ ಬರಲಿಲ್ಲ ಎಂದು ಯುವಕ ಕೇಳಿದಾಗ ‘ತಾಳ್ಮೆ ಮತ್ತು ಕ್ಷಮೆಯ ಪಾಠ ನಿನಗೆ ಈಗ ಸಿಕ್ಕಿದೆ. ಅದರ ಮುಂದೆ ಈ ವಸ್ತ್ರದ ಬೆಲೆ ಏನು’ ಎಂದರಂತೆ. ಆತನಿಗೆ ತನ್ನ ಕೃತ್ಯದ ಬಗ್ಗೆ ನಾಚಿಕೆ ಎನಿಸಿ ಕ್ಷಮೆ ಕೇಳಿದನಂತೆ.

ಆಯ್ದಾದುಕೊಂಡಂತೆ ಹಲವು ಮುತ್ತುಗಳು ತಿರುಕ್ಕುರಳ್ಳಿನ ಸಾಗರದಲ್ಲಿ ಸಿಕ್ಕೇ ಸಿಗುವವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...